Gram Panchayat; ಜಿಲ್ಲಾವಾರು ನೇಮಕ, ಒಬ್ಬರಿಗೆ 1 ಜಿಲ್ಲೆಗೆ ಅವಕಾಶ
ಬೆಂಗಳೂರು, ಡಿಸೆಂಬರ್ 17; ಕರ್ನಾಟಕ ಸರ್ಕಾರ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿವಿಧ ಹುದ್ದೆಗಳ ಜಿಲ್ಲಾವಾರು ನೇಮಕಾತಿಯನ್ನು ಶೀಘ್ರವೇ ಆರಂಭಿಸಲಿದೆ. ಆದರೆ ಒಬ್ಬ ಅಭ್ಯರ್ಥಿ ಒಂದು ಜಿಲ್ಲೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ ಎಂಬ ಮಾಹಿತಿ ಇದೆ.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಕಾರಿ, ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1, ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-2 ಮತ್ತು ಪ್ರಥಮ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿ ಅಧಿಸೂಚನೆ ಶೀಘ್ರವೇ ಪ್ರಕಟವಾಗಲಿದೆ. ಈ ಹುದ್ದೆಗಳಿಗೆ ಜಿಲ್ಲಾವಾರು ನೇಮಕಾತಿ ನಡೆಯಲಿದೆ. ಅಧಿಸೂಚನೆಯಲ್ಲಿ ಒಬ್ಬ ಅಭ್ಯರ್ಥಿ ಒಂದು ಜಿಲ್ಲೆಯಲ್ಲಿ ಮಾತ್ರ ನೇಮಕಾತಿಗೆ ಅರ್ಜಿ ಸಲ್ಲಿಕೆ ಮಾಡಬೇಕು ಎಂದು ತಿಳಿಸುವ ನಿರೀಕ್ಷೆ ಇದೆ.

ಕೆಪಿಎಸ್‌ಸಿಗೆ ಪ್ರಸ್ತಾವನೆ; ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ಗೆ ಈಗಾಗಲೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೇಮಕಾತಿಗಾಗಿ ಪ್ರಸ್ತಾವನೆಯನ್ನು ಸಲ್ಲಿಸಿದೆ. ಸುಮಾರು 733 ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆಯೂ ಈಗಾಗಲೇ ಒಪ್ಪಿಗೆ ಕೊಟ್ಟಿದೆ.
ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಕೆಲವು ಬದಲಾವಣೆ ಮಾಡಿ ಹೊಸದಾಗಿ ಪ್ರಸ್ತಾವನೆ ಸಲ್ಲಿಕೆ ಮಾಡುವಂತೆ ಕೆಪಿಎಸ್‌ಸಿ ಇಲಾಖೆಗೆ ವಾಪಸ್ ಕಳಿಸಿದೆ. ಈ ತಿಂಗಳ ಅಂತ್ಯ ಅಥವ ಜನವರಿ ಮೊದಲ ವಾರದಲ್ಲಿ ಅಧಿಸೂಚನೆ ನಿರೀಕ್ಷೆ ಮಾಡಲಾಗಿದೆ.
ನೇಮಕಾತಿ ಮಾಡುವಾಗ ಜಿಲ್ಲಾವಾರು ಮಾಡಿ ಅವರ ಜಿಲ್ಲೆಯಲ್ಲಿಯೇ ಪೋಸ್ಟಿಂಗ್ ನೀಡಿದರೆ ಅವರು ಕೆಲಸ ಮಾಡುತ್ತಾರೆ. ಬೇರೆ ಜಿಲ್ಲೆಯಲ್ಲಿ ಪೋಸ್ಟಿಂಗ್ ಕೊಟ್ಟರೆ ವಿವಿಧ ಕಾರಣ ನೀಡಿ ವರ್ಗಾವಣೆಗೆ ಪ್ರಯತ್ನ ನಡೆಸುತ್ತಾರೆ ಎಂಬ ಚಿಂತನೆ ಹಿನ್ನಲೆಯಲ್ಲಿ ನೇಮಕಾತಿ ನಿಯಮದಲ್ಲಿ ಕೆಲವು ಬದಲಾವಣೆ ಮಾಡಲಾಗುತ್ತಿದೆ.
