KPSC: ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆ ಪೂರ್ವಭಾವಿ ಪರೀಕ್ಷೆ, ಕೀ ಉತ್ತರ ಪ್ರಕಟ
ಬೆಂಗಳೂರು, ಆಗಸ್ಟ್ 29: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆಗಳ ಪೂರ್ವಭಾವಿ ಪರೀಕ್ಷೆಯನ್ನು ಮಂಗಳವಾರ ನಡೆಸಿದೆ. 2 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಪರೀಕ್ಷೆಗಳನ್ನು ಬರೆದಿದ್ದಾರೆ. ಈಗ ಅಭ್ಯರ್ಥಿಗಳ ಅನುಕೂಲಕ್ಕಾಗಿ ಪರೀಕ್ಷೆಯ ಕೀ-ಉತ್ತರಗಳನ್ನು ಪ್ರಕಟಿಸಲಾಗಿದೆ. ಈ ಕುರಿತು ಅಭ್ಯರ್ಥಿಗಳು ಆಕ್ಷೇಪಣೆಗಳನ್ನು ಸಲ್ಲಿಕೆ ಮಾಡಲು ಸಹ ಅವಕಾಶ ನೀಡಲಾಗಿದೆ. ಆಕ್ಷೇಪಣೆ ಸಲ್ಲಿಸುವ ಅಭ್ಯರ್ಥಿಗಳಿಗೆ ಹಲವು ಸೂಚನೆಗಳನ್ನು ನೀಡಲಾಗಿದೆ.
ಕೆಎಎಸ್ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡಬೇಕು ಎಂಬ ಒತ್ತಾಯದ ನಡುವೆಯೇ ಆಗಸ್ಟ್ 27ರ ಮಂಗಳವಾರ ಪೂರ್ವಭಾವಿ ಪರೀಕ್ಷೆಯನ್ನು ನಡೆಸಲಾಗಿದೆ. ಈಗ ಅಭ್ಯರ್ಥಿಗಳ ಅನುಕೂಲಕ್ಕಾಗಿ ಕೆಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಕೀ-ಉತ್ತರಗಳನ್ನು ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ಆಕ್ಷೇಪಣೆಗಳನ್ನು ದಿನಾಂಕ 4-09-2024ರ ಒಳಗಾಗಿ ನಿಗದಿತ ನಮೂನೆಯಲ್ಲಿ ಸಲ್ಲಿಸತಕ್ಕದ್ದು ಎಂದು ತಿಳಿಸಲಾಗಿದೆ.

ಅಭ್ಯರ್ಥಿಗಳಿಗೆ ಸೂಚನೆಗಳು
ಆಯೋಗವು ದಿನಾಂಕ 27-08-2024ರಂದು ನಡೆಸಿದ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ (ಆ.ಪಿ.ಸಿ.ವೃಂದ ಮತ್ತು ಹೈ.ಕ. ವೃಂದ) ಪೂರ್ವಭಾವಿ ಪರೀಕ್ಷೆಯ ಪತ್ರಿಕೆ-I (ವಿಷಯ ಸಂಕೇತ-578) ಮತ್ತು ಪತ್ರಿಕೆ-II (ವಿಷಯ ಸಂಕೇತ-579)ರ ಕೀ-ಉತ್ತರಗಳನ್ನು ಆಯೋಗದ ಜಾಲತಾಣದಲ್ಲಿ ಪ್ರಕಟಿಸಲಾಗಿರುತ್ತದೆ ಎಂದು ಹೇಳಿದೆ.
ಅಭ್ಯರ್ಥಿಗಳು ಸದರಿ ಕೀ ಉತ್ತರಗಳಿಗೆ ಆಕ್ಷೇಪಣೆಗಳನ್ನು ದಿನಾಂಕ 04-09-2024ರಂದು ಸಂಜೆ 5.30ರೊಳಗಾಗಿ ಪರೀಕ್ಷಾ ನಿಯಂತ್ರಕರು, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗಸೌಧ, ಬೆಂಗಳೂರು-560001 ಈ ವಿಳಾಸಕ್ಕೆ ಮಾತ್ರ ತಲುಪುವಂತೆ ಕಳುಹಿಸತಕ್ಕದ್ದು, ಆಕ್ಷೇಪಣೆಗಳನ್ನು ಸ್ವೀಕರಿಸುವ ಕೊನೆಯ ದಿನಾಂಕದ ಅವಧಿಯ ನಂತರ ಸ್ವೀಕೃತವಾಗುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. ಅಭ್ಯರ್ಥಿಗಳ ಆಕ್ಷೇಪಣೆಗಳು ಅಂಚೆಯ ಮೂಲಕ ಆಯೋಗಕ್ಕೆ ತಲುಪಲು ವಿಳಂಬವಾದಲ್ಲಿ ಕೆಪಿಎಸ್‌ಸಿ ಜವಾಬ್ದಾರಿಯಾಗಿರುವುದಿಲ್ಲ.
* ಆಕ್ಷೇಪಣೆಗಳನ್ನು ಕಡ್ಡಾಯವಾಗಿ ಆಯೋಗದ ಜಾಲತಾಣದಲ್ಲಿ ಪ್ರಕಟಿಸಿರುವ ನಮೂನೆಯಲ್ಲಿಯೇ (ಕನ್ನಡ ಅಥವಾ ಇಂಗ್ಲೀಷ್) ಸಲ್ಲಿಸಬೇಕು.
