ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ ಫಸ್ಟ್ ಲವ್ ಸ್ಟೋರಿ 5ನೇ ಕ್ಲಾಸಲ್ಲಿ ಸುರುವಾಯ್ತು!

By * ಪ್ರವೀಣ ಚಂದ್ರ
|
Google Oneindia Kannada News

My First Love
ಹಲವು ವರ್ಷಗಳ ನಂತ್ರ ಅನಿರೀಕ್ಷಿತವಾಗಿ ರಿಲೇಷನ್ ಹುಡುಗಿ ಮಮತಾ ಎದುರಿಗೆ ಸಿಕ್ಕಿದಾಗ ಸುಮ್ಮಗೆ ಕೇಳಿದ್ದೆ. ಲಾವಣ್ಯ ಹೇಗಿದ್ದಾಳೆ? ಅಂತ. ಅವ್ಳಿಗೆ ಎಷ್ಟು ಅಚ್ಚರಿಯಾಯಿತೆಂದರೆ...

"ಅಯ್ಯೋ.. ಅಣ್ಣಾ, ನೀನಿನ್ನು ಅವಳ್ನ ಮರೆತಿಲ್ವಾ" ಅಂತ ಹೇಳಿದ್ಮೇಳೆ "ಅವ್ಳಿಗೆ ಕಳೆದ ವರ್ಷ ಮದುವೆಯಾಯ್ತು. ಗಂಡ ಮಿಲಿಟಿರಿಯಲ್ಲಿದ್ದಾನೆ" ಅನ್ನೋ ಬಾಂಬ್ ಕೂಡ ಹಾಕಿದಳು. ಆದ್ರೆ ಆ ಬಾಂಬ್ ನನ್ನೆದೆಯಲ್ಲಿ ಸ್ಪೋಟಿಸಲಿಲ್ಲ.

ಲಾವಣ್ಯ ಅಂದ್ರೆ ನನ್ನ ಮೊದಲ ಲವ್. ಐದನೇ ಕ್ಲಾಸ್‌ನಲ್ಲಿ ನನಗೆ ಗೊತ್ತಿಲ್ಲದೇ ಸುರುವಾದ ಡವ್. ಆಗ ಪ್ರೀತಿ ಪ್ರೇಮ ಪ್ರಣಯ ಅಂದ್ರೆ ಏನಂತ ಸರಿಯಾಗಿ ಗೊತ್ತಿರದ ವಯಸ್ಸು. ಆದ್ರೂ ನಮ್ಮ ಲವ್ ಮದುವೆಯವರೆಗೂ ಬಂದಿತ್ತು!

ಮೂಲ ಊರು ಮಡಿಕೇರಿಯಾದರೂ ನಾನು ಹುಟ್ಟಿದ್ಮೆಲೆ ನಮ್ ಫ್ಯಾಮಿಲಿ ನೆಲೆ ನಿಂತದ್ದು ಪುತ್ತೂರಲ್ಲಿ. ಎಷ್ಟೋ ವರ್ಷಗಳಿಗೊಮ್ಮೆ ಅಜ್ಜಿ ಮನೆ ನೆಪದಲ್ಲಿ ಮಡಿಕೇರಿಗೆ ಹೋಗುವ ಅವಕಾಶ ಸಿಗುತ್ತಿತ್ತು. ಯಾಕೋ ಗೊತ್ತಿಲ್ಲ. ಮಡಿಕೇರಿಯಲ್ಲಿ ಅತ್ತೆ ಮನೆಗೆ ಹೋಗುವುದೆಂದರೆ ಭಾರಿ ಖುಷಿ. ಅಲ್ಲಿ ಮನು ಮಮತಾ(ಮಾಮನ ಮಕ್ಕಳು) ರೊಂದಿಗೆ ಆಟವಾಡುವ ಖುಷಿನೋ ಗೊತ್ತಿಲ್ಲ.

ನಾನು ಸಣ್ಣವನಿದ್ದಾಗ ಅಂದ್ರೆ 5ನೇ ಕ್ಲಾಸ್‌ನಲ್ಲಿ ಮಡಿಕೇರಿಯ ಗೋಣಿಕೊಪ್ಪಲು ಸಮೀಪದ ಅಮ್ಮತಿ ಎಂಬಲ್ಲಿಗೆ ಹೋಗಿದ್ದೆ. ಅದು ನನ್ನ ಅತ್ತೆಯ ಮನೆ. ಅಂದ್ರೆ ಅಪ್ಪನ ತಂಗಿ ಮನೆ. ಅಲ್ಲಿನ ಗದ್ದೆ, ಕುಬ್ಜ ಕಾಫಿ ಗಿಡಗಳು, ಒಂದು ಬೃಹತ್ ಮರದಲ್ಲಿ ಹತ್ತಿಪ್ಪತ್ತು ದೊಡ್ಡ ಜೇನುಗೂಡುಗಳು. ಹೀಗೆ ಅಜ್ಜಿ ಮನೆಯ ನೆನಪು ಜೇನಿಗಿಂತ ಹೆಚ್ಚು ಸಿಹಿ.