ಆದ್ದರಿಂದ ಅರ್ಜಿ ಸಲ್ಲಿಕೆ ಮಾಡುವಾಗ ಒಂದೇ ಜಿಲ್ಲೆಯ ಆಯ್ಕೆ ಮಾಡಬೇಕು ಎಂಬ ನಿಯಮ ರೂಪಿಸಲಾಗುತ್ತದೆ. ಆಗ ಅದೇ ಜಿಲ್ಲೆಯಲ್ಲಿ ಕೆಲಸ ಮಾಡಬೇಕು. ವರ್ಗಾವಣೆಗೆ ಅವಕಾಶ ಇರುವುದಿಲ್ಲ. ಈ ಚಿಂತನೆಗೆ ಸರ್ಕಾರದ ಮಟ್ಟದಲ್ಲಿ ಒಪ್ಪಿಗೆ ಸಿಕ್ಕಿದರೆ ಒಬ್ಬ ಅಭ್ಯರ್ಥಿಗೆ ಒಂದೇ ಜಿಲ್ಲೆ ಎಂಬ ನಿಯಮ ಅಧಿಸೂಚನೆಯಲ್ಲಿ ಪ್ರಕಟವಾಗಲಿದೆ.
ಇಲಾಖೆಯ ಮಾಹಿತಿ ಪ್ರಕಾರ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ), ಕಾರ್ಯದರ್ಶಿ ಗ್ರೇಡ್-1, ಕಾರ್ಯದರ್ಶಿ ಗ್ರೇಡ್-2 ಸೇರಿ ಒಟ್ಟು 733 ಹುದ್ದೆಗಳನ್ನು ಭರ್ತಿ ಮಾಡುವ ನಿರೀಕ್ಷೆ ಇದೆ. ಕಲ್ಯಾಣ ಕರ್ನಾಟಕ ಮತ್ತು ಸಾಮಾನ್ಯ ವೃಂದ ಸೇರಿ ಪಿಡಿಒ ಹುದ್ದೆಗಳ ಭರ್ತಿಗೆ ಸಹ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ.
ನೇಮಕಾತಿ ಅಧಿಸೂಚನೆ ಪ್ರಕಟವಾದರೆ ಎಷ್ಟು ಹುದ್ದೆ ಎಂಬ ನಿಖರ ಮಾಹಿತಿ ತಿಳಿಯಲಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 106 ಪಿಡಿಒ, ಕಾರ್ಯದರ್ಶಿ ಗ್ರೇಡ್-1 85 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂಬುದು ಸದ್ಯದ ಮಾಹಿತಿ.
ಸರ್ಕಾರದ ಮಾಹಿತಿಯಂತೆ ರಾಜ್ಯದಲ್ಲಿ ಪಿಡಿಒ 660, ಕಾರ್ಯದರ್ಶಿ ಗ್ರೇಡ್-1 350, ಕಾರ್ಯದರ್ಶಿ ಗ್ರೇಡ್-2 415 ಹುದ್ದೆಗಳು ಖಾಲಿ ಇವೆ. ಇವುಗಳಲ್ಲಿ 733 ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆ ಹಸಿರು ನಿಶಾನೆ ತೋರಿಸಿದೆ. ಹಲವು ಗ್ರಾಮ ಪಂಚಾಯಿತಿಗಳಲ್ಲಿ ಹುದ್ದೆಗಳು ಖಾಲಿ ಇರುವ ಕಾರಣ ಒಬ್ಬ ಸಿಬ್ಬಂದಿಗೆ ಎರಡು, ಮೂರು ಪಂಚಾಯಿತಿಗಳ ಕಾರ್ಯಭಾರವಿದೆ. ಒತ್ತಡ ಕಡಿಮೆ ಮಾಡಲು ನೇಮಕಾತಿ ಆದಷ್ಟು ಬೇಗ ನಡೆಯಬೇಕಿದೆ.












Click it and Unblock the Notifications