ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾವು ಬಂದಿದೆಯಾ, ಶ್ಯಾಮ್‌ನ ಕರೆಯಿರಿ

By Staff
|
Google Oneindia Kannada News

ಮನೆಗೆ ಹಾವು ಬಂದಿದೆ ಎಂದರೆ ಪೊಲೀಸ್‌ ಕಂಟ್ರೋಲ್‌ ರೂಂನಲ್ಲಿ ನೀಡುವುದು ಕೂಡ ಶ್ಯಾಮ್‌ನ ಪೇಜರ್‌ ನಂಬರ್‌ಚಾಮುಂಡಮ್ಮನ ಬೆಟ್ಟವನ್ನು ಕೇಂದ್ರವಾಗಿ ಹೊಂದಿರುವ ಮೈಸೂರು ಹುತ್ತಗಳ ಊರು. ಅಂದಮೇಲೆ ಹಾವುಗಳ ಊರು ಕೂಡ. ಆದರೆ, ಯಾವ ಹುತ್ತದಲ್ಲಿ ಯಾವ ಹಾವಿರುತ್ತದೆನ್ನುವುದು ಯಾರಿಗೆ ಗೊತ್ತು. ನಗರೀಕರಣದ ಪರಿಣಾಮವಾಗಿ ಮೈಸೂರು ಬೆಳವಣಿಗೆಯಲ್ಲಿ ಬೆಂಗಳೂರಿನೊಂದಿಗೆ ಸ್ಪರ್ಧೆಗಿಳಿದಿದೆ. ಹೀಗಾಗಿ ಹುತ್ತಗಳಿರಬೇಕಾದ ಸ್ಥಳಗಳಲ್ಲೆಲ್ಲಾ ಮನೆ, ಮಳಿಗೆಗಳು. ಪರಿಣಾಮವಾಗಿ, ನೆಲೆ ಕಳೆದುಕೊಂಡ ಹಾವುಗಳು ಮನೆಗಳಲ್ಲಿ ಹರಿದಾಡುತ್ತಿವೆ. ಆದರೂ ಮೈಸೂರಿಗರಿಗೆ ಭಯ ಎಂಬುದೇ ಇಲ್ಲ. ಏಕೆಂದರೆ ಸ್ನೇಕ್‌ ಶ್ಯಾಮ್‌ ಇದ್ದಾರಲ್ಲ . ಶ್ಯಾಮ್‌ ವೃತ್ತಿಯಲ್ಲಿ ಆಟೋರಿಕ್ಷಾ ಚಾಲಕ, ಪ್ರವೃತ್ತಿಯಲ್ಲಿ ಹಾವುಗಳನ್ನು ಹಿಡಿಯುವ ಚಾಲಾಕಿ.

ಶ್ಯಾಮ್‌ ಹಾವುಗಳ ಸಂಖ್ಯೆ ಹೆಚ್ಚಿಸಿದ್ದಾರೆಯೇ ? : ನಿಜ ಎನ್ನುತ್ತಾರೆ ಶ್ಯಾಮ್‌ ಗೆಳೆಯರು, ಪ್ರೀತಿಯಿಂದ. ಎಲ್ಲಾ ಊರುಗಳಲ್ಲೂ ಹಾವುಗಳಿವೆ. ಆದರೆ, ಸ್ನೇಕ್‌ ಶ್ಯಾಮ್‌ನಿಂದಾಗಿ ಮೈಸೂರಿನಲ್ಲಿ ಹಾವುಗಳ ಸಂಖ್ಯೆ ಹೆಚ್ಚಿರಬಹುದು ಎಂಬುದವರ ಕಿಚಾಯಿಸುವಿಕೆ. ಅಷ್ಟರ ಮಟ್ಟಿಗೆ ಶ್ಯಾಮ್‌ ಹಾವುಗಳನ್ನು ಹಿಡಿಯುತ್ತಿದ್ದಾರೆ. ಆದರೆ, ಶ್ಯಾಮ್‌ ಹಾವುಗಳನ್ನು ಕೊಲ್ಲುವುದಿಲ್ಲ . ಹಿಡಿದ ಹಾವುಗಳನ್ನು ಚಾಮುಂಡಿ ಬೆಟ್ಟ, ಬಂಡೀಪುರ ಮತ್ತಿತರೆಡೆಗಳಲ್ಲಿ ಬಿಟ್ಟು ಬರುತ್ತಾರೆ.

ಶ್ಯಾಮ್‌ನ ನಿಜವಾದ ಹೆಸರು, ಬಾಲ ಸುಬ್ರಹ್ಮಣ್ಯ. ಈ ರೀತಿ ಹೇಳಿದರೆ ಯಾರಿಗೂ ಗೊತ್ತಾಗುವುದಿಲ್ಲ . ಜನ ಓ ಅವರಾ ಅನ್ನಲಿಕ್ಕೆ, ಸ್ನೇಕ್‌ಶ್ಯಾಮ್‌ ಎಂದೇ ಕೇಳಬೇಕು. ಪ್ರೌಢಶಾಲೆ ವಿದ್ಯಾರ್ಥಿಯಾಗಿದ್ದಾಗ ಪಕ್ಕದ ಮನೆಯ ಹುಡುಗಿ ಹಾವು ಕಂಡು ಚೀರಿಕೊಂಡಾಗ ನೆರವಿಗೆ ಹೋಗಿದ್ದು ಶ್ಯಾಮ್‌. ಭಂಡ ಧೈರ್ಯ ಮಾಡಿ ಉದ್ದನೆಯ ಕೋಲನ್ನು ನಾಗರಹಾವಿನ ತಲೆಯ ಮೇಲಿಟ್ಟು , ಬಾಲ ಹಿಡಿದು ಚೀಲಕ್ಕೆ ತೂರಿಸಿ ದೂರ ಸಾಗಿಸಿದ್ದೇ ಮೊದಲು, ಆವತ್ತಿನಿಂದ ಹಿಂತಿರುಗಿ ನೋಡಿದ್ದೇ ಇಲ್ಲ . ಇದುವರೆಗೆ ನಾಲ್ಕು ಸಾವಿರಕ್ಕೂ ಹೆಚ್ಚು ಹಾವುಗಳನ್ನು ಶ್ಯಾಮ್‌ ಹಿಡಿದಿದ್ದಾರೆ, ಎಲ್ಲಾ ಹಾವುಗಳನ್ನು ಕಾಡಿನ ಮಡಿಲು ಸೇರಿಸಿದ್ದಾರೆ.

