Namma Metro: ಕನ್ನಡಿಗರ ಬೆಂಬಲಕ್ಕೆ ನಿಂತ ಡಿಕೆಶಿ, ಮೆಟ್ರೋ ನೇಮಕಾತಿ ಮಹತ್ವದ ಅಪ್‌ಡೇಟ್
ಬೆಂಗಳೂರು, ಮಾರ್ಚ್ 18: ಕನ್ನಡಿಗರ ಆಕ್ರೋಶ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸೂಚನೆಗೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಮಣಿದಿದೆ. 50 ಚಾಲಕ ಹುದ್ದೆಗಳ ನೇಮಕಾತಿಗೆ ಹೊರಡಿಸಿದ್ದ ಅಧಿಸೂಚನೆಯನ್ನು ವಾಪಸ್ ಪಡೆದಿದೆ. ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ಹಳದಿ ಮಾರ್ಗ (ಆರ್. ವಿ. ರಸ್ತೆ-ಬೊಮ್ಮಸಂದ್ರ)ದಲ್ಲಿ ಮೆಟ್ರೋ ರೈಲುಗಳ ಸಂಚಾರ ಆರಂಭಿಸಲು 50 ಚಾಲಕ ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟಿಸಿತ್ತು.
ಬಿಎಂಆರ್‌ಸಿಎಲ್ ಚಾಲಕ ಹುದ್ದೆ (ಲೋಕೋಪೈಲೆಟ್) ನೇಮಕಾತಿ ಅಧಿಸೂಚನೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ವಿವಿಧ ಕನ್ನಡ ಪರ ಸಂಘಟನೆಗಳು, ಕನ್ನಡ ಹೋರಾಟಗಾರರು ಈ ಅಧಿಸೂಚನೆ ವಿರುದ್ಧ ಧ್ವನಿ ಎತ್ತಿದ್ದರು. ಅಧಿಸೂಚನೆ ಕೆಲವು ನಿಯಮ ಚಾಲಕ ಹುದ್ದೆಗೆ ಕನ್ನಡಿಗರು ಅರ್ಜಿ ಹಾಕದಂತೆ ತಡೆದಿತ್ತು.

ಕರ್ನಾಟಕದಲ್ಲಿ ಕನ್ನಡಿರನ್ನು ಬಿಟ್ಟು ಬೇರೆ ಭಾಷೆಯವರಿಗೆ ಉದ್ಯೋಗ ನೀಡಲು ಬಿಎಂಆರ್‌ಸಿಎಲ್ ಮುಂದಾಗಿದೆ ಎಂಬುದು ಆಕ್ರೋಶಕ್ಕೆ ಕಾರಣವಾಗಿತ್ತು. ಆದ್ದರಿಂದ ಅಧಿಸೂಚನೆ ವಾಪಸ್ ಪಡೆಯಬೇಕು ಎಂದು ಬಿಎಂಆರ್‌ಸಿಎಲ್ ಮೇಲೆ ಒತ್ತಡವನ್ನು ಹಾಕಲಾಗಿತ್ತು.
ಡಿ. ಕೆ. ಶಿವಕುಮಾರ್ ಸೂಚನೆ: ನಮ್ಮ ಮೆಟ್ರೋ 50 ಚಾಲಕ ಹುದ್ದೆಗಳ ನೇಮಕಾತಿ ವಿಚಾರದಲ್ಲಿ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಕನ್ನಡಿಗರ ಪರವಾಗಿ ನಿಂತಿದ್ದಾರೆ. ಅವರು ಬಿಎಂಆರ್‌ಸಿಎಲ್‌ಗೆ ಸೂಚನೆ ನೀಡಿದ ಹಿನ್ನಲೆಯಲ್ಲಿ ನೇಮಕಾತಿ ಅಧಿಸೂಚನೆಯನ್ನು ವಾಪಸ್ ಪಡೆಯಲಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಡಿ. ಕೆ. ಶಿವಕುಮಾರ್, 'ಮೆಟ್ರೋ ಸಾರಥಿ ನೇಮಕದಲ್ಲಿ ಕನ್ನಡಿಗರಿಗೇ ಆದ್ಯತೆ. ಬೆಂಗಳೂರು ಮೆಟ್ರೋ ಚಾಲಕರ ಹುದ್ದೆಗೆ 'ಅನುಭವ ಅಗತ್ಯʼಎಂದು ಹೊರಡಿಸಲಾಗಿದ್ದ ಬಿಎಂಆರ್‌ಸಿಎಲ್ ಅಧಿಸೂಚನೆಯನ್ನು ಹಿಂಪಡೆಯಲು ಹಾಗೂ ಕರ್ನಾಟಕದಲ್ಲಿ ಹುಟ್ಟಿ, ಕನ್ನಡ ಬಲ್ಲ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಅರ್ಹತೆಗಳನ್ನು ತಿದ್ದುಪಡಿ ಮಾಡಲು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ್ದೆ' ಎಂದು ಹೇಳಿದ್ದಾರೆ.
