ಕೊಡಗು: ಜೂನ್ 27ರಂದು ಉದ್ಯೋಗ ಮೇಳ, ವಿವರಗಳು
ಮಡಿಕೇರಿ, ಜೂನ್ 24: ಕೊಡಗು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದೆ. ಜೂನ್ 27ರಂದು ಮೇಳ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಭಾಗವಹಿಸಬಹುದು ಎಂದು ಕರೆ ನೀಡಲಾಗಿದೆ.
ಜೂನ್ 27ರ ಬೆಳಗ್ಗೆ 10.30 ರಿಂದ ಮಧ್ಯಾಹ್ನ 3 ಗಂಟೆವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉದ್ಯೋಗ ಮೇಳ ನಡೆಯಲಿದೆ. ಉದ್ಯೋಗ ಮೇಳದಲ್ಲಿ ಪ್ಯಾಲೇಸ್ ಟೊಯಾಟೋ, ಕುಶಾಲನಗರ, ಅಟೋಲೈವ್ ಮಲ್ಟಿನ್ಯಾಷನಲ್ ಕಂಪನಿ, ಮೈಸೂರು, ಕ್ಲಬ್ ಮಹೀಂದ್ರ, ಮಡಿಕೇರಿ, ಕಲ್ಯಾಣಿ ಮೋಟಾರ್ಸ್, ಮಡಿಕೇರಿ, ಪೆಂಟಟೆಕ್, ಮಡಿಕೇರಿ, ಕಾವೇರಿ ಹೋಂಡಾ, ಕುಶಾಲನಗರ ತಮ್ಮ ಸಂಸ್ಥೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ.

ಮೇಳದಲ್ಲಿ ಖಾಸಗಿ ಕಂಪನಿಗಳು ಭಾಗವಹಿಸಿ ತಮ್ಮಲ್ಲಿ ಖಾಲಿಯಿರುವ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿರುವ ಉದ್ಯೋಗಾಕಾಂಕ್ಷಿಗಳು ಭಾಗವಹಿಸಬಹುದು.
ಅಭ್ಯರ್ಥಿಗಳು ಸ್ವಯಂ-ವಿವರ (ಬಯೋಡೇಟಾ)ಗಳ ಪ್ರತಿಗಳೊಂದಿಗೆ ಉದ್ಯೋಗಮೇಳಕ್ಕೆ ಹಾಜರಾಗುವಂತೆ ಜಿಲ್ಲಾ ಉದ್ಯೋಗಾಧಿಕಾರಿ ರೇಖಾ ಗಣಪತಿ ಅವರು ತಿಳಿಸಿದ್ದಾರೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಡಿಕೇರಿ ಇವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 8296020826/ 8123312319 ಮೂಲಕ ಸಂಪರ್ಕಿಸಬಹುದು.
ಮಡಿಕೇರಿಯಲ್ಲಿ ಅಗ್ನಿವೀರ್ ನೇಮಕಾತಿ: ಜೂನ್ 27 ರಿಂದ ಜುಲೈ 2ರ ತನಕ ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಅಗ್ನಿವೀರ್ ಸೇನಾ ನೇಮಕಾತಿ ರ್‍ಯಾಲಿ ನಡೆಯಲಿದೆ. ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೈನಿಕ ಕಲ್ಯಾಣ ಇಲಾಖೆಗೆ ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದ್ದಾರೆ.
ಅಗ್ನಿವೀರ್ ಸೇನಾ ನೇಮಕಾತಿ ರ್‍ಯಾಲಿಯಲ್ಲಿ ಪಾಲ್ಗೊಳ್ಳುವ ಯಾವ ಅಭ್ಯರ್ಥಿಗಳಿಗೂ ಯಾವುದೇ ರೀತಿಯ ತೊಂದರೆಯಾಗದಂತೆ ಗಮನಹರಿಸಬೇಕು. ವಸತಿ ಊಟೋಪಚಾರ ಸೇರಿದಂತೆ ಹಲವು ಮೂಲ ಸೌಕರ್ಯಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವಂತೆ ನಿರ್ದೇಶನ ನೀಡಲಾಗಿದೆ.
ರ್‍ಯಾಲಿ ಕುರಿತು ಸೈನಿಕ ಭರ್ತಿ ಕಾರ್ಯಾಲಯದ ನಿರ್ದೇಶಕ ಕರ್ನಲ್ ಗೌರವ್ ತಾಪ ಮಾತನಾಡಿ, "ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಕಲ್ಪಿಸಬೇಕಿದೆ. ಲೋಕೋಪಯೋಗಿ, ಸೆಸ್ಕ್, ಪದವಿ ಪೂರ್ವ ಶಿಕ್ಷಣ, ಅಗ್ನಿಶಾಮಕ ದಳ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವೈದ್ಯಕೀಯ ಶಿಕ್ಷಣ, ಸೆಸ್ಕ್, ಬಿಎಸ್‍ಎನ್‍ಎಲ್ ಹೀಗೆ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಅಗತ್ಯ ಸಹಕಾರ ನೀಡಬೇಕು" ಎಂದರು.
ದಾವಣಗೆರೆಯಲ್ಲಿ ಕೆಲಸ ಖಾಲಿ ಇದೆ: ದಾವಣಗೆರೆ ಜಿಲ್ಲೆಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಲ್ಲಿ ಜಲ ಜೀವನ್ ಮೀಷನ್ ಯೋಜನೆಯಡಿ ಖಾಲಿ ಇರುವ ಜಿಲ್ಲಾ ಎಂಐಎಸ್, ಎಂಐಎಸ್ ಸಮಾಲೋಚಕರ ಹುದ್ದೆಗೆ ತಾತ್ಕಾಲಿಕವಾಗಿ ಗುತ್ತಿಗೆ, ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಎಂ.ಸಿ.ಎ, ಎಂ.ಎಸ್ಸಿ ಕಂಪ್ಯೂಟರ್ ಸೈನ್ಸ್, ಬಿ.ಇ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು ಹಾಗೂ ಡೇಟಾ ನಿರ್ವಹಣೆಯಲ್ಲಿ 3-5 ವರ್ಷಗಳ ಅನುಭವ ಹೊಂದಿರಬೇಕು. ಅರ್ಜಿ ಸಲ್ಲಿಸಲು ಜುಲೈ 5 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಾರ್ಯ ನಿರ್ವಾಹಕ ಇಂಜಿನಿಯರ್ ದಾವಣಗೆರೆ ಇವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಿ.












Click it and Unblock the Notifications