ಬಳ್ಳಾರಿ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಕೆಲಸ ಖಾಲಿ ಇದೆ
ಬಳ್ಳಾರಿ, ಡಿಸೆಂಬರ್ 12; ಬಳ್ಳಾರಿ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಖಾಲಿಯಿರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು, ನಗರ ಪುನರ್ವಸತಿ ಕಾರ್ಯಕರ್ತ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಮಾಡಲು ಡಿಸೆಂಬರ್ 27 ಕೊನೆಯ ದಿನವಾಗಿದೆ.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಗೋವಿಂದಪ್ಪ ಈ ಕುರಿತು ಮಾಹಿತಿ ನೀಡಿದ್ದಾರೆ. ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 3 ನಗರ ಪುನರ್ವಸತಿ ಕಾರ್ಯಕರ್ತರ ಹುದ್ದೆಗಳು ಖಾಲಿ ಇವೆ. ಆಯಾ ತಾಲ್ಲೂಕಿನಲ್ಲಿ ಖಾಲಿ ಇರುವ ಹುದ್ದೆಗಳನ್ನು ತಾಲ್ಲೂಕು ಪಂಚಾಯತಿಯ ಕಾರ್ಯ ನಿರ್ವಹಣಾ ಅಧಿಕಾರಿಗಳು ಇವರ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಮುಖಾಂತರ ನೇಮಕಗೊಳಿಸಬೇಕಾಗಿರುತ್ತದೆ.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ನಿಡಗುರ್ತಿ ಗ್ರಾಪಂ, ಅಗ್ರಹಾರ ಗ್ರಾಪಂ, ಯರಯ್ಯನಹಳ್ಳಿ ಗ್ರಾಪಂ, ಬನ್ನಿಹಟ್ಟಿ ಗ್ರಾಪಂ, ತಾಳೂರು ಗ್ರಾಪಂ, ರಾಜಪುರ ಗ್ರಾಪಂ, ಹಿರಿಕೆರೆಯ್ಯ ಹಳ್ಳಿ ಗ್ರಾಪಂ ಮತ್ತು ಬಳ್ಳಾರಿ ತಾಲ್ಲೂಕಿನ ಅಮರಾಪುರ ಗ್ರಾಪಂ, ಚಾನಾಳು ಗ್ರಾಪಂ ಮತ್ತು ಸಿರುಗುಪ್ಪ ತಾಲ್ಲೂಕಿನ ಬೈರಾಪುರ ಗ್ರಾಪಂ ಸೇರಿದಂತೆ ಬಳ್ಳಾರಿ ಜಿಲ್ಲೆಯ ಒಟ್ಟು 10 ಗ್ರಾಮ ಪಂಚಾಯಿತಿಯಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗಳು ಖಾಲಿ ಇವೆ ಎಂದು ಮಾಹಿತಿ ನೀಡಲಾಗಿದೆ.

ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 3 ನಗರ ಪುನರ್ವಸತಿ ಕಾರ್ಯಕರ್ತರ ಹುದ್ದೆಗಳು ಖಾಲಿಯಿದ್ದು, ಮಹಾ ನಗರ ಪಾಲಿಕೆ ಆಯುಕ್ತರ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಮುಖಾಂತರ ನಿಯಮಾನುಸಾರ ಭರ್ತಿ ಮಾಡಲಾಗುತ್ತದೆ.
ಸದರಿ ಹುದ್ದೆಗಳು ಗೌರವ ಧನ ಆಧಾರಿತ ತಾತ್ಕಾಲಿಕ ಹುದ್ದೆಗಳಾಗಿರುತ್ತವೆ. ಹುದ್ದೆಗಳಿಗೆ ಮಾಸಿಕ ಗೌರವಧನ ರೂ. 9 ಸಾವಿರ ನಿಗದಿ ಮಾಡಲಾಗಿದೆ. ಎಸ್ಎಸ್‌ಎಲ್‌ಸಿ ಉತ್ತೀರ್ಣರಾಗಿರುವ ವಿಕಲಚೇತನರು (ಕರ್ತವ್ಯ ನಿರ್ವಹಿಸಲು ಸಮರ್ಥರಿರುವವರು) ಅರ್ಜಿ ಸಲ್ಲಿಸಬಹುದು.
ಅರ್ಹತೆಗಳು: ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಸಲ್ಲಿಸುವವರು ಸ್ಥಳೀಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು. ಅಭ್ಯರ್ಥಿಗಳಿಗೆ ವಯೋಮಿತಿ 18 ರಿಂದ 45 ವರ್ಷಗಳು. ಎಸ್‌ಎಸ್ಎಲ್‌ಸಿ ಉತ್ತೀರ್ಣರಾಗಿರಬೇಕು. ಒಂದು ವೇಳೆ ಉತ್ತೀರ್ಣರಾದ ಅಭ್ಯರ್ಥಿಗಳು ದೊರೆಯದಿದ್ದಲ್ಲಿ ಅನುತ್ತಿರ್ಣರಾದ ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳನ್ನು ಪರಿಗಣಿಸಲಾಗುತ್ತದೆ.

