ಕೇಂದ್ರ ರೈಲ್ವೇ ಮತ್ತು ಜಲಶಕ್ತಿ ಇಲಾಖೆಯಲ್ಲಿ 60,000 ಉದ್ಯೋಗ ನೇಮಕಾತಿ: ಯಾವಾಗ?
ಬೆಂಗಳೂರು, ಡಿಸೆಂಬರ್ 28: ವಿ.ಸೋಮಣ್ಣ ಅವರು ಬರೀ ಕೇಂದ್ರ ಸಚಿರಾದಾಗಿನಿಂದಲೂ ರಾಜ್ಯ ರೈಲ್ವೆ ಅಭಿವೃದ್ಧಿ ಕಾಮಗಾರಿ ಅಲ್ಲದೆ, ಉದ್ಯೋಗವಕಾಶ ಕಲ್ಪಿಸಿಕೊಡುವಲ್ಲಿಯೂ ಗಮನ ಸೆಳೆಯುತ್ತಿದ್ದಾರೆ. ಇದೀಗ ಶೀಘ್ರದಲ್ಲೇ ಕೇಂದ್ರ ರೈಲ್ವೇ ಮತ್ತು ಜಲಶಕ್ತಿ ಇಲಾಖೆಯಲ್ಲಿ 60,000 ಉದ್ಯೋಗ ನೇಮಕಾತಿ ನಡೆಯಲಿದೆ. ಕನ್ನಡ ಭಾಷೆಯಲ್ಲೂ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ ಎಂದು ಹೇಳಿದ್ದಾರೆ.
ಕರ್ನಾಟಕದ ಯುವ ಸಮುದಾಯ ಈ ಅವಕಾಶಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಚಿವ ವಿ.ಸೋಮಣ್ಣ ಮನವಿ ಮಾಡಿದ್ದಾರೆ.ಶನಿವಾರ (ಡಿಸೆಂಬರ್ 28) ಬೆಂಗಳೂರು ಅರಮನೆ ಮೈದಾನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ ಕರ್ನಾಟಕ ಸಂಭ್ರಮ-50 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ದೂರದೃಷ್ಟಿ ಯೋಜನೆ ರೂಪಿಸಿದ್ದಾರೆ. ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ರೈಲ್ವೇ ಮತ್ತು ಜಲಶಕ್ತಿ ಇಲಾಖೆಗೂ ಸಾವಿರಾರು ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಈ ಮೂಲಕ ದೇಶದ ಶ್ರೇಯೋಭಿವೃದ್ಧಿಯ ವಿಚಾರದಲ್ಲಿ ದೊಡ್ಡ ಹೆಜ್ಜೆ ಇರಿಸಿದ್ದಾರೆ ಎಂದು ತಿಳಿಸಿದರು.
ಕೇಂದ್ರ ಸೇವೆಯಲ್ಲಿ ಶೇಕಡ 20ರಿಂದ 30 ಮಂದಿ ಕನ್ನಡಿಗರು ಇರಬೇಕು ಎಂಬುದು ನಮ್ಮ ಆಸೆಯಾಗಿದೆ. ಶೀಘ್ರದಲ್ಲೇ ಕೇಂದ್ರ ರೈಲ್ವೇ ಮತ್ತು ಜಲಶಕ್ತಿ ಇಲಾಖೆಯಲ್ಲಿ 60,000 ಉದ್ಯೋಗ ನೇಮಕಾತಿ ನಡೆಯಲಿದೆ. ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗ ಪಡೆಯಬೇಕು. ನಾನು ಕೇಂದ್ರ ಸಚಿವನಾಗುವ ಮೊದಲು ವಿನಯ್ ಗುರೂಜಿ ಅವರು ಕನ್ನಡ ಭಾಷೆಯಲ್ಲಿ ಕೇಂದ್ರ ಸೇವೆ ಪರೀಕ್ಷೆ ಬರೆಯಲು ಅನುಕೂಲ ಕಲ್ಪಿಸಬೇಕೆಂದು ಮನವಿ ಮಾಡಿದ್ದರು. ಕನ್ನಡಿಗರ ಹಿತದೃಷ್ಟಿಯಿಂದ ಸಚಿವನಾದ ಕೂಡಲೇ ಕನ್ನಡಿಗರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಿದೆ ಎಂದು ಹೇಳಿದರು.
ಇನ್ನು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣದ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕನ್ನಡ ನಾಡು-ನುಡಿಗಾಗಿ ಅನೇಕರು ಕೊಡುಗೆ ನೀಡಿದ್ದಾರೆ. ತಮ್ಮ ಮನೆ ಭಾಷೆ ಬೇರೆಯಾಗಿದ್ದರೂ ಭಿನ್ನ ರೀತಿಯ ಸಾಹಿತ್ಯ ರಚನೆ ಮಾಡಿ ಕನ್ನಡ ಸಾಹಿತ್ಯ ಲೋಕದಲ್ಲಿ ಅಮರವಾಗಿ ಉಳಿದಿದ್ದಾರೆ. ಸೂರ್ಯ-ಚಂದ್ರ ಇರುವವರೆಗೂ ಅವರ ಕೊಡುಗೆ ಹಾಗೆಯೇ ಉಳಿಯಲಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಸೇವಾ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿ ಬರೆಯಲು ಪ್ರಧಾನಿ ನರೇಂದ್ರ ಮೋದಿ ಅವರು ಕಾರಣರಾಗಿದ್ದಾರೆ. ಕನ್ನಡ ಅಷ್ಟೇ ಅಲ್ಲದೆ, ದೇಶದ ಸುಮಾರು 14 ಸ್ಥಳೀಯ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ್ದಾರೆ. ಈ ಹಿನ್ನೆಲೆ ಕನ್ನಡ ಸೇರಿದಂತೆ ಸ್ಥಳೀಯ ಭಾಷೆಯ ಯುವಕರಿಗೆ ಅನುಕೂಲ ಆಗಲಿದೆ ಎಂದು ತಿಳಿಸಿದರು.












Click it and Unblock the Notifications