ಕರಾವಳಿಯಲ್ಲಿ ಸಂಕ್ರಾಂತಿ ಆಚರಣೆ

ಗುರುವಾರ (ಆಗಸ್ಟ್‌ 17) ಸಿಂಹ ಸಂಕ್ರಮಣ . ಈ ಸಂಕ್ರಮಣದಂದು ನೀವೇನಾದರೂ ಕರಾವಳಿಯ ಮನೆಗಳತ್ತ ತುಸು ಕಣ್ಣು ಹಾಯಿಸಿದರೆ ಅವರೆಲ್ಲಾ ಸಂಭ್ರಮದಿಂದ ಕೈ ತುಂಬಾ ಕೆಲಸ ಹಚ್ಚಿಕೊಂಡು ಓಡಾಡುತ್ತಿರುತ್ತಾರೆ. ಬಾಗಿಲಿಗೆ ತೋರಣ, ಹೊಸ್ತಿಲು ಮತ್ತು ತುಳಸೀ ಕಟ್ಟೆಯ ಮುಂದೆಲ್ಲಾ ರಂಗವಲ್ಲಿ , ಮನೆಯಾಳಗೆ ಹೊಸ ಸೀರೆ, ದಿರಿಸುಗಳ ಒಂದು ನಮೂನೆಯ ಪರಿಮಳ, ಮನೆಯಲ್ಲಿ ಮದುವೆಯಾಗಲಿರುವ ಹೆಣ್ಣು ಮಕ್ಕಳಿದ್ದರೆ, ಅವರ ಕಣ್ಣುಗಳಲ್ಲಿ ದೇವರ ಮುಂದಿರುವ ಹೊಸ ಚಿನ್ನ ಕೊರಳೇರಲಿರುವ ಸಂಭ್ರಮ...ಹೀಗೆ ಅಂದು ಮನೆ ಲಕಲಕಿಸುತ್ತಿರುತ್ತದೆ.

ಸೌರಮಾನ ಪ್ರಕಾರ ದಿನ ಲೆಕ್ಕವಿಡುವ ಕರಾವಳಿಯ ಮಂದಿಗೆ ಕರ್ಕಾಟಕದ ಕಪ್ಪು ದಿನಗಳು ಮುಗಿದು ಶ್ರಾವಣದ ಸಂಭ್ರಮ ತೆರೆದುಕೊಳ್ಳುವುದು ಸಿಂಹ ಸಂಕ್ರಾಂತಿಯಂದು. ಸಿಂಹ ಮಾಸದಲ್ಲಿ ನಡೆಯುವ ಹೊಸ್ತಿಲು ಪೂಜೆ ಮತ್ತು ದೇವರ ಮುಡಿಗೇರಿಸುವ ಅಂಕುರ ಹೂವು ಕರಾವಳಿಯ ವಿಶೇಷ.

