ಪದವೀಧರರ ಮಾತು ಕೇಳದ ಆನೆಗಳು, ಸಂದರ್ಶನಕ್ಕೆ ಬಂದವರು ಸುಸ್ತು!
ಶಿವಮೊಗ್ಗ, ಮೇ 19; ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದ ಆವರಣದಲ್ಲಿ ಆನೆ ಕವಾಡಿಗಳ ನೇರ ನೇಮಕಾತಿಗಾಗಿ ಮೂಲ ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನ ಪ್ರಕ್ರಿಯೆಗಳು ನಡೆದವು. ಪದವೀಧರರು ಸಹ ಈ ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಆದರೆ, ಆನೆಗಳು ಅವರ ಮಾತು ಕೇಳಲಿಲ್ಲ. ಆನೆಗಳ ಮನವೊಲಿಕೆ ಮಾಡಲು ಅವರು ಹರಸಾಹಸ ಪಟ್ಟರು.
ಕರ್ನಾಟಕದ ವಿವಿಧ ಆನೆ ಶಿಬಿರದಲ್ಲಿ ಖಾಲಿ ಇರುವ 21 ಕವಾಡಿಗಳ ಹುದ್ದೆಗೆ ಅರ್ಜಿಯನ್ನು ಕರೆಯಲಾಗಿತ್ತು. ಸಕ್ರೆಬೈಲು ಆನೆ ಬಿಡಾರದಲ್ಲಿನ 4 ಹುದ್ದೆಗಳಿಗೆ 311 ಅರ್ಜಿಗಳು ಬಂದಿದ್ದವು. ಯಾವುದೇ ವಿದ್ಯಾರ್ಹತೆ ನಿಗದಿಪಡಿಸಿದ ಕಾರಣ ಪದವೀಧರರು, ಬಿಎಡ್ ವ್ಯಾಸಂಗ ಮಾಡಿದವರು ಅರ್ಜಿ ಹಾಕಿದ್ದರು.

ಆನೆ ಶಿಬಿರದ ಸ್ಥಳೀಯ ಪರಿಸರದಲ್ಲಿ ವಾಸವಾಗಿರಬೇಕು. ಆನೆಯ ನಿರ್ವಹಣೆ ಗೊತ್ತಿರಬೇಕು ಮತ್ತು ಕನ್ನಡ ಭಾಷೆ ಬಲ್ಲವರು ಆಗಿರಬೇಕು ಎಂದು ಮಾತ್ರ ಷರತ್ತು ಹಾಕಲಾಗಿತ್ತು. ಆದ್ದರಿಂದ ಪದವೀಧರರು, ಬಿಎಡ್ ವ್ಯಾಸಂಗ ಮಾಡಿದವರ ಅರ್ಜಿಯೂ ಬಂದಿತ್ತು.
ಪ್ರಾಯೋಗಿಕ ಪರೀಕ್ಷೆಯಲ್ಲಿ ಪರದಾಟ; ಸಕ್ರೆಬೈಲು ಆನೆ ಬಿಡಾರದ 4 ಹುದ್ದೆಗಳಿಗೆ 311 ಅರ್ಜಿ ಸಲ್ಲಿಕೆಯಾಗಿತ್ತು. ಮೇ 16 ಮತ್ತು 17ರಂದು ಕವಾಡಿಗಳ ನೇರ ನೇಮಕಾತಿ ಕುರಿತಂತೆ ಮೂಲ ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನ ಪ್ರಕ್ರಿಯೆಗಳು ನಡೆಯಿತು. ಇದಕ್ಕಾಗಿ ಪ್ರವಾಸಿಗರಿಗೆ ಆನೆ ಬಿಡಾರ ಪ್ರವೇಶವನ್ನು ಎರಡು ದಿನ ನಿರ್ಬಂಧಿಸಲಾಗಿತ್ತು.

