ವಾಯುಭಾರ ಕುಸಿತ; ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ
ಬೆಂಗಳೂರು, ಆಗಸ್ಟ್ 31; ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಸೆಪ್ಟೆಂಬರ್ 1ರ ತನಕ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಲಬುರಗಿ, ಬೀದರ್ ಜಿಲ್ಲೆಗಳ ವಿವಿಧ ಪ್ರದೇಶದಲ್ಲಿಯೂ ಸೋಮವಾರ ಮಳೆಯಾಗಿದೆ. ಬೀದರ್‌ನ ಕಮಲನಗರ ತಾಲೂಕಿನ ಮತಖೇಡದಲ್ಲಿ ಸಿಡಿಲು ಬಡಿದು ಎಮ್ಮೆ ಸಾವನ್ನಪ್ಪಿದೆ. ಭಾಲ್ಕಿಯ ನಾವದಗಿಯಲ್ಲಿ ಹನುಮಾನ ಮಂದಿರ ಕುಸಿದಿದೆ.
ಚಿಂಚೋಳಿ, ಕಲಬುರಗಿ ಸೇರಿದಂತೆ ವಿವಿಧ ಕಡೆ ಮಳೆ ಸುರಿದಿದೆ. ಚಿಂಚೋಳಿ ತಾಲೂಕಿನ ಚಂದ್ರಪಳ್ಳಿ ಜಲಾಶಯ ತುಂಬಿದ್ದು, 1820 ಕ್ಯುಸೆಕ್ ಹೊರ ಬಿಡಲಾಗಿದೆ. ನಾಗರಾಳ ಜಲಾಶಯದಿಂದ 1060 ಕ್ಯುಸೆಕ್ ನೀರನ್ನು ಹೊರಕ್ಕೆ ಬಿಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ದಿನಗಳಿಂದ ಮಳೆಯಾಗುತ್ತಲೇ ಇದೆ. ಸೋಮವಾರ ಸುರಿದ ಮಳೆಗೆ ಮನೆಯೊಂದಕ್ಕೆ ಹಾನಿಯಾಗಿದೆ. ಬೆಂಗಳೂರು ನಗರದಲ್ಲಿ ಮಂಗಳವಾರ ಮೋಡ ಕವಿದ ವಾತಾವರಣವಿಲ್ಲ, ತುಂತುರು ಮಳೆ ಸಹ ಸುರಿದಿಲ್ಲ. ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಇಲ್ಲಿದೆ...

ಲಿಂಗನಮಕ್ಕಿ, ಹಾರಂಗಿ, ಹೇಮಾವತಿ
ಲಿಂಗನಮಕ್ಕಿ ಜಲಾಶಯದ ಪೂರ್ಣ ಮಟ್ಟ 554.44 ಮೀಟರ್ ಆಗಿದೆ. ಮಂಗಳವಾರದ ನೀರಿನ ಮಟ್ಟ 552.48 ಮೀಟರ್ ಆಗಿದೆ.
ಹಾರಂಗಿ ಜಲಾಶಯದ ಪೂರ್ಣ ಮಟ್ಟ 871.38 ಮೀಟರ್. ಮಂಗಳವಾರದ ನೀರಿನ ಮಟ್ಟ 871.08 ಮೀಟರ್.
ಹಾಸನದಲ್ಲಿರುವ ಹೇಮಾವತಿ ಜಲಾಶಯದ ಪೂರ್ಣ ಮಟ್ಟ 890.58 ಮೀಟರ್ ಆಗಿದೆ. ಮಂಗಳವಾರ ಜಲಾಶಯದಲ್ಲಿ 889.05 ಮೀಟರ್ ನೀರಿನ ಸಂಗ್ರಹವಿದೆ.

