ಅಕ್ಷರಗಳ ಖಜಾನೆ ಖಾಲಿ, ನಿಲ್ಲದು ನಿನ್ನ ವರ್ಣಿಸುವ ಖಯಾಲಿ

By: ಮಪ
Subscribe to Oneindia Kannada

ನೀ,, ಒಂದು ಮುಗುಳ್ನಗೆಯಾಡಿದರೆ ಕಳೆದುಕೊಳ್ಳುವುದು ಏನೂ ಇಲ್ಲ. ಅಲ್ಲೆಲ್ಲೋ ವಿಜ್ಞಾನಿಗಳು ಪ್ರಪಂಚದ ಜನ್ಮಕ್ಕೆ ಕಾರಣ ಏನು ಎಂದು ಪತ್ತೆ ಹಚ್ಚಿದರಂತೆ, ಆದರೆ ನಿನ್ನ ಪ್ರೀತಿಯ ಸೆಳೆತಕ್ಕೆ ಕಾರಣ ಯಾವಾಗ ಹುಡುಕುತ್ತಾರೋ?

ಬಾಗಿಲು ಮುಚ್ಚಿದರೂ ಬೆಳಕಿನ ಕಿಂಡಿ ಒಂದಿದೆ. ಅದು ನಿನ್ನ ಕಣ್ಣ ಹೊಳಪೇ ಹೌದು... ಕಷ್ಟಪಡದೆಯೇ ಇಷ್ಟವಾಗವುದು ಅಂದ್ರೇ ಇದೇನಾ? ಇಷ್ಟ ಪಟ್ಟ ಮೇಲೆ ಕಷ್ಟ ಪಡುವುದು ಅಂದ್ರೆ ಇದೇನಾ? ಅದ್ಯಾಕೋ ಮತ್ತದೇ ಹಳೆಯ ಸಂದೇಶಗಳದ್ದೇ ಮೆಲುಕು.. ನೀ ನನ್ನೊಟ್ಟಿಗೆ ಇದ್ದಾಗ ವಿನಿಮಯವಾದ ಸಂದೇಶಗಳ ಲೆಕ್ಕ ಇಡಲು ಆಧುನಿಕ ಕಂಪ್ಯೂಟರ್ ಬಳಿಯೂ ಸಾಧ್ಯವಾಗಲಿಲ್ಲ.[ಹಾಡೋಣ ಬಾರಾ ಪ್ರೀತಿಯ ಚಿಲಿಪಿಲಿ...]

love

ಗೆಳತಿ,,, ಮೇಘ ಸಂದೇಶ ಕಳಿಸಲು ಮೋಡಗಳು ಮಾತು ಕೇಳುತ್ತಿಲ್ಲ. ನಿನ್ನ ಬೆರಳಿಗೆ ಉಂಗುರ ತೊಡಿಸಲು ಅಳತೆ ನನಗೆ ಗೊತ್ತಿಲ್ಲ. ಗುಲಾಬಿ ಕೀಳಲು ಮುಳ್ಳಿನ ಭಯ. ಪತ್ರ ಬರೆದು ರವಾನೆ ಮಾಡಲು ಅಕ್ಷರಗಳ ಭಂಡಾರ ಖಾಲಿ, ಆದರೂ ನಿಲ್ಲದು ನಿನ್ನ ವರ್ಣಿಸುವ ಖಯಾಲಿ..

ಮಡಿಸಿಟ್ಟ ಕಾಗದ ತುಂಡುಗಳಲ್ಲಿ ಎಲ್ಲೆಲ್ಲೂ ನಿನ್ನದೇ ಹೆಸರುಗಳು, ಸ್ನೇಹ-ಪ್ರೀತಿಯ ಸಾವಿರ ಕತೆ ಹೇಳುವ ಕೊನೆಯ ಪುಟದ ಗೀಟುಗಳು...ಕೊಂಚ ಉದ್ದಕ್ಕೆ ಬರೆದರೇ ಅವೇ ಸಂಗೀತದ ಸಂಕೇತಾಕ್ಷರಗಳು..

