KPSC Recruitment: ಲೋಕೋಪಯೋಗಿ ಇಲಾಖೆಯ 30 ಹುದ್ದೆ, ವೇತನ 83,700 ರೂ.ಗಳು
ಬೆಂಗಳೂರು, ಸೆಪ್ಟೆಂಬರ್ 19: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಲೋಕೋಪಯೋಗಿ ಇಲಾಖೆಯ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಒಟ್ಟು 30 ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಗ್ರೂಪ್ 'ಎ' ವೃಂದದ ಹುದ್ದೆಗಳು ಇದಾಗಿದ್ದು, ಆಸಕ್ತ, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಕೆ ಮಾಡಲು 4/11/2024 ಕೊನೆಯ ದಿನಾಂಕವಾಗಿದೆ.
ಲೋಕೋಪಯೋಗಿ ಇಲಾಖೆ ಸೇವೆಗಳು (ವೃಂದ ಮತ್ತು ನೇಮಕಾತಿ) ನಿಯಮಗಳು 2018ರಡಿಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಗ್ರೇಡ್-1) ಗ್ರೂಪ್ 'ಎ' ವೃಂದದ 30 ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತರು 3/10/2024ರಿಂದ 4/11/2024ರ ತನಕ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಯ ದಿನಾಂಕವನ್ನು ನಂತರ ತಿಳಿಸಲಾಗುತ್ತದೆ. ಅಭ್ಯರ್ಥಿಗಳು ನೇಮಕಾತಿ ಅಧಿಸೂಚನೆಯನ್ನು ಸರಿಯಾಗಿ ಅರ್ಥೈಸಿಕೊಂಡು ಬಳಿಕ ಅನ್ವಯವಾಗುವ ವಿವರಗಳನ್ನು ಮಾತ್ರ ಸರಿಯಾಗಿ ಭರ್ತಿ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.
ವಯೋಮಿತಿ, ವೇತನ ವಿವರ: ನೇಮಕಾತಿ ಅಧಿಸೂಚನೆ ಪ್ರಕಾರ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಗ್ರೇಡ್-1) ಹುದ್ದೆಗೆ ವೇತನ ಶ್ರೇಣಿ 83,700-1,15,200 ರೂ.ಗಳು ಎಂದು ನಿಗದಿ ಮಾಡಲಾಗಿದೆ. ಅಭ್ಯರ್ಥಿಗಳು ಒಮ್ಮೆ ಅರ್ಜಿ ಸಲ್ಲಿಕೆ ಮಾಡಿದ ಬಳಿಕ ಅರ್ಜಿ ವಿವರ ತಿದ್ದುಪಡಿ/ ಸೇರ್ಪಡೆ ಮಾಡುವಂತೆ ಮಾಡುವ ಯಾವುದೇ ಮನವಿಯನ್ನು ತಿರಸ್ಕರಿಸಲಾಗುತ್ತದೆ ಎಂದು ಅಧಿಸೂಚನೆ ಹೇಳಿದೆ.
ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳಿಗೆ ಕನಿಷ್ಠ ವಯೋಮಿತಿ 21 ವರ್ಷಗಳು. ಗರಿಷ್ಠ ವಯೋಮಿತಿ ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 35 ವರ್ಷ. ಪ್ರವರ್ಗ 2ಎ/ 2ಬಿ/ 3ಎ/ 3ಬಿ ಅಭ್ಯರ್ಥಿಗಳಿಗೆ 38 ವರ್ಷಗಳು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1ರ ಅಭ್ಯರ್ಥಿಗಳಿಗೆ 40 ವರ್ಷಗಳು. ಅರ್ಜಿ ಸಲ್ಲಿಕೆ ಮಾಡಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ ವಯೋಮಿತಿ ಹೊಂದಿರಬೇಕು ಮತ್ತು ಗರಿಷ್ಠ ವಯೋಮಿತಿಯನ್ನು ಮೀರಿರಬಾರದು.
ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು 600 ರೂ., ಪ್ರವರ್ಗ 2ಎ/ 2ಬಿ/ 3ಎ/ 3ಬಿ ಅಭ್ಯರ್ಥಿಗಳು 300 ರೂ., ಮಾಜಿ ಸೈನಿಕರಿಗೆ 50 ರೂ. ಶುಲ್ಕ ನಿಗದಿ ಮಾಡಲಾಗಿದೆ. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಅಭ್ಯರ್ಥಿಗಳು ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಬೇಕು. ಒಮ್ಮೆ ಪಾವತಿ ಮಾಡಿದ ಶುಲ್ಕವನ್ನು ಯಾವುದೇ ಕಾರಣಕ್ಕೂ ವಾಪಸ್ ನೀಡಲಾಗುವುದಿಲ್ಲ ಅಥವ ಆಯೋಗ ನಡೆಸುವ ಇತರ ನೇಮಕಾತಿಗಳಿಗೆ ಸರಿ ಹೊಂದಿಸಿಕೊಳ್ಳುವುದಿಲ್ಲ. ಶುಲ್ಕ ಪಾವತಿ ಮಾಡದ ಅರ್ಜಿಗಳನ್ನು ತಿರಸ್ಕಾರ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.
ವಿಶೇಷ ಸೂಚನೆಗಳು
* ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವ ಮೊದಲು ಎಲ್ಲಾ ವಿವರಗಳನ್ನು ಓದಿ ಅರ್ಥೈಸಿಕೊಂಡು ಆ ನಂತರವೇ ತಮಗೆ ಅನ್ವಯವಾಗುವ ವಿವರಗಳನ್ನು ಭರ್ತಿ ಮಾಡತಕ್ಕದು. ಒಮ್ಮ ಅರ್ಜಿ ಸಲ್ಲಿಸಿದ ನಂತರ ಅರ್ಜಿಯಲ್ಲಿ ವಿವರಗಳನ್ನು ತಿದ್ದುಪಡಿ/ ಸೇರ್ಪಡೆ ಮಾಡುವಂತೆ ನೀಡುವ ಯಾವುದೇ ಮನವಿಗಳನ್ನು ತಿರಸ್ಕರಿಸಲಾಗುವುದು.
* ಅಭ್ಯರ್ಥಿಗಳು ವಯೋಮಿತಿ, ವಿದ್ಯಾರ್ಹತೆಗೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಹಾಗೂ ಅರ್ಜಿಯಲ್ಲಿ ಕೋರಿರುವ ಎಲ್ಲಾ ಮೀಸಲಾತಿ ಪ್ರಮಾಣ ಪತ್ರ/ ಇತರ ಪ್ರಮಾಣ ಪತ್ರಗಳನ್ನು ತಮ್ಮ ಹೆಸರಿನಲ್ಲಿಯೇ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಚಾಲ್ತಿಯಲ್ಲಿರುವಂತೆ ಸೂಚಿಸಿರುವ ನಮೂನೆಗಳಲ್ಲಿಯೇ ಕಡ್ಡಾಯವಾಗಿ ಪಡೆದಿಟ್ಟುಕೊಂಡು ಸದರಿ ದಾಖಲೆಗಳನ್ನು ಅರ್ಜಿ ಸಲ್ಲಿಸುವಾಗ ಅಪ್‌ಲೋಡ್ ಮಾಡತಕ್ಕದು (ದಾಖಲೆಗಳು ಸ್ಪಷ್ಟವಾಗಿರಬೇಕು) ತಪ್ಪಿದ್ದಲ್ಲಿ ಅವರ ಮೀಸಲಾತಿ/ ಅಭ್ಯರ್ಥಿತವನ್ನು ತಿರಸ್ಕರಿಸಲಾಗುವುದು.
