ಬಳ್ಳಾರಿಯಲ್ಲಿ ಕೆಲಸ ಖಾಲಿ ಇದೆ; ಮಾ.7ರೊಳಗೆ ಅರ್ಜಿ ಹಾಕಿ
ಬಳ್ಳಾರಿ, ಮಾರ್ಚ್ 03; ಬಳ್ಳಾರಿಯ ಸಹಾಯಕ ಸರ್ಕಾರಿ ಅಭಿಯೋಜಕರು 4ನೇ ಮತ್ತು 5ನೇ ಸಿ.ಜೆ. ಮತ್ತು ಜೆಂ.ಎಂ.ಎಫ್.ಸಿ ನ್ಯಾಯಾಲಯದ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರು-ವ-ಸಹಾಯಕ ಸರ್ಕಾರಿ ವಕೀಲರ ಹುದ್ದೆಗಳನ್ನು ತಾತ್ಕಾಲಿಕವಾಗಿ ನೇಮಕ ಮಾಡಲಾಗುತ್ತಿದೆ.
ಗುತ್ತಿಗೆ ಆಧಾರದ ಮೇಲೆ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಜಿಲ್ಲಾಧಿಕಾರಿಗಳಾದ ಪವನ್ ಕುಮಾರ್ ಮಾಲಪಾಟಿ ಈ ಕುರಿತು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 7.
ಬಳ್ಳಾರಿ ಜಿಲ್ಲೆಗೆ ಸಂಬಂಧಿಸಿದಂತೆ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸಲು ಅರ್ಜಿಗಳನ್ನು ಅಹ್ವಾನಿಸಲಾಗಿದೆ. ಈ ಜಿಲ್ಲೆಯ ಯಾವುದೇ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಲು ನಿಗದಿಪಡಿಸಲಾಗಿರುವ ಕೊನೆಯ ದಿನಾಂಕಕ್ಕೆ ಮೂರು ವರ್ಷಗಳಿಗೆ ಕಡಿಮೆ ಇಲ್ಲದಂತೆ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.

ಸಹಾಯಕ ಸರ್ಕಾರಿ ಅಭಿಯೋಜಕರ (ನೇಮಕಾತಿ) ನಿಯಮಗಳು 2002 ನಿಗದಿಪಡಿಸಲಾಗಿರುವಂತಹ ಕನಿಷ್ಠ ಮತ್ತು ಗರಿಷ್ಠ ವಯೋಮಿತಿಯು ಗುತ್ತಿಗೆ ಆಧಾರದಲ್ಲಿ ನೇಮಕಗೊಳ್ಳಲು ಇಚ್ಚಿಸುವ ಅಭ್ಯರ್ಥಿಗಳಿಗೆ ಕೂಡಾ ಅನ್ವಯಿಸುತ್ತದೆ. ಅಭ್ಯರ್ಥಿಗಳು ತಾವು ವಕೀಲ ವೃತ್ತಿ ನಡೆಸುತ್ತಿರುವ ಬಗ್ಗೆ ಅಯಾ ನ್ಯಾಯಾಲಯದ ಪೀಠಾಧಿಕಾರಿಗಳಿಂದ ಪಡೆದ ಸರ್ಟಿಫಿಕೇಟ್ ಅಥವಾ ಪ್ರಮಾಣಪತ್ರಗಳನ್ನು ತಮ್ಮ ಅರ್ಜಿಯೊಡನೆ ಸಲ್ಲಿಬೇಕು, ಇದು ಕಡ್ಡಾಯವಾಗಿರುತ್ತದೆ.
ಅಯ್ಕೆಗೊಂಡ ಅಭ್ಯರ್ಥಿಗಳು ತಾವು ಪ್ರಸ್ತುತ ವಕೀಲ ವೃತ್ತಿಯನ್ನು ನಡೆಸುತ್ತಿರುವ ಸ್ಥಳವನ್ನು ಹೊರತುಪಡಿಸಿ, ತಮ್ಮ ಜಿಲ್ಲೆಯಲ್ಲಿನ ಬೇರೆ ನ್ಯಾಯಾಲಯಗಳಲ್ಲಿ ಅಥವಾ ನೆರೆಯ ಜಿಲ್ಲೆಯ ನ್ಯಾಯಾಲಯಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸಲು ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಸಲ್ಲಿಸತಕ್ಕದ್ದು.
