ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಹುದ್ದೆ, ಸರ್ಕಾರದ ಉತ್ತರ
ಬೆಳಗಾವಿ, ಡಿಸೆಂಬರ್ 22; ಕರ್ನಾಟಕದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ 3941 ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ. 814 ಉಪನ್ಯಾಸಕರ ಹುದ್ದೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ನಡೆಯುತ್ತಿದೆ. ಯಮಕನಮರಡಿ ಶಾಸಕ ಸತೀಶ್ ಎಲ್. ಜಾರಕಿಹೊಳಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಹಾಗೂ ಸಕಾಲ ಸಚಿವರಿಗೆ ಉಪನ್ಯಾಸಕರ ಹುದ್ದೆಗಳು ಖಾಲಿ ಇರುವ ಕುರಿತು ಪ್ರಶ್ನೆ ಕೇಳಿದ್ದರು.
ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಮಂಜೂರಾಗಿರುವ ಉಪನ್ಯಾಸಕರ ಹುದ್ದೆಗಳು ಎಷ್ಟು?, ವಿಷಯವಾರು ಮಾಹಿತಿ ನೀಡಿ ಎಂದು ಕೇಳಿದ್ದರು. ಖಾಲಿ ಇರುವ ಹುದ್ದೆಗಳು ಎಷ್ಟು?. ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದಿಂದ ಯಾವ ಕ್ರಮ ಕೈಗೊಳ್ಳಲಾಗಿದೆ? ಎಂದು ವಿವರಣೆ ಕೇಳಿದ್ದರು.

ಇಲಾಖೆ ಈ ಪ್ರಶ್ನೆಗೆ ಉತ್ತರ ನೀಡಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ 12,858 ಉಪನ್ಯಾಸಕರ ಹುದ್ದೆಗಳು ಮಂಜೂರಾಗಿದ್ದು, ಈ ಪೈಕಿ 3941 ಹುದ್ದೆಗಳು ಖಾಲಿ ಇರುತ್ತದೆ. 814 ಉಪನ್ಯಾಸಕರ ಹುದ್ದೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿಗಳು 17/11/2022ರ ಟಿಪ್ಪಣಿಯಲ್ಲಿ ಅನುಸೂಚಿತ ಜಾತಿಗಳಿಗೆ ಮತ್ತು ಅನುಸೂಚಿತ ಪಂಗಡಗಳಿಗೆ ಹೆಚ್ಚಿಸಲಾಗಿರುವ ಮೀಸಲಾತಿಯನ್ನು ಜಾರಿಗೊಳಿಸಲು ರೋಸ್ಟರ್ ಬಿಂದುಗಳನ್ನು ಗುರುತಿಸುವ ಪ್ರಕ್ರಿಯೆ ಅಂತಿಮಗೊಳ್ಳುವ ತನಕ ರಾಜ್ಯಾಧೀನ ಸೇವೆಗಳಲ್ಲಿ ನೇರ ನೇಮಕಾತಿ ಮತ್ತು ಮುಂಬಡ್ತಿ ಪ್ರಕ್ರಿಯೆಗಳನ್ನು ತಡೆಹಿಡಿಯಲು ಸೂಚಿಸಿದ್ದು, ಸದರಿ ಆದೇಶವನ್ನು ಹಿಂಪಡೆದ ನಂತರ ನೇಮಕಾತಿ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದೆ.
ಯಾವ-ಯಾವ ವಿಷಯಗಳು?; ಯಾವ-ಯಾವ ವಿಷಯಗಳ ಹುದ್ದೆಗಳು ಖಾಲಿ ಇವೆ ಎಂದು ಸಹ ಮಾಹಿತಿ ನೀಡಲಾಗಿದೆ. ಅರೆಬಿಕ್ 1, ಬಯಾಲಜಿ 283, ಕೆಮಿಸ್ಟ್ರಿ 150, ಬ್ಯುಸಿನೆಸ್ ಸ್ಟಡೀಸ್ 150, ಕಂಪ್ಯೂಟರ್ ಸೈನ್ಸ್ 17, ಎಕಾಮಿನಾಕ್ಸ್ 487, ಶಿಕ್ಷಣ 15, ಎಲೆಕ್ಟ್ರಾನಿಕ್ಸ್ 4, ಇಂಗ್ಲಿಶ್ 431.
ಜಿಯೋಗ್ರಾಫಿ 50, ಜಿಯಾಲಜಿ 1, ಹಿಂದಿ 33, ಇತಿಹಾಸ 335, ಕನ್ನಡ 481, ಲಾಜಿಕ್ಸ್ 6, ಮರಾಠಿ 5, ಗಣಿತ 181, ಸಂಗೀತ (ಹಿಂದೂಸ್ತಾನಿ) 2, ಫಿಸಿಕ್ಸ್ 185, ಪೊಲಿಟಿಕಲ್ ಸೈನ್ಸ್ 295, ಸೈಕಾಲಜಿ 2, ಸಂಸ್ಕೃತ 16, ಸೊಶಿಯಾಲಜಿ 410, ತಮಿಳು 1, ಉರ್ದು 49 ಹುದ್ದೆಗಳು ಖಾಲಿ ಇದೆ.












Click it and Unblock the Notifications