• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೂವಿನ ರಂಗವಲ್ಲಿಯಿಟ್ಟು ಬಲಿ ಚಕ್ರವರ್ತಿಗೆ ಕಾಯುವ ಕೇರಳಿಗರು...

|

ವರುಣನ ಆರ್ಭಟ... ಕುಸಿದ ಗುಡ್ಡಗಳು... ಕೊಚ್ಚಿ ಹೋದ ಆಸ್ತಿಪಾಸ್ತಿ... ಎಲ್ಲೆಡೆಯೂ ಕಣ್ಣೀರ ಧಾರೆ... ಇದು ಕೇರಳ ಮಾತ್ರವಲ್ಲ. ಕೇರಳಕ್ಕೆ ಹೊಂದಿಕೊಂಡಂತಿರುವ ಕೊಡಗಿನಲ್ಲಿ ನೆಲೆಸಿರುವ ಮಲಯಾಳಿಗರ ವ್ಯಥೆಯ ಕಥೆ... ಇಷ್ಟರಲ್ಲೇ ಮುಂಗಾರು ಕಳೆದುಕೊಂಡು ನೆಮ್ಮದಿಯುಸಿರು ಬಿಡುತ್ತಾ ಸಂಭ್ರಮದಿಂದ ಹೂವಿನ ರಂಗವಲ್ಲಿ (ಪೂಕಳಂ) ಬರೆದು ಬಲಿ ಚಕ್ರವರ್ತಿಗಾಗಿ ಕಾಯುವ ಸಮಯ. ಎಲ್ಲೆಲ್ಲೂ ಓಣಂನ ಸಂಭ್ರಮ ಮನೆ ಮಾಡಬೇಕಿತ್ತು. ಆದರೆ ಒಂದು ಮುಂಗಾರು ಸಡಗರ, ಸಂಭ್ರಮ ಎಲ್ಲದಕ್ಕೂ ತಣ್ಣೀರು ಎರಚಿ ಗಹಗಹಿಸಿ ನಕ್ಕು ಬಿಟ್ಟಿದೆ. ಈಗ ಸಂಭ್ರಮವಿಲ್ಲ, ಆತಂಕವಷ್ಟೆ. ಆದರೂ ಬಲಿ ಚಕ್ರವರ್ತಿ ಬರುತ್ತಾನೆ, ನಮ್ಮ ಕಷ್ಟ-ಸುಖ ಕೇಳಿ ಅಭಯ ತೋರುತ್ತಾನೆ ಎಂಬ ನಂಬಿಕೆ ಎಲ್ಲ ಕೇರಳಿಗರದ್ದಾಗಿದೆ. ಹೀಗಾಗಿ ನೋವಿನ ನಡುವೆಯೂ ಓಣಂ ಹಬ್ಬವನ್ನು ಆಚರಿಸುತ್ತಿದ್ದಾರೆ.

 ಕೇರಳದವರಿಗೆ ಚಿನ್ನದ ಮಾಸವಿದು

ಕೇರಳದವರಿಗೆ ಚಿನ್ನದ ಮಾಸವಿದು

ಹಾಗೆ ನೋಡಿದರೆ ಓಣಂ ಹಬ್ಬ ಕೇರಳದ ಪ್ರಮುಖ ಹಬ್ಬವಾಗಿದ್ದರೂ ಅದು ಕೇರಳದ ಗಡಿದಾಟಿ ಕೇರಳಿಗರು ಎಲ್ಲೆಲ್ಲಿ ವಾಸಿಸುತ್ತಾರೋ ಅಲ್ಲೆಲ್ಲ ಹಬ್ಬದ ರಂಗನ್ನು ಚೆಲ್ಲಿರುವುದಂತು ನಿಜ. ನಾವು ನಾಡಹಬ್ಬವಾಗಿ ದಸರಾ ಆಚರಿಸಿದರೆ ಕೇರಳದವರು ಓಣಂ ಅನ್ನು ನಾಡಹಬ್ಬವಾಗಿ ಆಚರಿಸುತ್ತಾರೆ. ಹೀಗಾಗಿ ಈ ಹಬ್ಬದಲ್ಲಿ ಭಾವೈಕ್ಯ ಮೇಳೈಸುವುದನ್ನು ನಾವು ಕಾಣಬಹುದಾಗಿದೆ.

