Canara Bank: ಕೆನರಾ ಬ್ಯಾಂಕ್ ಅಪ್ರೆಂಟಿಸ್ ನೇಮಕಾತಿ, 15 ಸಾವಿರ ರೂ. ಶಿಷ್ಯ ವೇತನ
ಬೆಂಗಳೂರು, ಸೆಪ್ಟೆಂಬರ್ 21: ಕೆನರಾ ಬ್ಯಾಂಕ್ ಗ್ರಾಜ್ಯುಯೇಟ್ ಅಪ್ರೆಂಟಿಶಿಪ್ ಅಡಿ ನೇಮಕಾತಿಗೆ ಶನಿವಾರದಿಂದ ನೋಂದಣಿಯನ್ನು ಆರಂಭಿಸಿದೆ. 3 ಸಾವಿರ ಅಪ್ರೆಂಟಿಸ್‌ಗಳ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ತರಬೇತಿ ಅವಧಿ ಒಂದು ವರ್ಷಗಳು. ಕೆನರಾ ಬ್ಯಾಂಕ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಆಸಕ್ತ ಮತ್ತು ಅರ್ಹರು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕಿದೆ. ಅರ್ಜಿಗಳನ್ನು ಸಲ್ಲಿಕೆ ಮಾಡಲು ಅಕ್ಟೋಬರ್ 4, 2024 ಕೊನೆಯ ದಿನವಾಗಿದೆ.
ಅಪ್ರೆಂಟಿಶಿಪ್ ನೇಮಕಾತಿ ನಿಯಮಗಳು, 1961ರ ಅಡಿ 2024-25ನೇ ಆರ್ಥಿಕ ವರ್ಷಕ್ಕೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಆಸಕ್ತ ಮತ್ತು ಅರ್ಹರು ಸೆಪ್ಟೆಂಬರ್ 21 ರಿಂದ ಅಕ್ಟೋಬರ್ 4ರ ತನಕ www.canarabank.com ವೆಬ್ ಸೈಟ್‌ನಲ್ಲಿ ಕೆರಿಯರ್ ವಿಭಾಗದ ಮೇಲೆ ಕ್ಲಿಕ್ ಮಾಡಿ ಅರ್ಜಿಗಳನ್ನು ಸಲ್ಲಿಸಬೇಕಿದೆ.

ಆನ್‌ಲೈನ್ ಹೊರತಾಗಿ ಬೇರೆ ಯಾವುದೇ ಮಾರ್ಗದ ಮೂಲಕ ಸಲ್ಲಿಕೆ ಮಾಡುವ ಅರ್ಜಿಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಅರ್ಜಿ ಸಲ್ಲಿಸುವಾಗ ಒಮ್ಮೆ ಬಳಸಿಕೊಂಡ ಎನ್‌ರೋಲ್‌ಮೆಂಟ್ ಐಡಿಯನ್ನು ಸೀಟು ಹಂಚಿಕೆ ತನಕ ಬಳಕೆ ಮಾಡಬೇಕು. ಆದ್ದರಿಂದ ಸೇವ್ ಮಾಡಿ ಇಟ್ಟುಕೊಳ್ಳಿ ಎಂದು ಅಭ್ಯರ್ಥಿಗಳಿಗೆ ಸೂಚನೆ ನೀಡಲಾಗಿದೆ.
ಅರ್ಜಿ ಶುಲ್ಕ, ಶಿಷ್ಯ ವೇತನ ವಿವರ: ಅರ್ಜಿಗಳನ್ನು ಸಲ್ಲಿಕೆ ಮಾಡುವ ಎಲ್ಲಾ ವರ್ಗದ ಅಭ್ಯರ್ಥಿಗಳು 500 ರೂ. ಶುಲ್ಕವನ್ನು ಪಾವತಿ ಮಾಡಬೇಕಿದೆ. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ ಎಂದು ಅಧಿಸೂಚನೆ ತಿಳಿಸಿದೆ. ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್, ಇಂಟರ್‌ನೆಟ್ ಬ್ಯಾಂಕಿಂಗ್, ಮೊಬೈಲ್ ವ್ಯಾಲೆಟ್ ಮೂಲಕ ಪಾವತಿ ಮಾಡಬಹುದು.
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 15,000 ರೂ. ಶಿಷ್ಯ ವೇತನ ನೀಡಲಾಗುತ್ತದೆ. ಸರ್ಕಾರದ ಸಹಾಯಧನವೂ ಸೇರಿ. ಕೆನರಾ ಬ್ಯಾಂಕ್ 10,500 ರೂ. ನೀಡಿದರೆ, ಸರ್ಕಾರ ನೇರವಾಗಿ ಅಭ್ಯರ್ಥಿಗಳಿಗೆ ನೇರ ನಗದು ವರ್ಗಾವಣೆ ಮೂಲಕ 4,500 ರೂ.ಗಳನ್ನು ಖಾತೆಗೆ ಜಮಾ ಮಾಡುತ್ತದೆ.
ಅರ್ಜಿಗಳನ್ನು ಸಲ್ಲಿಕೆ ಮಾಡಲು ಜನ್ಮ ದಿನಾಂಕ ದೃಢೀಕರಣಕ್ಕೆ (ಜನನ ಪ್ರಮಾಣ ಪತ್ರ, ಜನ್ಮ ದಿನಾಂಕ ಹೊಂದಿರುವ ಎಸ್ಎಸ್‌ಎಲ್‌ಸಿ/ 10ನೇ ತರಗತಿ ಪ್ರಮಾಣ ಪತ್ರ), ಅಂಕಪಟ್ಟಿಗಳು, ಆದಾಯ ಮತ್ತು ಆಸ್ತಿ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರದ ಅಗತ್ಯವಿದೆ.
ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು ಅಥವ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು.
ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳಿಗೆ 20 ರಿಂದ 28 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ( ಅಭ್ಯರ್ಥಿಗಳು ಸೆಪ್ಟೆಂಬರ್ 1, 1996 ರಿಂದ ಸೆಪ್ಟೆಂಬರ್ 1, 2004ರೊಳಗೆ ಜನಿಸಿರಬೇಕು). ಈ ಅಧಿಸೂಚನೆ ಅನ್ವಯ ಅರ್ಜಿ ಸಲ್ಲಿಸಿ ಆಯ್ಕೆಗೊಂಡ ಅಭ್ಯರ್ಥಿಗಳ ತರಬೇತಿ ಅವಧಿ ಒಂದು ವರ್ಷಗಳು ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.












Click it and Unblock the Notifications