ಹಿರಿಯೂರಿನಲ್ಲಿ ಉದ್ಯೋಗ ಮೇಳ: ಉದ್ಯೋಗಾಕಾಂಕ್ಷಿಗಳನ್ನು ನೆನೆದು ಕಣ್ಣೀರಿಟ್ಟ ಟಿ.ಡಿ.ಶ್ರೀನಿವಾಸ್
ಚಿತ್ರದುರ್ಗ, ಡಿಸೆಂಬರ್, 2: ಜಿಲ್ಲೆಯ ಹಿರಿಯೂರು ನಗರದ ನೆಹರೂ ಮೈದಾನದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಯುತ್ತಿರುವ ಉದ್ಯೋಗ ಮೇಳಕ್ಕೆ ಉದ್ಯೋಗ ಆಕಾಂಕ್ಷಿಗಳು ಹರಿದು ಬಂದಿದ್ದಾರೆ. ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಹಾಗೂ ರಾಜ್ಯ ಪ್ರವರ್ಗ-1ರ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಡಿ.ಟಿ. ಶ್ರೀನಿವಾಸ್ ಅವರ ನೇತೃತ್ವದಲ್ಲಿ ಈ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ. ಈ ಮೇಳದಲ್ಲಿ ಸುಮಾರು 60ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿವೆ.
ಇನ್ನು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಿ.ಟಿ.ಶ್ರೀನಿವಾಸ್ ಅವರು ಈ ಹಿಂದೆ ಹಿರಿಯೂರು ನಗರದಲ್ಲಿ ಎರಡು ಬಾರಿ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿತ್ತು. ಆಗ ಸಾಕಷ್ಟು ನಿರುದ್ಯೋಗ ಯುವಕ, ಯುವತಿಯರು ಭಾಗವಹಿಸಿ ಉದ್ಯೋಗ ಪಡೆದುಕೊಂಡಿದ್ದರು. ಈ ತಾಲೂಕಿನ ಯುವಕ, ಯುವತಿಯರಿಗೆ ಉದ್ಯೋಗ ನೀಡಬೇಕು ಎನ್ನುವ ದೃಷ್ಟಿಯಿಂದ, ಈ ಉದ್ಯೋಗ ಮೇಳಗಳನ್ನು ಆಯೋಜನೆ ಮಾಡಲಾಗಿದೆ. ಈ ಸುವರ್ಣಾವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪೋಷಕರ ಕನಸನ್ನು ಈಡೇರಿಸುವಂತೆ ಮನವಿ
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಸವಾಲಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಪಡೆದುಕೊಳ್ಳುವ ಮೂಲಕ ಜೀವನ ನಿರ್ವಹಣೆ ಮಾಡಿಕೊಳ್ಳಬೇಕು. ಪ್ರತಿಯೊಂದು ಮನೆಯಲ್ಲೂ ತಂದೆ, ತಾಯಿಗಳು ಮಕ್ಕಳ ಬಗ್ಗೆ ಕನಸು ಕಟ್ಟಿಕೊಂಡಿದ್ದಾರೆ. ಅವರ ಆಸೆಯನ್ನು ಮಕ್ಕಳು ಇಂತಹ ಉನ್ನತ ಮಟ್ಟದ ಕಂಪನಿಯಲ್ಲಿ ಕೆಲಸ ಮಾಡುವ ಮೂಲಕ ನೆರವೇರಿಸಬೇಕು ಎಂದು ಹೇಳಿದರು.

ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು
ಇಂದಿನ ವಿದ್ಯಾರ್ಥಿಗಳೇ ಮುಂದಿನ ಪೋಷಕರು, ಹಾಗಾಗಿ ಮುಂದೆ ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಅವರ ಭವಿಷ್ಯ ರೂಪಿಸಿಸಬೇಕು ಎಂದು ತಿಳಿಸಿದರು. ನಮ್ಮ ಮಾವನ ಆಸೆಯಂತೆ ಇಲ್ಲಿ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ. ನಾವು ಮತ್ತು ನಮ್ಮ ಶಾಸಕರು ಕ್ಷೇತ್ರದ ಜನತೆಯೊಂದಿಗೆ ಸದಾ ಜೊತೆಗೆ ಇರುತ್ತೇವೆ ಎಂದು ಹೇಳಿದರು. ಇನ್ನು ಇದೇ ಸಂದರ್ಭದಲ್ಲಿ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಅವರ ಪತಿ ಡಿ.ಟಿ. ಶ್ರೀನಿವಾಸ್ ಅವರು ವೇದಿಕೆಯಲ್ಲಿ ನಿರುದ್ಯೋಗ ಯುವಕ, ಯುವತಿಯರನ್ನು ನೆನೆದು ಕಣ್ಣೀರಿಟ್ಟ ಘಟನೆ ಕೂಡ ನಡೆಯಿತು.
ಈ ಉದ್ಯೋಗ ಮೇಳದಲ್ಲಿ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು, ಹೊಳಲ್ಕೆರೆ, ಹೊಸದುರ್ಗ, ಶಿರಾ, ಸೇರಿದಂತೆ ಮತ್ತಿತರರ ಭಾಗಗಳಲ್ಲಿಂದ ಆಕಾಂಕ್ಷಿಗಳು ಭಾಗವಹಿಸಿದ್ದರು. ಸಂದರ್ಶನದ ಮೂಲಕ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರವನ್ನೂ ನೀಡಲಾಯಿತು.

ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಜಬಿವುಲ್ಲಾ, ಸಮಾಜ ಸೇವಕಿ ಶಶಿಕಲಾ ರವಿಶಂಕರ್, ಡಿವೈಎಸ್‌ಪಿ ರೋಷನ್ ಜಮೀರ್, ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್. ತಿಮ್ಮಯ್ಯ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ರಾಜೇಶ್ವರಿ, ನಗರಸಭೆ ಸದಸ್ಯರಾದ ಸಣ್ಣಪ್ಪ, ಪಲ್ಲವ, ಬಾಲಕೃಷ್ಣ, ಕದ್ರ ಗಣೇಶ್, ಪ್ರಾಂಶುಪಾಲ ಧರಣೇಂದ್ರಯ್ಯ, ಆನಂದ ಶ್ರೇಷ್ಠಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications