KPSC Recruitment; ಪರಿಷತ್‌ನಲ್ಲಿ ಮುಖ್ಯಮಂತ್ರಿಗಳ ಉತ್ತರ
ಬೆಂಗಳೂರು, ಡಿಸೆಂಬರ್ 23; ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರ ನೀಡಿದ್ದಾರೆ.
ಪರಿಷತ್ ಸದಸ್ಯ ಎಸ್. ವಿ. ಸಂಕನೂರ ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗ (KPSC) ಗೆಜೆಟೆಡ್ ಪ್ರೊಬೇಷನರಿ ನೇಮಕಾತಿಯಲ್ಲಿ ಕನ್ನಡ ಮಾಧ್ಯಮದವರಿಗಿಂತ ಆಂಗ್ಲ ಮಾಧ್ಯಮದಲ್ಲಿ ಓದಿದವರೇ ಹೆಚ್ಚಾಗಿ ಪಾಸಾಗಿರುವುದು ನಿಜವೇ? ಎಂದು ಪ್ರಶ್ನಿಸಿದ್ದರು.
ಮುಖ್ಯಮಂತ್ರಿಗಳು ನೀಡಿರುವ ಉತ್ತರದಲ್ಲಿ, ಕರ್ನಾಟಕ ಲೋಕಸೇವಾ ಆಯೋಗ ನೀಡಿರುವ ಮಾಹಿತಿಯಂತೆ ಹೌದು ಎಂದು ಹೇಳಿದ್ದಾರೆ.

ಕನ್ನಡ ಮಾಧ್ಯಮದವರು ಕೆಪಿಎಸ್‌ಸಿ ನೇಮಕಾತಿಯಲ್ಲಿ ಹೆಚ್ಚಾಗಿ ತೇರ್ಗಡೆಯಾಗುತ್ತಿಲ್ಲದಿರಲು ಕಾರಣವೇನು?. ತೇರ್ಗಡೆಯಾಗಲು ಸರ್ಕಾರ/ ಲೋಕಸೇವಾ ಆಯೋಗವು ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂದು ಪ್ರಶ್ನಿಸಿದ್ದರು.
ಮುಖ್ಯಮಂತ್ರಿಗಳು ನೀಡಿದ ಉತ್ತರದಲ್ಲಿ ಕರ್ನಾಟಕ ಲೋಕಸೇವಾ ಆಯೋಗ ನೀಡಿರುವ ಮಾಹಿತಿಯಂತೆ ಗೆಜೆಟೆಡ್ ಪ್ರೊಬೇಷನರ್ಸ್ ಮುಖ್ಯ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಕನ್ನಡ ಅಥವ ಆಂಗ್ಲ ಮಾಧ್ಯಮದಲ್ಲಿ ಪರೀಕ್ಷೆ ಬರೆಯಲು ಅವಕಾಶವಿದೆ ಎಂದು ಹೇಳಿದ್ದಾರೆ.
ಅಭ್ಯರ್ಥಿಗಳು ಈ ಎರಡು ಮಾಧ್ಯಮದಲ್ಲಿ ಯಾವುದೇ ಮಾಧ್ಯಮದಲ್ಲಿ ಪರೀಕ್ಷೆ ಬರೆದರೂ ಅವರು ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಜೇಷ್ಠತೆ, ಮೀಸಲಾತಿ ಮತ್ತು ಅಭ್ಯರ್ಥಿಗಳು ನೀಡುವ ಹುದ್ದೆಗಳ ಆದ್ಯತೆಗೆ ಅನುಗುಣವಾಗಿ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಕೆಎಎಸ್ ಗೆಜೆಡೆಟ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗಾಗಿ ಮುಖ್ಯ ಪರೀಕ್ಷೆ ಉತ್ತರ ಪತ್ರಿಕೆಗಳನ್ನು ಅದರಲ್ಲೂ ಕನ್ನಡ ಮಾಧ್ಯಮದ ಪತ್ರಿಕೆಗಳನ್ನು ಮೌಲ್ಯ ಮಾಪನ ಮಾಡಲು ನುರಿತ ಮೌಲ್ಯ ಮಾಪಕರ ಕೊರತೆಯನ್ನು ಎದುರಿಸುತ್ತಿದೆಯೇ?. ತಜ್ಞ ಕನ್ನಡ ಮಾಧ್ಯಮ ಮೌಲ್ಯ ಮಾಪಕರನ್ನು ನೇಮಿಸಲು ಕೈಗೊಂಡ ಕ್ರಮಗಳು ಏನು? ಎಂದು ಪ್ರಶ್ನಿಸಲಾಗಿದೆ.
ಕರ್ನಾಟಕ ಲೋಕಸೇವಾ ಆಯೋಗವು ನೀಡಿರುವ ಮಾಹಿತಿಯಂತೆ ಆಯೋಗವು ಪ್ರಸ್ತುತ ಕನ್ನಡ ಮಾಧ್ಯಮದ ಪತ್ರಿಕೆಗಳನ್ನು ಮೌಲ್ಯ ಮಾಪನ ಮಾಡಲು ನುರಿತ ಮೌಲ್ಯ ಮಾಪಕರ ಕೊರತೆಯನ್ನು ಎದುರಿಸುತ್ತಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.












Click it and Unblock the Notifications