ಭಾಗಶಃ ಅಂಧರು, ಭಾಗಶಃ ಶ್ರವಣ ದೋಷವುಳ್ಳವರು ಹಾಗೂ ದೈಹಿಕ ಅಂಗವಿಕಲರಿಗೆ ಅವಕಾಶ ಕಲ್ಪಿಸುವುದು. ಮೂರು ರೀತಿಯ ಅಂಗವಿಕಲರಿಗೆ ಸಮಾನವಾಗಿ ಆಯ್ಕೆ ಮಾಡಬೇಕು ಒಂದು ವರ್ಗದ ಅಂಗ ವಿಕಲರಿಗೆ ಆಯ್ಕೆಗೆ ಲಭ್ಯವಿಲ್ಲದಿದ್ದಲ್ಲಿ ಇನ್ನೊಂದು ವರ್ಗದಲ್ಲಿರುವ ಅಂಗವಿಕಲ ಅಭ್ಯರ್ಥಿ ಆಯ್ಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಮಹಿಳೆಯರಿಗೆ ಮೊದಲ ಆದ್ಯತೆ ನೀಡಬೇಕು ಅಂಗವಿಕಲರಿಗೆ ಶೇ 40ಕ್ಕಿಂತ ಮೇಲ್ಪಟ್ಟಿರಬೇಕು. ಅಂಗವಿಕಲರ ಬಗ್ಗೆ ವೈದ್ಯಕೀಯ ಮಂಡಳಿ ಪ್ರಮಾಣ ಪತ್ರ/ ಗುರುತಿನ ಚೀಟಿ ಹೊಂದಿರಬೇಕು. ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಸಂಚರಿಸಿ ಮಾಹಿತಿ/ ಸೌಲಭ್ಯ ಕಲ್ಪಿಸಲು ಸಮರ್ಥರಾಗಿರಬೇಕು. ಗೌರವಧನ ಅವಧಿ ಮುಂದುವರಿಸುವ ಬಗ್ಗೆ ಒಂದು ವರ್ಷದ ನಂತರ ತೀರ್ಮಾನ ಕೈಗೊಳ್ಳಬೇಕು.
ಹುದ್ದೆಯು ಗೌರವಧನದ ಆಧಾರದ ಮೇಲೆ ಇರುವುದರಿಂದ ಇವರನ್ನು ಯಾವಾಗ ಬೇಕಾದರು ಕೆಲಸದಿಂದ ತೆಗೆದು ಹಾಕ ಬಹುದಾಗಿ/ ಬಿಡುಗಡೆ ಮಾಡಬಹುದಾಗಿದೆ. ಗೌರವಧನದ ಆಧಾರದ ಮೇಲೆ ಕೆಲಸ ನಿರ್ವಹಿಸುವುದರಿಂದ ಖಾಯಂಗೊಳಿಸುವಂತೆ ಕೋರಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ನಗರ ಪುನರ್ವಸತಿ ಕಾರ್ಯಕರ್ತ ಅರ್ಹತೆಗಳು
* ಸ್ಥಳೀಯ ಪುನರ್ವಸತಿ ಕಾರ್ಯಕರ್ತರು ಪಟ್ಟಣ ಪಂಚಾಯತಿ/ ಪುರಸಭೆ/ ನಗರಸಭೆ/ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು. ಸ್ಥಳಿಯರಾಗಿರಬೇಕು)
* ವಯೋಮಿತಿ 18 ರಿಂದ 45 ವರ್ಷದ ಆರೋಗ್ಯವಂತರಾಗಿರಬೇಕು.
* ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು. ಉತ್ತೀರ್ಣರಾದ ಅಭ್ಯರ್ಥಿಗಳು ದೊರೆಯದಿದ್ದಲ್ಲಿ ಅನುತ್ತಿರ್ಣರಾದ ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳನ್ನು ಪರಿಗಣಿಸಲಾಗುತ್ತದೆ.
* ಅಂಗವಿಕಲರಾಗಿರಬೇಕು, ಮಹಿಳೆಯರಿಗೆ ಮೊದಲ ಆದ್ಯತೆ
ಆಸಕ್ತ ಮತ್ತು ಅರ್ಹರು ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಲು ದೂರವಾಣಿ ಸಂಖ್ಯೆಗಳು 8880875620, 9632052270, 9743509698, 08392267886ಗೆ.












Click it and Unblock the Notifications