CRPF Recruitment 2026: 9,000ಕ್ಕೂ ಹೆಚ್ಚು ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ; ಕನ್ನಡಿಗರಿಗೂ ಇದೆ ಮೀಸಲಾತಿ
ನವದೆಹಲಿ: ದೇಶಸೇವೆ ಮಾಡಲು ಬಯಸುವ ಯುವಕ-ಯುವತಿಯರಿಗೆ ಕೇಂದ್ರ ಮೀಸಲು ಪೊಲೀಸ್ ಪಡೆಯು (CRPF) ಭರ್ಜರಿ ಸಿಹಿಸುದ್ದಿ ನೀಡಿದೆ. 2026ನೇ ಸಾಲಿನ ಕಾನ್ಸ್ಟೇಬಲ್ ಹುದ್ದೆಗಳ ಭರ್ತಿಗೆ ಇದೀಗ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಒಟ್ಟು 9,175 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಈ ಪೈಕಿ ಕರ್ನಾಟಕದ ಅಭ್ಯರ್ಥಿಗಳಿಗೆಂದೇ 466 ಹುದ್ದೆಗಳನ್ನು ಪ್ರತ್ಯೇಕವಾಗಿ ಮೀಸಲಿಡಲಾಗಿದೆ. ಕೇಂದ್ರ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ಕನ್ನಡಿಗರಿಗೆ ಇದೊಂದು ಅತ್ಯುತ್ತಮ ಸುವರ್ಣಾವಕಾಶವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅಧಿಕೃತ ವೆಬ್‌ಸೈಟ್ rect.crpf.gov.in ಗೆ ಭೇಟಿ ನೀಡಿ ಮೇ 19 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ ಮತ್ತು ಮೀಸಲಾತಿ
ಒಟ್ಟು 9,175 ಕಾನ್ಸ್ಟೇಬಲ್ ಹುದ್ದೆಗಳ ಪೈಕಿ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಬ್ಬರಿಗೂ ಸೇನೆ ಸೇರಲು ಸಮಾನ ಅವಕಾಶ ಕಲ್ಪಿಸಲಾಗಿದೆ. ತಾಂತ್ರಿಕ ಹಾಗೂ ಟ್ರೇಡ್ಸ್‌ಮನ್ ವಿಭಾಗದ ಅಡಿಯಲ್ಲಿ ಡ್ರೈವರ್, ಮೋಟಾರ್ ಮೆಕ್ಯಾನಿಕ್, ಬಡಗಿ (Carpenter), ಟೈಲರ್, ಬ್ರಾಸ್ ಬ್ಯಾಂಡ್, ಪೈಪ್ ಬ್ಯಾಂಡ್, ಮಾಲಿ, ಪೇಂಟರ್, ಅಡುಗೆಯವರು (Cook), ವಾಟರ್ ಕ್ಯಾರಿಯರ್, ವಾಷರ್‌ಮನ್, ಕ್ಷೌರಿಕ (Barber) ಮತ್ತು ಸಫಾಯಿ ಕರ್ಮಚಾರಿ ಸೇರಿದಂತೆ ವಿವಿಧ ವೃತ್ತಿಪರ ಹುದ್ದೆಗಳನ್ನು ಈ ನೇಮಕಾತಿ ಪ್ರಕ್ರಿಯೆ ಮೂಲಕ ಭರ್ತಿ ಮಾಡಲಾಗುತ್ತಿದೆ.

ಶೈಕ್ಷಣಿಕ ಅರ್ಹತೆ ಹಾಗೂ ವಯೋಮಿತಿ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಶೈಕ್ಷಣಿಕ ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ತಾಂತ್ರಿಕ ವಿಭಾಗದ ಹುದ್ದೆಗಳಾದ 'ಡ್ರೈವರ್' ಹುದ್ದೆಗೆ ಅರ್ಜಿ ಸಲ್ಲಿಸುವವರು ಹೆವಿ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು. ಅದೇ ರೀತಿ 'ಮೆಕ್ಯಾನಿಕ್' ಹುದ್ದೆಗೆ ಸಂಬಂಧಿಸಿದ ಐಟಿಐ (ITI) ಪ್ರಮಾಣಪತ್ರವನ್ನು ಪಡೆದಿರಬೇಕು.