* ಅರ್ಜಿ ಸಲ್ಲಿಸುವ ಸಮಯದಲ್ಲಿ ಮೀಸಲಾತಿಯನ್ನು ಕೋರದೆ ತದನಂತರದಲ್ಲಿ, ಮೀಸಲಾತಿಯನ್ನು ಪರಿಗಣಿಸುವಂತೆ ಕೋರಿ ಸಲ್ಲಿಸುವ ಮನವಿ/ ದಾಖಲೆಗಳನ್ನು ಪರಿಗಣಿಸಲಾಗುವುದಿಲ್ಲ. ಅರ್ಜಿಗಳನ್ನು Online ಮೂಲಕವೇ ಭರ್ತಿ ಮಾಡಿ, ಭಾವಚಿತ್ರ/ ಸಹಿ / ವಯೋಮಿತಿ/ ವಿದ್ಯಾರ್ಹತ ಹಾಗೂ ಕೋರಿದ ಮೀಸಲಾತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ ಶುಲ್ಕವನ್ನು ನೆಟ್ ಬ್ಯಾಂಕಿಂಗ್/ ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್/ UPI ಮೂಲಕ ಸಂದಾಯ ಮಾಡಬಹುದಾಗಿರುತ್ತದೆ.
ಶುಲ್ಕವನ್ನು ಪಾವತಿಸದ ಹಾಗೂ ದಾಖಲೆಗಳನ್ನು/ ಭಾವಚಿತ್ರ/ ಸಹಿಯನ್ನು ಅಪ್ಲೋಡ್ ಮಾಡದೇ ಇರುವ/ ಅಸ್ಪಷ್ಟ ದಾಖಲೆಗಳನ್ನು ಅಪ್ಲೋಟ್ ಮಾಡಿರುವ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಆನ್‌ಲೈನ್ ಅರ್ಜಿಯೊಂದಿಗೆ ಸಲ್ಲಿಸುವ ಸಲ್ಲಿಸಿರುವ ದಾಖಲೆಗಳನ್ನು ಅವಶ್ಯಕ ಸಂದರ್ಭಗಳಲ್ಲಿ ಆಯೋಗವು ಪರಿಶೀಲನೆಗೆ ಒಳಪಡಿಸಬಹುದಾಗಿರುತ್ತದೆ. ಆದ್ದರಿಂದ ಅಭ್ಯರ್ಥಿಗಳು ಜಾಗರೂಕತೆಯಿಂದ ತಮಗೆ ಅನ್ವಯಿಸುವ ಎಲ್ಲಾ ದಾಖಲೆಗಳನ್ನು ಸ್ಪಷ್ಟವಾಗಿ ಗೋಚರಿಸುವ ರೀತಿಯಲ್ಲಿ ಅಪ್ಲೋಡ್ ಮಾಡತಕ್ಕದ್ದು. ಮೂಲ ದಾಖಲೆಗಳ ಪರಿಶೀಲನೆಯ ಸಂದರ್ಭದಲ್ಲಿ ಈಗಾಗಲೇ ಆನ್‌ಲೈನ್ ಅರ್ಜಿಯೊಂದಿಗೆ ಅಪ್ಲೋಡ್ ಮಾಡಿರುವ ಪ್ರಮಾಣ ಪತ್ರಗಳ ಮೂಲ ಪ್ರತಿಗಳನ್ನು ತಪ್ಪದೇ ಹಾಜರುಪಡಿಸತಕ್ಕದ್ದು.
ಹೆಚ್ಚಿನ ಮಾಹಿತಿ, ಅಧಿಸೂಚನೆಗಾಗಿ ಕೆಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಅಧಿಸೂಚನೆ ಸೆಕ್ಷನ್‌ನಲ್ಲಿನ ನೋಟಿಫಿಕೇಶನ್ ಮೇಲೆ ಕ್ಲಿಕ್ ಮಾಡಿ.











Click it and Unblock the Notifications