ನರೇಗಾ ಯೋಜನೆ ಕೂಲಿದರ ಏರಿಕೆ. ಏ.1ರಿಂದ ಅನ್ವಯ
ಬೆಂಗಳೂರು, ಮಾರ್ಚ್ 28; ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಕಾರ್ಯ ನಿರ್ವಹಣೆ ಮಾಡುವ ಜನರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಯೋಜನೆಯಡಿ ಕಾರ್ಯ ನಿರ್ವಹಣೆ ಮಾಡುವ ಅಕುಶಲ ಕಾರ್ಮಿಕರ ಕೂಲಿದರ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಲಾಗಿದೆ. ನೂತನ ಕೂಲಿದರಗಳು 1//4/2023ರಿಂದ ಅನ್ವಯವಾಗುವಂತೆ ಜಾರಿಗೆ ಬರಲಿವೆ.
ಕೇಂದ್ರ ಸರ್ಕಾರದ ಆದೇಶದ ಬಳಿಕ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸುತ್ತೋಲೆಯೊಂದನ್ನು ಹೊರಡಿಸಿದೆ. ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಹೊರಡಿಸಿದ ಅಧಿಸೂಚನೆ ಅನ್ವಯ ಕೂಲಿದರ ಏರಿಕೆ ಕುರಿತು ಸುತ್ತೋಲೆಯನ್ನು ಹೊರಡಿಸಲಾಗಿದೆ.

ಆಯುಕ್ತರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಅಕುಶಲ ಕಾರ್ಮಿಕರ ಕೂಲಿದರ ಪ್ರಸ್ತುತ ವರ್ಷದಲ್ಲಿ ನೀಡುತ್ತಿರುವ ರೂ. 309 ಗಳಿಂದ ರೂ. 316 ಗಳಿಗೆ ಪರಿಷ್ಕರಿಸಿ ದಿನಾಂಕ 1/4/2023ರಿಂದ, ಆರ್ಥಿಕ ವರ್ಷ 2023-24 ನೇ ಸಾಲಿಗೆ ಅನ್ವಯವಾಗುವಂತೆ ಕರ್ನಾಟಕ ರಾಜ್ಯದಲ್ಲಿ ಜಾರಿಗೊಳಿಸಲಾಗುತ್ತಿದೆ.
ಗ್ರಾಮೀಣಾಭಿವೃದ್ಧಿ ಮಂತ್ರಾಲಯದವರು ಭಾರತ ಸರ್ಕಾರದ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ಅಧಿಸೂಚನೆಯಂತೆ, ಕ್ರಮವಹಿಸಲು ತಿಳಿಸಲಾಗಿದ್ದು, ಈ ಪುಯುಕ್ತ ಪರಿಷ್ಕೃತ ಕೂಲಿ ದರವನ್ನು 1/4/2023ರಿಂದ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಅಕುಶಲ ಕಾರ್ಮಿಕರಿಗೆ ನಿಯಮಾನುಸಾರ ಪಾವತಿಸಲು ಕ್ರಮವಹಿಸುವಂತೆ ಸೂಚಿಸಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಎಲ್ಲಾ ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಲಾಗಿದೆ.

