Job Recruitment: ಧಾರವಾಡ ಚಲೋ ಪ್ರತಿಭಟನೆಗೆ ಖಾಕಿ ಅಡ್ಡಿ ಆರೋಪ: ನಡೆ ಖಂಡಿಸಿದ ಶಾಸಕ ಯತ್ನಾಳ್
ಬೆಂಗಳೂರು, ಡಿಸೆಂಬರ್ 01: ರಾಜ್ಯದಲ್ಲಿ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಒಂದಷ್ಟು ಸರ್ಕಾರಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು ಬಿಟ್ಟರೆ ವರ್ಷಗಳಿಂದ ಖಾಲಿ ಸರ್ಕಾರಿ ಹುದ್ದೆಗಳ ಭರ್ತಿಗೆ ಸರ್ಕಾರ ಮುಂದಾಗಿಲ್ಲ. ಇದನ್ನು ಖಂಡಿಸಿ ಹಾಗೂ ಸರ್ಕಾರಿ ವ್ಯಾಪ್ತಿಯಲ್ಲಿರುವ ಖಾಲಿ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಬೇಕೆಂದು ಆಗ್ರಹಿಸಿ 'ಧಾರವಾಡ ಚಲೋ'ಗೆ ಕರೆ ನೀಡಲಾಗಿತ್ತು. ಅದರಂತೆ ಇಂದು ನಡೆದ ಪ್ರತಿಭಟನೆಯನ್ನು ಪೊಲೀಸರು ಹತ್ತಿಕ್ಕಿದ್ದಾರೆ. ಪ್ರತಿಭಟನಾ ನಿರತ ನಿರುದ್ಯೋಗಿಗಳನ್ನು ಬಂಧಿಸಿದ್ದಾರೆ.
ಪೊಲೀಸ್ ಇಲಾಖೆ ಹಾಗೂ ರಾಜ್ಯ ಸರ್ಕಾರ ಈ ನಡೆ ಖಂಡಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಎಕ್ಸ್ ಪೋಸ್ಟ್ ಮಾಡಿದ್ದಾರೆ. ಆಕ್ರೋಶ ಹೊರ ಹಾಕಿದ್ದಾರೆ. ಉದ್ಯೋಗಾಂಕ್ಷಿಗಳಿಗೆ ಧಾರವಾಡದಲ್ಲಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಪರೀಕ್ಷಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವುದು ಖಂಡನೀಯ ಎಂದು ಆಕ್ರೋಶ ಹೊರ ಹಾಕಿದರು.

'ಕುರ್ಚಿ ಕುಸ್ತಿ' ಯಲ್ಲಿ ಸ್ತಬ್ದವಾಗಿರುವ ಆಡಳಿತದಿಂದ ನೇಮಕಾತಿಗಳು ಆಗದೇ ಪರೀಕ್ಷಾರ್ಥಿಗಳ ಶ್ರಮ ಫಲ ನೀಡದೆ ಇದ್ದರೆ ಇನ್ನೊಂದು ಕಡೆ ವಯೋಮಿತಿ ಮೀರುವ ಆತಂಕದಲ್ಲಿದ್ದಾರೆ. ಸರ್ಕಾರದಿಂದ ಪರೀಕ್ಷಾರ್ಥಿಗಳಿಗೆ ಯಾವುದೇ ಸ್ಪಷ್ಟ ಭರವಸೆ ಇಲ್ಲದೆ ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ಜರ್ಜರಿತರಾಗಿದ್ದಾರೆ.
ಪರೀಕ್ಷಾರ್ಥಿಗಳ ನ್ಯಾಯಸಮ್ಮತವಾದ ಬೇಡಿಕೆಗಳನ್ನು ಸರ್ಕಾರ ನಿರ್ದಿಷ್ಟ ಕಾಲಮಿತಿಯಲ್ಲಿ ಈಡೇರಿಸಲೇಬೇಕು. ಇಲ್ಲದಿದ್ದರೆ ಯುವ ಸಮೂಹದ ಕಿಚ್ಚಿನಿಂದ ಸರ್ಕಾರ ಪತನವಾಗುವುದು ನಿಶ್ಚಿತ. ಶಾಂತಿಯುತವಾಗಿ ಪ್ರತಿಭಟಿಸುವುದು ಸಾಂವಿಧಾನಿಕ ಹಕ್ಕು ಎಂಬುದನ್ನು ಪೊಲೀಸರು ಹಾಗೂ ಸರ್ಕಾರ ಮರೆಯಬಾರದು. ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಯುವ ಸಮೂಹವನ್ನು ವಶಕ್ಕೆ ಪಡೆದು ದೌರ್ಜನ್ಯವೆಸಗುವುದು ಅಸಂವಿಧಾನಿಕ ನಡೆ ಎಂದರು.
ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಯುವಕ/ಯುವತಿಯರನ್ನು ಪೊಲೀಸರು ಕೂಡಲೇ ಬಿಡುಗಡೆಗೊಳಿಸಬೇಕು. ಹಾಗೂ ಅವರಿಗೆ ಪ್ರತಿಭಟನೆ ಮಾಡಲು ಸರ್ಕಾರ ಅವಕಾಶ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪ್ರತಿಭಟನೆ ನಡೆಸದಂತೆ ಪೊಲೀಸರಿಂದ ಬೆದರಿಕೆ: ವೇದಿಕೆ ಆರೋಪ
ಪ್ರತಿಭಟನೆಗೂ ಮುನ್ನ ಧಾರವಾಡ ಚಲೋಗೆ ಕರೆ ನೀಡಲಾಗಿತ್ತು. ರಕ್ಷಣೆ ನೀಡಬೇಕಾದ ಪೊಲೀಸರೇ ಪ್ರತಿಭಟನೆ ಹತ್ತಿಕುತ್ತಿದ್ದಾರೆ. ಕೋಚಿಂಗ್ ಸೆಂಟರ್‌ಗೆ ಭೇಟಿ ನೀಡಿದ ಪೊಲೀಸರು ಬೆದರಿಕೆ ಹಾಕುತ್ತಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಅಂತಲೂ ಜನಸಾಮಾನ್ಯರ ವೇದಿಕೆ ರಾಜ್ಯ ಸಂಚಾಲಕ ಯಲ್ಲಪ್ಪ ಹೆಗಡೆ ಅವರು ಆರೋಪಿಸಿದ್ದಾರೆ.
ಪೊಲೀಸರು ಯುವಜನರ ಧ್ವನಿ ಹತ್ತಿಕ್ಕಲಾಗುತ್ತಿದೆ. ಸರ್ಕಾರ ಪೊಲೀಸ್ ಇಲಾಖೆ ಬಳಸಿಕೊಳ್ಳುತ್ತಿದೆ. ಧಾರವಾಡದಲ್ಲಿರುವ ಎಲ್ ಕೋಚಿಂಗ್ ಸೆಂಟರ್‌ಗಳ ಮುಖ್ಯಸ್ಥರಿಗೆ ಹಳೇ ಪ್ರಕರಣದಲ್ಲಿ ನೋಟಿಸ್ ನೀಡಲಾಗುತ್ತದೆ. ಪ್ರತಿಭಟನೆ ಬೆಂಬಲಿಸದಂತೆ ಬೆದರಿಕೆ ಹಾಕಿದ್ದಾರೆ. ನೀವು ಪ್ರತಿಭಟನೆಯಲ್ಲಿ ಭಾಗಿಯಾದರೆ ನಿಮ್ಮ ಮೇಲೆ ಎಫ್‌ಐಆರ್ ಹಾಕಲಾಗುವುದು. ನಿಮ್ಮ ಕನಸು ನುಚ್ಚು ನೂರು ಆಗುತ್ತೆ ಎಂದು ಹೇಳಿದ್ದಾರೆಂದು ಅವರು ಭಾನುವಾರ ಆರೋಪಿಸಿದರು.
ಈ ಬಗ್ಗೆ ಭಾನುವಾರವೇ ಪ್ರತಿಕ್ರಿಯಿಸಿದ್ದ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು, ಡಿಸೆಂಬರ್ 1ರಿಂದ ಪ್ರತಿಭಟನೆಗೆ ಕರೆ ನೀಡಲಾಗಿದೆ. ಕೇಂದ್ರ ಸರ್ಕಾರಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಕನ್ನಡದಲ್ಲಿರಬೇಕು, ಖಾಲಿ ಹುದ್ದೆಗಳ ನೇಮಕಾತಿ ಸೇರಿದಂತೆ ಹಲವು ಬೇಡಿಕೆ ಇಟ್ಟಿದ್ದಾರೆ. ರಾಜ್ಯಾದ್ಯಂತ ಎಲ್ಲರು ಬಂದು 'ಧಾರವಾಡ ಚಲೋ'ಪ್ರತಿಭಟನೆಗೆ ಬೆಂಬಲಿಸುವಂತೆ ಕರೆ ನೀಡಿದ್ದರು. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಅಹೋರಾತ್ರಿ ಧರಣಿ, ಜಂಕ್ಷನ್ ಬಂದ್‌ಗೆ ಕರೆ ನೀಡಿದ್ದು ಕಂಡು ಬಂದಿದೆ. ಹೀಗಾಗಿ ಎಚ್ಚರಿಕೆ ನೀಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಸದ್ಯ ರಾಜ್ಯದಲ್ಲಿ ಸರ್ಕಾರಿ ನೇಮಕಾತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿದೆ. ಇದು ಯಾವುದೇ ಒಂದು ಜಾತಿ, ಮತ, ಪಂಥಕ್ಕೆ ಸಿಮೀತವಾಗದೇ ಭವಿಷ್ಯ ಕನಸು ಕಟ್ಟಿಕೊಂಡಿರುವ ಅದೆಷ್ಟೋ ನಿರುದ್ಯೋಗಾಕಾಂಕ್ಷಿಗಳು ನೇಮಕಾತಿಗಾಗಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.












Click it and Unblock the Notifications