ವೀರಪ್ಪನನ್ನು ಮರ್ದಿಸುವ ಗಣೇಶ ಬರ್ತಾ ಇದಾನೆ

ಶ್ರಾವಣ ಬಂದಾಯಿತು. ಹಬ್ಬಗಳ ಸಾಲು ಬೇಗ ಬೇಗನೇ ಸಾಗುತ್ತಿದೆ. ಇನ್ನೇನು ಅತ್ತಿತ್ತ ನೋಡುತ್ತಿರುವಾಗಲೇ ಗಣೇಶ ಚತುರ್ಥಿ ಬಂದುಬಿಡುತ್ತದೆ. ವಿಗ್ರಹ ರಚಿಸುವವರು ಆವೆ ಮಣ್ಣು , ಮೂರ್ತಿ, ಬಣ್ಣಗಳ ಭರಾಟೆಯಲ್ಲಿ ವ್ಯಸ್ತರಾಗಿದ್ದಾರೆ. ವಿಗ್ರಹ ವ್ಯಾಪಾರಿಗಳು ಯಾರು ರಚಿಸಿದ ಮೂರ್ತಿಯನ್ನು ಹೋಲ್‌ ಸೇಲ್‌ಗೆ ತೆಗೆದುಕೊಂಡರೆ ಹೆಚ್ಚು ವ್ಯಾಪಾರವಾಗಬಹುದು ಎಂದು ತಲೆಯಾಳಗೇ ಲೆಕ್ಕಾಚಾರ ಹಾಕಿಕೊಂಡು ಅತ್ತಿಂದಿತ್ತ ಓಡಾಡುತ್ತಿದ್ದಾರೆ .

ಹೀಗೇ ಮೊನ್ನೆ ಮಂಗಳೂರಿನ ರಥ ಬೀದಿಯಲ್ಲಿ ರಂಗೋಲಿ ಹುಡಿ, ಗಂಧದ ಕಲ್ಲಿಗೆಂದು ಅಡ್ಡಾಡುತ್ತಿರುವಾಗ ಅಲ್ಲಿ ಅಂಗಡಿಯವರೆಲ್ಲಾ ಒಂದಲ್ಲಾ ಒಂದು ವಿಧದ ಗಣೇಶೋತ್ಸವದ ಬಗ್ಗೇನೇ ತಲೆ ಕೆಡಿಸಿಕೊಂಡಿರುವುದು ಕಂಡು ಓ.. ...ಚೌತಿ ಬೇರೆ ಬಂತಲ್ಲಾ ...ಅಂತ ನೆನಪಾಗಿಬಿಟ್ಟಿತು. ಮಂಗಳೂರಿನ ಹಳ್ಳಿ ಹಳ್ಳಿಗೆಯಲ್ಲಿ ರಥ ಬೀದಿಯಿಂದ ಹೋದ ಗಣಪತಿ ಮೂರ್ತಿಗಳು ಪೂಜೆ ಮಾಡಿಸಿಕೊಂಡು ನೀರಲ್ಲಿ ಕರಗುತ್ತವೆ. ಉಡುಪಿಯ ರಥ ಬೀದಿಯೂ ಹೀಗೆ... ಗಣಪತಿ ಮೂರ್ತಿಗಳಿಗೆ ಪ್ರಸಿದ್ಧ .

ಗಣೇಶೋತ್ಸವದ ಗೌಜಿ ಗದ್ದಲಕ್ಕೆ ಮಂಗಳೂರು ಹೊರತಾಗುವುದು ಸಾಧ್ಯವೇ ? ನಗರದ ಕೆಎಸ್ಸಾರ್ಟಿಸಿ ಘಟಕ, ಹಿಂದೂ ಯುವ ಸೇನೆ, ಸಂಘನಿಕೇತನದಲ್ಲಿ ನಡೆಯುವ ಸಾರ್ವಜನಿಕ ಗಣೇಶೋತ್ಸವಗಳು ಜಿಲ್ಲೆಯ ಭಕ್ತರನ್ನು, ಅಭಿಮಾನಿಗಳನ್ನು ಸೆಳೆಯುತ್ತವೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಶಾಲಾ ಕಾಲೇಜಿನ ವಿದ್ಯಾರ್ಥಿಗಳನ್ನೂ ಉತ್ಸವದಲ್ಲಿ ತೊಡಗಿಸಿಕೊಳ್ಳುತ್ತವೆ. ಉಡುಪಿಯ ರಿಕ್ಷಾ ಚಾಲಕರ ಆಶ್ರಯದಲ್ಲಿ , ಕೃಷ್ಣ ಮಠ , ಮಣಿಪಾಲದಲ್ಲಿ ನಡೆಯುವ ಸಾರ್ವಜನಿಕ ಗಣೇಶೋತ್ಸವಗಳು ದಿನಗಟ್ಟಲೆ ನಡೆಯುತ್ತವೆ. ಇವರೆಲ್ಲರಿಗೂ ಚೌತಿಯ ದಿನ ಬೆಳಗಿನ ಮುಹೂರ್ತದಲ್ಲಿ ಕೂರಿಸಲು ಒಂದು ವಿಗ್ರಹ ಬೇಡವೇ ? ವಿಗ್ರಹ ರಚನೆಯಲ್ಲಿ ಪಳಗಿದವರಿಗೆ ಗಣೇಶೋತ್ಸವವೇ ಒಳ್ಳೇ ಸೀಸನ್‌. ನವರಾತ್ರಿಯಲ್ಲಿ ಬರುವ ಶಾರದಾ ಪೂಜೆಗೆ ದೇವಿಯನ್ನು ಕೂರಿಸಿ ಪೂಜಿಸುವವರು ಸ್ವಲ್ಪ ಕಡಿಮೆಯೇ. ಆದ್ದರಿಂದ ಈಗ ಅವರು ಚೆಲ್ಲಾಟ ಆಡುವ ಮಳೆ ಬಿಸಿಲುಗಳ ನಡುವೆ ಸಮಯ ಹೊಂದಿಸಿಕೊಂಡು ವಿಗ್ರಹಕ್ಕೆ ದೃಷ್ಠಿ ಬರೆಯುತ್ತಲೋ , ಬಣ್ಣ ಹೊಂದಿಸುತ್ತಲೋ ಇದ್ದಾರೆ.

