PDO recruitment; 660 ಹುದ್ದೆಗಳ ಭರ್ತಿ ಬಗ್ಗೆ ಸರ್ಕಾರದ ಉತ್ತರ
ಬೆಂಗಳೂರು, ಜುಲೈ 06; ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ವಿಧಾನಸಭೆ ಕಲಾಪದಲ್ಲಿ ಮಾಹಿತಿ ನೀಡಿದೆ. ರಾಜ್ಯದಲ್ಲಿ ಒಟ್ಟು ಮಂಜೂರಾಗಿರುವ ಪಿಡಿಒ ಹುದ್ದೆಗಳು 6021. ಇವುಗಳಲ್ಲಿ ಸದ್ಯ 660 ಹುದ್ದೆಗಳು ಖಾಲಿ ಇವೆ.
ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಕೇಳಿದ್ದ ಪ್ರಶ್ನೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ. ಪಿಡಿಒ ನೇಮಕಾತಿ ಕುರಿತು ವಿವರಣೆ ಕೊಟ್ಟಿದ್ದಾರೆ. 150 ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಪ್ರಸ್ತುತ ಖಾಲಿ ಇರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆಗಳ ಸಂಖ್ಯೆ ಎಷ್ಟು? ವಿವರ ನೀಡುವುದು ಎಂದು ಕೇಳಿದ್ದರು. ಸಚಿವರು ಉತ್ತರದಲ್ಲಿ ಮಂಜೂರಾದ ಒಟ್ಟು ಹುದ್ದೆಗಳು 6021, ಭರ್ತಿಯಾದ ಹುದ್ದೆಗಳ ಸಂಖ್ಯೆ 5361 ಮತ್ತು ಖಾಲಿ ಇರುವ ಹುದ್ದೆಗಳ ಸಂಖ್ಯೆ 660 ಎಂದು ಮಾಹಿತಿ ನೀಡಿದ್ದಾರೆ.
ಹೊಸ ನೇರ ನೇಮಕಾತಿ; ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಹೊಸ ನೇರ ನೇಮಕಾತಿಗಾಗಿ ಅಧಿಸೂಚನೆ ಯಾವಾಗ ಹೊರಡಿಸಲಾಗುತ್ತದೆ ಎಂದು ಪ್ರಶ್ನಿಸಲಾಗಿತ್ತು. ಸಚಿವರು ಉತ್ತರದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೃಂದದ ನೇರ ನೇಮಕಾತಿ ಕೋಟಾದಲ್ಲಿ ಪ್ರಸ್ತುತ 385 ಹುದ್ದೆಗಳು ಖಾಲಿ ಇದ್ದು,ಈ ಪೈಕಿ 150 ಹುದ್ದೆಗಳಿಗೆ ನೇಮಕಾತಿ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.
ಜಿಲ್ಲಾವಾರು 15/6/2023ರ ಅಂತ್ಯಕ್ಕೆ ಖಾಲಿ ಇರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಹುದ್ದೆಯ ವಿವರಗಳು ಹೀಗಿವೆ. ಬೆಂಗಳೂರು ಗ್ರಾಮಾಂತರ 11, ಬೆಂಗಳೂರು ನಗರ 4, ಚಿಕ್ಕಬಳ್ಳಾಪುರ 20, ಚಿತ್ರದುರ್ಗ 3, ದಾವಣಗೆರೆ 37, ಕೋಲಾರ 27, ರಾಮನಗರ 9, ಶಿವಮೊಗ್ಗ 33, ತುಮಕೂರು 36, ಬಾಗಲಕೋಟೆ 6, ಬೆಳಗಾವಿ 39 ಹುದ್ದೆಗಳು ಖಾಲಿ ಇವೆ.
ಧಾರವಾಡ 13, ಗದಗ 13, ಹಾವೇರಿ 22, ಉತ್ತರ ಕನ್ನಡ 24, ವಿಜಯಪುರ 6, ಚಿಕ್ಕಮಗಳೂರು 28, ಉಡುಪಿ 14, ದಕ್ಷಿಣ ಕನ್ನಡ 34, ಕೊಡಗು 23, ಮಂಡ್ಯ 5, ಹಾಸನ 17, ಮೈಸೂರು 10, ಚಾಮರಾಜನಗರ 8, ರಾಯಚೂರು 33, ಬೀದರ್ 29, ಬಳ್ಳಾರಿ 9, ಯಾದಗಿರಿ 19, ಕಲಬುರಗಿ 74, ಕೊಪ್ಪಳ 18, ವಿಜಯನಗರ 36 ಹುದ್ದೆ ಖಾಲಿ ಇದೆ.
ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಪರಿಣಾಮಗಾರಿ ಅನುಷ್ಠಾನ, ಪಂಚಾಯಿತಿ ಮಟ್ಟದಲ್ಲಿ ಸರ್ವತೋಮುಖ ಅಭಿವೃದ್ಧಿ ಇತ್ಯಾದಿ ಪ್ರಮುಖ ಜವಾಬ್ದಾರಿಗಳು ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮೇಲಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆ, ಮೂಲ ದಾಖಲೆಗಳ ಪರಿಶೀಲನೆ ಹೀಗೆ ವಿವಿಧ ಹಂತದಲ್ಲಿ ನೇಮಕಾತಿಗಳು ನಡೆಯುತ್ತವೆ.












Click it and Unblock the Notifications