ಕರ್ನಾಟಕ ಪೊಲೀಸ್ ಇಲಾಖೆ: 450 ವಿವಿಧ ಹುದ್ದೆಗಳ ನೇಮಕಾತಿಗೆ ಒಪ್ಪಿಗೆ
ಬೆಂಗಳೂರು, ನವೆಂಬರ್ 24: ಕರ್ನಾಟಕ ಸರ್ಕಾರ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ 33 ಘಟಕಗಳನ್ನು ವಿಶೇಷ ಪೋಲಿಸ್ ಠಾಣೆಗಳೆಂದು ಘೋಷಿಸಲು ಹಾಗೂ ಸದರಿ ಠಾಣೆಗಳ ನಿರ್ವಹಣೆಗಾಗಿ ಅಗತ್ಯವಿರುವ 450 ವಿವಿಧ ಹುದ್ದೆಗಳಿಗೆ ಮಂಜೂರಾತಿಯನ್ನು ನೀಡಿದೆ. ಸಚಿವ ಸಂಪುಟ ಸಭೆಯ ನಿರ್ಣಯದಂತೆ ಪೊಲೀಸ್ ಅಧಿಕಾರಿ/ ಸಿಬ್ಬಂದಿ ವರ್ಗದ ನೇಮಕಾತಿಗೆ ಒಪ್ಪಿಗೆಯನ್ನು ನೀಡಲಾಗಿದೆ.
ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಕಲಾವತಿ ಎಸ್. ವಿ. ಸರ್ಕಾರದ ಜಂಟಿ ಕಾರ್ಯದರ್ಶಿ ಸಮಾಜ ಕಲ್ಯಾಣ ಇಲಾಖೆ ಆದೇಶವನ್ನು ಹೊರಡಿಸಿದ್ದಾರೆ. ಅಸ್ಪೃಶ್ಯತಾ ನಿಷೇಧ ಕಾಯಿದೆ 1955 ಅನ್ನು ಜಾರಿಗೊಳಿಸಲು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಾಂಗದವರ ವಿರುದ್ದ ನಡೆಯುವ ದೌರ್ಜನ್ಯ ಪ್ರಕರಣಗಳಲ್ಲಿ ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳಲು ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯವನ್ನು 1974ರಲ್ಲಿ ಸ್ಥಾಪಿಸಲಾಯಿತು ಎಂದು ಹೇಳಿದ್ದಾರೆ.

ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯವು ಗುಪ್ತಚರ ಮಾಹಿತಿ ಸಂಗ್ರಹಿಸಿ, ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಆದೇಶಿಸಲಾಗಿರುತ್ತದೆ. ಈ ಘಟಕದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮತ್ತು ಮೇಲ್ಪಟ್ಟ ಅಧಿಕಾರಿಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಅಧಿನಿಯಮ, 1989 ರನ್ವಯ ದಾಖಲಾಗುವ ಪ್ರಕರಣಗಳನ್ನು ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುವ ಅಧಿಕಾರವನ್ನು ನೀಡಲಾಗಿರುತ್ತದೆ.
ಕರ್ನಾಟಕ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳು ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿ ಮೀಸಲಾತಿ), ನಿಯಮ-7 ರಡಿಯಲ್ಲಿ ಡಿಸಿಆರ್‌ಇ ಘಟಕವು ಸುಳ್ಳು, ಜಾತಿ ಪ್ರಮಾಣ ಪತ್ರಗಳ ಪುಕರಣಗಳಲ್ಲಿ ತನಿಖೆಯನ್ನು ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗುತ್ತಿದೆ. ನಾಗರೀಕ ಹಕ್ಕು ನಿರ್ದೇಶನಾಲಯವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ (ದೌರ್ಜನ್ಯ ನಿಯಂತ್ರಣ) ನಿಯಮಗಳು 1995 ರಂತೆ ರಾಜ್ಯ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರಕ್ಷಣಾ ಘಟಕವೆಂದು ಆದೇಶಿಸಲಾಗಿದೆ.
ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್‌ಇ) ಘಟಕಗಳಿಗೆ ಪ್ರಸ್ತುತ ಪೊಲೀಸ್ ಠಾಣೆಯ ಸ್ಥಾನಮಾನವಿಲ್ಲದೇ ಇರುವುದರಿಂದ, ಎಫ್‌ಐಆರ್ ದಾಖಲು ಮಾಡಿ ತನಿಖೆ ನಡೆಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ಪ್ರತಿಬಂಧ) ಅಧಿನಿಯಮ 1989 ರಡಿ ಪ್ರಸ್ತುತ ಸ್ಥಳೀಯ ಪೊಲೀಸ್ ಠಾಣೆಯಿಂದಲೇ ದೌರ್ಜನ್ಯ ಪಕರಣಗಳಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
ದೌರ್ಜನ್ಯ ಪ್ರಕರಣಗಳನ್ನು ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದಾಖಲಿಸಿ ತನಿಖೆ ಮಾಡಿ ನ್ಯಾಯಾಲಯಗಳಿಗೆ ವರದಿಯನ್ನು ಸಲ್ಲಿಸಲಾಗುತ್ತಿದ್ದು, ಸ್ಥಳೀಯ ಠಾಣೆಗಳಿಲ್ಲಿರುವ ಇತರೆ ಕರ್ತವ್ಯಗಳ ಒತ್ತಡಗಳಿಂದ ದೌರ್ಜನ್ಯ ಪ್ರಕರಣಗಳಲ್ಲಿ ವಿವರವಾದ ತನಿಖೆ ನಡೆಸಿ, ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಿ, ಮಾನ್ಯ ನ್ಯಾಯಾಲಯಗಳಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸುವ ಬಗ್ಗೆ ವಿಳಂಬವಾಗುತ್ತಿದೆ.
ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ಪ್ರತಿಬಂಧ) ಅಧಿನಿಯಮ, 1989ರಡಿ ದಾಖಲಾದ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಕಡಿಮೆ ಇರುತ್ತದೆ. ಆದ್ದರಿಂದ ದೌರ್ಜನ್ಯ ತಡೆ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಿ, ನಿಗದಿತ ಸಮಯದೊಳಗೆ ತನಿಖೆ ನಡೆಸಿ, ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಗಳನ್ನು ಸಲ್ಲಿಸುವ ಬಗ್ಗೆ ಪರಿಣಾಮಕಾರಿಯಗಿ ಕಾರ್ಯನಿರ್ವಹಿಸಲು ಡಿಸಿಆರ್‌ಇ ಘಟಕಗಳನ್ನು ವಿಶೇಷ ಪೊಲೀಸ್ ಠಾಣೆಗಳೆಂದು ಘೋಷಿಸುವುದು ಅವಶ್ಯಕವಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಾಂಗದವರ ವಿರುದ್ಧ ನಡೆಯುವ ದೌರ್ಜನ್ಯ ಪ್ರಕರಣಗಳಲ್ಲಿ ದೂರು ದಾಖಲಿಸಿ, ನಿಗದಿತ ಅವಧಿಯಲ್ಲಿ ಸೂಕ್ತ ತನಿಖೆ ನಡೆಸಿ ದೋಷಾರೋಪಣ ಪಟ್ಟಿಯನ್ನು ಮಾನ್ಯ ನ್ಯಾಯಾಲಯಗಳಲ್ಲಿ ಸಲ್ಲಿಸಲು ಪ್ರತಿ ಜಿಲ್ಲೆಗೆ ಒಂದರಂತೆ ಹಾಗೂ ಬೆಂಗಳೂರು ನಗರಕ್ಕೆ 2ರಂತೆ ರಾಜ್ಯದಲ್ಲಿ ಒಟ್ಟು 33 ಡಿಸಿಆರ್‌ಇ ವಿಶೇಷ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲು ಮತ್ತು ಸದರಿ 33 ವಿಶೇಷ ಪೊಲೀಸ್ ಠಾಣೆಗಳ ನಿರ್ವಹಣೆಗಾಗಿ ಡಿಸಿಆಇ ಘಟಕದಲ್ಲಿ ಹಾಲಿ ಇರುವ 340 ಹುದ್ದೆಗಳ ಜೊತೆಗೆ ಹೆಚ್ಚುವರಿಯಾಗಿ 450 ವಿವಿಧ ವೃಂದದ ಹುದ್ದೆಗಳನ್ನು ಮಂಜೂರು ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸದರಿ ಪ್ರಸ್ತಾವನೆಯನ್ನು ದಿನಾಂಕ 20-06-2024 ರಂದು ನಡೆದ ಸಚಿವ ಸಂಪುಟ ಸಭೆಯ ಮುಂದೆ ಸಲ್ಲಿಸಲಾಗಿರುತ್ತದೆ. ಸಚಿವ ಸಂಪುಟವು ತಾತ್ವಿಕ ಅನುಮೋದನೆ ನೀಡಿರುತ್ತದೆ.