'ಅದರಂತೆ ಅವರು ಈ ನೇಮಕಾತಿ ಅಧಿಸೂಚನೆಯನ್ನು ಹಿಂಪಡೆದಿದ್ದಾರೆ. ಪರಿಷ್ಕೃತ ಅಧಿಸೂಚನೆಯನ್ನು ಶೀಘ್ರವೇ ಪ್ರಕಟಿಸಲಾಗುತ್ತದೆ. ನಾಡು-ನುಡಿ, ಜಲದ ವಿಷಯದಲ್ಲಿ ಯಾವುದೇ ರಾಜಿ ಇಲ್ಲ' ಎಂದು ಡಿ. ಕೆ. ಶಿವಕುಮಾರ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಬಿಎಂಆರ್‌ಸಿಎಲ್ ನೇಮಕಾತಿ ಅಧಿಸೂಚನೆ ವಾಪಸ್ ಪಡೆದಿರುವ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದೆ. ನೇಮಕಾತಿ ಅಧಿಸೂಚನೆ ಬಿಎಂಆರ್‌ಸಿಎಲ್/ಹೆಚ್‌ಆರ್/0004/ಒ&ಎಂ/2025 ದಿನಾಂಕ 12/03/2025 50 ಟ್ರೈನ್ ಆಪರೇಟರ್ (ಟಿಒ) ಬಿಎಂಆರ್‌ಸಿಎಲ್ ಗುತ್ತಿಗೆ ಆಧಾರದ ನೇಮಕಾತಿ ಅಧಿಸೂಚನೆ ವಾಪಸ್ ಪಡೆಯಲಾಗಿದೆ ಎಂದು ಹೇಳಿದೆ.
ನೇಮಕಾತಿ ಅಧಿಸೂಚನೆಯಲ್ಲಿ ಬಿಎಂಆರ್‌ಸಿಎಲ್ ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳು ಇಂಜಿನಿಯರಿಂಗ್ ಟ್ರೇಡ್‌ನಲ್ಲಿ ಡಿಪ್ಲೊಮಾ ಪದವಿ ಪಡೆದಿರಬೇಕು. ಯಾವುದೇ ಮೆಟ್ರೋದಲ್ಲಿ ಚಾಲಕರಾಗಿ ಮೂರು ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು ಎಂದು ಉಲ್ಲೇಖ ಮಾಡಿತ್ತು.
ಕರ್ನಾಟಕದಲ್ಲಿ ಬೆಂಗಳೂರು ಬಿಟ್ಟು ಬೇರೆ ಯಾವ ನಗರದಲ್ಲಿಯೂ ಮೆಟ್ರೋ ಸೇವೆ ಇಲ್ಲ. ಬಿಎಂಆರ್‌ಸಿಎಲ್ ನಿಯಮದ ಅನ್ವಯ ಚೆನ್ನೈ, ಹೈದರಾಬಾದ್, ದೆಹಲಿ ಮೆಟ್ರೋದಲ್ಲಿ ಕೆಲಸ ಮಾಡಿದ ಚಾಲಕರು ಅರ್ಜಿ ಹಾಕಬೇಕಿತ್ತು. ಆದ್ದರಿಂದ ಕನ್ನಡಿಗರಿಗೆ ಉದ್ಯೋಗ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತವಾಗಿತ್ತು.
ಈ ಹಿಂದೆ ಬಿಎಂಆರ್‌ಸಿಎಲ್ ಚಾಲಕ ಹುದ್ದೆಗೆ ನೇಮಕಾತಿ ಮಾಡುವಾಗ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು ಅವರಿಗೆ ತರಬೇತಿ ನೀಡುತ್ತಿತ್ತು. ಆದರೆ ಈ ಬಾರಿ ಆ ನಿಯಮವನ್ನು ಬದಲಾವಣೆ ಮಾಡಿ ಅನುಭವ ಇರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ಅಧಿಸೂಚನೆಯಲ್ಲಿ ಹೇಳಿತ್ತು. ಆದ್ದರಿಂದ ಕನ್ನಡಿಗರು ಈ ಹುದ್ದೆಗೆ ಅರ್ಜಿ ಸಲ್ಲಿಸುವಂತಿರಲಿಲ್ಲ.
