KPSC: ಜನವರಿ 18ರ ಕನ್ನಡ ಭಾಷಾ ಪರೀಕ್ಷೆ ಮುಂದೂಡಿಕೆ
ಬೆಂಗಳೂರು, ಜನವರಿ 14: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಪರೀಕ್ಷೆಯ ಕುರಿತು ಅಭ್ಯರ್ಥಿಗಳಿಗೆ ಮಾಹಿತಿಯೊಂದನ್ನು ನೀಡಿದೆ. ಜನವರಿ 18ರಂದಿ ನಿಗದಿ ಮಾಡಿದ್ದ ಪರೀಕ್ಷೆಯನ್ನು ಮುಂದೂಡಿಕೆ ಮಾಡಿ ಆದೇಶವನ್ನು ಹೊರಡಿಸಿದೆ. ಆದರೆ ಈ ಹುದ್ದೆಗಳಿಗೆ ನಿಗದಿ ಮಾಡಿರುವ ಸಾಮಾನ್ಯ ಪತ್ರಿಕೆ ಮತ್ತು ನಿರ್ದಿಷ್ಟ ಪತ್ರಿಕೆಗಳ ಪರೀಕ್ಷೆಗಳನ್ನು ಈಗಾಗಲೇ ನಿಗದಿಪಡಿಸಿರುವ ವೇಳಾಪಟ್ಟಿಯಂತೆ ನಡೆಸಲಾಗುತ್ತದೆ ಎಂದು ಕೆಪಿಎಸ್‌ಸಿ ಹೇಳಿದೆ.
ಈ ಕುರಿತು ಕರ್ನಾಟಕ ಲೋಕ ಸೇವಾ ಆಯೋಗ ಕಾರ್ಯದರ್ಶಿ ರಮಣ್‌ದೀಪ್ ಚೌಧರಿ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ಅಧಿಸೂಚನೆ ದಿನಾಂಕ 13-03-2024ರನ್ವಯ ಅಧಿಸೂಚಿಸಿರುವ ವಿವಿಧ ಇಲಾಖೆಗಳಲ್ಲಿನ ಗ್ರೂಪ್ 'ಬಿ' 277 (ಆರ್‌ಪಿಸಿ) ವೃಂದದ ಹುದ್ದೆಗಳಿಗೆ ದಿನಾಂಕ 18-01-2025ರಂದು ಕನ್ನಡ ಭಾಷಾ ಪರೀಕ್ಷೆಯನ್ನು ನಿಗದಿಪಡಿಸಲಾಗಿತ್ತು ಎಂದು ತಿಳಿಸಿದೆ.

ಆದರೆ ಇತ್ತೀಚಿಗೆ ನಡೆದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗಳ ಕನ್ನಡ ಭಾಷಾ ಪರೀಕ್ಷೆಗೆ ಲಕ್ಷಾಂತರ ಅಭ್ಯರ್ಥಿಗಳು ಹಾಜರಾಗಿದ್ದು, ಹಲವಾರು ಅಭ್ಯರ್ಥಿಗಳು ಪ್ರಸ್ತುತ ಪರೀಕ್ಷೆಗಳಿಗೂ ಸಹ ಅಭ್ಯರ್ಥಿಗಳಾಗಿರುತ್ತಾರೆ ಎಂದು ಪ್ರಕಟಣೆ ಹೇಳಿದೆ.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗಳ ಕನ್ನಡ ಭಾಷಾ ಪರೀಕ್ಷೆಯ ಫಲಿತಾಂಶವು ಶೀಘ್ರದಲ್ಲಿಯೇ ಪ್ರಕಟವಾಗುವ ಸಾಧ್ಯತೆ ಇದ್ದು, ಅದರಲ್ಲಿ ಹಾಜರಾದ ಅಭ್ಯರ್ಥಿಗಳು ಮತ್ತೊಮ್ಮೆ ಕನ್ನಡ ಭಾಷಾ ಪರೀಕ್ಷೆಯನ್ನು ಬರೆಯುವುದರಿಂದ ಆಯೋಗಕ್ಕೆ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಹೆಚ್ಚಿನ ಹೊರೆಯಾಗುವುದಲ್ಲದೆ ಅಭ್ಯರ್ಥಿಗಳಿಗೂ ಸಹ ಹೊರೆಯಾಗಲಿದೆ.
