Union Budget 2023; 30 ಕೌಶಲ್ಯ ತರಬೇತಿ ಕೇಂದ್ರಗಳ ಸ್ಥಾಪನೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಯುವ ಜನರಿಗೆ ಉದ್ಯೋಗ ತರಬೇತಿ ನೀಡಲು ಆದ್ಯತೆ ನೀಡಿದ್ದಾರೆ. 30 ಕೌಶಲ್ಯ ತರಬೇತಿ ಕೇಂದ್ರ ಸ್ಥಾಪನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ನವದೆಹಲಿ, ಫೆಬ್ರವರಿ 01; ಲೋಕಸಭೆಯ ಬಜೆಟ್ ಅಧಿವೇಶನ ಮಂಗಳವಾರ ಆರಂಭವಾಗಿದೆ. ಬುಧವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-24ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದಾರೆ.
ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಉದ್ಯೋಗ ಕ್ಷೇತ್ರ, ಯುವಕರಿಗೆ ಉದ್ಯೋಗ ತರಬೇತಿ ನೀಡುವ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಇದಕ್ಕಾಗಿ ಹೊಸ ಘೋಷಣೆಯನ್ನು ಸಹ ಮಾಡಿದ್ದಾರೆ.
ಅಂತರಾಷ್ಟ್ರೀಯ ಅವಕಾಶಗಳಿಗೆ ತಕ್ಕಂತೆ ದೇಶದ ಯುವಕರಿಗೆ ತರಬೇತಿ ನೀಡಲು 30 ಕೌಶಲ್ಯ ತರಬೇತಿ ಕೇಂದ್ರ ಸ್ಥಾಪನೆ ಮಾಡಲಾಗುತ್ತದೆ ಎಂದು ನಿರ್ಮಾಲಾ ಸೀತಾರಾಮನ್ ಹೇಳಿದರು.

'ಕೌಶಲ್ಯ ಭಾರತ ಅಂತರಾಷ್ಟ್ರೀಯ ಕೇಂದ್ರ'ಗಳು ದೇಶದ ವಿವಿಧ ರಾಜ್ಯಗಳ 30 ಕಡೆ ಸ್ಥಾಪನೆಯಾಗಲಿವೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಯುವ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶಗಳಿವೆ. ಆದರೆ ಅದಕ್ಕೆ ತಕ್ಕ ತರಬೇತಿ ಸಿಗುತ್ತಿಲ್ಲ. ಈ ಹಿನ್ನಲೆಯಲ್ಲಿ ತರಬೇತಿ ಕೇಂದ್ರಗಳ ಮೂಲಕ ಯುವಕರಿಗೆ ಅಂತರಾಷ್ಟ್ರೀಯ ಮಟ್ಟದ ತರಬೇತಿಯನ್ನು ನೀಡಲಾಗುತ್ತದೆ.
'ಪ್ರಧಾನ್ ಮಂತ್ರಿ ಕೌಶಲ್ ವಿಕಾಸ್ ಯೋಜನೆ 4.0' ಆರಂಭಿಸಿ ಯುವಜನರಿಗೆ ತರಬೇತಿ ನೀಡಲಾಗುತ್ತದೆ ಎಂದು ಹಣಕಾಸು ಸಚಿವರು ಘೋಷಣೆ ಮಾಡಿದ್ದಾರೆ.
ಅಪ್ರೆಂಟಿಸ್‌ಶಿಪ್ ಯೋಜನೆ ಘೋಷಣೆ; ನಿರ್ಮಲಾ ಸೀತಾರಾಮನ್ ಬುಧವಾರ ಮಂಡನೆ ಮಾಡಿದ ಬಜೆಟ್‌ನಲ್ಲಿ ಅಪ್ರೆಂಟಿಶಿಪ್ ಯೋಜನೆಯೊಂದನ್ನು ಘೋಷಣೆ ಮಾಡಲಾಗಿದೆ. ದೇಶದ ಯುವಜನರ ಆರ್ಥಿಕತೆಯನ್ನು ಉತ್ತೇಜಿಸಲು ಅವರ ಕನಸುಗಳನ್ನು ನನಸು ಮಾಡಲು ಈ ಯೋಜನೆ ಯಡಿ ಸ್ಟೈಫಂಡ್ ನೀಡಲಾಗುತ್ತದೆ.
ಬಜೆಟ್‌ನಲ್ಲಿ 'ಪ್ಯಾನ್ ಇಂಡಿಯಾ ನ್ಯಾಷನಲ್ ಅಪ್ರೆಂಟಿಸ್‌ಶಿಪ್ ಪ್ರಮೋಷನ್ ಸ್ಕೀಮ್' ಘೋಷಣೆ ಮಾಡಲಾಗಿದೆ. ಇದರ ಅನ್ವಯ ಮೂರು ವರ್ಷಗಳಲ್ಲಿ 47 ಲಕ್ಷ ಯುವಕರಿಗೆ ಸ್ಟೈಫಂಡ್ ಬೆಂಬವನ್ನು ಒದಗಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಸಚಿವರು ಬಜೆಟ್ ಭಾಷಣದಲ್ಲಿ, "ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ. ಇದರಿಂದ ಕೌಶಲ್ಯ, ಆರ್ಥಿಕತೆ, ವ್ಯಾಪಾರ ಅವಕಾಶಗಳ ಕುರಿತು ಮಾಹಿತಿ ನೀಡುವುದರಿಂದ ಯುವ ಜನತೆಗೆ ಉದ್ಯೋಗ ಸೃಷ್ಟಿಸಲು ಸಹಾಯಕವಾಗಲಿದೆ" ಎಂದರು.












Click it and Unblock the Notifications