ನಾವು ಮಾಮನ ಪಕ್ಕದ ಮನೆಯಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದೇವು. ಆ ಮನೆಗೆ ಲಾವಣ್ಯ ಎಂಬ ಆರನೇ ಕ್ಲಾಸ್‌ನ ಹುಡುಗಿ ಕೂಡ ನಮ್ಮ ತರಹನೇ ನೆಂಟರ ಮನೆಗೆಂದು ಬಂದಿದ್ದಳು. ಮೊದಲ ದಿನವೇ ನನಗವಳು ಇಷ್ಟ(?)ವಾಗಿದ್ದಳು. ಮೊದ್ಲಿಗೆ ಒಂದೆರಡು ದಿನ ಸುಮ್ಮನೆ ಸೈಲೆಂಟಾಗಿ ಬಿಟ್ಟಿದಳು.

ಮೊದಲು ಅವಳು ಹೇಗಿದ್ದಳು ಅಂತ ವಿವರಿಸಬೇಕು. ಅವರ ಮನೆಯವರು ಕೊಂಚ ಶ್ರೀಮಂತರಾಗಿರಬೇಕು. ತುಂಬಾ ಮಾಡರ್ನ್‌ ಆಗಿದ್ದಳು. ಪುಟ್ಟ ಜೀನ್ಸ್ ಚಡ್ಡಿ, ಕಿವಿಯಲ್ಲಿ ರಿಂಗ್, ವೈಟ್ ಶಾರ್ಟ್ ಶರ್ಟ್, ಬಿಳಿ ಬಣ್ಣ, ನನಗಿಂತ ಉದ್ದವಾಗಿದ್ದ ಲಾವಣ್ಯ ಮುದ್ದಾಗಿ ಕಾಣುತ್ತಿದ್ದಳು. ಕ್ಷಮಿಸಿ ಹೆಚ್ಚು ನೆನಪಿಲ್ಲ!

ಒಂದೆರಡು ದಿನಗಳಲ್ಲಿ ಊರಿಂದ ಬಂದ ನನ್ನೊಂದಿಗೆ ತುಂಬಾ ಆತ್ಮೀಯಳಾಗಿಬಿಟ್ಟಳು. ಎಷ್ಟೆಂದರೆ ಉಳಿದ ಮಕ್ಕಳಿಗೆ ಅಸೂಯೆಯಾಗುವಷ್ಟು. ಆ ಗದ್ದೆ ಬದುಗಳಲ್ಲಿ, ರಸ್ತೆಯ ಬದಿಯಲ್ಲಿ ಸುಮ್ಮಗೆ ನಡೆಯುತ್ತಿದ್ದೇವು. ಆ ನಾಲ್ಕು ದಿನದಲ್ಲಿ ಎಷ್ಟು ಸುತ್ತಾಡಿದ್ದೇವೆ, ಎಷ್ಟು ಮಾತನಾಡಿದ್ದೇವೆ ಅಂದ್ರೆ ಹೇಳೋಕ್ಕಾಗಲ್ಲ.

ನಿಮಗೀಗ ಕೋಪ ಬಂದಿರಬಹುದು. ಬಾಲ್ಯದ ಮಕ್ಕಳ ಆಟವನ್ನು ಲವ್‌ ಅನ್ನೋ ಹೆಸರಿನಲ್ಲಿ ಕರೆದದ್ದು ಉದ್ಧಟ್ಟತನದ ಪರಮಾವಧಿ ಅಂತ ಕರೀಬೇಡಿ. ಕತೆ ಮುಗಿದಿಲ್ಲ.

ಅದೊಂದು ದಿನ. ರಸ್ತೆ, ಗದ್ದೆ ಸುತ್ತಾಡಿಕೊಂಡು ಬಂದು ಸುಸ್ತಾಗಿ ಮನೆಯ ಜಗಲಿಯಲ್ಲಿ ಕುಳಿತುಕೊಂಡೆವು. ಅತ್ತೆಮಾವ ಎಲ್ಲೋ ಹೋಗಿದ್ದರು. ಅಲ್ಲಿ ನಾವಿಬ್ಬರೇ ಇದ್ದೇವು! ಆ ಸಮಯದಲ್ಲಿ ನಾವು ಮಾತನಾಡಿದ್ದು ನಮ್ ಮದುವೆಯ ಬಗ್ಗೆ..

