IBM Layoffs: 7 ನಿಮಿಷದ ಸಭೆಯಲ್ಲಿ ನೌಕರರ ವಜಾ ಘೋಷಿಸಿದ ಐಬಿಎಂ
ಬೆಂಗಳೂರು, ಮಾರ್ಚ್ 14: ಇಂಟರ್‌ನ್ಯಾಷನಲ್ ಬಿಸಿನೆಷ್ ಮಷಿನ್ಸ್ (IBM) ಈ ವರ್ಷ ಮತ್ತೊಮ್ಮೆ ತನ್ನ ಉದ್ಯೋಗಿಗಳ ಬೃಹತ್ ವಜಾ ಪಟ್ಟಿಗೆ ಸೇರಿದೆ. ಕೇವಲ ಏಳು ನಿಮಿಷ ನಡೆದ ಸಭೆಯಲ್ಲಿ ಮಾರ್ಕೆಟಿಂಗ್ ಮತ್ತು ಸಂವಹನ ವಿಭಾಗಗಳಿಂದ ಉದ್ಯೋಗಿಗಳನ್ನು ವಜಾಗೊಳಿಸುವ ಆದೇಶ ಪ್ರಕಟಿಸಿತು. ಈ ಮೂಲಕ ಉದ್ಯೋಗಿಗಳಿಗೆ ಮತ್ತೊಮ್ಮೆ ಶಾಕ್ ನೀಡಿತು.
ಐಬಿಎಂ ಕಂಪನಿಯ ಮಾರ್ಕೆಟಿಂಗ್ ಮತ್ತು ಸಂವಹನ ವಿಭಾಗದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದೆ. ಅದರೆ ನಿಖರವಾಗಿ ಎಷ್ಟು ಉದ್ಯೋಗಿಗಳು ಎಂಬುದನ್ನು ಸ್ಪಷ್ಟಪಡಿಸಿಲ್ಲ. ಇದು ಉದ್ಯೋಗಿಗಳನ್ನು ಚಿಂತೆಗೀಡು ಮಾಡಿದೆ ಎಂದು ನ್ಯೂಸ್ 18 ವರದಿ ಮಾಡಿದೆ.

ನೌಕರರ ವಜಾ ನಿರ್ಧಾರವನ್ನು ಐಬಿಎಂನ ಮುಖ್ಯ ಸಂವಹನ ಅಧಿಕಾರಿ ಜೊನಾಥನ್ ಅಡಾಶೆಕ್ ಅವರು ಏಳು ನಿಮಿಷಗಳ ಸಭೆಯಲ್ಲಿ ತಿಳಿಸಿದರು. ಕಂಪನಿಯು ಅಧಿಕೃತವಾಗಿ ಮಾಹಿತಿಯನ್ನು ಬಿಡುಗಡೆ ಮಾಡದಿದ್ದರೂ ಸಹಿತ ಐಬಿಎಂ ಮತ್ತೆ ನೌಕರರನ್ನು ವಜಾಗೊಳಿಸಿದೆ ಎಂಬ ಸುದ್ದಿ ನಿಜ ಎನ್ನುತ್ತಿವೆ ಮೂಲಗಳು.
ನೌಕರರ ವಜಾ ಬಗ್ಗೆ ವರ್ಷದ ಹಿಂದೆ ಸುಳಿವು
ಇಂದಿನ ವಜಾ ಬಗ್ಗೆ ಕಳೆದ ವರ್ಷವೇ ಕಂಪನಿಯ ಸಿಇಒ ಅರವಿಂದ್ ಕೃಷ್ಣ ಅವರು ಸುಳಿವು ನೀಡಿದ್ದರು. ಮುಂದಿನ ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಉದ್ಯೋಗ ಬದಲಾವಣೆ ಸಹಿತ ನೇಮಕಾತಿಗೆ ವಿರಾಮ ನೀಡುವ ಸಾಧ್ಯತೆ ಇದೆ ಎನ್ನಲಾಗಿತ್ತು.
ಮಾನವ ಸಂಪನ್ಮೂಲದಂತಹ ಬ್ಯಾಕ್ ಆಫೀಸ್ ಕಾರ್ಯಗಳಲ್ಲಿ ನೇಮಕಾತಿಯನ್ನು ಅಮಾನತುಗೊಳಿಸಲಾಗುವುದು ಅಥವಾ ನಿಧಾನಗೊಳಿಸಲಾಗುವುದು ಎಂದು ಅರವಿಂದ ಕೃಷ್ಣ ಹೇಳಿದರು. ಶೇಕಡಾ 30ರಷ್ಟು ಉದ್ಯೋಗಿಗಳನ್ನು ಮುಂದಿನ ಐದು ವರ್ಷಗಳ ಅವಧಿಯಲ್ಲಿ AI ಮತ್ತು ಆಟೊಮೇಷನ್‌ನಿಂದ ಬದಲಾಯಿಸಲು ಐಬಿಎಂ ಚಿಂತನೆ ನಡೆಸಿದೆ.

