ಸಿರಿ-ಸಂಭ್ರಮದ ಯುಗಾದಿಗೊಂದು ಮುನ್ನುಡಿ!
ವರ್ಷದ ಮೊದಲ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹೊಸಬಟ್ಟೆ, ಹೊಸ ಕನಸು, ಹೊಸ ಉತ್ಸಾಹ, ಹೊಸ ಲವಲವಿಕೆ ಹೊತ್ತು ತರುವ ಹಬ್ಬ ಯುಗಾದಿಗೆ ಸ್ವಾಗತ...
- ತಳಕು ಶ್ರೀನಿವಾಸ್, ಮುಂಬಯಿ
-ಜೀವನವೆಲ್ಲಾ ಬೇವು ಬೆಲ್ಲ ಅರಿತು ಬಾಳುವನೇ ಕಲಿಗಳ ಮಲ್ಲ ..
-ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷದಿ ಹೊಸ ಹರುಷವ ಹೊಸತು ಹೊಸತು ತರುತಿದೆ..
ಪ್ರತಿ ವರುಷ ಯುಗಾದಿ ಹಬ್ಬದ ದಿನ ರೇಡಿಯೋ ಮತ್ತು ಟೀವಿಗಳಲ್ಲಿ ಈ ಹಾಡು ಪ್ರಸಾರವಾಗುತ್ತದೆ. ಎಷ್ಟೇ ಬಾರಿ ಕೇಳಿದರೂ ತೃಪ್ತಿಯಾಗದೇ ಮತ್ತೆ ಮತ್ತೆ ಕೇಳಬೇಕೆನಿಸುವ ಸಾಹಿತ್ಯ. ದ.ರಾ.ಬೇಂದ್ರೆಯವರು ಬರೆದ ಈ ಗೀತೆಯನ್ನು ‘ಕುಲವಧು’ ಚಲನಚಿತ್ರಕ್ಕೆ ಅಳವಡಿಸಿಕೊಂಡಿದ್ದಾರೆ. ಹಾಡಿರುವವರು ಎಸ್. ಜಾನಕಿ.
ಮಾರ್ಗಶೀರ್ಷ ಮಾಸದ ಹೋಳಿ ಹುಣ್ಣಿಮೆಯಾದ 15 ದಿನಗಳಿಗೆ ಬರುವುದು ಯುಗಾದಿ. (ಮಾರ್ಚ್ 19 , 2007, ಸೋಮವಾರ ). ಯುಗ ಎಂದರೆ ಅದೊಂದು ಕಾಲಗಣನೆ. ತ್ರೇತಾಯುಗ, ಕೃತಯುಗ, ದ್ವಾಪರಯುಗ, ಕಲಿಯುಗ. ಯುಗವೆಂದರೆ 5000ಕ್ಕೂ ಹೆಚ್ಚಿನ ವರುಷಗಳಂತೆ. ಆದರೆ ಇಲ್ಲಿ ಹಾಗಲ್ಲ. ಕಾಲದ ಒಂದು ಭಾಗ ಮತ್ತೆ ಪ್ರಾರಂಭವಾಗುತ್ತಿದೆ ಎಂಬುದರ ಸೂಚನೆಯಷ್ಟೆ.
ವಸಂತ ಋತುವಿನಿಂದ ಪ್ರಾರಂಭಗೊಂಡ ಕಾಲಗಣನೆ ಶಿಶಿರದಲ್ಲಿ ಮುಕ್ತಾಯಗೊಂಡು ಮತ್ತೆ ವಸಂತ ಪ್ರಾರಂಭವಾಗುತ್ತಿರುವುದರ ಸೂಚನೆ. ಇಂತಹ ಯುಗದ ಅಂದರೆ ವರುಷದ ಮೊದಲನೆಯ ದಿನವನ್ನು ಯುಗಾದಿ ಎಂದು ಗುರುತಿಸಿ ಹಬ್ಬವನ್ನಾಗಿ ಆಚರಿಸಿಕೊಂಡು ಬರುತ್ತಿದ್ದೇವೆ ನಾವು.
ಈ ದಿವಸದಲ್ಲಿ ಒಳ್ಳೆಯ ಅಥವಾ ಕೆಟ್ಟ ಘಟನೆ ಯಾವುದೇ ಆದರೂ ಮುಂದೆ ಇಡೀ ಒಂದು ವರ್ಷದಲ್ಲಿ ಅದರ ಪರಂಪರೆ ಮುಂದುವರಿಯುತ್ತದೆ ಎಂಬುದು ಕೆಲವರ ನಂಬಿಕೆ. ಈ ದಿನದಂದು ಯಾವ ವಾರ ಇರುತ್ತದೆಯೋ ಅದನ್ನೇ ವರ್ಷದ ಅಧಿಪತಿ ಎಂದು ಕರೆಯುವರು. ಉದಾಹರಣೆಗೆ - ಈ ವರ್ಷದ ಯುಗಾದಿ ಹಬ್ಬವು ಸೋಮವಾರ ಬರುವುದರಿಂದ ಇಡೀ ವರ್ಷಕ್ಕ ಸೋಮನೇ (ಚಂದ್ರ) ಅಧಿಪತಿ.
