Vaikuntha Chaturdashi 2023: ಒಂದೇ ದಿನ ಹರಿ-ಹರರ ಸ್ಮರಣೆ: ಶುಭ ಮುಹೂರ್ತ, ಪೂಜೆ ವಿಧಾನ ಹೇಗೆ..?
ಹಿಂದೂ ಧರ್ಮದ ಆಚರಣೆಯಲ್ಲಿ ವೈಕುಂಠ ಚತುರ್ದಶಿಗೆ ಅಪಾರ ಮಹತ್ವವಿದೆ. ಕಾರ್ತಿಕ ಪೂರ್ಣಿಮೆಯ ಒಂದು ದಿನ ಮೊದಲು ವೈಕುಂಠ ಚತುರ್ದಶಿಯನ್ನು ಆಚರಿಸಲಾಗುತ್ತದೆ. ಈ ದಿನವು ಭಗವಾನ್ ವಿಷ್ಣು ಮತ್ತು ಭಗವಾನ್ ಶಿವನನ್ನು ಪೂಜಿಸಲು ಸಂಪೂರ್ಣವಾಗಿ ಮೀಸಲಾಗಿದೆ. ಒಂದೇ ದಿನ ಹರಿಹರನನ್ನು ಪೂಜಿಸುವುದು ಅತ್ಯಂತ ಮಂಗಳಕರ.
ಕಾರ್ತಿಕ ಮಾಸದ ಶುಕ್ಲ ಪಕ್ಷದ ಚತುರ್ದಶಿ ತಿಥಿಯಂದು ವೈಕುಂಠ ಚತುರ್ದಶಿ ಬರುತ್ತದೆ. ಈ ವರ್ಷ ನಾಳೆ ಅಂದರೆ ನವೆಂಬರ್ 25ರ ಸಂಜೆ 5ಗಂಟೆಗೆ ಚತುರ್ದಶಿಯ ತಿಥಿ ಆರಂಭವಾಗಿ ನವೆಂಬರ್ 26ರ ಮಧ್ಯಾಹ್ನ 3:53ಕ್ಕೆ ಕೊನೆಗೊಳ್ಳುತ್ತದೆ. ಆದರೆ ಬಹುತೇಕ ಕಡೆಗಳಲ್ಲಿ ನಾಳೆಯೇ ವೈಕುಂಠ ಚತುರ್ದಶಿಯನ್ನು ಮಾಡಲಾಗುತ್ತದೆ.

