infographics: ಕರ್ನಾಟಕಕ್ಕೆ 2 ದಿನ ಧಾರಾಕಾರ ಮಳೆ, ಅರ್ಧ ರಾಜ್ಯಕ್ಕೆ 'ಯೆಲ್ಲೋ ಅಲರ್ಟ್'
ಬೆಂಗಳೂರು ಸೆಪ್ಟಂಬರ್ 29: ಕರ್ನಾಟಕದಾದ್ಯಂತ ಮೋಡ ಕವಿದ ವಾತಾವರಣ ಕಂಡು ಬಂದಿದ್ದು, ವಿವಿಧ ಭಾಗದ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ (ಅ.2ರವರೆಗೆ) ಧಾರಾಕಾರ ಮಳೆ ಆಗುವ ಮುನ್ಸೂಚನೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಹೇಳಿದೆ.
ರಾಜ್ಯದ ಉತ್ತರ ಒಳನಾಡಿನ ಭಾಗದಲ್ಲಿ ಮುಂಗಾರು ಮಳೆ ಚುರುಕಾಗಿದೆ. ಕಳೆದ ಬಾರಿಯಂತೆ ಈ ಸಲವೂ ಕೂಡ ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ಧಾರವಾಡ, ಹಾವೇರಿ, ಗದಗ, ರಾಯಚೂರು, ಕೊಪ್ಪಳ, ವಿಜಯಪುರ ಜಿಲ್ಲೆಗಳ ಹಲವೆಡೆ ಗುಡುಗು ಸಹಿತ ಜೋರು ಮಳೆ ಆಗಲಿದೆ. ಇದೆ ಭಾಗದ ಉಳಿದ ಜಿಲ್ಲೆಗಳ ಒಂದೆರಡು ಕಡೆ ತುಂತುತು ಮಳೆ ಆಗಬಹುದು ಎಂದು ಅಂದಾಜಿಸಲಾಗಿದೆ.
ಕರಾವಳಿ ಕರ್ನಾಟಕ ಜಿಲ್ಲೆಗಳಲ್ಲಿ ಒಣಹವೆ ಕಂಡು ಬಂದಿದ್ದು, ಇಲ್ಲಿ ಮಳೆಯ ಯಾವ ಮುನ್ಸೂಚನೆಗಳು ಇಲ್ಲ ಎನ್ನಲಾಗಿದೆ. ದಕ್ಷಿಣ ಒಳನಾಡಿನಲ್ಲಿ ಮಳೆ ಮತ್ತೆ ಹೆಚ್ಚಾಗಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣೆಗೆರೆ, ಕೋಲಾರ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಧಾರಾಕಾರವಾಗಿ ಎರಡು ದಿನ ಮಳೆ ಅಬ್ಬರಿಸಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.
ಮುಂದಿನ ಎರಡು ದಿನ ಸೆಪ್ಟಂಬರ್ 29ರವರೆಗೆ ಒಳನಾಡು ಜಿಲ್ಲೆಗಳಲ್ಲಿ ಗುಡುಗು , ಮಿಂಚು ಸಹಿತ ಸಾಧಾರಣವಾಗಿ ಮಳೆ ಆಗಬಹುದು. ಬೆಳಗಾವಿ, ಬಾಗಲಕೋಟೆ, ಬೀದರ್, ಗದಗ, ಕೊಪ್ಪಳ, ರಾಯಚೂರು, ವಿಜಯಪುರ, ಹಾವೇರಿ, ಯಾದಗಿರಿ ಜಿಲ್ಲೆಯ ಹಲವು ಕಡೆಗಳಲ್ಲಿ ಚದುರಿದಂತೆ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