ಈ ಬಾರಿಯೂ ಓಣಂ ಹಬ್ಬ ಬಂದಿದೆ. ಇದು ಸಿಂಹ ಮಾಸದಲ್ಲಿ ಬರುತ್ತದೆ. (ಈ ಬಾರಿ ಸೆಪ್ಟೆಂಬರ್ 11ರಂದು ಆಚರಿಸಲಾಗುತ್ತಿದೆ.) ಇತ್ತೀಚೆಗಿನ ಪ್ರಕೃತಿ ವಿಕೋಪವನ್ನು ಹೊರತುಪಡಿಸಿ ಹೇಳುವುದಾದರೆ ಸಿಂಹ ಮಾಸ ಕೇರಳದವರ ಪಾಲಿಗೆ ಚಿನ್ನದ ಮಾಸ. ಏಕೆಂದರೆ ಈ ವೇಳೆಗೆ ಮುಂಗಾರು ಮಳೆ ಕಡಿಮೆಯಾಗಿರುತ್ತದೆ ಜತೆಗೆ ಕೃಷಿ ಚಟುವಟಿಕೆಯೂ ಮುಗಿದು ನೆಮ್ಮದಿಯಾಗಿ ಕಾಲೂರುವ ಕಾಲವಾಗಿರುತ್ತದೆ. ಇನ್ನು ಈ ಹಬ್ಬ ಸಿಂಹ ಮಾಸದ ಹಸ್ತ ನಕ್ಷತ್ರದಿಂದ ಹತ್ತು ದಿನಗಳ ಕಾಲ ಆಚರಣೆಯಲ್ಲಿರುತ್ತದೆಯಾದರೂ ಕೊನೆಯ ಶ್ರಾವಣ ನಕ್ಷತ್ರದ ದಿನವನ್ನು ತಿರುವೋಣಂ ಆಗಿ ಆಚರಿಸಲಾಗುತ್ತದೆ.

ಓಣಂ 2019: ಸಾಮರಸ್ಯ ಸಾರುವ ಹಬ್ಬದ ವಿಶಿಷ್ಟತೆ ಹಾಗೂ ಮಹತ್ವ

 ರಂಗೋಲಿಯೊಂದಿಗೆ ದೀಪವಿಟ್ಟು ಕಾಯುವ ಹಬ್ಬ

ರಂಗೋಲಿಯೊಂದಿಗೆ ದೀಪವಿಟ್ಟು ಕಾಯುವ ಹಬ್ಬ

ಸಾಮಾನ್ಯವಾಗಿ ಹಬ್ಬಗಳಲ್ಲಿ ದೇವರನ್ನು ಪೂಜಿಸಲಾಗುತ್ತದೆ. ದೇವರ ದರ್ಶನ ಮಾಡಿಕೊಂಡು ಜೀವನ ಪಾವನವಾಯಿತು ಎಂದುಕೊಳ್ಳುತ್ತೇವೆ. ಆದರೆ ಓಣಂ ಹಬ್ಬದಲ್ಲಿ ಇದನ್ನು ಮೀರಿದ ಆಚರಣೆ, ಭಕ್ತಿ ಮತ್ತು ಇದೆಲ್ಲವನ್ನು ಮೀರಿದ ನಂಬಿಕೆಯೊಂದು ಹಾಸುಹೊಕ್ಕಾಗಿರುವುದನ್ನು ಕಾಣಬಹುದು. ಅದೇನೆಂದರೆ ಈ ಹಬ್ಬದಲ್ಲಿ ದೇವಾನುದೇವತೆಗಳ ಕಾಲದಲ್ಲಿದ್ದ ಎನ್ನಲಾದ ಒಬ್ಬ ರಕ್ಕಸನಿಗಾಗಿ ಮತ್ತು ಆತ ನೀಡಿದ ಮಾತಿನಂತೆ ತಮ್ಮನ್ನು ನೋಡಲು ಬರುತ್ತಾನೆ ಎಂಬ ನಂಬಿಕೆಯಲ್ಲಿ ಹೂವಿನ ರಂಗೋಲಿಯಿಟ್ಟು, ಪೂಜಿಸುತ್ತಾ, ದೀಪ ಹಚ್ಚಿ ಕಾಯುವುದು ನಿಜಕ್ಕೂ ವಿಶೇಷವಾಗಿದೆ.

 ದಾನ ನೀಡಿ ಪಾತಾಳ ಸೇರಿದ ಬಲಿ

ದಾನ ನೀಡಿ ಪಾತಾಳ ಸೇರಿದ ಬಲಿ

ಇಷ್ಟಕ್ಕೂ ಕೇರಳದ ಜನರನ್ನು ನೋಡಲು ಬರುವ ರಾಕ್ಷಸ ಯಾರು ಎಂಬುದನ್ನು ನೋಡುತ್ತಾ ಹೋದರೆ ಪುರಾಣದ ಕಥೆಯೊಂದು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಪುರಾಣದಲ್ಲಿ ತನ್ನ ಮಹಾ ಪರಾಕ್ರಮದಿಂದ ಜಗತ್ತನ್ನೇ ಸುತ್ತುವ ದೇವ ವಾಹನವನ್ನು ಪಡೆದಿದ್ದ ಬಲಿ ಚಕ್ರವರ್ತಿ ರಾಕ್ಷಸನಾಗಿದ್ದರೂ ಪ್ರಜೆಗಳ ಬಗ್ಗೆ ಕಾಳಜಿವುಳ್ಳವನೂ, ವಾತ್ಸಲ್ಯವುಳ್ಳವನೂ, ಧರ್ಮಿಷ್ಟನೂ, ಮಹಾದಾನಿಯೂ ಹಾಗೂ ಮಹಾ ಪರಾಕ್ರಮಿಯೂ ಆಗಿದ್ದನು.

