ಬಳ್ಳಾರಿ; ಅತಿಥಿ ಶಿಕ್ಷಕರ ನೇಮಕ, ಮೇ 14ರ ತನಕ ಅರ್ಜಿ ಹಾಕಿ
ಬಳ್ಳಾರಿ, ಏಪ್ರಿಲ್ 26; ಬಳ್ಳಾರಿಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಖಾಲಿ ಇರುವ ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹರು ಅರ್ಜಿಗಳನ್ನು ಸಲ್ಲಿಕೆ ಮಾಡಲು ಮೇ 14 ಕೊನೆಯ ದಿನವಾಗಿರುತ್ತದೆ ಎಂದು ನೇಮಕಾತಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಲ್ಲಿಪುರದ ಬಿಐಟಿಎಂ ಕಾಲೇಜು ಹತ್ತಿರದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ (ಸಿಬಿಎಸ್‍ಸಿ)ಯಲ್ಲಿ ಖಾಲಿ ಇರುವ ಗಣಿತ, ವಿಜ್ಞಾನ ಮತ್ತು ಇಂಗ್ಲೀಷ್ ವಿಷಯದ ಅತಿಥಿ ಶಿಕ್ಷಕರ ನೇಮಕಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳು ಅರ್ಜಿಯನ್ನು ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ (ಸಿಬಿಎಸ್‍ಸಿ)ಯ ಪ್ರಾಂಶುಪಾಲರ ಕಚೇರಿಗೆ ಮೇ 14ರ ತನಕ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಅಲ್ಲಿಪುರದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.
ಅಭ್ಯರ್ಥಿಗಳು ಕರೆ ಮಾಡಲು ಮೊಬೈಲ್ ಸಂಖ್ಯೆ 7353346069. ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಹತ್ತಿರದ ಮೌಲಾನ ಅಜಾದ್ ಭವನದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳ ಕಚೇರಿಯನ್ನು ಸಹ ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 08392-200125.
ಮೌಲಾನಾ ಆಜಾದ್ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ; ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಕೊಪ್ಫಳ ಜಿಲ್ಲೆಯಲ್ಲಿ ನಿರ್ವಹಣೆಯಾಗುತ್ತಿರುವ ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ 2023-24ನೇ ಸಾಲಿನ 6ನೇ ತರಗತಿಯ ಉಚಿತ ಪ್ರವೇಶಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಪ್ರತಿ ಶಾಲೆಯಲ್ಲಿ ದಾಖಲಾತಿ 60 ಸೀಟುಗಳು ಮಾತ್ರ ಇದ್ದು, ಪೋಷಕರು, ವಿದ್ಯಾರ್ಥಿಗಳು ನೇರವಾಗಿ ಎಲ್ಲಾ ದಾಖಲೆಗಳೊಂದಿಗೆ ಶಾಲೆಯ ಮುಖ್ಯೋಪಾಧ್ಯಾಯರನ್ನು ಸಂಪರ್ಕಿಸಿ ಅರ್ಜಿಯನ್ನು ಪಡೆದು ಮೇ 15ರೊಳಗಾಗಿ ಸಲ್ಲಿಸಬೇಕು ಎಂದು ಪ್ರಕಟಣೆ ಹೇಳಿದೆ.
ಅರ್ಜಿ ಸಲ್ಲಿಸುವವರು 5ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಮೌಲಾನಾ ಆಜಾದ್ ಮಾದರಿ ಶಾಲೆಯಲ್ಲಿ ಶೇ 75ರಷ್ಟು ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಮತ್ತು ಶೇ 25ರಷ್ಟು ಇತರೆ ವರ್ಗದವರಿಗೆ ಸೀಟು ಮೀಸಲಿಡಲಾಗಿದೆ. ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಮತ್ತು ಹಿಂದುಳಿದ ವರ್ಗಗಳಾದ 2ಎ, 2ಬಿ, 3ಎ, 3ಬಿ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ವರಮಾನವು 1 ಲಕ್ಷ ರೂ.ಗಳಿಗೆ ಮೀರಿರಬಾರದು.
ಪ್ರವರ್ಗ-1 ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ವರಮಾನವು ರೂ. 2.50 ಲಕ್ಷಕ್ಕೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ವರಮಾನವು 2.50 ಲಕ್ಷ ರೂ.ಗಳಿಗೆ ಮೀರಿರಬಾರದು. ಅಂಗವಿಕಲ ವಿದ್ಯಾರ್ಥಿಗಳು ಹಾಗೂ ಮಾಜಿ ಸೈನಿಕರಿಕಗೆ ಶೇ 04ರಷ್ಟು ಮತ್ತು ದುರ್ಬಲ ವರ್ಗ, ಸಫಾಯಿ ಕರ್ಮಚಾರಿ ವಿದ್ಯಾರ್ಥಿಗಳಿಗೆ ಶೇ 5ರಷ್ಟು ಸೀಟು ಕಾಯ್ದಿರಿಸಲಾಗಿದೆ.
ಭರ್ತಿ ಮಾಡಿದ ಅರ್ಜಿಯೊಂದಿಗೆ ಕಂದಾಯ ಇಲಾಖೆಯ ತಹಶೀಲ್ದಾರ್ ನೀಡಿದ ಜಾತಿ ಮತ್ತು ಆದಾಯ ದೃಢೀಕರಣ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಹಾಗೂ ವಿದ್ಯಾರ್ಥಿಯ ಪಾಸ್ ಪೋರ್ಟ್ ಅಳತೆಯ ಇತ್ತೀಚಿನ 4 ಭಾವಚಿತ್ರಗಳೊಂದಿಗೆ ನಿಗದಿ ಪಡಿಸಿದ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬೇಕು.
ಅಪೂರ್ಣವಾದ ಮತ್ತು ತಡವಾಗಿ ಬಂದ ಅರ್ಜಿ ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ತಾಲ್ಲೂಕಿನ ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಸಂಪರ್ಕಿಸಬಹುದಾಗಿದೆ.












Click it and Unblock the Notifications