ಸಲಿಂಗಕಾಮ ಹೋರಾಟಗಾರರಿಗೆ ಕೊನೆಗೂ ಸಿಕ್ಕ ಜಯ
ನವದೆಹಲಿ, ಸೆಪ್ಟೆಂಬರ್ 6: ಸಲಿಂಗಕಾಮ ಅಪರಾಧ ಎಂಬ ಸುಮಾರು 160 ವರ್ಷಗಳಷ್ಟು ಹಳೆಯ ಕಾನೂನನ್ನು ರದ್ದುಗೊಳಿಸಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಇದರೊಂದಿಗೆ ವಿವಾದಾತ್ಮಕ ಸೆಕ್ಷನ್ 377ರ ಅಸ್ತಿತ್ವ ಅಂತ್ಯಕಂಡಿದೆ. ಮಿಗಿಲಾಗಿ ಹಲವು ದಶಕಗಳಿಂದ ಹೋರಾಟ ನಡೆಸುತ್ತಿದ್ದ ಎಲ್‌ಜಿಬಿಟಿಜಿ (ಸಲಿಂಗಕಾಮ) ಹೋರಾಟಗಾರರಲ್ಲಿ ಹರ್ಷೋದ್ಗಾರ ಮೂಡಿಸಿದೆ.
'ಪ್ರತಿಯೊಬ್ಬ ಸಾಮಾನ್ಯ ಮನುಷ್ಯನಂತೆಯೇ ಎಲ್‌ಜಿಬಿಟಿ ಸಮುದಾಯಕ್ಕೂ ಸಮಾನ ಹಕ್ಕುಗಳಿವೆ. ಪ್ರತಿಯೊಬ್ಬರ ಹಕ್ಕುಗಳನ್ನು ಗೌರವಿಸಬೇಕು. ಸಲಿಂಗಕಾಮವನ್ನು ಅಪರಾಧೀಕರಣಗೊಳಿಸುವುದು ವಿಚಾರಹೀನ ಮತ್ತು ಸಮರ್ಥಿಸಲಾಗದ್ದು' ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನು ಒಳಗೊಂಡ ಐವರು ನ್ಯಾಯಮೂರ್ತಿಗಳ ಪೀಠ ತೀರ್ಪು ನೀಡಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ರೋಹಿಂಟನ್ ನಾರಿಮನ್, ಎಎಂ ಖಾನ್ವಿಲ್ಕರ್, ಡಿವೈ ಚಂದ್ರಚೂಡ್ ಮತ್ತು ಇಂದೂ ಮಲ್ಹೋತ್ರಾ ಅವರನ್ನು ಒಳಗೊಂಡ ನ್ಯಾಯಪೀಠ ಈ ಐತಿಹಾಸಿಕ ತೀರ್ಪು ನೀಡಿದೆ.
1861ರಲ್ಲಿ ಬ್ರಿಟಿಷರ ಕಾಲಾವಧಿಯಲ್ಲಿ ರೂಪುಗೊಂಡ ಕಾನೂನಿನ ಪ್ರಕಾರ ಸಮಾನಲಿಂಗಿಗಳ ನಡುವೆ ಸಹಮತದ ಲೈಂಗಿಕ ಸಂಬಂಧ ಕೂಡ ಅಪರಾಧವಾಗಿತ್ತು. 'ಅಸ್ವಾಭಾವಿಕ ಲೈಂಗಿಕ ಸಂಬಂಧ'ಕ್ಕೆ 10 ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸಲು ಅವಕಾಶವಿತ್ತು.
2009ರಲ್ಲಿ ದೆಹಲಿ ಹೈಕೋರ್ಟ್ ಸೆಕ್ಷನ್ 377ರ ಅಡಿ ಸಲಿಂಗಕಾಮ ಅಪರಾಧ ಅಲ್ಲ ಎಂದು ತೀರ್ಪು ನೀಡಿತ್ತು. ಆದರೆ ಅದನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ಇದರ ವಿರುದ್ಧ ಎಲ್‌ಬಿಟಿಜಿ ಕಾರ್ಯಕರ್ತರು ಮತ್ತೆ ಕಾನೂನು ಹೋರಾಟಕ್ಕೆ ಮುಂದಾಗಿದ್ದರು.












Click it and Unblock the Notifications