ಬಿಡಿಸಿಟ್ಟ ರಂಗೋಲಿಯಲ್ಲಿ ನಿನ್ನದೇ ಚಿತ್ರ ಕಾಣುತಿಹುದು..ಗುಯ್ ಗುಟ್ಟುವ ಗಾಳಿ ಸದ್ದಲ್ಲೂ ನಿನ್ನದೇ ಸ್ವರ...ನಡುಗಿಸುವ ಚಳಿಯಲ್ಲೂ ನಿನ್ನದೇ ಉಸಿರು... ಓಡುತ್ತಿರುವ ಕಾಲಕ್ಕೆ ನೀನೇ ಗಡಿಯಾರ.. ಹಸಿದ ಹೊಟ್ಟೆಗೆ ನಿನ್ನ ಚಿತ್ರವೇ ಆಹಾರ...[ಹೀಗೊಂದು ಪ್ರೇಮ ಪತ್ರ., ಮೊದಲ ಪುಟ]

ಬಿಂಕದ ಸಿಂಗಾರಿ, ಕನಸಿನ ಕನ್ಯೆ, ಬೆಳದಿಂಗಳ ಬಾಲೆ, ರಾಣಿ, ಮಹಾರಾಣಿ ಎಂದೆಲ್ಲ ನಿನ್ನ ವರ್ಣಿಸುವ ಹುಚ್ಚು ಸಾಹಸಕ್ಕೆ ಕೈ ಹಾಕಲ್ಲ. ಆ ಎಲ್ಲ ಪದಗಳು ನಿನಗೇ ಸರಿ ಸಾಟಿ ಇಲ್ಲ ಬಿಡು. ನಿನಗೆ ಒಂದು ಹೆಸರು ಕೊಡುವಷ್ಟು ದೊಡ್ಡವನು ನಾನಲ್ಲ,,, ಆ ತಾಕತ್ತು ನನ್ನ ಬಳಿ ಉಳಿದಿಲ್ಲ.

ನಿನಗೆ ನೀನೆ ಒಂದು ಹೆಸರು ಇಟ್ಟಿಕೊಂಡಿದ್ದೀಯ ಅಲ್ಲ.. ಕೊಟ್ಟುಕೊಂಡಿದ್ದೀಯ,, ಅದೇ ಸಾಕು ನನ್ನ ನೆನಪಿಗೆ, ಅದೇ ಸಾಕು ಈ ಬಂಧನಕೆ.. ಆ ಹೆಸರಲ್ಲೇ ಮಾತಿದೆ-ಮೌನವಿದೆ, ಸಿಟ್ಟಿದೆ-ಸಿಡುಕಿದೆ, ಭಾಷೆ ಇದೆ-ಅಭಿಲಾಷೆ ಇದೆ. ಶಕ್ತಿಯಿದೆ-ನಿರಾಸಕ್ತಿಯೂ ಇದೆ. ಆ ಹೆಸರೇ ಸಾಕು ಕೊನೆಯವರೆಗೆ ನಿನ್ನ ಕರೆಯಲು. ಅಷ್ಟಕ್ಕೂ ನಿನ್ನ ಅಸಲಿ ಹೆಸರಿನ ತಕರಾರು ನನಗೇಕೆ?

ಅಳಿಸಿ ಬಿಡು ಹಳೆಯ ಮಾಸಿದ ಚಿತ್ರಗಳನ್ನು... ಮೂಡಲಿ ಹೊಸ ಚಿತ್ತಾರ.. ಹಣೆ ಬರಹವನ್ನೇ ತಿದ್ದುವ ಸಾಮರ್ಥ್ಯವೇ ನಿನಗಿದೆಯಲ್ಲ ಅಷ್ಟು ಸಾಕು ಸುಂದರ ಬದುಕಿಗೆ.

ಇಳಿಸಂಜೆಯ ಹೊತ್ತಲ್ಲಿ ರಸ್ತೆಯ ಆ ಕಡೆ ನೀನು.. ಈ ಕಡೆ ನಾನು ನಡೆದುಕೊಂಡು ಹೋಗುತ್ತಿದ್ದರೆ ತಿರುಗುವ ಭೂಮಿಯೂ ಒಂದು ಕ್ಷಣ ಅಲ್ಲೇ ನಿಂತು ನಮ್ಮನ್ನು ತಿರುಗಿ ನೋಡಿದರೆ ಆಶ್ಚರ್ಯವಿಲ್ಲ. ಇನ್ನಾದರೂ ಕಾಲಕ್ಕೆ ಸವಾಲೆಸೆಯುವ ನಿನ್ನ ಜಾಣ್ಮೆಯನ್ನು ನನ್ನೊಂದಿಗೆ ಹಂಚಿಕೊಳ್ಳುವೆಯಾ?

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Valentine's Day Special: A love letter which is reflects the inner feelings of a man. How to express his love and emotions? Here is a example.
Please Wait while comments are loading...