ಮೈಸೂರು; ಆಗಸ್ಟ್ 30ರಂದು ಉದ್ಯೋಗ ಮೇಳ, 30 ಕಂಪನಿಗಳು ಭಾಗಿ
ಮೈಸೂರು, ಆಗಸ್ಟ್ 17; 'ಕೌಶಲ್ಯ ಮಾಸ' ಆಚರಣೆಯ ಅಂಗವಾಗಿ ಮೈಸೂರಿನಲ್ಲಿ ಆಗಸ್ಟ್ 30ರಂದು ಮಿನಿ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ. 18 ರಿಂದ 35 ವರ್ಷದ ವಯೋಮಿತಿಯ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಮೈಸೂರು ಜಿಲ್ಲಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಮೈಸೂರು ಹಾಗೂ ಜಿಲ್ಲಾ ಉದ್ಯೋಗ ವಿಮಯ ಕಛೇರಿ ಸಹಯೋಗದಲ್ಲಿ ಮಿನಿ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದೆ.
ಮೈಸೂರು ಹಾಗೂ ಬೆಂಗಳೂರು ಮೂಲದ ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವ ಮಾರುಕಟ್ಟೆ, ಹಣಕಾಸು, ವಿಮೆ, ಕೈಗಾರಿಕೆಗಳು, ಬ್ಯಾಕಿಂಗ್ ಮತ್ತು ಆಸ್ಪತ್ರೆ ಸೇವೆಗಳು ಹಾಗೂ ಇತರೆ ಹುದ್ದೆಗಳನ್ನು ಭರ್ತಿ ಮಾಡಲು 20 ರಿಂದ 25 ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿವೆ.

7 ನೇ ತರಗತಿಯಿಂದ ಎಸ್. ಎಸ್. ಎಲ್. ಸಿ., ಪಿಯುಸಿ, ಎಲ್ಲಾ ಪದವಿ, ಐಟಿಐ (ಮೆಕ್ಯಾನಿಕಲ್, ಫಿಟ್ಟರ್) ಹಾಗೂ ಡಿಪ್ಲೊಮಾ, ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಮತ್ತು ನರ್ಸಿಂಗ್ ವಿದ್ಯಾರ್ಹತೆ ಹೊಂದಿರುವವರು ಮೇಳದಲ್ಲಿ ಭಾಗವಹಿಸಬಹುದು.
ಮಿನಿ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ವೈಯಕ್ತಿಕ ವಿವರದ ಪ್ರತಿಗಳೊಂದಿಗೆ ಸ್ವಂತ ಖರ್ಚಿನಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು. ಮೇಳದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಮೇಳ ನಡೆಯುವ ಸ್ಥಳ; ಆಗಸ್ಟ್ 30ರಂದು ಬೆಳಗ್ಗೆ 9 ರಿಂದ 4 ರವರೆಗೆ ದಸರಾ ವಸ್ತು ಪ್ರದರ್ಶನ ಆವರಣ ದೊಡ್ಡಕೆರೆ ಮೈದಾನ ಉದ್ಯೋಗ ಮೇಳ ನಡೆಯಲಿದೆ.
ಪುನರ್ವಸತಿ ಕಾರ್ಯಕರ್ತರ ಹುದ್ದೆಗಳು; ಮೈಸೂರು ಜಿಲ್ಲೆಯಲ್ಲಿ ಖಾಲಿ ಇರುವ ನಗರ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕರೆಯಲಾಗಿದೆ.
ವಿಕಲ ಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ಗ್ರಾಮೀಣ ಪುನರ್ವಸತಿ ಕಾರ್ಯಕ್ರಮದಡಿಯಲ್ಲಿ ಮೈಸೂರು ತಾಲ್ಲೂಕಿನ ಚಾಮುಂಡಿಬೆಟ್ಟ, ಸಿದ್ಧಲಿಂಗಪುರ ಹಾಗೂ ಉದ್ಬೂರು ಗ್ರಾಮ ಪಂಚಾಯಿತಿಗಳಿಗೆ ಹಾಗೂ ತಿ. ನರಸೀಪುರ ತಾಲ್ಲೂಕಿನ ಅಂಕನಹಳ್ಳಿ, ಕೊತ್ತೆಗಾಲ, ಬಿ.ಸೀಹಳ್ಳಿ ಹಾಗೂ ಸೋಸಲೆ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿಯಿರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆ ಭರ್ತಿ ಮಾಡಲಾಗತ್ತಿದೆ.
ಹೆಚ್. ಡಿ. ಕೋಟೆ ಪುರಸಭೆ ಹಾಗೂ ತಿ. ನರಸೀಪುರ ಪುರಸಭೆಗಳಲ್ಲಿ ಖಾಲಿಯಿರುವ ನಗರ ಪುನರ್ವಸತಿ ಕಾರ್ಯಕರ್ತರ ಹಾಗೂ ಮೈಸೂರು ನಗರದಲ್ಲಿ 1 ನಗರ ಪುನರ್ವಸತಿ ಕಾರ್ಯಕರ್ತರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 6000 ರೂ.ಗಳ ಗೌರವಧನ ನೀಡಲಾಗುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್. ಎಸ್. ಎಲ್. ಸಿ ಉತ್ತೀರ್ಣ ಅಥವಾ ಅನುತ್ತೀರ್ಣರಾಗಿದ್ದರು ಅಂಕಪಟ್ಟಿ ಕಡ್ಡಾಯವಾಗಿರಬೇಕು. ಅಭ್ಯರ್ಥಿಗಳ ವಯೋಮಿತಿ 18 ರಿಂದ 45 ವರ್ಷ.
ಪುರುಷ ಅಥವಾ ಮಹಿಳಾ ಅಂಗವಿಕಲರಿಗೆ ಮಾತ್ರ ಅವಕಾಶವಿದ್ದು, ಅರ್ಹ ವಿಕಲಚೇತನರು ಅರ್ಜಿಗಳನ್ನು ಸಂಬಂಧಪಟ್ಡ ತಾಲ್ಲೂಕು ಪಂಚಾಯಿತಿಗಳಲ್ಲಿರುವ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಿಂದ ಪಡೆದು, ಆಗಸ್ಟ್ 26ರೊಳಗೆ ಸಲ್ಲಿಸಬಹುದು.












Click it and Unblock the Notifications