ಸುಮಾರು 50000 ನೌಕರರು ವಜಾ
ಕೊರೊನಾ ಮತ್ತು ಕೊರೊನಾ ನಂತರ ಐಟಿ ಕ್ಷೇತ್ರದಲ್ಲಿ ಭಾರಿ ವಜಾ ಪ್ರಕ್ರಿಯೆ ನಡೆದಿವೆ. layoffs.fyi ವೆಬ್‌ಸೈಟ್ ಪ್ರಕಾರ IBM ಸೇರಿದಂತೆ ಕನಿಷ್ಠ 204 ಕಂಪನಿಗಳು 2024 ರಲ್ಲಿ ಉದ್ಯೋಗ ಕಡಿತವನ್ನು ಘೋಷಿಸಿವೆ. ಈ ವಜಾಗಳು 49,978 ಉದ್ಯೋಗಿಗಳ ಬದುಕಿನ ಮೇಲೆ ಪರಿಣಾಮ ಬೀರಿವೆ ಎಂದು ತಿಳಿದು ಬಂದಿದೆ.
ಐಬಿಎಂನ ಮುಖ್ಯ ಹಣಕಾಸು ಅಧಿಕಾರಿ ಜೇಮ್ಸ್ ಕವನಾಗ್ ಅವರು ಸುಮಾರು 3,900 ಉದ್ಯೋಗಿಗಳನ್ನು ವಜಾಗೊಳಿಸಿದ ಬಳಿಕ ಕಂಪನಿಯು $400 ದಶಲಕ್ಷದಷ್ಟು ಹಣವನ್ನು ಎಐ ಬದಲಾವಣೆಗೆ ಖರ್ಚು ಮಾಡುವ ನಿರೀಕ್ಷೆ ಇದೆ ಎಂದು ಕಳೆದ ವರ್ಷ ಜನವರಿಯಲ್ಲಿಯೇ ತಿಳಿಸಿದ್ದರು.
ಜಾಗತಿಕ ಐಟಿ ಕಂಪನಿಗಳಿಂದಲೂ ವಜಾ
ಕೇವಲ ಐಬಿಎಂ ಮಾತ್ರವಲ್ಲ ಜಾಗತಿಕವಾಗಿ ನೌಕರರ ವಜಾ ಕಳೆದ ವರ್ಷವೇ ಘೋಷಣೆ ಆಗಿತ್ತು. ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ದೈತ್ಯ ಐಟಿ ಕಂಪನಿಗಳು ಆಗಿರುವ ಟೆಕ್ ಮಹೀಂದ್ರ, ಇನ್ಫೋಸಿಸ್, ಟಿಸಿಎಸ್ ಹಾಗೂ ವಿಪ್ರೊ ಸಂಸ್ಥೆಗಳು ಒಂದೇ ವರ್ಷದಲ್ಲಿ ಪ್ರಪಂಚದಾದ್ಯಂತ 67 ಸಾವಿರ ನೌಕರರನ್ನು ವಜಾಗೊಳಿಸಿವೆ. ಕೊರೊನಾ ನಂತರದ ಇದು ಬೃಹತ್ ವಜಾ ಎಂದು ಅಧ್ಯಯನಗಳು ಹೇಳುತ್ತವೆ.












Click it and Unblock the Notifications