ಕೊಪ್ಪಳ: ಏಪ್ರಿಲ್ 17ರಂದು ಗಂಗಾವತಿಯಲ್ಲಿ ಉದ್ಯೋಗ ಮೇಳ
ಕೊಪ್ಪಳ, ಏಪ್ರಿಲ್ 10: ಕೊಪ್ಪಳ ಜಿಲ್ಲೆಯಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಮಾಹಿತಿಯೊಂದಿದೆ. ಗಂಗಾವತಿಯಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ. ನೇರ ಸಂದರ್ಶನದ ಮೂಲಕ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಈ ಉದ್ಯೋಗ ಮೇಳದಲ್ಲಿ 18 ರಿಂದ 35 ವರ್ಷ ವಯೋಮಿತಿಯ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು.
ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಗುಂಜಳ್ಳಿ ಹೀರೆ ನಾಗಪ್ಪ ವಾಣಿಜ್ಯ ಮಹಾವಿದ್ಯಾಲಯ, ಶ್ರೀ ಕೊಟ್ಟೂರೇಶ್ವರ ಕ್ಯಾಂಪಸ್ ಗಂಗಾವತಿ ಇವರ ಸಂಯುಕ್ತಾಶ್ರಯದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಏಪ್ರಿಲ್ 17 ರಂದು ಆಯೋಜಿಸಲಾಗಿದೆ.

ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯ ತನಕ ಉದ್ಯೋಗ ಮೇಳ ನಡೆಯಲಿದೆ. ಕೊಪ್ಪಳ, ಹುಬ್ಬಳ್ಳಿ, ಬೆಂಗಳೂರು, ಬೆಳಗಾವಿ, ಬಳ್ಳಾರಿ, ಹಾಸನ, ಶಿವಮೊಗ್ಗ ಇತರೆ ಭಾಗಗಳ ಪ್ರತಿಷ್ಠಿತ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ. ವಿವಿಧ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ಯಾವುದೇ ಶುಲ್ಕ ಇರುವುದಿಲ್ಲ, ಎಲ್ಲರಿಗೂ ಉಚಿತ ಪ್ರವೇಶ.
ಉದ್ಯೋಗ ಮೇಳದಲ್ಲಿ ಎಸ್ಎಸ್‌ಎಲ್‌ಸಿ, ಪಿಯುಸಿ/ ತತ್ಸಮಾನ, ಐಟಿಐ, ಡಿಪ್ಲೊಮಾ, ಕಂಪ್ಯೂಟರ್ ತರಬೇತಿ ಹಾಗೂ ಯಾವುದೇ ಪದವಿ ಅಭ್ಯರ್ಥಿಗಳನ್ನು ನೇರ ಸಂದರ್ಶನ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ನಿರುದ್ಯೋಗಿ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಹಾಗೂ ವಿಕಲಚೇತನ ಅಭ್ಯರ್ಥಿಗಳು ದೃಢೀಕರಿಸಲಾದ ತಮ್ಮ ವಿದ್ಯಾರ್ಹತೆಯ ಎಲ್ಲ ಪ್ರಮಾಣ ಪತ್ರಗಳ 10 ಪ್ರತಿಗಳೊಂದಿಗೆ ಮತ್ತು ಆಧಾರ್ ಕಾರ್ಡ್ ಪ್ರತಿ, ರೆಸ್ಯೂಮ್ ಹಾಗೂ ಪಾಸ್ ಪೋರ್ಟ್ ಅಳತೆಯ 2 ಭಾವಚಿತ್ರಗಳೊಂದಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು.
ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಆಡಳಿತ ಭವನ, ಮೊದಲನೇ ಮಹಡಿ ಕೊಪ್ಪಳ ಇವರನ್ನು ಸಂಪರ್ಕಿಸಬಹುದು. ಮೊಬೈಲ್ ಸಂಖ್ಯೆ 9353515518.
