Job Alert: ಏಕಲವ್ಯ ಶಾಲೆಗಳ 4,000 ಬೋಧಕ, ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ- ಮಾಹಿತಿ, ವಿವರ ಪಡೆಯಿರಿ
ನವದೆಹಲಿ, ಜುಲೈ 12: ಬುಡಕಟ್ಟು ವಿದ್ಯಾರ್ಥಿಗಳಿಗಾಗಿ ತೆರೆಯಲಾಗಿರುವ 401 ಏಕಲವ್ಯ ಮಾದರಿ ವಸತಿ ಶಾಲೆಗಳ ಹುದ್ದೆಗಳಿಗೆ ಬುಡಕಟ್ಟು ವಿದ್ಯಾರ್ಥಿಗಳ ರಾಷ್ಟ್ರೀಯ ಶಿಕ್ಷಣ ಸೊಸೈಟಿ (NESTS) ಅರ್ಜಿ ಆಹ್ವಾನಿಸಿದೆ. ಇದರಲ್ಲಿ 4,000 ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ತುಂಬಲಾಗುತ್ತಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಏಕಲವ್ಯ ಮಾದರಿ ವಸತಿ ಶಾಲೆಗಳ ಸಿಬ್ಬಂದಿ ಆಯ್ಕೆ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ.
ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಸ್ಥಾಪಿಸಲಾದ ಸ್ವಾಯತ್ತ ಸಂಸ್ಥೆ NESTS ವೆಬ್‌ಸೈಟ್‌ನಲ್ಲಿ ಈ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಪ್ರಾಂಶುಪಾಲರು, ಸ್ನಾತಕೋತ್ತರ ಶಿಕ್ಷಕರು, ಅಕೌಂಟೆಂಟ್, ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ ಮತ್ತು ಲ್ಯಾಬ್ ಅಟೆಂಡೆಂಟ್ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ, ಕೇಂದ್ರವು ಎನ್‌ಇಎಸ್‌ಟಿಎಸ್ ಮೂಲಕ ಇಎಂಆರ್‌ಎಸ್ ಸಿಬ್ಬಂದಿಯ ನೇರ ನೇಮಕಾತಿಗೆ ಅವಕಾಶ ನೀಡಿದೆ ಎಂದು ಘೋಷಿಸಿದ್ದರು. ಇದನ್ನು ಕಳೆದ ವರ್ಷದವರೆಗೆ ಆಯಾ ರಾಜ್ಯಗಳು ನಡೆಸುತ್ತಿದ್ದವು.
ದೇಶದಲ್ಲಿ ಒಟ್ಟು 750 ಏಕಲವ್ಯ ವಸತಿ ಶಾಲೆಗಳನ್ನು ಸ್ಥಾಪಿಸಲು ಮತ್ತು ಈ ಶಾಲೆಗಳಲ್ಲಿ 38,000 ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಕೇಂದ್ರ ಸರ್ಕಾರ ಯೋಜಿಸಿದೆ.
ವೆಬ್‌ಸೈಟ್ ಪ್ರಕಾರ, ಈಗ ಖಾಲಿ ಇರುವ 4,062 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಇದರಲ್ಲಿ ಪ್ರಾಂಶುಪಾಲರ 303 ಮತ್ತು ಪಿಜಿಟಿ ಶಿಕ್ಷಕರ 2,266 ಹುದ್ದೆಗಳು ಸೇರಿವೆ. ಪ್ರಾಂಶುಪಾಲರ 303 ಹುದ್ದೆಗಳಲ್ಲಿ 81 ಇತರೆ ಹಿಂದುಳಿದ ಜಾತಿ, 45 ಎಸ್‌ಸಿ ಮತ್ತು 22 ಎಸ್‌ಟಿಗಳಿಗೆ ಮೀಸಲಾಗಿದೆ.
180 ಭಾಷಾ ಶಿಕ್ಷಕರ ಹುದ್ದೆಗಳೂ ಭರ್ತಿಯಾಗಲಿದ್ದು, ಇದರಲ್ಲಿ ಸಂಸ್ಕೃತ ಶಿಕ್ಷಕರ 97, ತೆಲುಗು 37 ಮತ್ತು ಒಡಿಯ 20 ಹುದ್ದೆಗಳು ಸೇರಿವೆ.

ಎಲ್ಲಾ ವಿಭಾಗಗಳ ಮಹಿಳಾ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಇಎಂಆರ್‌ಎಸ್ ಕಾಯಂ ಸಿಬ್ಬಂದಿಗೂ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಇಲ್ಲಿಯವರೆಗೆ 690 ಏಕಲವ್ಯ ವಸತಿ ಶಾಲೆಗಳು ಮಂಜೂರಾಗಿದ್ದು, 401 ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ, ಈ ವಸತಿ ಶಾಲೆಗಳಲ್ಲಿ 4,000 ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪರಿಶಿಷ್ಟ ಪಂಗಡದ ವರ್ಗದಲ್ಲಿ VI ನೇ ತರಗತಿಯಿಂದ XII ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಏಕಲವ್ಯ ವಸತಿ ಶಾಲೆಗಳನ್ನು ಸ್ಥಾಪಿಸಲಾಗಿದೆ.
ಏಕಲವ್ಯ ವಸತಿ ಶಾಲೆಗಳ ಹುಡುಗರು ಮತ್ತು ಹುಡುಗಿಯರಿಗೆ ಪ್ರತ್ಯೇಕ ಹಾಸ್ಟೆಲ್‌ಗಳು, ಶಿಕ್ಷಕರಿಗೆ ವಸತಿ, ಮೆಸ್ ಸೌಲಭ್ಯ, ಆಟದ ಮೈದಾನ ಮತ್ತು ಇತರ ಎಲ್ಲಾ ಸೌಕರ್ಯಗಳು ಇರುತ್ತವೆ . ಪ್ರತಿಭಾವಂತ ಮಕ್ಕಳಿಗೆ VI ನೇ ತರಗತಿಯಿಂದ XII ವರೆಗೆ ಉಚಿತ ವಸತಿ ಗುಣಮಟ್ಟದ ಶಿಕ್ಷಣವನ್ನು ಒದಗಿಸಲಾಗುತ್ತದೆ.












Click it and Unblock the Notifications