ಆದೇಶವೇನು?: ಪ್ರಸ್ತಾವನೆಯನ್ನು ಪರಿಶೀಲಿಸಿ ಈ ಆದೇಶವನ್ನು ಹೊರಡಿಸಲಾಗಿದೆ. ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ 2023 (BNSS Act, 2023) ರ ಕಲಂ 2(u) ರಡಿಯಲ್ಲಿ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ 33 ಘಟಕಗಳನ್ನು ವಿಶೇಷ ಪೋಲೀಸ್ ಠಾಣೆಗಳೆಂದು ಸ್ಥಾಪಿಸಲು ಒಳಾಡಳಿತ ಇಲಾಖೆಯಿಂದ ಅಧಿಸೂಚನೆ ಹೊರಡಿಸುವುದು. ಡಿಸಿಆರ್‌ಇ ವಿಶೇಷ ಪೋಲೀಸ್ ಠಾಣೆಗಳನ್ನು ನಿರ್ವಹಿಸಲು 450 ಹೊಸ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ ಮತ್ತು ಸದರಿ ಹುದ್ದೆಗಳನ್ನು ನಿಯೋಜನೆ ಮೇಲೆ ಒಳಾಡಳಿತ ಇಲಾಖೆಯಿಂದ ಭರ್ತಿ ಮಾಡುವುದು.
33 ವಿಶೇಷ ಪೋಲೀಸ್ ಠಾಣೆಗಳಿಗೆ ಕಟ್ಟಡಗಳು ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕುರಿತು ಡಿಸಿಆರ್‌ಇ ರವರು ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸುವುದು. ಸದರಿ ಮೂಲಭೂತ ಸೌಕರ್ಯಗಳಿಗೆ ತಗಲುವ ಅನಾವರ್ತಕ ವೆಚ್ಚ (ಬಂಡವಾಳ ವೆಚ್ಚ) ಅನುದಾನ ಪಡೆಯುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕ್ರಮವಹಿಸುವುದು.
ಡಿಸಿಆರ್‌ಇಯ 33 ವಿಶೇಷ ಪೊಲೀಸ್ ಠಾಣೆಗಳ ನಿರ್ವಹಣೆಗೆ ಭರಿಸಬೇಕಾದ ವೆಚ್ಚವನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಶೇ. 50:50 ಅನುಪಾತದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಷರತ್ತಿಗೊಳಪಟ್ಟು ಭರಿಸಲು ಮತ್ತು ಅನುದಾನ ಕೊರತೆಯಾದಲ್ಲಿ ಅದನ್ನು ರಾಜ್ಯ ಸರ್ಕಾರದ SCSP/ TSP ಯೋಜನೆಯ ನಿಧಿಯಿಂದ ಭರಿಸುವುದು.
ಒಳಾಡಳಿತ ಇಲಾಖೆ/ ಡಿಜಿ & ಐಜಿಪಿ ರವರು ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಮೇಲ್ಪಟ್ಟ ದರ್ಜೆಯ ಅಧಿಕಾರಿಗಳನ್ನು ನಾಗರೀಕ ಹಕ್ಕು ಜಾರಿ ನಿರ್ದೇಶನಾಲಕ್ಕೆ ನಿಯುಕ್ತಿಗೊಳಿಸುವ ಮುನ್ನ ಸಮಾಜ ಕಲ್ಯಾಣ ಇಲಾಖೆಯ ಸಹಮತಿ ಪಡೆಯವುದು. ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ವಿಶೇಷ ಪೊಲೀಸ್ ಠಾಣೆಗಳು ಒಳಾಡಳಿತ ಇಲಾಖೆ ಅಥವಾ ಸಮಾಜ ಕಲ್ಯಾಣ ಇಲಾಖೆಗಳು ಕಳುಹಿಸುವ ದೂರುಗಳನ್ನು ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳುವುದು.
ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರು, ಆಯಾ ಜಿಲ್ಲೆಗಳಲ್ಲಿರುವ ಸ್ಥಳೀಯ ಸಾಮಾನ್ಯ ಪೊಲೀಸ್ ಠಾಣೆಗಳಲ್ಲಿ ಅಥವಾ ಜಿಲ್ಲಾ ಕೇಂದ್ರ ಸ್ಥಾನದಲ್ಲಿರುವ ಡಿಸಿಆರ್‌ಇ ವಿಶೇಷ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ಮಾಡುವ ಬಗ್ಗೆ ದೂರುಗಳನ್ನು ದಾಖಲಿಸಬಹುದು. ಸಾಮಾನ್ಯ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ದಾಖಲು ಮಾಡಿದಲ್ಲಿ ಸದರಿ ಪ್ರಕರಣಗಳನ್ನು ಡಿಸಿಆರ್‌ಇ ಪೊಲೀಸ್ ಠಾಣೆಗಳಿಗೆ ವರ್ಗಾಯಿಸತಕ್ಕದ್ದು.
ಎಲ್ಲಾ ದೌರ್ಜನ್ಯ ತಡೆ ಪ್ರಕರಣಗಳಲ್ಲಿ ಡಿಸಿಆರ್‌ಇ ಪೊಲೀಸ್ ಠಾಣೆಗಳಿಂದ ತನಿಖೆ ನಡೆಸಿ, ಸಂಬಂಧಿಸಿದ ಮಾನ್ಯ ನ್ಯಾಯಾಲಯಗಳಲ್ಲಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸತಕ್ಕದ್ದು. ಡಿಸಿಆರ್‌ಇ ಘಟಕಗಳನ್ನು ವಿಶೇಷ ಪೊಲೀಸ್ ಠಾಣೆಗಳೆಂದು ಘೋಷಿಸಿ ಸದರಿ ಪೊಲೀಸ್ ಠಾಣೆಗಳ ಸಮರ್ಪಕ ನಿರ್ವಹಣೆಗೆ ಹೆಚ್ಚುವರಿ ಹುದ್ದೆಗಳನ್ನು ಮಂಜೂರು ಮಾಡುವುದರಿಂದ ಡಿಸಿಆರ್‌ಇ ಅಧಿಕಾರಿಗಳು ವಿಶೇಷ ಗಮನಹರಿಸಿ, ಶಿಕ್ಷೆಯ ಪ್ರಮಾಣ ಹೆಚ್ಚಿಸಲು ಕ್ರಮವಹಿಸುವುದು.
ಡಿಸಿಆರ್‌ಇ ವಿಶೇಷ ಪೊಲೀಸ್ ಠಾಣೆಗಳು ಮತ್ತು ಸ್ಥಳೀಯ ಪೊಲೀಸ್ ಠಾಣೆಗಳ ನಡುವೆ ಸಮರ್ಪಕ ಸಮನ್ವಯತೆಯನ್ನು ಹೊಂದಿರತಕ್ಕದ್ದು. ಆರೋಪಿಗಳನ್ನು ದಸ್ತಗಿರಿ ಮಾಡುವ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಡಿಸಿಆರ್‌ಇ ಠಾಣೆಗಳಿಗೆ ಅಗತ್ಯವಿರುವ ಹೆಚ್ಚುವರಿ ಪೊಲೀಸ್ ಫೋರ್ಸ್‌ನ್ನು ಒದಗಿಸುವುದು ಎಂದು ಆದೇಶ ಹೇಳಿದೆ.












Click it and Unblock the Notifications