ಬಿಎಂಆರ್‌ಸಿಎಲ್‌ನ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಇತರ ಭಾಷಿಕರು ಇದ್ದಾರೆ. ಅವರು ತಮ್ಮ ರಾಜ್ಯದ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ನಿಯಮ ರೂಪಿಸಿದ್ದಾರೆ. ಕನ್ನಡಿಗರನ್ನು ಕಡೆಗಣಿಸಿದ್ದಾರೆ. ಬೇರೆ ರಾಜ್ಯದ ಅಭ್ಯರ್ಥಿಗಳಿಗೆ ಅನುಕೂಲವಾಗುವ ರೀತಿ ನಿಯಮನ್ನು ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಲಾಗಿತ್ತು.
ಕನ್ನಡಿಗರ ಆಕ್ರೋಶ: ಅನುಭವ ಇರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಕೆ ಮಾಡಬೇಕು ಎಂಬ ನಿಯಮ ಕನ್ನಡಿಗರು ಚಾಲಕ ಹುದ್ದೆಗೆ ಅರ್ಜಿ ಸಲ್ಲಿಸುವುದನ್ನು ತಡೆದಿತ್ತು. ಆದ್ದರಿಂದ ಕನ್ನಡಿಗರು ಈ ನಿಯಮದ ವಿರುದ್ಧ ಆಕ್ರೋ ವ್ಯಕ್ತಪಡಿಸಿದ್ದರು. ವಿವಿಧ ಸಾಹಿತಿಗಳು, ಹೋರಾಟಗಾರರು ಬಿಎಂಆರ್‌ಸಿಎಲ್ ಬೇರೆ ರಾಜ್ಯದ ಯುವಕ/ ಯುವತಿಯರಿಗೆ ಉದ್ಯೋಗ ನೀಡಲು ಹೊರಟಿದೆ ಎಂದು ಆರೋಪ ಮಾಡಿದ್ದರು.
ಬಿಎಂಆರ್‌ಸಿಎನ್ ನೇಮಕಾತಿ ನಿಯಮವನ್ನು ಮೊದಲು ಬದಲಾವಣೆ ಮಾಡಬೇಕು. ಈಗ ಹೊರಡಿಸಿರುವ ಅಧಿಸೂಚನೆಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಲಾಗಿತ್ತು. ಅಂತಿಮವಾಗಿ ಬಿಎಂಆರ್‌ಸಿಎಲ್ ಆಕ್ರೋಶಕ್ಕೆ ಮಣಿದಿದ್ದು, 5 ವರ್ಷಗಳ ಗುತ್ತಿಗೆ ಆಧಾರದ ಮೇಲೆ ಚಾಲಕ ಹುದ್ದೆಗೆ ಹೊರಡಿಸಿದ್ದ ನೇಮಕಾತಿ ಅಧಿಸೂಚನೆಯನ್ನು ವಾಪಸ್ ಪಡೆದಿದೆ.
ನೇಮಕಾತಿ ಅಧಿಸೂಚನೆ ಕುರಿತು ಡಾ. ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷರು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್ ಅವರಿಗೆ ಪತ್ರವನ್ನು ಬರೆದಿದ್ದರು.
ನಮ್ಮ ಮೆಟ್ರೋ ಸಂಸ್ಥೆಯಲ್ಲಿ ಅನ್ಯ ಭಾಷಿಕರಿಗೆ ಉದ್ಯೋಗಾವಕಾಶವನ್ನು ಕಲ್ಪಸಲು ಅನುಕೂಲ ಮಾಡಿಕೊಡುವ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿರುವ ವಿಷಯವು ಕನ್ನಡಿಗರಿಗೆ ವೇದನೆಯನ್ನು ತರುವ ಸಂಗತಿಯಾಗಿದೆ. ಇವು ಕೇವಲ ತಾತ್ಕಲಿಕ ಹುದ್ದೆಗಳೆಂದು ನಿಮ್ಮ ಸಂಸ್ಥೆಯು ನೀಡಿರುವ ಸಮಜಾಯಿಷಿ ಕನ್ನಡಿಗರ ವೇದನೆಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಹೇಳಿದ್ದರು.
