Bevu Bella Payasa Recipe: ಬೇವಿನ ಪಾಯಸ ರೆಸಿಪಿ- ಯುಗಾದಿ ಹಬ್ಬಕ್ಕೆ ಯುಗಾದಿ ಪಚಡಿ ತಯಾರಿಸಿ
ಯುಗಾದಿ ಹಬ್ಬ ಬಂತು ಅಂದರೆ ಮನೆಯಲ್ಲಿ ಸಿಹಿ ತಿಂಡಿಗಳ ತಯಾರಿ ಶುರುವಾಗುತ್ತದೆ. ಬಗೆ ಬಗೆಯ ಸಿಹಿ ತಿನಿಸುಗಳನ್ನು ತಯಾರಿಸಿ ಹೊಸ ವರ್ಷ ಯುಗಾದಿಯನ್ನು ಬರಮಾಡಿಕೊಳ್ಳಲಾಗುತ್ತದೆ. ಹೀಗೆ ಯುಗಾದಿ ಹಬ್ಬವನ್ನು ಆಚರಿಸುವ ಪ್ರತಿಯೊಬ್ಬರಿಗೂ ಬೇವಿನ ಪಾಯಸದ ಬಗ್ಗೆ ತಿಳಿದಿಲ್ಲ. ಉತ್ತರ ಕರ್ನಾಟಕದಲ್ಲಿ ಬೇವಿನ ಪಾಯಸ ಮಾಡದೇ ಇದ್ದರೆ ಅದು ಯುಗಾದಿ ಹಬ್ಬ ಅನಿಸಿಕೊಳ್ಳುವುದೇ ಇಲ್ಲ. ಹಾಗಾದರೆ ಏನಿದು ಬೇವಿನ ಪಾಯಸ? ಹೇಗಿರುತ್ತೆ? ಹೇಗೆ ಮಾಡಲಾಗುತ್ತದೆ ಅನ್ನೋದನ್ನು ತಿಳಿಯೋಣ.
ಬೇವು ಕಹಿ, ಬೆಲ್ಲ ಸಿಹಿ, ಈ ಎರಡು ಸೇರಿದಾಗ ಜೀವನದಲ್ಲಿ ಸಿಹಿ ಕಹಿ, ಏಳು ಬೀಳು, ಸುಖ ದು:ಖ ಎಲ್ಲವನ್ನೂ ಸರಿಸಮಾನವಾಗಿ ಸ್ವೀಕರಿಸಬೇಕು ಅನ್ನೋದನ್ನು ಅರ್ಥೈಸುತ್ತದೆ. ಹೀಗಾಗಿ ಈ ಪಾಯಸವನ್ನು ಯುಗಾದಿ ಹಬ್ಬದಂದು ತಯಾರಿಸುವುದು ರೂಢಿ. ಸಾಮಾನ್ಯವಾಗಿ ಬೇವು ತುಂಬಾ ಕಹಿಯಾಗಿರುವುದರಿಂದ ಅದರ ಹೂವುಗಳನ್ನು ಬಳಸಿ ಬೇವಿನ ಪಾಯಸ ತಯಾರಿಸಲಾಗುತ್ತದೆ. ಹಾಗಾದರೆ ಇದನ್ನು ತಯಾರಿಸುವ ವಿಧಾನವನ್ನು ಈಗ ತಿಳಿಯೋಣ.