* ಆಕ್ಷೇಪಣೆಗಳನ್ನು ಸಲ್ಲಿಸುವ ಪ್ರತಿ ಪ್ರಶ್ನೆಗೆ ರೂ.50ರಂತೆ ಶುಲ್ಕವನ್ನು (ಐ.ಪಿ.ಓ ಅಥವಾ ಡಿ.ಡಿ. ಮೂಲಕ) ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗಸೌಧ, ಬೆಂಗಳೂರು, ಇವರ ಹೆಸರಿಗೆ ಸಂದಾಯ ಮಾಡಬೇಕು.
* ಶುಲ್ಕ ಸಂದಾಯ ಮಾಡದ ಆಕ್ಷೇಪಣಾ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
* ಪ್ರತಿ ಪ್ರಶ್ನೆಯ ಕೀ ಉತ್ತರಕ್ಕೆ ಸಲ್ಲಿಸುವ ಆಕ್ಷೇಪಣೆಗಳಿಗೆ ಪೂರಕವಾಗಿ ಸಲ್ಲಿಸುವ ದಾಖಲೆಗಳಿಗೆ ಸಂಬಂಧಿಸಿದಂತೆ ಲೇಖಕರ ಹೆಸರು, ಪ್ರಕಾಶನದ ಪ್ರತಿ ಇತ್ಯಾದಿ ವಿವರಗಳನ್ನು ಆಕ್ಷೇಪಣೆಗಳೊಂದಿಗೆ ನಿಗದಿತ ನಮೂನೆಯಲ್ಲಿ ನಮೂದಿಸತಕ್ಕದ್ದು.
* ದಾಖಲೆಗಳನ್ನು ನಿಗದಿತ ನಮೂನೆಯಲ್ಲಿ ಸಲ್ಲಿಸದ ಆಕ್ಷೇಪಣೆಗಳನ್ನು ತಿರಸ್ಕರಿಸಲಾಗುವುದು.
* ದಾಖಲೆಗಳ ಪ್ರತಿ ಪುಟದ ಮೇಲೆ ಪ್ರಶ್ನೆ ಸಂಖ್ಯೆ ಮತ್ತು ನೋಂದಣಿ ಸಂಖ್ಯೆಯನ್ನು ಕಡ್ಡಾಯವಾಗಿ ಬರೆಯತಕ್ಕದ್ದು.
* ಆಕ್ಷೇಪಣೆಯೊಂದಿಗೆ ಅಭ್ಯರ್ಥಿಯು ದೃಢೀಕರಿಸಿದ ಪ್ರವೇಶ ಪತ್ರದ ಪ್ರತಿಯನ್ನು ಪರಿಶೀಲನೆಗಾಗಿ ಲಗತ್ತಿಸಬೇಕು ಎಂದು ಪರೀಕ್ಷಾ ನಿಯಂತ್ರಕರು, ಕರ್ನಾಟಕ ಲೋಕಸೇವಾ ಆಯೋಗ ತಿಳಿಸಿದ್ದಾರೆ.
ಪತ್ರಿಕೆಯಲ್ಲಿ ಕನ್ನಡ ದೋಷ: ಕೆಪಿಎಸ್‌ಸಿಯ ಪೂರ್ವಭಾವಿ ಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡ ದೋಷ ಇರುವ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ಕುರಿತು ವಿರೋಧ ಪಕ್ಷದ ನಾಯಕ ಆರ್. ಅಶೋಕ ಪೋಸ್ಟ್ ಹಾಕಿದ್ದು, 'ಕೆಪಿಎಸ್‌ಸಿಯ 384 ಗೆಜೆಟೆಡ್ ಪ್ರೊಬೇಶನರ್ ಹುದ್ದೆಗಳಿಗೆ ಮಂಗಳವಾರ ನಡೆದ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಹಲವಾರು ಲೋಪ ದೋಷಗಳು ಕಂಡುಬಂದಿದ್ದು ಇಡೀ ವ್ಯವಸ್ಥೆ ನಗೆಪಾಟಲಿಗೀಡಾಗಿದೆ' ಎಂದು ಹೇಳಿದ್ದಾರೆ.
'ರಾಜ್ಯದ ಇತಿಹಾಸದಲ್ಲೇ ಇಷ್ಟು ಕೆಟ್ಟದಾಗಿ ಎಂದಿಗೂ ಪ್ರಶ್ನೆಪತ್ರಿಕೆ ಸಿದ್ಧಪಡಿಸಿರಲಿಲ್ಲ ಎಂದು ಅಭ್ಯರ್ಥಿಗಳು ರಾಜ್ಯ ಸರ್ಕಾರಕ್ಕೆ ಶಾಪ ಹಾಕುವುದನ್ನ ನೋಡುತ್ತಿದ್ದರೆ, ಈ ನಾಲಾಯಕ್ ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ಯಾವುದೂ ಸರಿಯಾಗಿ ನಡೆಯುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ' ಎಂದು ಆರೋಪಿಸಿದ್ದಾರೆ.












Click it and Unblock the Notifications