ನಾವು ತೊಂದರೆ ಮಾಡದಿದ್ದರೆ ಹಾವುಗಳು ಕಚ್ಚುವುದಿಲ್ಲ . ತೊಂದರೆ ಮಾಡಿದರೆ ಭಯದಿಂದ ಕಚ್ಚುತ್ತವೆ. ಸುಖಾಸುಮ್ಮನೆ ಕಚ್ಚಲಿಕ್ಕೆ ಹಾವುಗಳೇನು ಮನುಷ್ಯರೇ ಎಂದು ನಗುವ ಶ್ಯಾಮ್‌ಗೆ ಶಾಸಕ ಎಚ್‌.ಎಸ್‌. ಶಂಕರಲಿಂಗೇಗೌಡ ಪೇಜರ್‌ ಕೊಡಿಸಿದ್ದಾರೆ. ಪೇಜ್‌ ಮಿ ಸಂಸ್ಥೆ ಮಾಸಿಕ ಶುಲ್ಕ ವಿನಾಯ್ತಿ ನೀಡಿದೆ. ಶ್ಯಾಮ್‌ನ ಉರಗ ಸೇವೆಗೆ ಮೆಚ್ಚಿ ಹಲವಾರು ಸಂಘ ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ.

ದಯವಿಟ್ಟು ಬೇಗ ಬನ್ನಿ : ಬೆಳಗ್ಗೆ ಮಕ್ಕಳನ್ನು ಶಾಲೆಗೆ ತಲುಪಿಸುವುದು ಹಾಗೂ ಸಂಜೆ ಮನೆಗೆ ತಲುಪಿಸುವ ಕೆಲಸ ಮಾಡುವ ಶ್ಯಾಮ್‌ ಮಕ್ಕಳಿಗೆಲ್ಲ ಅಚ್ಚುಮೆಚ್ಚಿನ ಅಂಕಲ್‌. ದಿನದ ಬಹಳಷ್ಟು ಸಮಯಗಳಲ್ಲಿ ಅವರ ಪೇಜರ್‌ ಸದ್ದು ಮಾಡುತ್ತಿರುತ್ತದೆ. ರಾತ್ರಿಯ ಹೊತ್ತೂ ಪೇಜರ್‌ ಕರೆಗೆ ಶ್ಯಾಮ್‌ ಓಗೊಡುವುದುಂಟು. ಆಗೆಲ್ಲ ಹೆಂಡತಿ ಮುನಿಸಿಗೆ ತುತ್ತಾಗುತ್ತಾರಂತೆ. ಆದರೆ, ಕರೆ ಬಂದೆಡೆ ಹೋಗಿ ಮನೆಯವರ ಆತಂಕವನ್ನು ನಿವಾರಿಸಿದಾಗ ದೊರೆಯುತ್ತದಲ್ಲ ತೃಪ್ತಿ, ಅದರ ಮುಂದೆ ಎಲ್ಲವೂ ಗೌಣ ಎನಿಸುತ್ತದೆ ಎನ್ನುತ್ತಾರೆ. ನಿಮ್ಮ ಗಮನಕ್ಕೆ, ಅವರು ತಮ್ಮ ಕೆಲಸಕ್ಕೆ ಯಾವುದೇ ಪ್ರತಿಫಲ ಪಡೆಯುವುದಿಲ್ಲ . ಮನೆಗೆ ಹಾವು ಬಂದಿದೆ ಎಂದರೆ ಪೊಲೀಸ್‌ ಕಂಟ್ರೋಲ್‌ ರೂಂನಲ್ಲಿ ನೀಡುವುದು ಕೂಡ ಶ್ಯಾಮ್‌ನ ಪೇಜರ್‌ ನಂಬರ್‌.

ಉಳಿತಾಯದ ಹಣದಲ್ಲಿ ಬಡಮಕ್ಕಳಿಗೆ ಪುಸ್ತಕಗಳನ್ನು ನೀಡುತ್ತಿರುವ ಶ್ಯಾಮ್‌ಗೆ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಸ್ನೇಕ್‌ಪಾರ್ಕ್‌ ನಿರ್ಮಿಸಬೇಕೆಂಬ ಆಸೆಯಿದೆ. ಶ್ಯಾಮ್‌ ಸಂಪರ್ಕ ವಿಳಾಸ : ಶ್ಯಾಮ್‌, 259, 5 ನೇಕ್ರಾಸ್‌, ಬೃಂದಾವನ ಬಡಾವಣೆ, ಮೈಸೂರು - 20.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X