311 ಅರ್ಜಿಗಳ ಪೈಕಿ 90 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಇವರಲ್ಲಿ 47 ಮಂದಿ ಪ್ರಾಯೋಗಿಕ ಪರೀಕ್ಷೆಗೆ ಹಾಜರಾದರು. 20 ಜನರು ಮಾತ್ರ ಸೂಕ್ತ ದಾಖಲೆ ಹೊಂದಿದ್ದು, ಅವರ ಸಂದರ್ಶನ, ಪ್ರಾಯೋಗಿಕ ಪರೀಕ್ಷೆ ಪೂರ್ಣಗೊಂಡಿದೆ. ಅಂಕಗಳ ಆಧಾರದ ಮೇಲೆ ಅರ್ಹರ ಆಯ್ಕೆ ನಡೆಯಲಿದೆ.
ಪ್ರಾಯೋಗಿಕ ಪರೀಕ್ಷೆ ಎಲ್ಲರ ಗಮನ ಸೆಳೆಯಿತು. ಪದವೀಧರರು, ಕೆಎಎಸ್ ಪರೀಕ್ಷೆಗೆ ವ್ಯಾಸಂಗ ಮಾಡುತ್ತಿರುವವರ ಮಾತನ್ನು ಆನೆಗಳು ಕೇಳಲೇ ಇಲ್ಲ. ಆನೆಗಳ ಒಡನಾಟ, ಅವುಗಳಿಗೆ ಕೊಡುವ ಸೂಚನೆಗಳ ಪರಿಚಯ ಇಲ್ಲದ ಅಭ್ಯರ್ಥಿಗಳು ಏನೂ ಹೇಳಿದರೂ ಆನೆಗಳು ಮಾತು ಕೇಳುವ ಪರಿಸ್ಥಿತಿಯಲ್ಲಿಯೇ ಇರಲಿಲ್ಲ.
ಹಿಂದಿ ಮತ್ತು ಬೆಂಗಾಲಿ ಭಾಷೆಯ ಕೆಲವು ಪದಗಳನ್ನು ಕವಾಡಿಗಳು ಆನೆಗಳಿಗೆ ಹೇಳುತ್ತಾರೆ. ಇಂತಹ ಪದಗಳನ್ನು ಕಂಠಪಾಠ ಮಾಡಿಕೊಂಡು ಅಭ್ಯರ್ಥಿಗಳು ಕಂಠಪಾಠ ಮಾಡಿಕೊಂಡು ಬಂದಿದ್ದರು. ಆದರೆ ಅವುಗಳನ್ನು ಕೇಳಿ ಕೆಲವು ಆನೆಗಳು ಗಾಬರಿಗೊಂಡವು.
ಅರಣ್ಯ ಇಲಾಖೆ ಕವಾಡಿಗಳ ನೇಮಕಾತಿಗೆ ಅರ್ಜಿ ಕರೆದಿತ್ತು. ದುಬಾರೆ, ರಾಮಪುರ, ನಾಗರಹೊಳೆ, ದಾಂಡೇಲಿ, ಸಕ್ರೆಬೈಲು ಆನೆ ಬಿಡಾರದಲ್ಲಿ ಖಾಲಿ ಇರುವ ಒಟ್ಟು 21 ಕವಾಡಿಗಳ ನೇಮಕಾತಿಗೆ ಮೂಲ ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನ ಆಯೋಜನೆ ಮಾಡಲಾಗಿತ್ತು. ಬಹುತೇಕ ಅಭ್ಯರ್ಥಿಗಳು ಪ್ರಾಯೋಗಿಕ ಪರೀಕ್ಷೆಯಲ್ಲಿ ಪರದಾಟ ನಡೆಸಿದರು.
ದೈತ್ಯ ಆನೆಗಳ ಪಾಲನೆಯಲ್ಲಿ ಮಾವುತರು ಮತ್ತು ಕವಾಡಿಗಳ ಶ್ರಮ ಬಹಳ. ಆನೆಗಳು ಮಾವುತರು, ಕವಾಡಿಗಳು ಕೊಡುವ ಸೂಚನೆಗಳನ್ನು ಮಾತ್ರ ಪಾಲಿಸುತ್ತವೆ. ಕವಾಡಿಗಳು ಆನೆಗಳ ಆಹಾರ, ಆರೋಗ್ಯ ಮುಂತಾದವುಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ.
ಅರಣ್ಯ ಇಲಾಖೆ ನೇಮಕಾತಿಯಾದ ಕಾರಣ ಅನೇಕರು ಅರ್ಜಿ ಸಲ್ಲಿಕೆ ಮಾಡಿದ್ದರು. ವಿಜಯಪುರ, ಬಳ್ಳಾರಿ, ವಿಜಯನಗರ ಜಿಲ್ಲೆಯ ಅಭ್ಯರ್ಥಿಗಳು ಕವಾಡಿಗಳ ಹುದ್ದೆಗೆ ಅರ್ಜಿಗಳನ್ನು ಸಲ್ಲಿಸಿದ್ದರು. ವಿಜಯಪುರದಿಂದಲೇ 30 ಅರ್ಜಿಗಳು ಸಲ್ಲಿಕೆಯಾಗಿದ್ದವು. ವಿದ್ಯಾರ್ಹತೆಯ ಜೊತೆಗೆ ಆನೆಗಳಿಗೆ ಸೂಚನೆ ನೀಡುವುದು ಬಹಳ ಮುಖ್ಯವಾದ ಕೆಲಸವಾಗಿದೆ. ಬಹುತೇಕ ಪದವೀಧರ ಅಭ್ಯರ್ಥಿಗಳು ಇದರಲ್ಲಿಯೇ ಎಡವಿದರು.












Click it and Unblock the Notifications