ಡಿಸಿಸಿ ಬ್ಯಾಂಕ್ ನೌಕರರನ್ನು ಸರ್ಕಾರಿ ಉದ್ಯೋಗಿ ಎಂದು ಪರಿಗಣಿಸಬಹುದೇ?
ಬೆಂಗಳೂರು, ಜುಲೈ 05; ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ) ಬ್ಯಾಂಕ್‌ಗಳಲ್ಲಿನ ಉದ್ಯೋಗಿಗಳನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬಹುದೇ?. ಈ ಕುರಿತು ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚೆ ನಡೆದಿದ್ದು, ಸರ್ಕಾರ, ಸಹಕಾರಿ ಸಚಿವರು ಸ್ಪಷ್ಟವಾದ ಲಿಖಿತ ಉತ್ತರವನ್ನು ನೀಡಿದ್ದಾರೆ.
ವಿಧಾನ ಪರಿಷತ್ ಕಲಾಪದಲ್ಲಿ ಶಶೀಲ್ ಜಿ ನಮೋಶಿ ಈ ಕುರಿತು ಸರ್ಕಾರವನ್ನು ಪ್ರಶ್ನೆ ಮಾಡಿದ್ದರು. ಸಹಕಾರ ಸಚಿವರು ಉತ್ತರವನ್ನು ನೀಡಿದ್ದಾರೆ. ಡಿಸಿಸಿ ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಹುದ್ದೆಗಳು, ಹುದ್ದೆಗಳ ನೇಮಕಾತಿಗಳ ಬಗ್ಗೆಯೂ ಸಚಿವರು ವಿವರಣೆ ಕೊಟ್ಟಿದ್ದಾರೆ.

ಸಚಿವರು ನೀಡಿದ ಉತ್ತರಗಳು; ಡಿಸಿಸಿ ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಹಾಗೂ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಸಂಖ್ಯೆ ಎಷ್ಟು?. ಯಾವ ಕಾಲಮಿತಿಯಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದು ಪ್ರಶ್ನಿಸಲಾಗಿತ್ತು.
ಸಚಿವರು ಉತ್ತರ ನೀಡಿದ್ದು, ರಾಜ್ಯದಲ್ಲಿ ಒಟ್ಟು 21 ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿರುತ್ತವೆ. 21 ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳಿಗೆ ಸಂಬಂಧಿಸಿದಂತೆ ಒಟ್ಟು 8981 ಹುದ್ದೆಗಳು ಮಂಜೂರಾಗಿದ್ದು, ಈ ಪೈಕಿ 7019. ವಿವಿಧ ಹುದ್ದೆಗಳಲ್ಲಿ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, 1965 ವಿವಿಧ ಹುದ್ದೆಗಳು ಖಾಲಿ ಇರುತ್ತವೆ.
ಬ್ಯಾಂಕುಗಳು ತನ್ನ ಅಗತ್ಯತೆಗೆ ಅನುಗುಣವಾಗಿ ಅವಶ್ಯವಿರುವ ಸಿಬ್ಬಂದಿಗಳನ್ನು ನಬಾರ್ಡ್ ಮಾನವ ಸಂಪನ್ಮೂಲ ಮಾರ್ಗಸೂಚಿಗಳು ಹಾಗೂ ಕರ್ನಾಟಕ ಸಹಕಾರ ಸಂಘಗಳ ನಿಯಮಗಳು 1960 ರ ನಿಯಮ 17, 17ಎ, ಹಾಗೂ 18 ರ ಅವಕಾಶಗಳ ರೀತ್ಯಾ ನೇಮಕ ಮಾಡಿಕೊಳ್ಳುವ ಅಧಿಕಾರವು ಬ್ಯಾಂಕುಗಳ ಆಡಳಿತ ಮಂಡಳಿಗೆ ಇದ್ದು, ಬ್ಯಾಂಕಿನ ಆರ್ಥಿಕ ಪರಿಸ್ಥಿತಿ ಮತ್ತು ಹುದ್ದೆಗಳ ಅವಶ್ಯಕತೆಗೆ ಅನುಗುಣವಾಗಿ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಬಗ್ಗೆ ಆಯಾ ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಯವರು ತೀರ್ಮಾನ ತೆಗೆದುಕೊಳ್ಳಬೇಕಾಗಿರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.
ಸರ್ಕಾರಿ ನೌಕರರು ಎಂದು ಪರಿಗಣನೆ; ಡಿಸಿಸಿ ಬ್ಯಾಂಕುಗಳಲ್ಲಿ ಕಾರ್ಯನಿರ್ವಹಿಸುವ ನೌಕರರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲಾಗಿದೆಯೇ? (ಸ್ಪಷ್ಟವಿವರಗಳನ್ನು ನೀಡುವುದು) ಎಂದು ಪ್ರಶ್ನಿಸಲಾಗಿದೆ.
