KPSC Recruitment 2023 : ಸಹಕಾರ ಸಂಘಗಳ ನಿರೀಕ್ಷಕರ 47 ಹುದ್ದೆ
ಕರ್ನಾಟಕ ಲೋಕಸೇವಾ ಆಯೋಗ 47 ಸಹಕಾರ ಸಂಘಗಳ ನಿರೀಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕರೆದಿದೆ.
ಬೆಂಗಳೂರು, ಮಾರ್ಚ್ 20; ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಸಹಕಾರ ಇಲಾಖೆಯಲ್ಲಿನ ಸಹಕಾರ ಸಂಘಗಳ ನಿರೀಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಕರೆದಿದೆ. ಒಟ್ಟು 47 ಹುದ್ದೆಗಳಿದ್ದು, ಆಸಕ್ತ, ಅರ್ಹರು 30/3/2023 ರಿಂದ 30/4/2023ರ ತನಕ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದಾಗಿದೆ. ಆನ್‌ಲೈನ್ ಮೂಲ ಮಾತ್ರ ಅರ್ಜಿಳನ್ನು ಸಲ್ಲಿಕೆ ಮಾಡಬಹುದಾಗಿದೆ.
ಕೆಪಿಎಸ್‌ಸಿ ಕರ್ನಾಟಕ ನಾಗರೀಕ ಸೇವೆಗಳು (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021ರ ನಿಯಮಗಳು ಹಾಗೂ ತಿದ್ದುಪಡಿ ನಿಯಮ 2022ರನ್ವಯ ಉಳಿಕೆ ಮೂಲ ವೃಂದದ ಗ್ರೂಪ್ 'ಸಿ' ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡುವ ಮೊದಲು ಅಭ್ಯರ್ಥಿಗಳು ಎಲ್ಲಾ ವಿವರಗಳನ್ನು ಓದಿ, ಅರ್ಥೈಸಿಕೊಂಡು ಆನಂತರವೇ ತಮಗೆ ಅನ್ವಯವಾಗುವ ವಿವರಗಳನ್ನು ಭರ್ತಿ ಮಾಡತಕ್ಕದು. ಒಮ್ಮೆ ಅರ್ಜಿ ಸಲ್ಲಿಸಿದ ನಂತರ ಅರ್ಜಿಯಲ್ಲಿನ ವಿವರಗಳನ್ನು ತಿದ್ದುಪಡಿ/ ಸೇರ್ಪಡೆ ಮಾಡುವಂತೆ ನೀಡುವ ಯಾವುದೇ ಮನವಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಅರ್ಜಿಯೊಂದಿಗೆ ಸಲ್ಲಿಸುವ ದಾಖಲೆಗಳನ್ನು ಪರಿಶೀಲನೆ ಮಾಡಲಾಗುವುದರಿಂದ ವಯೋಮಿತಿ, ವಿದ್ಯಾರ್ಹತೆಗೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಹಾಗೂ ಅರ್ಜಿಯಲ್ಲಿ ಕೋರಿರುವ ಎಲ್ಲಾ ಮೀಸಲಾತಿ ಪ್ರಮಾಣ ಪತ್ರ/ ಇತರೆ ಪ್ರಮಾಣ ಪತ್ರಗಳನ್ನು ತಮ್ಮ ಹೆಸರಿನಲ್ಲಿಯೇ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಚಾಲ್ತಿಯಲ್ಲಿರುವಂತೆ ಅಧಿಸೂಚನೆಯ ಅನುಬಂಧದಲ್ಲಿ ಸೂಚಿಸಿರುವ ನಮೂನೆಗಳಲ್ಲಿಯೇ ಕಡ್ಡಾಯವಾಗಿ ಪಡೆದಿಟ್ಟುಕೊಂಡು ಅರ್ಜಿಯೊಂದಿಗೆ ಅಪ್‌ಲೋಡ್ ಮಾಡತಕ್ಕದು. ಅಸ್ಪಷ್ಟ ದಾಖಲೆಗಳನ್ನು ಅಪ್‌ಲೋಡ್ ಮಾಡಿರುವ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ತಿಳಿಸಲಾಗಿದೆ.
ಅಭ್ಯರ್ಥಿಗಳು ಮೊದಲ ಹಂತದಲ್ಲಿ ಪ್ರೊಫೈಲ್ ಕ್ರಿಯೇಷನ್, ಎರಡನೇ ಹಂತದಲ್ಲಿ ಅಪ್ಲಿಕೇಶನ್ ಸಬ್ ಮಿಷನ್ ಮತ್ತು 3ನೇ ಹಂತದಲ್ಲಿ ಶುಲ್ಕವನ್ನು ಪಾವತಿ ಮಾಡಬೇಕಿದೆ. ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಕೆ ಮಾಡಲು 2/5/2023 ಕೊನೆಯ ದಿನವಾಗಿದೆ. ನಿಗದಿಪಡಿಸಿದ ಶುಲ್ಕವನ್ನು ಕಡ್ಡಾಯವಾಗಿ ಪಾವತಿ ಮಾಡಬೇಕಿದೆ. ಒಮ್ಮೆ ಪಾವತಿ ಮಾಡಿದ ಶುಲ್ಕವನ್ನು ಯಾವುದೇ ಕಾರಣಕ್ಕೂ ವಾಪಸ್ ನೀಡಲಾಗುವುದಿಲ್ಲ ಅಥವ ಆಯೋಗ ನಡೆಸುವ ಇತರ ಯಾವುದೇ ಪರೀಕ್ಷೆಗೆ ಬಳಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಅರ್ಜಿ ಶುಲ್ಕದ ವಿವರಗಳು; ಅರ್ಜಿಗಳನ್ನು ಸಲ್ಲಿಕೆ ಮಾಡುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು 600 ರೂ. ಶುಲ್ಕವನ್ನು ಪಾವತಿ ಮಾಡಬೇಕು. ಪ್ರವರ್ಗ 2 (ಎ), 2 (ಬಿ), 3 (ಎ), 3 (ಬಿ)ಗೆ ಸೇರಿದ ಅಭ್ಯರ್ಥಿಗಳಿಗೆ 300 ರೂ., ಮಾಜಿ ಸೈನಿಕರಿಗೆ ಅಭ್ಯರ್ಥಿಗಳಿಗೆ ರೂ. 50 ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ಇದೆ. ಎಲ್ಲಾ ಪ್ರವರ್ಗದ ಅಭ್ಯರ್ಥಿಗಳು ಕಡ್ಡಾಯವಾಗಿ 35 ರೂ. ಅರ್ಜಿ ಶುಲ್ಕವನ್ನು ಪಾವತಿ ಮಾಡಲೇಬೇಕು.

ಅರ್ಜಿಗಳನ್ನು ಭರ್ತಿ ಮಾಡಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಸೂಚಿಸಿರುವ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಲೇಬೇಕು. ನಿಗದಿಪಡಿಸಿರುವ ವಿದ್ಯಾರ್ಹತೆಯನ್ನು ಹೊಂದದೆ ಹೆಚ್ಚಿನ ವಿದ್ಯಾರ್ಹತೆಯನ್ನು ಹೊಂದಿದ್ದರೂ ಸಹ ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ 18 ವರ್ಷ ವಯೋಮಿತಿ ಹೊಂದಿರಬೇಕು. ಗರಿಷ್ಠ ವಯೋಮಿತಿ ಸಾಮಾನ್ಯ ಅರ್ಹತೆ 35 ವರ್ಷಗಳು, ಪ್ರವರ್ಗ 2 (ಎ), 2 (ಬಿ), 3 (ಎ), 3 (ಬಿ) ಅಭ್ಯರ್ಥಿಗಳು 38 ವರ್ಷಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ1 40 ವರ್ಷಗಳು.
ವಿದ್ಯಾರ್ಹತೆ, ವೇತನ; ಆಯ್ಕೆಯಾದ ಅಭ್ಯರ್ಥಿಗಳಿಗೆ 27,650 ರಿಂದ 52,650 ರೂ. ವೇತನ ನಿಗದಿ ಮಾಡಲಾಗಿದೆ. ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳು A pass in Bachelor's Degree in Agricultural Science, Marketing and Co-operation, Commerce and Business Management ವಿದ್ಯಾರ್ಹತೆ ಹೊಂದಿರಬೇಕು. ವಿಶೇಷ ಸೂಚನೆ; ಇಲಾಖೆಯ ಸ್ಪಷ್ಟೀಕರಣದಂತೆ ಬಿಬಿಎ ವಿದ್ಯಾರ್ಹತೆಯನ್ನು ಪರಿಗಣಿಸಲಾಗುವುದು ಎಂದು ಸ್ಪಷ್ಟಪಡಿಸಲಾಗುವುದು.
ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021ರ ಉಪನಿಯಮ (7) ರನ್ವಯ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆಯು ಕಡ್ಡಾಯವಾಗಿದ್ದು, ಸದರಿ ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆದ ಹೊರತು, ಆಯ್ಕೆಗೆ ಅರ್ಹರಾಗುವುದಿಲ್ಲ. ಪರೀಕ್ಷೆಯು ಗರಿಷ್ಠ 150 ಅಂಕಗಳ ಒಂದು ಪ್ರಶ್ನೆಪತ್ರಿಕೆಯನ್ನು ಒಳಗೊಂಡಿರುತ್ತದೆ. ಅಭ್ಯರ್ಥಿಯು ಈ ಪತ್ರಿಕೆಯಲ್ಲಿ ಅರ್ಹತೆ ಹೊಂದಲು ಕನಿಷ್ಠ 50 ಅಂಕಗಳನ್ನು ಗಳಿಸಬೇಕು, ಈ ಪ್ರಶ್ನೆ ಪತ್ರಿಕೆಯನ್ನು SSLC ಹಂತದಲ್ಲಿನ ಪ್ರಥಮಭಾಷೆ ಕನ್ನಡವನ್ನು ಮಾನದಂಡವನ್ನಾಗಿಟ್ಟುಕೊಂಡು ಸಿದ್ಧಪಡಿಸಲಾಗಿರುತ್ತದೆ.
ಕನ್ನಡ ಭಾಷಾ ಪರೀಕ್ಷೆಯಲ್ಲಿ ಅರ್ಹರಾದ ನಂತರ ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021 ಹಾಗೂ ತಿದ್ದುಪಡಿ ನಿಯಮ 2022 ರ ಉಪ ನಿಯಮ 5(ಡಿ)ರಂತೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಶೇಕಡವಾರು ಪ್ರಮಾಣದ ಆಧಾರದ ಮೇಲೆ ಹಾಗೂ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳನ್ವಯ ಆಯ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು, ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆಗೆ ಅರ್ಹತೆ ಹೊಂದಲು ಕನ್ನಡ ಭಾಷಾ ಪರೀಕ್ಷೆಯಲ್ಲಿ ಅರ್ಹತೆ ಹೊಂದುವುದು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿನ ಒಟ್ಟು ಅಂಕಗಳಲ್ಲಿ ಕನಿಷ್ಠ ಪಕ್ಷ ಶೇಕಡ 35 ರಷ್ಟು ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿರುತ್ತದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕೆಪಿಎಸ್‌ಸಿ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.












Click it and Unblock the Notifications