ಹೊಸ ಚೈತನ್ಯ
ಚಾಂದ್ರಮಾನ ಪಂಚಾಂಗ ರೀತ್ಯಾ ಚೈತ್ರ ಮಾಸದ ಶುದ್ಧ ಪಾಡ್ಯದ ದಿನದಂದು ಬ್ರಹ್ಮ ಈ ಲೋಕವನ್ನು ಸೃಷ್ಟಿಸಿದ ಎಂಬ ಪ್ರತೀತಿ ಇದೆ. ಇಂದೇ ಸೂರ್ಯನು ತನ್ನ ಮೊದಲ ಕಿರಣವನ್ನು ಭೂಮಿಯ ಮೇಲೆ ಹರಿಸಿದ ಎಂಬ ಮಾತೂ ಇದೆ. ಇವೆಲ್ಲವೂ ಇಂದು ನಂಬಲಶಕ್ಯ. ಆದರೂ ಮುಂದಿನ ಪೀಳಿಗೆಗೆ ಇದರ ಬಗ್ಗೆ ಸ್ವಲ್ಪವಾದರೂ ತಿಳಿದಿರಲಿ ಎಂದು ಹೇಳಬೇಕಿದೆ.
ಇಂದಿನ ದಿನದಿಂದ ವಸಂತ ಮಾಸ ಪ್ರಾರಂಭವಾಗಿ ತರುಲತೆಗಳು ಚಿಗುರುತ್ತವೆ. ಹೊಸ ಹೊಸ ಹೂಗಳು ಕಂಪನ್ನು ಬೀರುತ್ತವೆ. ಹಳೆಯ ತರಗೆಲೆಗಳು ಉದುರಿ ಗಿಡ ಮರಗಳು ಮತ್ತೆ ಮರಳಿ ಹೊಸ ಚೈತನ್ಯ ಪಡೆಯುತ್ತವೆ. ಜೀವನದಲ್ಲಿ ಒಂದು ವರುಷಗಳಲ್ಲಿ ಕಂಡ ಸುಖ ದು:ಖಗಳನ್ನು ಮರೆತು ಹೊಸ ಬಾಳನ್ನು ನೋಟ್‌ಬುಕ್ಕಿನ ಹೊಸ ಪುಟದಂತೆ ಪ್ರಾರಂಭಿಸುವ ಸೂಚನೆಯ ಈ ದಿನವನ್ನು ಹಬ್ಬವನ್ನಾಗಿ ಆಚರಿಸುತ್ತಾರೆ.
ಇಂದಿನ ದಿನ ಶ್ರೀರಾಮನು ರಾವಣನನ್ನು ಜಯಿಸಿ ಮರಳಿ ಅಯೋಧ್ಯೆಗೆ ಬಂದು ರಾಜ್ಯಭಾರ ಮಾಡಿದನೆಂದು ಪ್ರತೀತಿ. ಇಂದಿನ ದಿನವೇ ವಿಷ್ಣುವು ಮತ್ಸ್ಯಾವತಾರವನ್ನು ತಳೆದದ್ದೆಂದೂ, ಶಾಲಿವಾಹನ ವಿಕ್ರಮಾದಿತ್ಯನನ್ನು ಜಯಿಸಿ ಶಾಲಿವಾಹನ ಶಕೆ ಎಂದೂ ನವಭಾರತವನ್ನು ನಿರ್ಮಿಸಿದರೆಂದೂ ಚರಿತ್ರೆಯಲ್ಲಿ ನಮೂದಿಸಿರುವರು.
ಎಲ್ಲೆಲ್ಲಿ ಯುಗಾದಿ ಆಚರಣೆ ?
ಈ ಹಬ್ಬವನ್ನು ಹೆಚ್ಚಾಗಿ ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಆಚರಿಸುವರು. ಆಂಧ್ರ ಮತ್ತು ಕರ್ನಾಟಕಗಳಲ್ಲಿ ಇದು ಯುಗಾದಿಯಾದರೆ, ಮಹಾರಾಷ್ಟ್ರದಲ್ಲಿ ಗುಡಿಪಡ್ವ. ಪಾಡ್ಯಮಿ ದಿವಸ ಗುಡಿಯನ್ನು ಏರಿಸುವುದೇ ಗುಡಿಪಡ್‌ವ - ಒಂದು ಕೋಲಿಗೆ ವಸ್ತ್ರವನ್ನು ಕಟ್ಟಿ, ಹೂವಿನ ಹಾರವನ್ನು ಏರಿಸಿ ‘ಗುಡಿ’ ಎಂದು ಮೂಲೆಯಲ್ಲಿ ಇರಿಸುವರು. ಇದು ಹೊಸ ವರುಷದ ಆಗಮನಕ್ಕೆ ಬಾವುಟವನ್ನು ಹಾರಿಸುವುದರ ಸಂಕೇತ.
ಆಂಧ್ರ ಪ್ರದೇಶದಲ್ಲಿ ಹುಣಿಸೇಹಣ್ಣು, ಬೆಲ್ಲ, ಮಾವಿನಕಾಯಿ, ಉಪ್ಪು, ಮೆಣಸು, ಬೇವು ಇತ್ಯಾದಿಗಳ ಮಿಶ್ರಣ ಮಾಡಿ ಯುಗಾದಿ ಪಚ್ಚಡಿ ಎಂಬ ಹೆಸರಿನ ಪದಾರ್ಥವನ್ನು ಸೇವಿಸುವರು. ಅಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಇರುವುದು. ತಮಿಳುನಾಡಿನಲ್ಲಿ ಯುಗಾದಿ ಪರ್ವವನ್ನು ಚಿತ್ರವಿಷು ಎಂದು ಕರೆಯುವರು. ಆದರೆ ಅಲ್ಲಿ ಸೌರಮಾನ ಲೆಕ್ಕದ ಪಂಚಾಂಗವನ್ನು ಕಾಲಗಣನೆಗೆ ಉಪಯೋಗಿಸುವರು. ಆದ್ದರಿಂದ ಅಲ್ಲಿನ ಯುಗಾದಿ ಹಬ್ಬ ಬೇರೆಯೇ ದಿನ ಬರುವುದು.











Click it and Unblock the Notifications