ಎಲ್ಲದಕ್ಕೂ ಅಂಕುರ ಹೂವು ಬೇಕು : ಕರಾವಳಿಯಲ್ಲಿ ಸಂಕ್ರಾಂತಿಗೆ ವಿಶೇಷ ಹೂವು ಎಂದರೆ ಅಂಕುರ. ಅಲ್ಲಿನ ಆಡು ಭಾಷೆಯಲ್ಲಿ ಹೇಳುವುದಾದರೆ 'ಕೊಳ್ಳು ಹೂವು". ದೇವರು...ಪೂಜೆ, ಪುನಸ್ಕಾರ ಅಂತ ಹೆಚ್ಚು ತಲೆಕೆಡಿಸಿಕೊಳ್ಳುವವರ ಮನೆ ಮುಂದೆ, ಸಂಕ್ರಾಂತಿಗೆ ಮುನ್ನಾ ದಿನಗಳಲ್ಲಿ ನೀವೇನಾದರೂ ಹಾದು ಹೋದಿರಾದರೆ ಅವರ ಅಂಗಳದಲ್ಲಿ ಒಂದೆರಡು ಗಡಿಗೆಗಳು ಕವುಚಿ ಮಲಗಿರುತ್ತವೆ. ಅವುಗಳನ್ನು ಮನೆಯವರು ಜೋಪಾನದಿಂದ ನೋಡಿಕೊಳ್ಳುತ್ತಾರೆ. ಏನಿದೆ ಈ ಗಡಿಗೆಯಾಳಗೆ ಅಂತೀರಾ... ಅರ್ಧ ಹಿಡಿಯಷ್ಟು ಹುರುಳಿ ಕಾಳನ್ನೋ... ಅಥವಾ ಹೆಸರುಕಾಳನ್ನೋ.... ಹಸಿ ಮಣ್ಣಿನ ಮೇಲೆ ಚೆಲ್ಲಿರುತ್ತಾರೆ. ನಂತರ ಸೂರ್ಯನ ಕಿರಣಗಳು ಕಾಳುಗಳ ಮೇಲೆ ಬೀಳದಂತೆ ತಡೆಯಲು, ತೂತು ಇಲ್ಲದೇ ಇರುವ ಯಾವುದಾದರೂ ಮಣ್ಣಿನ ಗಡಿಗೆಯನ್ನು ಕವುಚಿ ಹಾಕುತ್ತಾರೆ. ಮಳೆ ಬರದೇ ಇದ್ದಲ್ಲಿ ಗಡಿಗೆಯನ್ನು ತಂಪಾಗಿಡಲು ಗಡಿಗೆ ಮೇಲೆ ಆಗಾಗ ನೀರು ಚಿಮುಕಿಸುತ್ತಾರೆ. ಮೂರು ದಿನಗಳ ಬಳಿಕ ಅಂದರೆ ಸಿಂಹ ಸಂಕ್ರಾಂತಿಯಂದು ಬೆಳಿಗ್ಗೆ ಗಡಿಗೆಯನ್ನು ಮೆಲ್ಲನೆ ಎತ್ತಿ ತೆಗೆದು ನೋಡಿದರೆ ಹಳದಿ ಬಣ್ಣದ ಎರಡು ಚಿಗುರೆಲೆಗಳಿರುವ, ಒಂದು ಗೇಣಿನಷ್ಟು ಉದ್ದನೆಯ ಹೂವುಗಳ ರಾಶಿ ಅಲ್ಲಿರುತ್ತದೆ. ಅದು ಅಂಕುರ ಹೂವು. ಅಂದು ದೇವರ ಪೂಜೆ, ಹೊಸ್ತಿಲು ಪೂಜೆ, ತುಳಸಿಗೆ ನೀರು ಹಾಕುವಾಗ...ಎಲ್ಲದಕ್ಕೂ ಅಂಕುರ ಹೂವು ಬೇಕು.

ಹೊಸ್ತಿಲು ಪೂಜೆ : ಸಿಂಹ ಮಾಸದಲ್ಲಿ ಮುಖ್ಯವಾಗಿ ಹೊಸ್ತಿಲಿಗೆ ಪೂಜೆ ಮಾಡುತ್ತಾರೆ. ಉದ್ಯೋಗಸ್ಥ ಮಹಿಳೆಯರಿಗೆ ಪ್ರತಿದಿನ ಹೊಸ್ತಿಲು ಪೂಜೆ ಮಾಡಲು ಪುರುಸೊತ್ತಿರುವುದಿಲ್ಲ. ಅವರೆಲ್ಲಾ ಸಿಂಹ ಮಾಸದಲ್ಲಿ ತಪ್ಪದೇ ಹೊಸ್ತಿಲು ಪೂಜೆ ಮಾಡುತ್ತಾರೆ. ಹೊಸ್ತಿಲ ಮೇಲೆ ಪ್ರತಿದಿನವೂ ಚಿತ್ತಾರ ಬಿಡಿಸಿ, ಅದಕ್ಕೆ ಅಂಕುರದ ಅಲಂಕಾರ ಮಾಡಿ, ಹಾಲು ನೀರು, ನೈವೇದ್ಯಕ್ಕಿಟ್ಟು ನಮಸ್ಕರಿಸುತ್ತಾರೆ. ಮುಸ್ಸಂಜೆಗೆ ಮತ್ತೆ ಆರತಿ ಬೆಳಗುತ್ತಾರೆ. 'ಅರೆ ಸಂಜೆ ಹೊತ್ತಿನಲ್ಲಿ ಹಿರಣ್ಯಕಶಿಪುವನ್ನು ಸೀಳಿ ಪ್ರಹ್ಲಾದನಿಗೆ ಕೊಟ್ಟ ವರ ಕೊಡಿ" ಎಂದು ಗೃಹಿಣಿಯರು ಹೊಸ್ತಿಲ ಬಳಿ ಬೇಡಿಕೊಳ್ಳುತ್ತಾರೆ. ಈ ಪ್ರಹ್ಲಾದನಿಗೆ ಕೊಟ್ಟ ವರವನ್ನೇ ಹೆಂಗಸರು ಯಾಕೆ ಬೇಡಿಕೊಳ್ಳುತ್ತಾರೆ ಗೊತ್ತೇ...?

