Karnataka Budget 2023; ಉದ್ಯೋಗ ಕ್ಷೇತ್ರದ ಘೋಷಣೆಗಳ ವಿವರಗಳು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2023-24ನೇ ಸಾಲಿನ ಬಜೆಟ್‌ನಲ್ಲಿ ಉದ್ಯೋಗ ಕ್ಷೇತ್ರಕ್ಕೆ ಮಾಡಿರುವ ಘೋಷಣೆಗಳು ಏನು?. ಇಲ್ಲಿದೆ ವಿವರ
ಬೆಂಗಳೂರು, ಫೆಬ್ರವರಿ 17; ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ 2023-24ನೇ ಸಾಲಿನ ಬಜೆಟ್ ಮಂಡನೆ ಮಾಡುತ್ತಿದ್ದಾರೆ.
ಈ ಬಾರಿಯ ಒಟ್ಟು ಬಜೆಟ್ ಗಾತ್ರ 309182 ಕೋಟಿ ರೂ. ಆಗಿದೆ. ಮುಖ್ಯಮಂತ್ರಿಗಳು ಬಜೆಟ್ ಭಾಷಣದಲ್ಲಿ ಉದ್ಯೋಗ, ಕೃಷಿ, ಸೇರಿದಂತೆ ವಿವಿಧ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ.
ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣ ಮಂತ್ರದೊಂದಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಅಲ್ಪ ಸಂಖ್ಯಾತರು, ಮಹಿಳೆಯರು ಇತರ ದುರ್ಬಲ ವರ್ಗದವರ ಸ್ವಾಭಿಮಾನದ, ಸ್ವಾವಲಂಬನೆಯ ಬದುಕಿಗೆ ಬೆಂಬಲ ನೀಡಿದ್ದೇವೆ ಎಂದು ಹೇಳಿದರು.

ಬಸವರಾಜ ಬೊಮ್ಮಾಯಿ ಅವರು ತಮ್ಮ ಬಜೆಟ್ ಭಾಷಣದಲ್ಲಿ, 'ಯುವಸ್ನೇಹಿ' ಎಂಬ ಯೋಜನೆ ಘೋಷಣೆ ಮಾಡಿದರು. ನಿರುದ್ಯೋಗಿ ಯುವಕರಿಗೆ 2000 ರೂ. ಸಹಾಯಧನವನ್ನು ನೀಡುವುದಾಗಿ ಹೇಳಿದರು.
ಅಲ್ಲದೇ ಮಹಿಳೆಯರಿಗೆ ಬಜೆಟ್‌ನಲ್ಲಿ ಹೆಚ್ಚು ಆದ್ಯತೆ ನೀಡಲಾಗಿದೆ. ಆಧುನಿಕತೆಗೆ ತಕ್ಕಂತೆ ಮಹಿಳೆಯರು ಉದ್ಯೋಗ ಪಡೆಯಲು ಅನುಕೂಲವಾಗುವಂತೆ 1 ಲಕ್ಷ ಮಹಿಳೆಯರಿಗೆ ಉಚಿತ ಕೌಶಲ್ಯ ತರಬೇತಿ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದರು.
ಮಹಿಳಾ ಉದ್ಯಮಿದಾರರಿಗೆ 2 ಕೋಟಿ ರೂ. ತನಕ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ ಎಂದು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ.
ರಾಜ್ಯದ ಆಡಳಿತ ವ್ಯವಸ್ಥೆಯನ್ನು ಬಲಪಡಿಸಿ, ನಾಗರಿಕರಿಗೆ ಅತ್ಯುತ್ತಮ ಸೇವೆಯನ್ನು ಒದಗಿಸಲು ಹಾಗೂ ಯುವ ಜನತೆಗೆ ಹೆಚ್ಚಿನ ಉದ್ಯೋಗವಕಾಶವನ್ನು ಒದಗಿಸಲು ನಮ್ಮ ಸರ್ಕಾರವು ಒಂದು ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವ ಐತಿಹಾಸಿಕ ನಿರ್ಣಯವನ್ನು ಕೈಗೊಂಡಿದೆ ಎಂದು ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿಗಳು ಹೇಳಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ನಮ್ಮ ಸರ್ಕಾರವು ನಿರ್ಧರಿಸಿದೆ. ಈ ಎಲ್ಲಾ ಹುದ್ದೆಗಳ ಆಯ್ಕೆ ಪ್ರಕ್ರಿಯೆಯನ್ನು 2023-24ನೇ ಸಾಲಿನಲ್ಲಿಯೇ ಪೂರ್ಣಗೊಳಿಸಿ ನೇಮಕಾತಿ ಆದೇಶವನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.












Click it and Unblock the Notifications