ಆದ್ದರಿಂದ ದಿನಾಂಕ 18-01-2025ರಂದು ನಿಗದಿಯಾಗಿದ್ದ ಕನ್ನಡ ಭಾಷಾ ಪರೀಕ್ಷೆಯನ್ನು ಮಾತ್ರ ಮುಂದೂಡಲಾಗಿದ್ದು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗಳ ಕನ್ನಡ ಭಾಷಾ ಪರೀಕ್ಷೆಯ ಫಲಿತಾಂಶ ಪ್ರಕಟವಾದ ನಂತರ ಪರಿಷ್ಕೃತ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.
ಉಳಿದಂತೆ ದಿನಾಂಕ 13-03-2024ರನ್ವಯ ಅಧಿಸೂಚಿಸಿರುವ ಹುದ್ದೆಗಳಿಗೆ ಸಾಮಾನ್ಯ ಪತ್ರಿಕೆ ಮತ್ತು ನಿರ್ದಿಷ್ಟ ಪತ್ರಿಕೆಗಳ ಪರೀಕ್ಷೆಗಳನ್ನು ಈಗಾಗಲೇ ನಿಗದಿಪಡಿಸಿರುವ ವೇಳಾಪಟ್ಟಿಯಂತೆಯೇ ನಡೆಸಲಾಗುವುದು. ಅದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಕೆಪಿಎಸ್‌ಸಿ ಹೇಳಿದೆ.
ವಯೋಮಿತಿ ಸಡಿಲಿಕೆ: ಕೆಪಿಎಸ್‌ಸಿ 13-03-2024ರ ಅಧಿಸೂಚನೆಯಲ್ಲಿ ವಿವಿಧ ಇಲಾಖೆಗಳಲ್ಲಿನ ಗ್ರೂಪ್-ಬಿ ವೃಂದದ 277 (ಉ.ಮೂ.ವೃ) ಹುದ್ದೆಗಳಿಗೆ ಅಧಿಸೂಚನೆ ಜಾರಿ ಮಾಡಲಾಗಿರುತ್ತದೆ. ಸದರಿ ಅಧಿಸೂಚನೆಯಲ್ಲಿ ಗರಿಷ್ಠ ವಯೋಮಿತಿಯನ್ನು ಸಾಮಾನ್ಯ ಅರ್ಹತೆ 35 ವರ್ಷಗಳು, ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ 38 ವರ್ಷಗಳು ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1 40 ವರ್ಷಗಳು ಎಂದು ನಿಗದಿಪಡಿಸಲಾಗಿತ್ತು.
ಸರ್ಕಾರದ ಆದೇಶ ದಿನಾಂಕ 10.09.2024ರಲ್ಲಿ ರಾಜ್ಯ ಸಿವಿಲ್ ಸೇವೆಗಳಲ್ಲಿನ ವಿವಿಧ ಇಲಾಖೆಗಳ ಗ್ರೂಪ್-ಸಿ ಮತ್ತು ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಈಗಾಗಲೇ ಹೊರಡಿಸಲಾಗಿರುವ ಅಧಿಸೂಚನೆಗಳಿಗೆ ಹಾಗೂ ಮುಂದಿನ ಒಂದು ವರ್ಷದಲ್ಲಿ ಹೊರಡಿಸಲಿರುವ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ (One time messure) ಗರಿಷ್ಠ ವಯೋತಿಯಲ್ಲಿ 3 ವರ್ಷಗಳ ಸಲಿಕೆಯನ್ನು ನೀಡಿ ಆದೇಶಿಸಿದೆ.
ಸರ್ಕಾರದ ಆದೇಶದನಯ ಹುದ್ದೆಗಳಿಗೆ ವಯೋಮಿತಿಯನ್ನು ಮಾರ್ಪಾಡು ಮಾಡಲಾಗಿದೆ. ಕನಿಷ್ಠ 18 ವರ್ಷಗಳು. ಸಾಮಾನ್ಯ ಅರ್ಹತೆ ಗರಿಷ್ಠ 38 ವರ್ಷಗಳು, ಪ್ರವರ್ಗ 2ಎ, 2ಬಿ, 3ಎ ಮತ್ತು 41 ವರ್ಷಗಳು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1 ಗರಿಷ್ಠ 43 ವರ್ಷಗಳು ಎಂದು ಕೆಪಿಎಸ್‌ಸಿ ಹೇಳಿದೆ.












Click it and Unblock the Notifications