ಪ್ರತಿ ವರ್ಷದಂತೆ ಈ ಬಾರಿನೂ ದುಬಾರಿ : ಈ ವರ್ಷ ಗಣಪತಿ ವಿಗ್ರಹಗಳು ದುಬಾರಿಯಾಗಬಹುದಂತೆ. ಮಂಗಳೂರಿನ ಹೆಂಚಿನ ಕಾರ್ಖಾನೆಗಳು ಬಂದ್‌ ಆಗಿವೆ. ಆವೆ ಮಣ್ಣನ್ನು ದೂರ ದೂರದ ಊರುಗಳಿಂದ ಹುಡುಕಿ, ವಿಗ್ರಹ ರಚಿಸುವವರೇ ತರಬೇಕು . ಅದನ್ನು ತರಿಸುವುದಕ್ಕೆ , ತುಳಿಯುವುದಕ್ಕೆ ಕೂಲಿ ದರವೂ ಏರಿದೆ. ಬಣ್ಣದ ರೇಟ್‌ ಕೂಡ ಭೂಮಿ ಮೇಲಿಲ್ಲ. ಹೀಗೆ ರೇಟು ಏರಿಸುವುದಕ್ಕೆ ಕಾರಣವೇನು ಎಂದು ಕೇಳಿದರೆ ಕಷ್ಟದ ಸುರುಳಿ ಬಿಚ್ಚುತ್ತಾರೆ ವ್ಯಾಪಾರಸ್ಥರು. ಆದರೆ ಬಂದ ಲಾಭ, ಮೂರ್ತಿ ಕೆತ್ತಿದವನ ಮಡಿಲು ಸೇರುವುದು ಅಷ್ಟರಲ್ಲೇ ಇದೆ. ವರ್ಷಕ್ಕೆರಡು ಬಾರಿ ಮೂರ್ತಿ ತಯಾರಿಕೆಯ ಅವಕಾಶ ಸಿಗುವುದು. ಅದರಲ್ಲಿ ಬಡತನ ನೀಗುತ್ತದೆಯೇ ...ಎಂದು ಕೇಳುತ್ತಾರೆ ಫರಂಗಿ ಪೇಟೆಯ ನಾರಾಯಣಾಚಾರಿ. ವಿಗ್ರಹದ ಬೆಲೆ ದುಬಾರಿಯೆಂದು ಕೊಳ್ಳದೇ ಇರುವುದಕ್ಕಾಗುವುದಿಲ್ಲ , ಆದ್ದರಿಂದ ವ್ಯಾಪಾರಿಗಳು ಹೇಳಿದ್ದೇ ಮಾತು, ರೇಟು.

ವಿಗ್ರಹಗಳ ಇನ್ನೊಂದು ಪ್ರಸಿದ್ಧ ಮಾರುಕಟ್ಟೆಯೆಂದರೆ ಬಂಟ್ವಾಳ. ಆಗಲೇ ನಾನಾ ಅವತಾರಗಳಲ್ಲಿ ಗಣಪಪ್ಪ ಮಾರ್ಕೆಟ್‌ ಏರಿ ಕುಳಿತಿದ್ದಾನೆ. ಬಾಲ ಗಣಪತಿ, ಯಕ್ಷ ಗಣಪತಿ, ಸಿದ್ಧಿ ಗಣಪತಿ, ಭೂಮಂಡಲದ ಮೇಲೆ ನಿಂತ ಗಣಪತಿ, ಕಾರ್ಗಿಲ್‌ ಗಣಪತಿ ಹೀಗೆ... ಕಾಲ ಬದಲಾದಂತೆ ಗಣಪತಿಯ ಅವತಾರಗಳನ್ನು ಭಕ್ತರು ಅನುಕೂಲಕರ, ನೆಮ್ಮದಿ ನೀಡುವ ಹಾಗೆ ಬದಲಾಯಿಸುತ್ತಾ ಹೋಗುತ್ತಾರೆ. ಎಲ್ಲಾ ಇರಲಿ , ಎಲ್ಲಿಯಾದರೂ ವೀರಪ್ಪನ್‌ನನ್ನು ಮರ್ದಿಸುವ ಗಣಪತಿ ಇರಬಹುದೇ ಎಂದು ನಾನು ಹುಡುಕುತ್ತಿದ್ದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+