ಕೊಡಗಿನಲ್ಲಿರುವ ಇರ್ಪುವಿನ ವೈಶಿಷ್ಟ್ಯವೇನು ಗೊತ್ತಾ?
ಮಡಿಕೇರಿ, ಮಾರ್ಚ್ 10: ಶಿವರಾತ್ರಿಯಂದು ಜಾಗರಣೆ ಮಾಡಿ ದಕ್ಷಿಣ ಕೊಡಗಿನ ಇರ್ಪುವಿನ ಲಕ್ಷ್ಮಣ ತೀರ್ಥದ ಜಲಧಾರೆಯಲ್ಲಿ ತಲೆಕೊಟ್ಟು ಮಿಂದು ರಾಮೇಶ್ವರ ದೇಗುಲದ ಶ್ರೀರಾಮನೇ ಪ್ರತಿಷ್ಠಾಪಿಸಿದ ಶಿವಲಿಂಗವನ್ನು ದರ್ಶಿಸಿ, ಪೂಜಿಸಿದರೆ ಕರ್ಮಾಧಿಗಳು ಕಳೆದು ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಇಲ್ಲಿನ ಜನವಲಯದಲ್ಲಿದೆ.
ಪ್ರತಿವರ್ಷ ಶಿವರಾತ್ರಿ ಮಾರನೆಯ ದಿನ ಜಾಗರಣೆ ಮುಗಿಸಿ ಇರ್ಪುವಿನಲ್ಲಿರುವ ಲಕ್ಷ್ಮಣತೀರ್ಥದ ಜಲಧಾರೆಯಲ್ಲಿ ಸ್ನಾನ ಮಾಡಿ ಪಕ್ಕದಲ್ಲಿರುವ ರಾಮೇಶ್ವರದೇಗುಲದಲ್ಲಿ ಶಿವಲಿಂಗದ ದರ್ಶನ ಮಾಡಿ ಪೂಜೆ ಸಲ್ಲಿಸುವುದು ಸಂಪ್ರದಾಯವಾಗಿದೆ. ಹೀಗಾಗಿ ಪ್ರತಿವರ್ಷವೂ ಶಿವರಾತ್ರಿಯಂದು ಜನ ಜಾತ್ರೆಯೇ ನೆರೆಯುತ್ತದೆ.

ಇರ್ಪುಗೂ ರಾಮಾಯಣಕ್ಕೂ ನಂಟು
ಇನ್ನು ದಕ್ಷಿಣ ಕೊಡಗಿನಲ್ಲಿರುವ ಇರ್ಪು ತಾಣಕ್ಕೂ ತೇತ್ರಾಯುಗದ ರಾಮಾಯಣಕ್ಕೂ ನಂಟು ಇರುವುದನ್ನು ನಾವು ಕಾಣಬಹುದಾಗಿದೆ. ಪ್ರಚಲಿತದಲ್ಲಿರುವ ಪೌರಾಣಿಕ ಕಥೆಯ ಪ್ರಕಾರ ಇಲ್ಲಿನ ರಾಮೇಶ್ವರ ದೇವಾಲಯದಲ್ಲಿ ಪೂಜಿಸಲ್ಪಡುವ ಶಿವಲಿಂಗವು ರಾಮನೇ ಸ್ವತಃ ಪ್ರತಿಷ್ಠಾಪಿಸಿದ್ದು ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಪೌರಾಣಿಕ ಕಥೆಯೂ ಪ್ರಚಲಿತದಲ್ಲಿದೆ.
ಸೀತೆಯನ್ನು ಕರೆದೊಯ್ದು ಲಂಕೆಯ ಅಶೋಕವನದಲ್ಲಿ ರಾವಣನು ಇರಿಸಿರುತ್ತಾನೆ. ಸೀತೆಯನ್ನು ಅರಸುತ್ತಾ ಹೊರಟ ರಾಮಲಕ್ಷ್ಮಣರಿಗೆ ತನ್ನ ಅಣ್ಣ ವಾಲಿಯಿಂದ ಹೊರದೂಡಲ್ಪಟ್ಟ ಸುಗ್ರೀವನ ಪರಿಚಯವಾಗುತ್ತದೆ. ಆ ನಂತರ ವಾಲಿಯನ್ನು ಕೊಂದು ಸುಗ್ರೀವನಿಗೆ ಪಟ್ಟಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದ ರಾಮನಿಗೆ ಸಹಾಯ ಮಾಡುವ ಸಲುವಾಗಿ ಹನುಮಂತ ಸೇರಿದಂತೆ ಕಪಿಸೈನ್ಯವನ್ನು ಸೀತೆಯನ್ನು ಹುಡುಕಲು ಸುಗ್ರೀವ ಕಳುಹಿಸುತ್ತಾನೆ. ಈ ವೇಳೆ ಸೀತೆಯನ್ನು ರಾವಣ ಕದ್ದೊಯ್ದ ವಿಚಾರ ಜಟಾಯುವಿನಿಂದ ಗೊತ್ತಾಗುತ್ತದೆ.

ಶ್ರೀರಾಮನ ಗಮನಸೆಳೆದ ಇರ್ಪು
ಹನುಮಂತ ಲಂಕೆಗೆ ತೆರಳಿ ಸೀತೆಯನ್ನು ಹುಡುಕಿ ಆಕೆಗೆ ರಾಮನ ಸಂದೇಶವನ್ನು ತಲುಪಿಸಿ ಬರುವುದಲ್ಲದೆ, ಅರ್ಧ ಲಂಕೆಯನ್ನು ಸುಟ್ಟು ಬರುತ್ತಾನೆ. ನಂತರ ಲಂಕೆಗೆ ಕಪಿಸೈನ್ಯದೊಂದಿಗೆ ದಂಡೆತ್ತಿ ಹೋದ ರಾಮಲಕ್ಷ್ಮಣರು ರಾಕ್ಷಸನಾದ ರಾವಣ ಸೇರಿದಂತೆ ಅತಿರಥ ಮಹಾರಥರಾಗಿದ್ದ ಬಲಿಷ್ಠ ರಾಕ್ಷಸರನ್ನು ಕೊಂದು ವಿಭೀಷಣನಿಗೆ ಪಟ್ಟಾಭಿಷೇಕ ಮಾಡಿ ಹಿಂತಿರುಗುವಾಗ ಇರ್ಪುವಿನ ಪ್ರಶಾಂತ ವಾತಾವರಣ ಶ್ರೀರಾಮನ ಗಮನಸೆಳೆಯುತ್ತದೆ. ಹೀಗಾಗಿ ಅಲ್ಲಿಯೇ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜಾ ಕೈಂಕರ್ಯ ನೆರವೇರಿಸುವ ಇಚ್ಛೆ ವ್ಯಕ್ತಪಡಿಸುತ್ತಾನೆ. ಇದಕ್ಕೆ ಎಲ್ಲರೂ ಸಮ್ಮತಿ ಸೂಚಿಸುತ್ತಾರೆ. ಅದರಂತೆ ಶ್ರೀರಾಮನ ಆಜ್ಞೆಯಂತೆ ಆಂಜನೇಯ ಲಿಂಗತರಲೆಂದು ಕಾಶಿಯತ್ತ ಹೋಗುತ್ತಾನೆ.

ರಾಮನಿಂದಲೇ ಶಿವಲಿಂಗ ಪ್ರತಿಷ್ಠಾಪನೆ
ಇತ್ತ ಶ್ರೀರಾಮ ಲಿಂಗಪ್ರತಿಷ್ಠಾಪನೆಗೆ ಸಮಯ ದಿನ ನಿಗದಿಪಡಿಸಿ ಮುನಿಪುಂಗವರನ್ನು ಆಹ್ವಾನಿಸಿ ಲಿಂಗಪ್ರತಿಷ್ಠಾಪನೆಗೆ ವ್ಯವಸ್ಥೆ ಮಾಡುತ್ತಾನೆ. ಆದರೆ ನಿಗದಿ ಮಾಡಿದ್ದ ಮುಹೂರ್ತ ಸಮೀಪಿಸಿದರೂ ಲಿಂಗ ತರಲು ಹೋದ ಆಂಜನೇಯನ ಸುಳಿವೇ ಇಲ್ಲದಾಗುತ್ತದೆ. ಈ ವೇಳೆ ಶ್ರೀರಾಮ ಸ್ವತಃ ಲಿಂಗವೊಂದನ್ನು ನಿರ್ಮಿಸಿ ಮುಹೂರ್ತದ ಸಮಯಕ್ಕೆ ಸರಿಯಾಗಿ ಪ್ರತಿಷ್ಠಾಪನೆ ಮಾಡುತ್ತಾನೆ. ಆ ಲಿಂಗವೇ ಈಗಿನ ರಾಮೇಶ್ವರ ದೇವಾಲಯದಲ್ಲಿರುವ ಲಿಂಗ ಎಂದು ಜನ ನಂಬಿದ್ದಾರೆ.