ನಿನ್ನ ವಂಶದವರು ಅರಿಯದೇ ಯಾವುದೇ ತಪ್ಪು ಮಾಡಿದರೂ ಅದನ್ನು ನಾನು ಕ್ಷಮಿಸುತ್ತೇನೆ ಎಂದು ಪ್ರಹ್ಲಾದನಿಗೆ ನರಸಿಂಹ ದೇವರು ವರ ಕೊಟ್ಟಿದ್ದರಂತೆ. ಮನೆತನ, ಕುಲ ವೃದ್ಧಿಯ ಬಗ್ಗೆ ಯೋಚನೆ ಮಾಡುವ ಗೃಹಿಣಿಯರು ಈ ವರವನ್ನೇ ಕೇಳಿಕೊಳ್ಳುತ್ತಾರೆ. ಬಹುಶಃ ಕರಾವಳಿಯಲ್ಲಿ ಮಹಿಳೆಯರು ಸ್ವತಃ ಮಾಡುವ ಪೂಜೆ ಎಂದರೆ ಹೊಸ್ತಿಲು ಪೂಜೆಯಾಂದೇ ಎನಿಸುತ್ತದೆ. ಸಿಂಹ ಮಾಸದಲ್ಲಿ ಮತ್ತೆ ಎಂದಿನಂತೆ ಚೌತಿ, ಅಷ್ಟಮಿ ಹಬ್ಬಗಳ ಸಾಲು. ತಿಂಗಳು ಮುಗಿಯುವವರೆಗೆ ಒಂದಲ್ಲಾ ಒಂದು ಹಬ್ಬ ಮನೆ , ಮನ ತುಂಬುತ್ತದೆ. ಖರ್ಚು ಸಾಗುತ್ತದೆ. ಇವೆಲ್ಲ ಸಂಭ್ರಮಗಳು ಮುಗಿಯುತ್ತಿದ್ದಂತೆಯೇ ಹೊಲ ಗದ್ದೆಗಳಲ್ಲಿ ಪೈರು ಕೊೖಲಿಗೆ ಬಂದಿರುತ್ತದೆ. ಮನಸ್ಸೆಲ್ಲಾ ಮತ್ತೆ ಆ ಕಡೆಗೆ.

ಸಿಂಹ ಮಾಸ ಆಗಸ್ಟ್‌ 17ರಿಂದ ಸೆಪ್ಟೆಂಬರ್‌ 17ರವರೆಗೆ ಇರುತ್ತದೆ. ಬಯಲು ಸೀಮೆಯಲ್ಲಿ ಶ್ರಾವಣ ಶನಿವಾರ ವಿಶೇಷವಾದರೆ ಕರಾವಲಿಯಲ್ಲಿ ಸಿಂಹ ಶುಕ್ರವಾರ ಬಲು ವಿಶೇಷ. ಸಿಂಹ ಶುಕ್ರವಾರದಂದು ಕರಾವಳಿಯ ದೇವಸ್ಥಾನಗಳು ಗಿಜಿಗುಟ್ಟುತ್ತವೆ. ಹೆಚ್ಚಾಗಿ ಹೆಂಗಸರು ಮಕ್ಕಳ ಸಂಭ್ರಮವೇ ದೇವಸ್ಥಾನದ ತುಂಬಾ ಎದ್ದು ಕಾಣುವುದು. ಸಿಂಹ ಶುಕ್ರವಾರದಂದು ಗೃಹಿಣಿಯರು ತಮ್ಮ ಗಂಡನ ಆಯುಷ್ಯವೃದ್ಧಿಗೆಂದು ವ್ರತ ಮಾಡುವುದು ಉಂಟು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+