ಸಚಿವರು ತಮ್ಮ ಉತ್ತರದಲ್ಲಿ ಇಲ್ಲ, ಡಿಸಿಸಿ ಬ್ಯಾಂಕುಗಳು ಸ್ವಾಯತ್ತ ಸಂಸ್ಥೆಗಳಾಗಿದ್ದು, ಬ್ಯಾಂಕಿನ ಆಡಳಿತ ಮಂಡಳಿಗಳು ನೇಮಕಾತಿ ಪ್ರಾಧಿಕಾರವಾಗಿರುತ್ತವೆ. ಸಿಬ್ಬಂದಿ ವೇತನ ಮತ್ತು ಇತರೆ ಸೌಲಭ್ಯಗಳನ್ನು ಬ್ಯಾಂಕುಗಳ ಭರಿಸುತ್ತಿರುವುದರಿಂದ ಮತ್ತು ಸೇವಾ ನಿಯಮಾವಳಿಗಳು ಕೂಡ ಆಯಾಯ ಡಿಸಿಸಿ ಬ್ಯಾಂಕುಗಳೇ ರಚಿಸಿಕೊಂಡು ಅದರಂತೆ ಕಾರ್ಯನಿರ್ವಹಿಸುವುದರಿಂದ ಡಿಸಿಸಿ ಬ್ಯಾಂಕಿನ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಎರವಲು ಸೇವೆ ನಿಯಮಗಳು; ಡಿಸಿಸಿ ಬ್ಯಾಂಕ್‌ಗಳಲ್ಲಿ ಕಾರ್ಯನಿರ್ವಹಿಸುವ ಹಿರಿಯ ಸಹಾಯಕ ಹಾಗೂ ಕಿರಿಯ ಸಹಾಯಕರನ್ನು ಅನ್ಯ ಕರ್ತವ್ಯದ ಮೇರೆಗೆ ನಿಯೋಜಿಸಲು ಎರವಲು ಸೇವೆಯ ಮೇಲೆ ಕಾರ್ಯ ನಿರ್ವಹಿಸಲು ಇರುವ ನಿಯಮಗಳೇನು? ಎಂದು ಪ್ರಶ್ನಿಸಲಾಗಿತ್ತು.
ಸಚಿವರು ಉತ್ತರದಲ್ಲಿ ಡಿಸಿಸಿ ಬ್ಯಾಂಕುಗಳ ಸಿಬ್ಬಂದಿ ವೇತನ ಮತ್ತು ಇತರೆ ಸೌಲಭ್ಯಗಳನ್ನು ಬ್ಯಾಂಕುಗಳೇ ಭರಿಸುತ್ತಿರುವುದರಿಂದ ಮತ್ತು ಸೇವಾ ನಿಯಮಾವಳಿಗಳು ಕೂಡ ಆಯಾಯ ಡಿಸಿಸಿ ರಚಿಸಿಕೊಂಡು ಅದರಂತೆ ಕಾರ್ಯನಿರ್ವಹಿಸುವುದರಿಂದ, ಡಿಸಿಸಿ ಬ್ಯಾಂಕಿನ ನೌಕರರ ಸೇವಾ ನಿಯಮಾವಳಿಗಳಲ್ಲಿ ಅವಕಾಶವಿರುವಂತೆ ನಿಯೋಜನೆ ಎರವಲು ಸೇವೆ ಮೇಲೆ ಕಾರ್ಯ ನಿರ್ವಹಿಸಬಹುದಾಗಿದ್ದು, ಈ ಬಗ್ಗೆ ಸಹಕಾರ ಸಂಘಗಳ ಕಾಯ್ದೆ ಮತ್ತು ನಿಯಮಗಳಲ್ಲಿ ಅವಕಾಶವಿರುವುದಿಲ್ಲ ಎಂದು ಹೇಳಿದ್ದಾರೆ.
ಮತ್ತೊಂದು ಪ್ರಶ್ನೆಯಲ್ಲಿ ರಾಜ್ಯದಲ್ಲಿ ಒಂದು ಡಿಸಿಸಿ ಬ್ಯಾಂಕಿನಿಂದ ಇನ್ನೊಂದು ಜಿಲ್ಲೆ ಡಿಸಿಸಿ ಬ್ಯಾಂಕ್‌ಗೆ ಸಿಬ್ಬಂದಿಯನ್ನು ವರ್ಗಾವಣೆ ಮಾಡಲು ಅವಕಾಶವಿದೆಯೇ? ಎಂದು ಪ್ರಶ್ನಿಸಲಾಗಿದೆ.
ಸಚಿವರು ರಾಜ್ಯದಲ್ಲಿ ಪ್ರತಿಯೊಂದು ಡಿಸಿಸಿ ಬ್ಯಾಂಕುಗಳು ಪ್ರತ್ಯೇಕವಾಗಿ ಸೇವಾ ನಿಯಮಾವಳಿಗಳನ್ನು ರಚಿಸಿಕೊಂಡು ಅದರಂತೆ ಕಾರ್ಯ ನಿರ್ವಹಿಸುವುದರಿಂದ ಒಂದು ಡಿಸಿಸಿ ಬ್ಯಾಂಕಿನಿಂದ ಇನ್ನೊಂದು ಜಿಲ್ಲೆ ಡಿಸಿಸಿ ಬ್ಯಾಂಕ್‌ಗೆ ಸಿಬ್ಬಂದಿಯನ್ನು ವರ್ಗಾವಣೆ ಮಾಡಲು ಅವಕಾಶವಿರುವುದಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications