ಕೆಎಂಎಫ್‌ನ 487 ಹುದ್ದೆಗಳ ನೇಮಕಕ್ಕೆ ಹೈಕೋರ್ಟ್ ಹಸಿರು ನಿಶಾನೆ

ಬೆಂಗಳೂರು, ಏಪ್ರಿಲ್ 21; ಕರ್ನಾಟಕ ಹಾಲು ಮಹಾಮಂಡಲ (ಕೆಎಂಎಫ್)ನ 487 ವಿವಿಧ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಹೈಕೋರ್ಟ್ ಹಸಿರು ನಿಶಾನೆ ತೋರಿದೆ. ನೇಮಕದ ಅಂತಿಮ ಆಯ್ಕೆಪಟ್ಟಿ ಪ್ರಕಟಿಸಲು ವಿಧಿಸಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಿರುವ ಜತೆಗೆ ಅಂತಿಮ ಆದೇಶಕ್ಕೆ ಒಳಪಡುತ್ತದೆ ಎಂಬ ಷರತ್ತಿನ ಮೇಲೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕ ಆದೇಶ ನೀಡಲು ಕೆಎಂಎಫ್‌ಗೆ ಅನುಮತಿ ನೀಡಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಐತಪ್ಪನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಸೇರಿ ಐದು ಸಂಘಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್‌ ಕಮಲ್ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

Karnataka High Court Permitted KMF To Issue Appointment Letters Selected 487 Candidates

ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ 2023ರ ಮಾರ್ಚ್ 17ರಂದು ನೇಮಕಾತಿಯ ಅಂತಿಮ ಪಟ್ಟಿ ಪ್ರಕಟಿಸುವುದಕ್ಕೆ ನಿರ್ಬಂಧಿಸಿ ಮಾಡಿದ್ದ ಆದೇಶದಲ್ಲಿ ಮಾರ್ಪಾಡು ಮಾಡಲಾಗಿದೆ. ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿಯನ್ನು ಕೆಎಂಎಫ್‌ ಪ್ರಕಟಿಸಿ, ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಬಹುದಾಗಿದ್ದು, ಅದರಲ್ಲಿ ನೇಮಕಾತಿಯು ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಉಲ್ಲೇಖಿಸಬೇಕು ಎಂದು ಹೇಳಿದೆ.

ಅರ್ಜಿದಾರರ ಪರ ವಕೀಲರು, "ಸಂದರ್ಶನಕ್ಕೂ ಮುನ್ನ ಅಭ್ಯರ್ಥಿಗೆ ತಾನು ಪಡೆದಿರುವ ಅಂಕದ ಬಗ್ಗೆ ತಿಳಿದುಕೊಳ್ಳಲು ಅವಕಾಶವಿಲ್ಲ ಎಂದು ಸುಪ್ರೀಂಕೋರ್ಟ್‌ ತೀರ್ಪು ಹೇಳಿದೆ" ಎಂದು ಹೇಳಿ, ಮಧ್ಯಂತರ ತಡೆ ಆದೇಶ ತೆರವು ಮಾಡಿದರೆ, ನೇಮಕಾತಿ ಪತ್ರ ನೀಡದಂತೆ ಕೆಎಂಎಫ್‌ಗೆ ನಿರ್ಬಂಧಿಸಬೇಕು ಎಂದು ಕೋರಿದರು.

Karnataka High Court Permitted KMF To Issue Appointment Letters Selected 487 Candidates

ಕೆಎಂಎಫ್‌ ಪ್ರತಿನಿಧಿಸಿದ್ದ ಹಿರಿಯ ವಕೀಲರು, ಅಭ್ಯರ್ಥಿಗಳ ಪಡೆದಿರುವ ಅಂಕ ಪ್ರಕಟಿಸಿರುವುದರಿಂದ ಯಾವುದೇ ಅಭ್ಯರ್ಥಿಗೆ ತಾನು ಪಡೆದಿರುವ ಅಂಕದ ಬಗ್ಗೆ ಅಹವಾಲುಗಳಿದ್ದರೆ ಅದನ್ನು ಸಕ್ಷಮ ಪ್ರಾಧಿಕಾರದ ಮುಂದೆ ನಿರ್ದಿಷ್ಟ ಕಾಲಮಿತಿಯಲ್ಲಿ ಪ್ರಶ್ನಿಸಬಹುದು. ಇದು ಅಭ್ಯರ್ಥಿಗಳ ದೃಷ್ಟಿಯಿಂದ ಅನುಕೂಲಕಾರಿ. ವಿವಿಧ ಹುದ್ದೆಗಳಿಗೆ ಆಯ್ಕೆಯಾದವರಿಗೆ ನೇಮಕಾತಿ ಆದೇಶ ನೀಡದಿರುವುದು ಪೂರ್ವಾಗ್ರಹ ಉಂಟು ಮಾಡಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ನೀಡಲಾಗುವ ನೇಮಕಾತಿ ಆದೇಶದಲ್ಲಿ ತಮ್ಮ ಆಯ್ಕೆಯು ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂಬ ಅಂಶವನ್ನು ಉಲ್ಲೇಖಿಸಲಾಗುತ್ತದೆ ಎಂದರು.