ಆಂಜನೇಯನಿಂದಲೂ ಶಿವಲಿಂಗ ಪ್ರತಿಷ್ಠಾಪನೆ
ಇನ್ನು ಕಾಶಿಯಿಂದ ಲಿಂಗತರಲು ಹೋದ ಆಂಜನೇಯ ಬಂದನೇ? ಆತ ಲಿಂಗ ತಂದನೇ? ಎಂಬಿತ್ಯಾದಿ ಪ್ರಶ್ನೆಗಳು ಮೂಡುವುದು ಸಹಜ. ಅದಕ್ಕೂ ಇಲ್ಲಿ ನಿದರ್ಶನವಿದೆ. ಅದು ಏನೆಂದರೆ ಮೂಹೂರ್ತ ಮೀರಿದ ಬಳಿಕ ಆಂಜನೇಯ ಲಿಂಗವನ್ನು ಹೊತ್ತು ಬರುತ್ತಾನೆ. ಆದರೆ ಅಷ್ಟರಲ್ಲಿಯೇ ಲಿಂಗಪ್ರತಿಷ್ಠಾಪನೆ ಕಾರ್ಯ ಮುಗಿದು ಹೋಗಿ ಬಿಡುತ್ತದೆ. ಈಗ ಏನು ಮಾಡುವುದು ಎಂದು ಎಲ್ಲರೂ ಯೋಚಿಸುತ್ತಿರುವಾಗಲೇ ರಾಮ ಆಂಜನೇಯನ ಬೆನ್ನು ತಟ್ಟಿ ಸಮಾಧಾನ ಪಡಿಸುತ್ತಾ ಅಲ್ಲಿಂದ ಸುಮಾರು ಹತ್ತು ಕಿ.ಮೀ ದೂರದಲ್ಲಿರುವ ಹೇರ್ಮಾಡು ಎಂಬಲ್ಲಿ ಪ್ರತಿಷ್ಠಾಪಿಸುವಂತೆ ಸೂಚಿಸುತ್ತಾನೆ. ಅದರಂತೆ ಆಂಜನೇಯ ಅಲ್ಲಿ ಲಿಂಗವನ್ನು ಪ್ರತಿಷ್ಠಾಪಿಸುತ್ತಾನೆ. ಹೀಗಾಗಿ ಹೇರ್ಮಾಡಿನಲ್ಲಿರುವ ಶಿವಲಿಂಗವೂ ಮಹತ್ವವನ್ನು ಹೊಂದಿದ್ದು, ಅಲ್ಲಿಯೂ ವಿಜ್ರಂಭಣೆಯಿಂದ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸುವ ಮೂಲಕ ಶಿವರಾತ್ರಿಯನ್ನು ಆಚರಿಸಲಾಗುತ್ತದೆ.

ಇರ್ಪುಗೆ ತೆರಳುವುದು ಹೇಗೆ?
ಇರ್ಪು ತಾಣವು ರಾಮ ಪ್ರತಿಷ್ಠಾಪಿಸಿದ ಶಿವಲಿಂಗ ಮತ್ತು ಕೇರಳ ಶೈಲಿಯಲ್ಲಿರುವ ರಾಮೇಶ್ವರ ದೇವಾಲಯಕ್ಕಿಂತ ಇಲ್ಲಿ ಧುಮ್ಮಿಕ್ಕುವ ಜಲಧಾರೆಯಿಂದ ಹೆಚ್ಚಿನ ಖ್ಯಾತಿ ಪಡೆದಿದೆ. ಈ ಜಲಧಾರೆ ಇತರೆ ಜಲಧಾರೆಗಳಂತಲ್ಲ. ಇದಕ್ಕೆ ಪೂಜನೀಯ ಭಾವವಿದೆ. ಈ ಜಲಧಾರೆಯನ್ನು ಸ್ವತಃ ಲಕ್ಷ್ಮಣನೇ ಸೃಷ್ಟಿಸಿದ್ದಾನೆ ಎಂಬ ನಂಬಿಕೆಯೂ ಇದೆ. ಹೀಗಾಗಿ ಇದನ್ನು ಪವಿತ್ರವೆಂದು ನಂಬುವ ಭಕ್ತರು ತಲೆಕೊಟ್ಟು ಸ್ನಾನ ಮಾಡಿ ಇಷ್ಟಾರ್ಥ ನೆರವೇರಲಿ ಎಂದು ಪ್ರಾರ್ಥಿಸುತ್ತಾರೆ. ದಂಪತಿ ಇಲ್ಲಿ ಕೈಹಿಡಿದುಕೊಂಡು ಸ್ನಾನ ಮಾಡಿದರೆ ದಾಂಪತ್ಯ ಗಟ್ಟಿಯಾಗಿ ಸುಖಸಂತೋಷ ನೆಮ್ಮದಿ ವೃದ್ಧಿಸುತ್ತದೆ ಎಂಬ ನಂಬಿಕೆ ಭಕ್ತರ ವಲಯದಲ್ಲಿದೆ.
ಮಡಿಕೇರಿಯಿಂದ 85 ಕಿ.ಮೀ ದೂರದಲ್ಲಿರುವ ಇರ್ಪುಗೆ ಮಡಿಕೇರಿ ಕಡೆಯಿಂದ ಹೋಗುವವರು ಮೂರ್ನಾಡು, ವೀರಾಜಪೇಟೆ, ಗೋಣಿಕೊಪ್ಪ, ಶ್ರೀಮಂಗಲ ಮೂಲಕ ಹಾಗೂ ಮೈಸೂರಿನಿಂದ ಹುಣಸೂರು, ಪಂಚವಳ್ಳಿ, ಗೋಣಿಕೊಪ್ಪ ಮೂಲಕ ಅಥವಾ ಹುಣಸೂರು, ನಾಗರಹೊಳೆ, ಕುಟ್ಟದ ಮೂಲಕವೂ ತೆರಳಬಹುದಾಗಿದೆ.












Click it and Unblock the Notifications