ಕಲಬುರಗಿ; ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ
ಕಲಬುರಗಿ, ಸೆಪ್ಟೆಂಬರ್ 04; ಕಲಬುರಗಿ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿಯಿರುವ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಅರ್ಜಿಗಳನ್ನು ಸಲ್ಲಿಕೆ ಮಾಡಲು ಸೆಪ್ಟೆಂಬರ್ 9 ಕೊನೆಯ ದಿನ.
ಕಲಬುರಗಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪಾ ಮುಳೇಗಾಂವ ಈ ಕುರಿತು ಮಾಹಿತಿ ನೀಡಿದ್ದಾರೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದರು.
ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿಯಿರುವ ಉಪನ್ಯಾಸಕರು ನೇಮಕಗೊಂಡು ಕರ್ತವ್ಯಕ್ಕೆ ಹಾಜರಾಗುವವರೆಗೆ ಅತಿಥಿ ಉಪನ್ಯಾಸಕರನ್ನು ಆಯಾ ಹುದ್ದೆಗೆ ನಿಗದಿಪಡಿಸಿದ ಕನಿಷ್ಠ ವಿದ್ಯಾರ್ಹತೆಯನ್ನು ಪರಿಗಣಿಸಿ ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಲು ಅನುಮತಿ ಕೊಡಲಾಗಿದೆ.

ಅತಿಥಿ ಉಪನ್ಯಾಸಕರ ನೇಮಕಾತಿಯು ಸರ್ಕಾರದ ಆದೇಶದ ಷರತ್ತುಗಳಿಗೆ ಒಳಪಟ್ಟಿದೆ. ಆಸಕ್ತರು ಸಂಬಂಧಪಟ್ಟ ಕಾಲೇಜಿನ ಪ್ರಿನ್ಸಿಪಾಲರಿಗೆ 2022ರ ಸೆಪ್ಟೆಂಬರ್ 9ರೊಳಗಾಗಿ ಅರ್ಜಿ ಸಲ್ಲಿಸಬೇಕು.
ನಂತರ ಸಂಬಂಧಪಟ್ಟ ಕಾಲೇಜುಗಳ ಪ್ರಾಂಶುಪಾಲರು ಆಯ್ಕೆ ಮಾಡಿದ ಉಪನ್ಯಾಸಕರ ವಿಷಯವಾರು ಪಟ್ಟಿಯನ್ನು ಸಲ್ಲಿಕೆ ಮಾಡಲು ಸೆಪ್ಟೆಂಬರ್ 10 ಕೊನೆಯ ದಿನವಾಗಿದೆ.
ಕಲಬುರಗಿ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವಿಷಯವಾರು ಖಾಲಿಯಿರುವ ಉಪನ್ಯಾಸಕರ ವಿವರ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಮಿನಿ ವಿಧಾನ ಸೌಧದ ಆವರಣದಲ್ಲಿರುವ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು.
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ವಿಸ್ತರಣೆ; ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿಯಿರುವ ದರ್ಜೆ-3 ಮೇಲ್ವಿಚಾರಕೇತರ ವೃಂದದ ಕುಶಲಕರ್ಮಿ, ತಾಂತ್ರಿಕ ಸಹಾಯಕ, ಸಹಾಯಕ ಸಂಚಾರ ನಿರೀಕ್ಷಕ, ಕ. ರಾ. ಸಾ. ಪೇದೆ ಹಾಗೂ ಸಹಾಯಕ ಲೆಕ್ಕಿಗ ಹಿಂಬಾಕಿ (ಬ್ಯಾಕ್‍ಲಾಗ್) ಹುದ್ದೆಗಳ ನೇರ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 30ರ ತನಕ ವಿಸ್ತರಣೆ ಮಾಡಲಾಗಿದೆ ಎಂದು ಕಲಬುರಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
ಅಭ್ಯರ್ಥಿಗಳ ಅನುಕೂಲಕ್ಕಾಗಿ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ. ಈ ಹಿಂದೆ ಅರ್ಜಿ ಸಲ್ಲಿಕೆಗೆ ಸೆಪ್ಟೆಂಬರ್ 18 ಕೊನೆಯ ದಿನವಾಗಿತ್ತು.
ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಲು ವೆಬ್ ಸೈಟ್ ವಿಳಾಸ kkrtcjobs.karnataka.gov.in, kkrtc.in/jobs
ಸ್ವಯಂ ಉದ್ಯೋಗ ಸಾಲ ಯೋಜನೆ; ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ 2022-23ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ಕೆಳಕಂಡ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಲು ಅರ್ಹ ಅರಣ್ಯ ಆಧಾರಿತ ಆದಿವಾಸಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ/ ಅರೆ-ಅಲೆಮಾರಿ ಸೂಕ್ಷ್ಮ ಅತೀಸೂಕ್ಷ್ಮ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ನಿಗಮದ ಕಲಬುರಗಿ ಜಿಲ್ಲಾ ವ್ಯವಸ್ಥಾಪಕರು ಈ ಕುರಿತು ಮಾಹಿತಿ ನೀಡಿದ್ದಾರೆ. ಸ್ವಯಂ ಉದ್ಯೋಗ ಕಾರ್ಯಕ್ರಮಗಳಾದ ಸ್ವಯಂ ಉದ್ಯೋಗ- ನೇರಸಾಲ ಯೋಜನೆ, ಉದ್ಯಮಶೀಲತಾ ಅಭಿವೃದ್ಧಿ (2 ಲಕ್ಷ ರೂ.) ಹಾಗೂ ಉದ್ಯಮಶೀಲತಾ ಅಭಿವೃದ್ದಿ (3.50 ಲಕ್ಷ ರೂ.) ಹಾಗೂ ಪ್ರೇರಣಾ (ಮೈಕ್ರೋ ಕ್ರೇಡಿಟ್ ಫೈನಾನ್ಸ್) ಯೋಜನೆ (ನೊಂದಾಯಿತ ಮಹಿಳಾ ಸ್ವ-ಸಹಾಯ ಸಂಘದವರಿಗೆ) ಯೋಜನೆಗಳಡಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಹ ಫಲಾನುಭವಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು https://sevasindhuservices.karnataka.gov.in ವೆಬ್‍ಸೈಟ್‌ಗೆ ಭೇಟಿ ಕೊಡಿ, ಸೆಪ್ಟೆಂಬರ್ 15 ರೊಳಗಾಗಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಕಲಬುರಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿಯನ್ನು ಸಂಪರ್ಕಿಸಬಹುದು. ಕಚೇರಿ ದೂರವಾಣಿ ಸಂಖ್ಯೆ 08472-221331.












Click it and Unblock the Notifications