ಭಾರಿ ಗೋಲ್ ಮಾಲ್; ಅರ್ಜಿದಾರರ ಪರ ವಕೀಲರು, ಈ ಅಕ್ರಮ ನೇಮಕದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸಿಐಡಿಗೆ ನಿರ್ದೇಶನ ನೀಡಬೇಕು. ಜತೆಗೆ ತನಿಖೆ ಮುಗಿಯುವವರೆಗೆ ನೇಮಕ ತಡೆ ಹಿಡಿಯುವಂತೆ ಕೋರಿದ್ದ ಮನವಿಯನ್ನು ಪುರಸ್ಕರಿಸುವಂತೆಯೂ ನಿರ್ದೇಶನ ನೀಡಬೇಕೆಂದರು. ಅಲ್ಲದೇ, ನೇಮಕದಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ. ಲಿಖಿತ ಪರೀಕ್ಷೆಯಲ್ಲಿ ಕನ್ನಡವೂ ಒಂದು ವಿಷಯವಾಗಿದೆ, ಆದರೆ ನೇಮಕ ಪರೀಕ್ಷೆಗಳನ್ನು ನಡೆಸಿ ಅನುಭವ ಇಲ್ಲದ, ಕನ್ನಡದ ಬಗ್ಗೆ ಜ್ಞಾನವಿಲ್ಲದ, ಗುಜರಾತ್‌ನ ಇನ್‌ಸ್ಟಿಟ್ಯೂಟ್‌ ಆಫ್‌ ರೂರಲ್‌ ಮ್ಯಾನೇಜ್‌ ಮೆಂಟ್‌ಗೆ ಹೊಣೆ ನೀಡಲಾಗಿದೆ. ಅದಕ್ಕೂ ಮುಖ್ಯವಾಗಿ ಲಿಖಿತ ಪರೀಕ್ಷೆಯ ಫಲಿತಾಂಶವನ್ನು ಸಂದರ್ಶಕರಿಗೆ ನೀಡಿದ್ದಾರೆ. ಇದು ನಿಯಮಬಾಹಿರ. ಹಾಗಾಗಿ ತಡೆ ನೀಡಬೇಕೆಂದರು.

ಅಲ್ಲದೇ, ಅಂಕಗಳನ್ನು ತಿದ್ದಲಾಗಿದೆ. ಅದಕ್ಕಾಗಿ ಹಲವು ಅಭ್ಯರ್ಥಿಗಳಿಗೆ ಹಣಕ್ಕೆ ಬೇಡಿಕೆಯೊಡ್ಡಲಾಗಿದೆ. ಪ್ರತಿ ಅಭ್ಯರ್ಥಿಗೆ ಸುಮಾರು 30 ಲಕ್ಷದಿಂದ 50 ಲಕ್ಷ ರೂ. ಗಳವರೆಗೆ ಲಂಚ ಪಡೆಯಲಾಗಿದೆ. ನೇಮಕಾತಿಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಆರೋಪಗಳ ಬಗ್ಗೆ ಕೆಎಂಎಫ್‌ ಗೆ ಮನವಿ ಸಲ್ಲಿಸಿದ್ದರೂ ಏನೂ ಪ್ರಯೋಜನವಾಗಿಲ್ಲ. ಜತೆಗೆ ಮುಖ್ಯಮಂತ್ರಿಗಳಿಗೂ ನೇಮಕ ತಡೆ ಹಿಡಿಯುವಂತೆ ಕೋರಲಾಗಿದೆ, ಆದರೂ ಏನೂ ಕ್ರಮ ಕೈಗೊಂಡಿಲ್ಲಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

ಈ 487 ಹುದ್ದೆಗಳ ನೇಮಕದಿಂದ ಪ್ರತಿ ತಿಂಗಳು ವೇತನಕ್ಕೆ 3 ಕೋಟಿ ಮತ್ತು ವರ್ಷಕ್ಕೆ 30ರಿಂದ 40 ಕೋಟಿ ಹೆಚ್ಚುವರಿ ವೆಚ್ಚ ತಗುಲಲಿದೆ. ಈ ಹೆಚ್ಚುವರಿ ಹುದ್ದೆಗಳ ಭರ್ತಿ ಅಗತ್ಯವಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+