ನೀನು ಯಾವಾಗ ಮನೆಗೆ ಹೋಗೋದು. ನಂಗೆ ಬೇಜಾರಾಗ್ತಿದೆ ಅಂತ ಲಾವಣ್ಯ ಅಳು ಮುಖ ಮಾಡಿಕೊಂಡ್ಳು. ಆ ಸಮಯದಲ್ಲಿ ನಮ್ ಮನಸ್ಸಿಗೆ ಹೊಳೆದದ್ದು ಮದುವೆ. ಸರಿ ಮದುವೆ ಕುರಿತು ತುಂಬಾ ಹೊತ್ತು ಮಾತನಾಡಿದೆವು. ಕೊನೆವರೆಗೂ ಜೊತೆಯಾಗಿರೋಣ. ಮದುವೆಯಾದ್ಮೆಳೆ ಜಗಳವಾಡಬಾರ್ದು, ಯಾವ ಕಲ್ಯಾಣಮಂಟಪದಲ್ಲಿ ಮದುವೆಯಾಗೋದು...

ಹೀಗೆ ಒಂದಿಷ್ಟು ಕನಸು ಕಾಣುತ್ತ ಮಾತನಾಡಿದ್ದೇವು. ಆಮೇಲೆ ಏನೋ ಜ್ಞಾನೋದಯವಾದಂತೆ ಹೇ ಬೇಡ ಇಷ್ಟು ಬೇಗ ಮದುವೆಯಾಗೋದು. ನಾವು ಚೆನ್ನಾಗಿ ಓದಿ, ಒಳ್ಳೆ ಕೆಲಸಕ್ಕೆ ಸೇರಿ, ದೊಡ್ಡ ಜನವಾಗಿ ಆಮೇಲೆ ಮದುವೆಯಾಗೋಣ ಅಂತ ಮಾತನಾಡಿಕೊಂಡೆವು.

ಜಗಲಿಯಲ್ಲಿ ಕುಳಿತು ಮಾತನಾಡಿದ್ದು ಸಾಕೆನಿಸಿ ಮತ್ತೆ ಆಟವಾಡಲು ಹೋದೆವು..

ಸಂಜೆ ಮನೆಗೆ ಮರಳಿದಾಗ ಅದೇ ಜಗಲಿಯಲ್ಲಿ ಮಾವ, ಅತ್ತೆ, ಅಜ್ಜಿ, ಅಜ್ಜ ಎಲ್ಲ ಕೂತು ಜೋರಾಗಿ ನಗುತ್ತ ಮಾತನಾಡುತ್ತಿದ್ದರು.

ಆಮೇಲೆ ನಮಗೆ ಗೊತ್ತಾದ ವಿಷ್ಯವೆಂದ್ರೆ, ನಾವಿಬ್ಬರು ಮಧ್ಯಾಹ್ನ ಮದುವೆ ಮಾತುಕತೆಯಾಡುವಾಗ ಒಳಗೆ ಮಲಗಿಕೊಂಡಿದ್ದ ಅಜ್ಜಿ ಎಲ್ಲಾ ಕೇಳಿಸಿಕೊಂಡಿದ್ರಂತೆ. ಅದನ್ನು ಎಲ್ಲರಿಗೂ ಹೇಳಿ ಬೊಚ್ಚು ಬಾಯಿಯಿಂದ ನಗುತ್ತಿದ್ದರು. ಅವ್ರ ಹಲ್ಲು ಉದುರಿಸಬೇಕೆಂದು ಆಗ ಅನಿಸಿತ್ತೋ ಇಲ್ವೋ ಅನ್ನೋದು ಈಗ ನೆನಪಿಲ್ಲ!

ನನ್ನನ್ನು ಹತ್ತಿರ ಕೂರಿಸಿಕೊಂಡ ಮಾಮಿ "ಇವಳನ್ನು ಮದುವೆಯಾಗ್ತಿಯಾ? ಅಪ್ಪನಿಗೆ ಫೋನ್‌ ಮಾಡಿ ಹೇಳ್ಬೇಕಾ? ಅಂತ ಅತ್ತೆ ತಮಾಷೆ ಮಾಡತೊಡಗಿದಾಗ ಅವಳು ಅತ್ತಳು. ಯಾಕೋ ಗೊತ್ತಿಲ್ಲ ಅವ್ಳು ಅಳೋದನ್ನು ನೋಡಿ ನಂಗೂ ಅಳು ಬಂದು ಮನೆಯೊಳಗೆ ಓಡಿದೆ.

English summary
I want share my first love with you. I started to love one girl in my fifth standard. That time we don't know the meaning of love but we discussed about our marriage. If anyone asked who is your first love i remember her.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X