ನೆರೆ ರಾಜ್ಯ, ಕರ್ನಾಟಕದಲ್ಲಿ ಮಳೆ ತೀವ್ರತೆ ಅಧಿಕ
ಕೆಲವು ವಾರಗಳಿಂದ ದುರ್ಬಲಗೊಂಡಿದ್ದ ಮುಂಗಾರು ಮಳೆ ಮತ್ತೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅಬ್ಬರಿಸಲು ಸಜ್ಜಾಗಿದ್ದಾನೆ. ಅಂಡಮಾನ್ ನಿಕೋಬಾರ್ ಪ್ರದೇಶದಲ್ಲಿ ಮತ್ತು ತೆಲಂಗಾಣ, ರಾಯಲ್ ಸೀಮಾದಲ್ಲಿ ಭಾರಿಯಿಂದ ಅತೀ ಭಾರಿ ಮಳೆ ಆಗುತ್ತಿದೆ. ಮುಂದಿನ ಕೆಲವು ದಿನಗಳ ಈ ಭಾಗದಲ್ಲಿ ಮಳೆ ಹೀಗೆ ಮುಂದುವರಿಯಲಿದೆ. ಕರ್ನಾಟಕದಲ್ಲಿ ಕಳೆದ ಎರಡು ದಿನಕ್ಕೆ ಹೋಲಿಸಿದರೆ ಗುರುವಾರ ಮಳೆ ತೀವ್ರತೆ ಹೆಚ್ಚಾಗಿರುವುದು ಕಂಡು ಬಂದಿದ್ದು, ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆ ಆಗಲಿದೆ. ಇದರ ಹೊರತು ಗಂಭೀರ ಬದಲಾವಣೆಗಳು ಇಲ್ಲ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಅರ್ಧ ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್
ಕರಾವಳಿ ಕರ್ನಾಟಕ ಹೊರತುಪಡಿಸಿದರೆ ರಾಜ್ಯದ ಬೇರೆ ಎಲ್ಲ ಜಿಲ್ಲೆಗಳಿಗೆ ಸಾಧಾರಣದಿಂದ ಅತೀ ಭಾರಿ ಪ್ರಮಾಣದಲ್ಲಿ ಮಳೆ ಬೀಳಲಿದೆ. ಹೀಗಾಗಿ ಎರಡು ದಿನ ಅನೇಕ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಹಾಗೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರು, ರಾಮನಗರ, ಕೋಲಾರ ಜಿಲ್ಲೆಗಳು ಯೆಲ್ಲೋ ಅಲರ್ಟ್ ಎಚ್ಚರಿಕೆ ಪಡೆದ ಜಿಲ್ಲೆಗಳಾಗಿವೆ.

ಬೆಂಗಳೂರಲ್ಲಿ 2ದಿನ ಚಳಿ, ಮಳೆ ಇರಲಿದೆ
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮುಂದಿನ ಎರಡರಿಂದ ಮೂರು ದಿನ ಮಳೆ ತೀವ್ರವಾಗಿ ಸುರಿಯಲಿದೆ. ಈಗಾಗಲೇ ಕಳೆದ ಐದಾರು ದಿನಗಳಿಂದ ಸಂಜೆ ನಂತರ ನಗರದ ವಿವಿಧ ಬಡಾವಣೆಗಳಲ್ಲಿ ಮಳೆ ದಾಖಲಾಗಿದೆ. ಇಡಿ ದಿನ ಮೋಡ ಕವಿದ ವಾತಾವರಣ ಕಂಡು ಬಂದಿದೆ. ಮುಂದಿನ ಮೂರು ದಿನ ಇದೇ ರೀತಿಯ ವಾತಾವರಣ ಕಂಡು ಬರುವ ಸಾಧ್ಯತೆ ಇದೆ. ಗರಿಷ್ಠ ತಾಪಮಾನ 27ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 20ಡಿಗ್ರಿ ಸೆಲ್ಸಿಯಸ್ ದಾಖಲಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕದಲ್ಲಿ ಹಲವೆಡೆ ತೇವಾಂಶ ಏರಿಕೆ
ಬೆಂಗಳೂರಲ್ಲಿ 30ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಇದ್ದು, ತೇವಾಂಶ 58, ಗಾಳಿಯ ವೇಗ ಗಂಟೆಗೆ 34ಕಿ.ಮೀ. ದಾಖಲಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ 30ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 64 ತೇವಾಂಶ ಇದೆ, ರಾಯಚೂರಲ್ಲಿ 32ಡಿಗ್ರಿ ಸೆಲ್ಸಿಯಸ್ ಗರಿಷ್ಠ, 55ರಷ್ಟು ತೇವಾಂಶ, ಚಿತ್ರದುರ್ಗದಲ್ಲಿ 30ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 58ರಷ್ಟು ತೇವಾಂಶ, ಕಲಬುರಗಿ 30ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 60ರಷ್ಟು ತೇವಾಂಶ ಕಂಡು ಬಂದಿದೆ. ಚಿಕ್ಕಮಗಳೂರಲ್ಲಿ 31ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಇದ್ದರೆ, 61ರಷ್ಟು ತೇವಾಂಶ ಇದೆ.
ಮಂಗಳೂರಿನಲ್ಲಿ 30ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 70ತೇವಾಂಶ, ಶಿವಮೊಗ್ಗ 31ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಇದ್ದು, 65 ತೇವಾಂಶ ದಾಖಲಾಗಿದೆ. ಮೈಸೂರು 31ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 60 ತೇವಾಂಶ ಹಾಗೂ ಬಳ್ಳಾರಿ 30ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 70 ತೇವಾಂಶ ದಾಖಲಾಗಿದೆ.












Click it and Unblock the Notifications