ಸೇವಾ ತರಬೇತಿಗೆ ಅರ್ಜಿ ಆಹ್ವಾನ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಭಾರತೀಯ ಸೇನೆ ಹಾಗೂ ಇತರೆ ಯುನಿಫಾರ್ಮ್ ಸೇವೆಗಳಿಗೆ ಸೇರ ಬಯಸುವ ಹಿಂದುಳಿದ ವರ್ಗಗಳ ಅರ್ಹ ಯುವಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ) ಹಾಗೂ 3(ಬಿ) ಗಳ ಅರ್ಹ ಅಭ್ಯರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2025-26ನೇ ಸಾಲಿನಲ್ಲಿ ಸೇನಾ ಆಯ್ಕೆಯ ಪೂರ್ವ ಸಿದ್ದತೆ ಬಗ್ಗೆ ಉಚಿತ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿಯನ್ನು ನೀಡುತ್ತಿದೆ.
ಅರ್ಜಿ ಸಲ್ಲಿಸಲು ಎಪ್ರಿಲ್ 29 ಕೊನೆಯ ದಿನಾಂಕವಾಗಿದ್ದು, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಮತ್ತು ಕುಟುಂಬದ ಒಟ್ಟು ಗರಿಷ್ಠ ವಾರ್ಷಿಕ ಆದಾಯ ಮಿತಿ ಪ್ರವರ್ಗ-1 ರೂ. 2.50 ಲಕ್ಷಗಳು, ಪ್ರವರ್ಗ-2(ಎ), 3(ಎ) ಹಾಗೂ 3(ಬಿ) ಗಳಿಗೆ ರೂ.1 ಲಕ್ಷ ಮೀರಿರಬಾರದು. ಅಭ್ಯರ್ಥಿಯು 10ನೇ ತರಗತಿಯನ್ನು ಉತ್ತೀರ್ಣವಾಗಿದ್ದು, ಪ್ರತಿ ವಿಷಯದಲ್ಲಿ ಕನಿಷ್ಠ 33 ಅಂಕಗಳನ್ನು ಮತ್ತು ಸರಾಸರಿ ಶೇ.45 ರಷ್ಟು ಅಂಕಗಳನ್ನು ಪಡೆದಿರಬೇಕು.
ಗ್ರೇಡಿಂಗ್ ಸಿಸ್ಟಂ ಇದ್ದಲ್ಲಿ ಮೇಲ್ಕಂಡಂತೆ ಸಮಾನವಾದ ಗ್ರೇಡ್ ಪಡೆದಿರಬೇಕು. ಅಭ್ಯರ್ಥಿಯು 30 ಎಪ್ರಿಲ್ 2005 ರಿಂದ 29 ಎಪ್ರಿಲ್ 2008 ರ ನಡುವಿನ ಅವಧಿಯಲ್ಲಿ ಜನಿಸಿರಬೇಕು. ಅಭ್ಯರ್ಥಿಯ ವಯಸ್ಸು 10ನೇ ತರಗತಿಯ ಅಂಕ ಪಟ್ಟಿಯಲ್ಲಿರುವಂತೆ 29 ಎಪ್ರಿಲ್ 2025ಕ್ಕೆ ಅನ್ವಯಿಸುವಂತೆ ಅಭ್ಯರ್ಥಿಯು ವಯಸ್ಸನ್ನು ಪರಿಗಣಿಸಲಾಗುವುದು.
ಭಾರತೀಯ ಸೇನೆ, ಇತರೆ ಯೂನಿಫಾರ್ಮ್ ಸೇವೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳಿಗೆ ತರಬೇತಿಯನ್ನು ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿರುವ ಸೇನಾ ಆಯ್ಕೆ ಪೂರ್ವ ತರಬೇತಿ ಕೇಂದ್ರದಲ್ಲಿ ನೀಡಲಾಗುವುದು.
ಅರ್ಜಿ ನಮೂನೆಯನ್ನು ಕೊಪ್ಪಳ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿಯಿಂದ ಪಡೆದು, ಭರ್ತಿ ಮಾಡಿ, ಜಿಲ್ಲಾ ಕಛೇರಿಯಲ್ಲಿಯೇ ಖುದ್ದಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು ವೆಬ್‌ಸೈಟ್ https://bowd.karnataka.gov.in/ ನಲ್ಲಿಯೂ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 08539-221606.












Click it and Unblock the Notifications