ಕರ್ನಾಟಕದ ಸಂಸ್ಥೆಯೊಂದು ಅನ್ಯ ಭಾಷಿಕರಿಗೆ ನೀಡುವ ಈ ರೀತಿಯ ಆಹ್ವಾನ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವ ಕನ್ನಡಿಗರ ಆತ್ಮಸ್ಥೆರ್ಯವನ್ನು ಕಸಿಯುವುದಷ್ಟೇ ಅಲ್ಲ, ಇದು ಸಾಂವಿಧಾನಿಕ ಆಶಯಗಳ ಸಂಪೂರ್ಣ ಉಲ್ಲಂಘನೆಯಾಗುತ್ತದೆ. ನೇಮಕಾತಿ ನಿಯಮಗಳಲ್ಲಿ ಕನ್ನಡಿಗರಿಗೆ ಪ್ರಾಧಾನ್ಯತೆಯನ್ನು ಉಲ್ಲೇಖಿಸಿದಲ್ಲಿ ಈ ರೀತಿಯ ಸಮಸ್ಯೆಗಳಿಗೆ ಪರಿಹಾರ ದೊರಕುತ್ತಿತ್ತು ಎಂದು ಪತ್ರದಲ್ಲಿ ತಿಳಿಸಿದ್ದರು.
ತಾಂತ್ರಿಕ ಹುದ್ದೆಯ ನೆಪವೊಡ್ಡಿ ಕನ್ನಡಿಗರನ್ನು ನೇಮಕಾತಿ ಪ್ರಕ್ರಿಯೆಯಿಂದ ದೂರವಿರಿಸುವುದು ಯಾವುದೇ ರೀತಿಯಲ್ಲೂ ಒಪ್ಪಲು ಸಾಧ್ಯವಿಲ್ಲದ ಅಂಶ. ಅಂತೆಯೇ ನೇಮಕಗೊಂಡ ಕನ್ನಡೇತರರಿಗೆ ಆದ್ಯತೆ ಮೇರೆಗೆ ಕನ್ನಡವನ್ನು ಕಲಿಸಬೇಕಾದುದು ಸಹ ನಮ್ಮ ಮೆಟ್ರೋ ಸಂಸ್ಥೆಯ ಪ್ರಾಥಮಿಕ ಜವಾಬ್ದಾರಿಯಾಗಿರುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.
ನಮ್ಮ ಮೆಟ್ರೋ ಸಂಸ್ಥೆ ಕೂಡಲೇ ಕನ್ನಡೇತರರಿಗೆ ನೇಮಕಾತಿ ಕಲ್ಪಿಸುವ ಪ್ರಕ್ರಿಯೆಯನ್ನು ತಡೆಹಿಡಿಯಬೇಕು. ಹಿಂದಿನ ನೇಮಕಾತಿ ಅಧಿಸೂಚನೆಗಳಲ್ಲಿ ನೇಮಕಗೊಂಡ ಕನ್ನಡೇತರರಿಗೆ ಕನ್ನಡ ಕಲಿಸುವ ಕಾರ್ಯಕ್ಕೆ ಮುಂದಾಗಬೇಕು. ಕನ್ನಡ ಕಲಿಯದ ಕನ್ನಡೇತರರನ್ನು ಸೇವೆಯಿಂದ ಬಿಡುಗಡೆ ಮಾಡಬೇಕು ಮತ್ತು ತಾಂತ್ರಿಕ ಹಾಗೂ ತಾಂತ್ರಿಕೇತರ ಹುದ್ದೆಗಳಿಗೆ ಸಂಪೂರ್ಣವಾಗಿ ಕನ್ನಡಿಗರನ್ನೇ ನೇಮಕ ಮಾಡಬೇಕೆಂದು ಈ ಮೂಲಕ ನಿಮಗೆ ತಿಳಿಸಬಯಸುತ್ತೇನೆ ಎಂದು ಹೇಳಿದ್ದರು.
ಮೆಟ್ರೋ ಸಂಸ್ಥೆಯಲ್ಲಿ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನೆಯ ಕುರಿತಂತೆ ಇಷ್ಟರಲ್ಲಿಯೇ ಭೇಟಿ ನೀಡ ಬಯಸುತ್ತೇನೆ ಎಂಬ ಅಂಶವನ್ನು ನಿಮ್ಮ ಗಮನಕ್ಕೆ ತಂದಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದರು.












Click it and Unblock the Notifications