ಇನ್ನೂ ವಯೋಮಿತಿಯ ಕುರಿತು ಗಮನಿಸುವುದಾದರೆ, ಡ್ರೈವರ್ ಹುದ್ದೆಗಳಿಗೆ 21 ರಿಂದ 27 ವರ್ಷ ಹಾಗೂ ಇತರೆ ಟ್ರೇಡ್ಸ್‌ಮನ್ ಹುದ್ದೆಗಳಿಗೆ 18 ರಿಂದ 23 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸರ್ಕಾರದ ಮೀಸಲಾತಿ ನಿಯಮಾವಳಿಯನ್ವಯ ಓಬಿಸಿ (OBC) ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಎಸ್‌ಸಿ/ಎಸ್‌ಟಿ (SC/ST) ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.
ವೇತನ ಶ್ರೇಣಿ ಮತ್ತು ಆಯ್ಕೆ ಪ್ರಕ್ರಿಯೆ
ಈ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ 7ನೇ ವೇತನ ಆಯೋಗದ ಪೇ ಮ್ಯಾಟ್ರಿಕ್ಸ್ ಲೆವೆಲ್-3 ರ ಅನ್ವಯ ಅತ್ಯುತ್ತಮ ವೇತನ ಶ್ರೇಣಿ ನಿಗದಿಪಡಿಸಲಾಗಿದೆ. ಅಂದರೆ, ಆರಂಭಿಕವಾಗಿ ತಿಂಗಳಿಗೆ 21,700 ರೂ. ಗಳಿಂದ ಗರಿಷ್ಠ 69,100 ರೂ. ವರೆಗೆ ಆಕರ್ಷಕ ವೇತನ ಹಾಗೂ ಕೇಂದ್ರ ಸರ್ಕಾರದ ಇತರೆ ಭತ್ಯೆಗಳು (ಡಿಎ, ಎಚ್‌ಆರ್‌ಎ ಇತ್ಯಾದಿ) ದೊರೆಯಲಿವೆ.
ಆಯ್ಕೆ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿರಲಿದ್ದು, ಮೊದಲಿಗೆ ಆನ್‌ಲೈನ್ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ನಡೆಯಲಿದೆ. ಇದರಲ್ಲಿ ಉತ್ತೀರ್ಣರಾದವರಿಗೆ ದೈಹಿಕ ಮಾಪನ ಪರೀಕ್ಷೆ (PST), ದೈಹಿಕ ದಕ್ಷತೆ ಪರೀಕ್ಷೆ (PET) ಹಾಗೂ ಆಯಾ ವೃತ್ತಿಗೆ ಸಂಬಂಧಿಸಿದಂತೆ ಟ್ರೇಡ್ ಟೆಸ್ಟ್ (Trade Test) ನಡೆಸಲಾಗುತ್ತದೆ. ಅಂತಿಮ ಹಂತದಲ್ಲಿ ದಾಖಲಾತಿ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳನ್ನು ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಕೆ ಹೇಗೆ? ಮತ್ತು ಶುಲ್ಕದ ವಿವರ
ಅರ್ಹ ಅಭ್ಯರ್ಥಿಗಳು ಕೇವಲ ಆನ್‌ಲೈನ್ ಮೂಲಕ, ಅಂದರೆ ಸಿಆರ್‌ಪಿಎಫ್‌ನ ಅಧಿಕೃತ ನೇಮಕಾತಿ ಪೋರ್ಟಲ್ rect.crpf.gov.in ಅಥವಾ crpf.gov.in ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸಾಮಾನ್ಯ (General), ಓಬಿಸಿ (OBC) ಮತ್ತು ಆರ್ಥಿಕವಾಗಿ ಹಿಂದುಳಿದ (EWS) ವರ್ಗದ ಪುರುಷ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕು. ಆದರೆ ಎಸ್‌ಸಿ (SC), ಎಸ್‌ಟಿ (ST), ಮಾಜಿ ಸೈನಿಕರು ಹಾಗೂ ಎಲ್ಲಾ ವರ್ಗದ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಆಸಕ್ತರು ಕೊನೆಯ ದಿನಾಂಕವಾದ ಮೇ 19, 2026 ರವರೆಗೆ ಕಾಯದೆ ಆದಷ್ಟು ಬೇಗನೆ ಅಗತ್ಯ ದಾಖಲೆಗಳೊಂದಿಗೆ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸುವುದು ಸೂಕ್ತ ಎಂದು ಇಲಾಖೆ ತಿಳಿಸಿದೆ.












Click it and Unblock the Notifications