ಬೇರೆ-ಬೇರೆ ರಾಜ್ಯಗಳಲ್ಲಿ ಕೂಲಿದರ ವ್ಯತ್ಯಾಸ; ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನೀಡುವ ಕೂಲಿಯ ದರವು ಬೇರೆ-ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಮಾದರಿಯಲ್ಲಿ ಇರುತ್ತದೆ. ಕರ್ನಾಟಕದಲ್ಲಿ 309 ರೂ. ಇದ್ದ ದರವನ್ನು 316 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ದೇಶದಲ್ಲಿ ಹರ್ಯಾಣದಲ್ಲಿ ಹೆಚ್ಚಿನ ದರವಿದ್ದು ದಿನಕ್ಕೆ 357 ರೂ. ಕೂಲಿ ನೀಡಲಾಗುತ್ತದೆ.
ನರೇಗಾ ಯೋಜನೆಯಡಿ ಜನರು ಅವರು ವಾಸ ಮಾಡುವ ಊರಿನಲ್ಲಿಯೇ ಕೂಲಿ ಪಡೆಯಬಹುದಾಗಿದೆ. ಬೇಸಿಗೆಯನ್ನು ಜನರಿಗೆ ನಿರಂತರವಾಗಿ ಕೂಲಿ ಕೆಲಸ ಒದಗಿಸಲು ಜೂನ್ ಅಂತ್ಯದ ತನಕ 90 ದಿನಗಳ ಕೂಲಿಯ ಅವಕಾಶವಿದೆ. ಹಿರಿಯರು, ವಿಶೇಷಚೇತನರಿಗೆ ಯೋಜನೆಯಡಿ ಅರ್ಧ ಕೆಲಸ ಪೂರ್ಣ ವೇತನ ನೀಡಲಾಗುತ್ತದೆ. ಬೇಸಿಗೆ ಹಂಗಾಮಿನಲ್ಲಿ ಮುಂಗಾರಿನ ಮಳೆ ನೀರು ಹಿಡಿದಿಡಲು ಜಲಶಕ್ತಿ ಅಭಿಯಾನದಡಿ ಮಳೆ ನೀರು ಸಂರಕ್ಷಣಾ ಕಾಮಗಾರಿಯನ್ನು ಅನುಷ್ಠಾನ ಮಾಡಲು ಆದ್ಯತೆ ನೀಡಲಾಗುತ್ತಿದೆ.
ಗ್ರಾಮೀಣ ಜನರಿಗೆ ಸಹಕಾರಿಯಾಗಿದೆ; ಗ್ರಾಮೀಣ ಮಟ್ಟದಲ್ಲಿ ಜನರಿಗೆ ಅವರ ವಾಸಸ್ಥಳದಲ್ಲಿಯೇ ಉದ್ಯೋಗ ನೀಡುವಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆ ಸಹಕಾರಿಯಾಗಿದೆ. ಕೇಂದ್ರ ಸರ್ಕಾರವು ಸಹ ಪ್ರತಿ ಬಾರಿಯ ಬಜೆಟ್‌ನಲ್ಲಿ ಈ ಯೋಜನೆಗಾಗಿಯೇ ಪ್ರತ್ಯೇಕವಾದ ಹಣವನ್ನು ಮೀಸಲಿಡುತ್ತದೆ. 2022ನೇ ಸಾಲಿನಲ್ಲಿ 11.37 ಕೋಟಿ ಜನರು 289.24 ಕೋಟಿ ರೂ. ಮೊತ್ತದ ಕೆಲಸವನ್ನು ಡಿಸೆಂಬರ್ 15ರ ತನಕ ಮಾಡಿದ್ದಾರೆ. 2022-23ನೇ ಸಾಲಿನಲ್ಲಿ 52.78 ಲಕ್ಷ ಉದ್ಯೋಗ ನೀಡುವ ಗುರಿ ಹೊಂದಲಾಗಿತ್ತು. 31.43 ಲಕ್ಷ ಉದ್ಯೋಗವನ್ನು ನೀಡಲಾಗಿದೆ.
ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುವ ಅಕುಶಲ ಕಾರ್ಮಿಕರಿಗೆ ಆರ್ಥಿಕ ವರ್ಷದಲ್ಲಿ 100 ದಿನಗಳ ಉದ್ಯೋಗ ಖಾತ್ರಿಯನ್ನು ಯೋಜನೆ ನೀಡುತ್ತದೆ. ಈ ಯೋಜನೆ ಗ್ರಾಮೀಣ ಪ್ರದೇಶದ ಬಡವರಿಗೆ ಸಹಕಾರಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಪ್ರತಿ ಜಿಲ್ಲೆಯಲ್ಲಿ 75 ಅಮೃತ ಸರೋವರ (ಕೆರೆ) ನಿರ್ಮಾಣ ಮಾಡುವ ಕರೆ ನೀಡಿದ್ದಾರೆ. ನರೇಗಾ ಯೋಜನೆಯಲ್ಲಿ ಇದಕ್ಕೆ ಆದ್ಯತೆ ನೀಡಲಾಗಿದೆ.












Click it and Unblock the Notifications