ಕೆಆರ್‌ಎಸ್, ಕಬಿನಿ, ಭದ್ರಾ ಡ್ಯಾಂ
ಕಬಿನಿ ಜಲಾಶಯದ ಮಂಗಳವಾರದ ನೀರಿನ ಮಟ್ಟ 695.20 ಮೀಟರ್ ಆಗಿದೆ. ಡ್ಯಾಂ ಪೂರ್ಣ ಮಟ್ಟ 696.13 ಮೀಟರ್ ಆಗಿದೆ.ಕಬಿನಿ ಜಲಾಶಯಕ್ಕೆ 6240 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದಿಂದ 6750 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕೆಆರ್‌ಎಸ್ ಜಲಾಶಯ ಇನ್ನೂ ಭರ್ತಿಯಾಗಿಲ್ಲ. ಮಂಗಳವಾರ ಡ್ಯಾಂನಲ್ಲಿ 35.79 ಮೀಟರ್ ನೀರಿನ ಸಂಗ್ರಹವಿದೆ. ಜಲಾಶಯದ ಪೂರ್ಣ ಮಟ್ಟ 38.04 ಮೀಟರ್.ಕೆಆರ್‌ಎಸ್ ಜಲಾಶಯಕ್ಕೆ ಒಳಹರಿವು 5169 ಕ್ಯುಸೆಕ್. ಹೊರಹರಿವು 9715 ಕ್ಯುಸೆಕ್ ಆಗಿದೆ.
ಭದ್ರಾ ಜಲಾಶಯದ ಮಂಗಳವಾರದ ನೀರಿನ ಮಟ್ಟ 657.52 ಮೀಟರ್ ಆಗಿದೆ. ಡ್ಯಾಂ ಪೂರ್ಣಮಟ್ಟ 657.73 ಮೀಟರ್.ಭದ್ರಾ ಜಲಾಶಯಕ್ಕೆ 5677 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದಿಂದ ಹೊರ ಹರಿವು 3246.

ತುಂಗಭದ್ರಾ, ಆಲಮಟ್ಟಿ, ನಾರಾಯಣಪುರ
ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯ ಈಗಾಗಲೇ ಭರ್ತಿಯಾಗಿದೆ. ಮಂಗಳವಾರದ ನೀರಿನ ಮಟ್ಟ 497.58 ಮೀಟರ್. ಡ್ಯಾಂನ ಪೂರ್ಣಮಟ್ಟ 497.71 ಮೀಟರ್ ಆಗಿದೆ.ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದರೂ ಒಳಹರಿವು 18,757 ಕ್ಯುಸೆಕ್ ಇದೆ. 10743 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಆಲಮಟ್ಟಿ ಜಲಾಶಯದ ಪೂರ್ಣ ಮಟ್ಟ 519.60 ಮೀಟರ್ ಆಗಿದೆ. ಮಂಗಳವಾರ ಜಲಾಶಯದಲ್ಲಿ 519.57 ಮೀಟರ್ ನೀರಿನ ಸಂಗ್ರಹವಿದೆ.
ನಾರಾಯಣಪುರ ಜಲಾಶಯದ ಮಂಗಳವಾರದ ನೀರಿನ ಮಟ್ಟ 491.93 ಮೀಟರ್. ಡ್ಯಾಂ ಪೂರ್ಣ ಮಟ್ಟ 492.25 ಮೀಟರ್.

ಸೂಪ, ಘಟಪ್ರಭಾ, ಮಲಪ್ರಭಾ ಡ್ಯಾಂ
ಸೂಪಾ ಜಲಾಶಯದ ಮಂಗಳವಾರದ ನೀರಿನ ಮಟ್ಟ 554.76 ಮೀಟರ್. ಡ್ಯಾಂ ಪೂರ್ಣ ಮಟ್ಟ 564.00 ಮೀಟರ್ ಆಗಿದೆ.
ಘಟಪ್ರಭಾ ಜಲಾಯಶದ ಪೂರ್ಣ ಮಟ್ಟ 662.91 ಮೀಟರ್. ಮಂಗಳವಾರ ಜಲಾಶಯದಲ್ಲಿ 662.91 ಮೀಟರ್ ನೀರಿತ್ತು.
ಮಲಪ್ರಭಾ ಜಲಾಶಯದ ಮಂಗಳವಾರದ ನೀರಿನ ಮಟ್ಟ 633.51 ಮೀಟರ್. ಪೂರ್ಣ ಮಟ್ಟ 633.80 ಮೀಟರ್ ಆಗಿದೆ.












Click it and Unblock the Notifications