ಬೇಕಾಗುವ ಪದಾರ್ಥಗಳು:-
* ಬೇವಿನ ತಾಜಾ ಹೂವು 1 ಟೇಬಲ್ ಸ್ಪೂನ್
* ಹುಣಸೆ ಹಣ್ಣು 1 ಹಿಡಿ
* ಬೆಲ್ಲ 1 ಹಿಡಿ
* ಬಾದಾಮಿ 6-7
* ಒಣ ಕರ್ಜುರ 3-4
* ಪಿಸ್ತಾ 6-7
*ಗೋಡಂಬಿ 3-4
*ಒಣ ದ್ರಾಕ್ಷಿ 8-9
*ಜಾಯಿ ಕಾಯಿ ಪೌಡರ್ ಕಾಲ್ ಟೀ ಸ್ಪೂನ್
* ಒಣ ಶುಂಠಿ ಕಾಲ್ ಟೀ ಸ್ಪೂನ್
* ಕೆಂಪು ಕಲ್ಲು ಸಕ್ಕರೆ 1 ಟೇಬಲ್ ಸ್ಪೂನ್
* ಏಲಕ್ಕಿ 4
* ಮಾವಿನ ಕಾಯಿ(ಒಂದು ಟೇಬಲ್ ಸ್ಪೂನ್ ತುರಿದ ಮಾವಿನ ಕಾಯಿ ಹಾಗೂ ಮೂರು ಚಮಚ ಚಿಕ್ಕದಾಗಿ ಕಟ್ ಮಾಡಿದ ಮಾವಿನ ಕಾಯಿ)
*ಒಣಕೊಬ್ಬರಿ (ತುರಿದ ಒಣಕೊಬ್ಬರಿ ಎರಡು ಚಮಚ)
*ಪುಟಾಣಿ 5 ಟೇಬಲ್ ಸ್ಪೂನ್
*ಗಸಗಸೆ 1 ಟೇಬಲ್ ಸ್ಪೂನ್
*ಐಸ್ ವಾಟರ್(ತಣ್ಣನೆಯ ನೀರು ಎರಡು ಕಪ್)
* ಮೆಣಸಿನ ಪುಡಿ ಸ್ವಲ್ಪ
* ಉಪ್ಪಿ ಚಿಟಿಕೆಯಷ್ಟು
ತಯಾರಿಸುವ ವಿಧಾನ:-
* ಮೊದಲಿಗೆ ಹುಣಸೇಹಣ್ಣು ಅರ್ಧಗಂಟೆ ನೆನೆಹಾಕಿ ಚೆನ್ನಾಗಿ ಕಿವಿಚಿ ಸೋಸಿಕೊಂಡು ಒಂದು ಕಪ್ಪು ರಸ ತೆಗೆದುಕೊಳ್ಳಬೇಕು
* ಹುಣಸೆ ಹಣ್ಣಿನ ರಸಕ್ಕೆ ಒಂದು ಕಪ್ ಬೆಲ್ಲವನ್ನು ಹಾಕಿ ಕರಗುವವರೆಗೂ ಮಿಕ್ಸ್ ಮಾಡಿ
* ಬಳಿಕ ಇದಕ್ಕೆ ಸಣ್ಣದಾಗಿ ಕಟ್ ಮಾಡಿದ ಬಾದಾಮಿ, ಒಣ ಕರ್ಜುರ, ಪಿಸ್ತಾ, ಗೋಡಂಬಿ, ಒಣ ದ್ರಾಕ್ಷಿಯನ್ನು ಹಾಕಿ
* ಬಳಿಕ ಇದಕ್ಕೆ ಪೌಡರ್ ಮಾಡಿದ ಜಾಯಿ ಕಾಯಿ, ಒಣ ಶುಂಠಿ, ಕೆಂಪು ಕಲ್ಲು ಸಕ್ಕರೆ, ಏಲಕ್ಕಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
* ತುರಿದ ಮಾವಿನ ಕಾಯಿ, ಒಣಕೊಬ್ಬರಿ ಹಾಗೂ ಚಿಕ್ಕದಾಗಿ ಕಟ್ ಮಾಡಿದ ಮಾವಿನ ಕಾಯಿ ಹಾಕಿ.
* ಒಂದು ಕಪ್ ಪುಟಾಣಿ/ಹುರಿಗಡಲೆ ತೆಗೆದುಕೊಂಡು ಪೌಡರ್ ಮಾಡಿ, ನೀರು ಹಾಕಿ ಚನ್ನಾಗಿ ಮಿಕ್ಸ್ ಮಾಡಿ ಗಸಗಸೆ ಹಾಕಿ ಕಲಸಿ. ಈಗಾಗಲೇ ತಯಾರಿಸಿದ ಮಿಶ್ರಣಕ್ಕೆ ಹಾಕಿ ಕಲಸಿ
* ಬಳಿಕ ಇದಕ್ಕೆ ಬೇವಿನ ಹೂವು ಹಾಕಿ, ಮೂರು ಲೋಟ ಐಸ್ ವಾಟರ್ ಹಾಕಿ ಸ್ವಲ್ಪ ಮೆಣಸಿನ ಪುಡಿ ಹಾಗೂ ಚಿಟಿಕೆ ಉಪ್ಪು ಹಾಕಿದರೆ ಬೇವಿನ ಪಾಯಸ ಸವಿಯಲು ಸಿದ್ಧ.












Click it and Unblock the Notifications