ನವೆಂಬರ್ 25, 2023 ರಂದು ಮಧ್ಯರಾತ್ರಿಯಲ್ಲಿ (ನಿಶಿತ ಕಾಲ) ಭಗವಾನ್ ವಿಷ್ಣುವನ್ನು ಪೂಜಿಸಬೇಕು ಮತ್ತು ನವೆಂಬರ್ 26, 2023 ರಂದು ಮುಂಜಾನೆ ಸೂರ್ಯೋದಯಕ್ಕೆ ಸ್ವಲ್ಪ ಮೊದಲು ಶಿವನನ್ನು ಪೂಜಿಸಬೇಕು. ವೈಕುಂಠ ಚತುರ್ದಶಿಯಂದು ಉಪವಾಸ ಮಾಡುವುದರಿಂದ ಮೋಕ್ಷವನ್ನು ಪಡೆಯಬಹುದು ಎಂದು ನಂಬಲಾಗಿದೆ. ಅಲ್ಲದೇ ಭಕ್ತರು ಮಧ್ಯರಾತ್ರಿಯಲ್ಲಿ ವಿಷ್ಣುವನ್ನು ಪೂಜಿಸಿ ಒಂದು ಸಾವಿರ ಕಮಲಗಳನ್ನು ಆರ್ಪಿಸಬೇಕು ಜೊತೆಗೆ ವಿಷ್ಣು ಸಹಸ್ರನಾಮ ಪಠಿಸುವುದರಿಂದ ಕಷ್ಟ-ಕಾರ್ಪಣ್ಯಗಳು ದೂರಾಗಿ ಸುಖ-ಶಾಂತಿ ನೆಲಸುತ್ತದೆ ಎನ್ನುವ ನಂಬಿಕೆ ಇದೆ.
ವೈಕುಂಠ ಚತುರ್ದಶಿಯ ಪೌರಾಣಿಕ ಕಥೆ ಏನು..?
ಒಮ್ಮೆ ವಿಷ್ಣು ಶಿವನನ್ನು ಪೂಜಿಸಲು ಕಾಶಿಗೆ ಭೇಟಿ ನೀಡಿದನು. ಮಣಿಕರ್ಣಿಕಾ ಘಾಟ್‌ನಲ್ಲಿ ಗಂಗಾ ಸ್ನಾನ ಮಾಡಿದ ನಂತರ, ಶಿವನಿಗೆ ಸಾವಿರ ಚಿನ್ನದ ಕಮಲದ ಹೂವುಗಳನ್ನು ಅರ್ಪಿಸುವ ಬಯಕೆಯಿಂದ ಪೂಜೆ ಆರಂಭಿಸುತ್ತಾನೆ. ತನ್ನ ಮೇಲಿನ ಭಕ್ತಿಯನ್ನು ಪರೀಕ್ಷಿಸಲು ಶಿವನು ಒಂದು ಹೂವನ್ನು ಮರೆಮಾಚುತ್ತಾನೆ. ಹೂವು ಕಾಣೆಯಾಗಿದೆ ಎಂದು ಕೊಂಡ ವಿಷ್ಣುವು ಕಮಲನಯನ ಎಂದು ತನ್ನ ಒಂದು ಕಣ್ಣನ್ನು ಹೂವಿನ ಬದಲಿಗೆ ಅರ್ಪಿಸಲು ಮುಂದಾಗುತ್ತಾನೆ.
ಆಗ ಪ್ರತ್ಯಕ್ಷನಾದ ಶಿವನು, ವಿಷ್ಣುವನ್ನು ನಿಲ್ಲಿಸಿ ಅವನ ಭಕ್ತಿ ಮತ್ತು ಪ್ರೀತಿಯನ್ನು ಕಂಡು ಸಂತೋಷಗೊಂಡನು. ವಿಷ್ಣುವಿನ ಭಕ್ತಿಗೆ ಮೆಚ್ಚಿದ ಶಿವ ಸುದರ್ಶನ ಚಕ್ರವನ್ನು ನೀಡುತ್ತಾನೆ. ಅಲ್ಲದೇ ಈ ಪವಿತ್ರ ದಿನದಂದು ಭಗವಾನ್ ವಿಷ್ಣುವನ್ನು ಪೂಜಿಸುವವರು ಮೋಕ್ಷ ಪಡೆದು ನೇರವಾಗಿ ವೈಕುಂಠ ಧಾಮಕ್ಕೆ ಹೋಗುತ್ತಾರೆ ಎಂದು ಶಿವನು ವರ ನೀಡಿದನು. ಅಂದಿನಿಂದ ವೈಕುಂಠ ಚತುರ್ದಶಿಯನ್ನು ಭಕ್ತಿಪೂರ್ಣವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

ವೈಕುಂಠ ಚತುರ್ದಶಿ 2023 ಪೂಜಾ ವಿಧಿವಿಧಾನಗಳೇನು..?
1. ವೈಕುಂಠ ಚತುರ್ದಶಿ ಮಾಡುವವರು ಬೆಳಗೆ ಬೇಗ ಎದ್ದು ಸ್ನಾನ ಮಾಡಬೇಕು.
2. ಮನೆ ಮತ್ತು ಪೂಜಾ ಕೊಠಡಿಯನ್ನು ಸ್ವಚ್ಛಗೊಳಿಸಬೇಕು.
3. ತುಳಸಿ ದಳ, ಬಿಲ್ವಪತ್ರ ಹಾಗೂ ಕಮಲದ ಹೂವುಗಳನ್ನು ಹರಿ-ಹರರಿಗೆ ಅರ್ಪಿಸಬೇಕು.
4. ಶಿವ ಮತ್ತು ವಿಷ್ಣುವಿನ ದೇವಾಲಯಗಳಿಗೆ ಭೇಟಿ ನೀಡಬೇಕು.
5. ಶಿವ ಮತ್ತು ವಿಷ್ಣುವಿಗೆ ತುಪ್ಪದ ದೀಪ ಹಚ್ಚಬೇಕು. ಹೂವುಗಳು, ಹಣ್ಣುಗಳನ್ನು ದೇವರಿಗೆ ಅರ್ಪಿಸಬೇಕು.
6. ಮಹಾ ಮೃತ್ಯುಂಜಯ ಮಂತ್ರ ಮತ್ತು ವಿಷ್ಣು ಸಹಸ್ರನಾಮವನ್ನು ಪಠಿಸಬೇಕು
7. ಈ ದಿನ ಉಪವಾಸ ಆಚರಿಸಿದರೆ ಒಳಿತು. ಹೀಗಾಗಿ ಉಪವಾಸ ಆಚರಿಸುವವರು ಹಣ್ಣುಗಳನ್ನು ಸೇವನೆ ಮಾಡಬಹುದು.












Click it and Unblock the Notifications