ಗುತ್ತಿಗೆ ಆಧಾರದ ಮೇಲೆ ಆಯ್ಕೆಗೊಂಡ ಅಭ್ಯರ್ಥಿಗಳು ಕಾಲ ಕಾಲಕ್ಕೆ ಸರ್ಕಾರ/ ಅಭಿಯೋಗ ನಿರ್ದೇಶಕರು ನೀಡುವ ನಿರ್ದೇಶನ/ ಸೂಚನೆಗಳನ್ನು ಪಾಲಿಸತಕ್ಕದ್ದು. ಅರ್ಜಿ ಸಲ್ಲಿಸುವ ವಕೀಲರು ತಮ್ಮ ವಿದ್ಯಾರ್ಹತೆಗೆ ಸಂಬಂಧಿಸಿದ ಪದವಿ ಹಾಗೂ ಕಾನೂನು ಪದವಿಗೆ ಸಂಬಂಧಪಟ್ಟ ದಾಖಲೆಗಳನ್ನು ದೃಢೀಕರಿಸಿ ಸಲ್ಲಿಸತಕ್ಕದ್ದು.
ಈ ಸೇವೆಯು ಸಂಪೂರ್ಣವಾಗಿ ತಾತ್ಕಾಲಿಕವಾಗಿದ್ದು, ಸದರಿ ಸೇವೆಯನ್ನು ಯಾವುದೇ ಸಂದರ್ಭಗಳಲ್ಲೂ ಖಾಯಂಗೊಳಿಸಲು ಅವಕಾಶವಿರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ ಜಿಲ್ಲಾಧಿಕಾರಿಗಳ ಕಚೇರಿ ಸಂಪರ್ಕಿಸಬಹುದು ಅಥವ 08392-277100 ಸಂಖ್ಯೆಗೆ ಕರೆ ಮಾಡಬಹುದಾಗಿದೆ.
ಅರೆ ಕಾನೂನು ಸ್ವಯಂ ಸೇವಕ ಹುದ್ದೆ; ಧಾರವಾಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಹುಬ್ಬಳ್ಳಿ, ಕುಂದಗೋಳ, ನವಲಗುಂದ ಮತ್ತು ಕಲಘಟಗಿ ತಾಲೂಕು ಕಾನೂನು ಸೇವಾ ಸಮಿತಿಗಳಲ್ಲಿ ಅರೆ ಕಾನೂನು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ.
ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುಷ್ಪಲತ ಸಿ.ಎಂ. ಈ ಕುರಿತು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ, ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು, ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು, ಪ್ರಾಧ್ಯಾಪಕರು, ಕಾನೂನು ಮಹಾವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ವಿವಿಧ ಸರ್ಕಾರಿ ಕಛೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು, ನಿವೃತ್ತ ಸರ್ಕಾರಿ ನೌಕರರು, ವಿವಿಧ ಸಂಘಟನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮಾಜಿಕ ಸೇವಾ ಮನೋಭಾವ ಹೊಂದಿರುವ ಪುರುಷ ಮತ್ತು ಮಹಿಳೆಯರು, ಮಂಗಳಮುಖಿಯರು, ಸನ್ನಡತೆ ಹೊಂದಿದ ಕಾರಾಗೃಹ ಬಂದಿಗಳು ಮತ್ತು ಸ್ವ-ಸಹಾಯ ಸಂಘಗಳ ಸದಸ್ಯರು ಅರ್ಜಿ ಸಲ್ಲಿಸಬಹುದಾಗಿದೆ.
ಆಸಕ್ತ ಅಭ್ಯರ್ಥಿಗಳು ಹತ್ತಿರವಿರುವ ನ್ಯಾಯಾಲಯಗಳ ಆವರಣದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕ ಕಾನೂನು ಸೇವಾ ಸಮಿತಿಗಳಲ್ಲಿ ನಿಗದಿತ ಅರ್ಜಿ ನಮೂನೆಯನ್ನು ಪಡೆದುಕೊಂಡು ಭರ್ತಿಮಾಡಿ, ಮಾರ್ಚ್ 15 ರೊಳಗಾಗಿ ಸಲ್ಲಿಸಬೇಕು.












Click it and Unblock the Notifications