ಕಲ್ಯಾಣ ಕರ್ನಾಟಕ ಭಾಗದ ನೇರ ನೇಮಕಾತಿ; ಸುತ್ತೋಲೆ
ಬೆಂಗಳೂರು, ಮೇ 07; ಕಲ್ಯಾಣ ಕರ್ನಾಟಕದ ಭಾಗದಲ್ಲಿ ನೇರ ನೇಮಕಾತಿಯಡಿ ಬಾಕಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಸುತ್ತೋಲೆಯೊಂದನ್ನು ಹೊರಡಿಸಲಾಗಿದೆ. ಅರ್ಥಿಕ ಇಲಾಖೆಯ ಸಹಮತಿ ಇಲ್ಲದೇ ಸೃಜಿಸಲಾದ ಹುದ್ದೆಗಳಿಗೆ 24/11/2021ರ ಸುತ್ತೋಲೆಯು ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಆರ್ಥಿಕ ಇಲಾಖೆಯ ಕಾರ್ಯದರ್ಶಿ (ಆಯವ್ಯಯ & ಸಂಪನ್ಮೂಲ) ಡಾ. ಏಕ್ ರೂಪ್ ಕೌರ್ ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ. ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು/ ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳಿಗೆ ಈ ಸುತ್ತೋಲೆ ಕಳಿಸಲಾಗಿದೆ.

ಸುತ್ತೋಲೆ ದಿನಾಂಕ 24/11/2021ರಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಲು ಅನುಕೂಲವಾಗುವಂತೆ, ನೇರ ನೇಮಕಾತಿಯಡಿ ಬಾಕಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಕುರಿತಂತೆ ಇಲಾಖೆಗಳಲ್ಲಿ ವೃಂದಬಲ ಶೇ 80ಕ್ಕಿಂತ ಕಡಿಮೆ ಇದ್ದಲ್ಲಿ, ಅಂತಹ ಸಂದರ್ಭಗಳಲ್ಲಿ ವೃಂದಬಲದ ಶೇ 80ರವರೆಗೆ ನೇರ ನೇಮಕಾತಿಯಡಿ ಭರ್ತಿ ಮಾಡಿಕೊಳ್ಳಲು ಆಡಳಿತ ಇಲಾಖೆಗಳು ತಮ್ಮ ಹಂತದಲ್ಲಿಯೇ ನಿಯಮಾನುಸಾರ ಪರಿಶೀಲಿಸಿ, ನೇಮಕಾತಿ ಮುಂದುವರೆಸಲು ಕ್ರಮವಹಿಸಲು ತಿಳಿಸಲಾಗಿದೆ.
ಸದರಿ ಸುತ್ತೋಲೆಯು ಆರ್ಥಿಕ ಇಲಾಖೆಯಿಂದ ಸಹಮತಿ ಪಡೆದು ಸೃಜನೆಯಾದ ಹುದ್ದೆಗಳಿಗೆ ಮಾತ್ರ ಅನ್ವಯವಾಗುತ್ತದೆ. ಕರ್ನಾಟಕ ಸರ್ಕಾರದ (ಕಾರ್ಯ ಕಲಾಪಗಳ ನಿರ್ವಹಣೆ) ನಿಯಮಗಳು -1977ರ ಅನ್ವಯ ಹುದ್ದೆಗಳ ಸೃಜನೆ ಅಥವಾ ಹುದ್ದೆಗಳ ಸಂಖ್ಯೆ ಹೆಚ್ಚಿಸುವ ಅಂಶಗಳನ್ನು ಒಳಗೊಂಡ ಯಾವುದೇ ಪ್ರಸ್ತಾವನೆ/ ಯೋಜನ ಕುರಿತು ಆದೇಶಗಳನ್ನು ಹೊರಡಿಸುವ ಪೂರ್ವದಲ್ಲಿಯೇ ಆರ್ಥಿಕ ಇಲಾಖೆಯ ಸಹಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದು ಹೇಳಿದೆ.

ಆದರೆ, ವಿಶ್ವವಿದ್ಯಾಲಯಗಳು ಮತ್ತು ವೈದ್ಯಕೀಯ ಮಹಾವಿದ್ಯಾಲಯಗಳು ಆಡಳಿತ ಮಂಡಳಿಯ ಅನುಮೋದನೆ ಪಡೆದು ಹುದ್ದೆಗಳನ್ನು ತಮ್ಮ ಹಂತದಲ್ಲಿಯೇ ಸೃಜಿಸಿಕೊಂಡಿರುವುದು ಕಂಡುಬರುತ್ತದೆ. ಸದರಿ ಹುದ್ದೆಗಳನ್ನು ಸೇರಿಸಿ, ದಿನಾಂಕ 24/11/2021ರ ಸುತ್ತೋಲೆಯನ್ವಯ ನೇರನೇಮಕಾತಿ ಭರ್ತಿಗೆ ಕ್ರಮವಹಿಸಿರುತ್ತವೆ. ಅನಂತರ ಸದರಿ ಹುದ್ದೆಗಳ ನೇಮಕಾತಿ ಆದೇಶ ನೀಡಲು ಆರ್ಥಿಕ ಇಲಾಖೆಯನ್ನು ಸಂಪರ್ಕಿಸುತ್ತಿರುವುದನ್ನು ಗಮನಿಸಲಾಗಿದೆ ಎಂದು ತಿಳಿಸಿದೆ.
ಆರ್ಥಿಕ ಇಲಾಖೆಯ ಸಹಮತಿಯಿಲ್ಲದೇ ಸೃಜಿಸಲಾದ ಹುದ್ದೆಗಳಿಗೆ ದಿನಾಂಕ 24/11/2021ರ ಸುತ್ತೋಲೆಯು ಅನ್ವಯಿಸುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಆದುದರಿಂದ ವಿಶ್ವವಿದ್ಯಾಲಯಗಳು ಮತ್ತು ವೈದ್ಯಕೀಯ ಮಹಾವಿದ್ಯಾಲಯಗಳು ತಮ್ಮ ಹಂತದಲ್ಲಿಯೇ ಸೃಜಿಸಿಕೊಂಡ ಹುದ್ದೆಗಳ ಅನುಮೋದನೆಗಾಗಿ ಕರ್ನಾಟಕ ಸರ್ಕಾರದ (ಕಾರ್ಯ ಕಲಾಪಗಳ ನಿರ್ವಹಣೆ) ನಿಯಮಗಳು -1977ರ ಅನ್ವಯ ಪ್ರಸ್ತಾವನೆಯ ವಿವರಗಳೊಂದಿಗೆ ಸಂಬಂಧಪಟ್ಟ ಆಡಳಿತ ಇಲಾಖೆಗಳ ಮೂಲಕ ಆರ್ಥಿಕ ಇಲಾಖೆಗೆ ಕಡತ ಸಲ್ಲಿಸುವಂತೆ ತಿಳಿಸಲಾಗಿದೆ.












Click it and Unblock the Notifications