ಮಂಡ್ಯದಲ್ಲಿ 2 ತಿಂಗಳೊಳಗೆ ಮತ್ತೊಂದು ಬೃಹತ್ ಉದ್ಯೋಗ ಮೇಳ
ಮಂಡ್ಯ, ಡಿಸೆಂಬರ್ 15; ಮಂಡ್ಯ ಜಿಲ್ಲಾಡಳಿತ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಮಂಡ್ಯದಲ್ಲಿ ಬುಧವಾರ ಉದ್ಯೋಗ ಮೇಳ ಆಯೋಜನೆ ಮಾಡಲಾಗಿತ್ತು.
ಜಿಲ್ಲೆಯ ನಿರುದ್ಯೋಗಿ ಯುವಕ ಯುವತಿಯರಿಗೆ ಈಗ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಸಿಹಿಸುದ್ದಿ ನೀಡಿದ್ದಾರೆ. "ಇನ್ನೂ 2 ತಿಂಗಳೊಳಗೆ ಇನ್ನೊಂದು ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗುವುದು" ಎಂದು ಭರವಸೆ ನೀಡಿದ್ದಾರೆ.
ಸಚಿವ ಕೆ. ಗೋಪಾಲಯ್ಯ ಬುಧವಾರ ಪಿ. ಇ. ಎಸ್ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದರು, "ಪ್ರತಿಯೊಬ್ಬರಿಗೂ ಉದ್ಯೋಗ ಒದಗಿಸಬೇಕು ಎಂಬ ಆಶಯದೊಂದಿಗೆ ಸರ್ಕಾರ ಕೌಶಲ್ಯಾಭಿವೃದ್ಧಿ ಇಲಾಖೆ ಮೂಲಕ ವಿವಿಧ ತರಬೇತಿಗಳನ್ನು ಆಯೋಜಿಸುತ್ತಿದೆ" ಎಂದು ಹೇಳಿದರು.

"ಜಿಲ್ಲೆಯಲ್ಲಿ ಹೆಚ್ಚಿನ ಅಭ್ಯರ್ಥಿಗಳಿಗೆ ಉದ್ಯೋಗ ಒದಗಿಸುವ ದೃಷ್ಠಿಯಿಂದ ಇನ್ನೂ ಎರಡು ತಿಂಗಳೊಳಗೆ ಇನ್ನೊಂದು ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗುವುದು" ಎಂದು ಕೆ. ಗೋಪಾಲಯ್ಯ ಭರವಸೆ ಕೊಟ್ಟರು.
ಬುಧವಾರ ನಡೆದ ಉದ್ಯೋಗ ಮೇಳದಲ್ಲಿ ಸ್ಕಿಲ್ ಕನೆಕ್ಟ್ ಆನ್‌ಲೈನ್ ಮೂಲಕ 8000 ಕ್ಕೂ ಹೆಚ್ಚು ಅಭ್ಯರ್ಥಿಗಳು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಆಫ್‌ಲೈನ್ ಮೂಲಕ ಕೂಡ ಸ್ಥಳದಲ್ಲೇ ಹೆಸರು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. 103 ಕಂಪನಿಗಳು ಭಾಗವಹಿಸಿ ತಮಗೆ ಬೇಕಿರುವ ಕೌಶಲ್ಯವುಳ್ಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಪಾಲ್ಗೊಂಡಿದ್ದರು.
"ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಉದ್ಯೋಗ ಸಿಗದಿದ್ದಾರೆ ನಿರಾಶೆಗೆ ಒಳಗಾಗಬಾರದು. ಮುಂದಿನ ಜೀವನದಲ್ಲಿ ಬಹಳಷ್ಟು ಅವಕಾಶಗಳಿವೆ. ಜೀವನದಲ್ಲಿ ಗುರಿ ನಿಗದಿಮಾಡಿಕೊಂಡು ಅದರ ಅನ್ವಯ ಸಿದ್ಧತೆಗಳನ್ನು ಮಾಡಿಕೊಳ್ಳಿ. ಇನ್ನೆರಡು ತಿಂಗಳಲ್ಲಿ ಇನ್ನೊಂದು ಬೃಹತ್ ಉದ್ಯೋಗ ಮೇಳವನ್ನು ಜಿಲ್ಲೆಯಲ್ಲಿ ಆಯೋಜಿಸಲಾಗುವುದು, ಆಗ ಇಲ್ಲಿ ನೋಂದಣಿಯಾದವರಿಗೂ ಅವಕಾಶ ಕಲ್ಪಿಸಲಾಗುವುದು" ಎಂದು ಸಚಿವರು ಹೇಳಿದರು.

ಮಂಡ್ಯ ಜಿಲ್ಲಾಧಿಕಾರಿ ಡಾ. ಹೆಚ್. ಎನ್. ಗೋಪಾಲ ಕೃಷ್ಣ ಮಾತನಾಡಿ, "ಭಾರತ ಹೆಚ್ಚು ಯುವಜನತೆಯನ್ನು ಹೊಂದಿದ್ದು, ದುಡಿಯುವ ಕೈಗಳಿಗೆ ಉದ್ಯೋಗ ಒದಗಿಸುವುದು ಇಂದಿನ ದೊಡ್ಡ ಸವಾಲಾಗಿದೆ. ಉನ್ನತ ಶಿಕ್ಷಣ ಎಲ್ಲರೂ ಪಡೆಯುವುದು ಕಷ್ಟಕರ. ಎಸ್. ಎಸ್. ಎಲ್. ಸಿ, ಪಿಯುಸಿ, ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರುವವರೂ ಸಹ ವಿವಿಧ ಕೌಶಲ್ಯಾಭಿವೃದ್ಧಿ ತರಬೇತಿ ಪಡೆದು ಉದ್ಯೋಗ ಪಡೆದುಕೊಳ್ಳಬಹುದು" ಎಂದರು.
"ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿ ಉದ್ಯೋಗ ಪಡೆಯಲು ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ನೀಡುತ್ತಿದೆ. ಉದ್ಯೋಗ ಮೇಳಗಳನ್ನು ಆಯೋಜಿಸುತ್ತಿದೆ. ಕಂಪನಿಗಳು ಹಾಗೂ ಉದ್ದಿಮೆಗಳಿಗೆ ಉದ್ಯೋಗ ನೀಡಲು ಕೆಲವು ಕೌಶಲ್ಯಗಳನ್ನು ನಿಗದಿ ಮಾಡಿಕೊಂಡಿರುತ್ತದೆ. ಅದರ ಅನ್ವಯ ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ" ಎಂದು ಕರೆ ನೀಡಿದರು.
ಜಿಲ್ಲಾಧಿಕಾರಿಗಳು ಮಾತನಾಡಿ, "ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿ ಜಿಲ್ಲೆಯಲ್ಲಿ 4 ತರಬೇತಿ ಕೇಂದ್ರಗಳಲ್ಲಿ 270 ಫಲಾನುಭವಿಗಳಿಗೆ ತರಬೇತಿ ನೀಡಲಾಗುತ್ತಿದೆ. ಯಶಸ್ವಿ ಕ್ರೆಡಿಟ್ ಲಿಂಕ್ ಯೋಜನೆಯಡಿ ಉದ್ಯೋಗ ಕೈಗೊಳ್ಳಲು 73 ಸಂಘಗಳಿಗೆ ತಲಾ 1 ಲಕ್ಷ ರೂ ಸಾಲ ನೀಡಲಾಗುತ್ತಿದೆ" ಎಂದು ವಿವರಣೆ ನೀಡಿದರು.












Click it and Unblock the Notifications