ಈತ ರಾಕ್ಷಸ ಕುಲದವನಾದುದರಿಂದ ಶತ್ರುಗಳಾದ ದೇವತೆಗಳ ಮೇಲೆ ಯುದ್ಧ ಸಾರಿ ಅವರನ್ನು ಬಗ್ಗುಪಡೆಯುವ ಹಂಬಲ ಹೊಂದಿದ್ದನು. ಹೀಗಾಗಿ ಇಂದ್ರಪದವಿಯನ್ನು ಪಡೆದೇ ತೀರಬೇಕೆಂಬ ದುರಾಸೆಯಿಂದ ಮಹಾಯಾಗ ಮಾಡಲು ಮುಂದಾದನು. ಈ ವಿಷಯ ದೇವತೆಗಳ ಕಿವಿಗೆ ಬೀಳುತ್ತಿದ್ದಂತೆಯೇ ದೇವತೆಗಳಾದಿಯಾಗಿ ದೇವಲೋಕವೇ ನಡುಗಿ ಹೋಯಿತು.

ಇನ್ನು ನಮಗೆ ಉಳಿಗಾಲವಿಲ್ಲ ಎಂದರಿತ ದೇವತೆಗಳು ನಮ್ಮನ್ನು ಕಾಪಾಡು ಎಂದು ವಿಷ್ಣುವಿಗೆ ಮೊರೆಹೋದರು. ದೇವತೆಗಳಿಗೆ ಒದಗಿ ಬಂದ ಸಂಕಷ್ಟವನ್ನು ಉಪಾಯದಿಂದ ಪರಿಹರಿಸುವ ತಂತ್ರ ರೂಪಿಸಿದ ವಿಷ್ಣು ವಾಮನ ರೂಪದಲ್ಲಿ ಬಲಿ ಚಕ್ರವರ್ತಿ ಬಳಿಗೆ ಬರುತ್ತಾನೆ. ನನಗೆ ತಪಸ್ಸು ಮಾಡಲು ಮೂರು ಅಡಿ ಜಾಗ ಬೇಕೆಂದು ಕೇಳುತ್ತಾನೆ. ಮಹಾದಾನಿಯಾಗಿದ್ದ ಬಲಿಚಕ್ರವರ್ತಿಗೆ ಮೂರು ಅಡಿ ಜಾಗವನ್ನು ಕೇಳುತ್ತಿರುವ ವಾಮನನನ್ನು ಕಂಡು ಕನಿಕರ ಉಂಟಾಗುತ್ತದೆಯಲ್ಲದೆ, ಜಾಗ ಕೊಡಲು ಒಪ್ಪಿಗೆ ನೀಡುತ್ತಾನೆ.

ಮಲಯಾಳಿಗರ ಓಣಂ ಹಬ್ಬಕ್ಕೆ ಪೌರಾಣಿಕ ಹಿನ್ನೆಲೆ

 ಓಣಂಗೆ ಬರುವ ಬಲಿ ಚಕ್ರವರ್ತಿ

ಓಣಂಗೆ ಬರುವ ಬಲಿ ಚಕ್ರವರ್ತಿ

ಈ ವಿಷಯ ರಾಕ್ಷಸಗುರು ಶುಕ್ರಾಚಾರ್ಯರಿಗೆ ತಿಳಿಯುತ್ತದೆ. ವಾಮನ ರೂಪದಲ್ಲಿ ಬಂದಾತ ವಿಷ್ಣುವೆಂದು ಬಲಿಗೆ ತಿಳಿಸಿ ವಾಮನನಿಗೆ ದಾನವಾಗಿ ಮೂರು ಹೆಜ್ಜೆ ಜಾಗವನ್ನು ನೀಡದಂತೆ ಭಿನ್ನವಿಸಿಕೊಳ್ಳುತ್ತಾರೆ. ಆದರೆ ಮಾತಿಗೆ ತಪ್ಪದ ಬಲಿ ಗುರುವಿನ ಮಾತನ್ನು ನಿರಾಕರಿಸಿ ತಪಸ್ಸಿಗೆ ಸ್ಥಳ ನೀಡಲು ಒಪ್ಪುತ್ತಾನೆ.

ಇದೇ ಸಂದರ್ಭಕ್ಕಾಗಿ ಕಾಯುತ್ತಿದ್ದ ವಾಮನ ರೂಪದಲ್ಲಿದ್ದ ವಿಷ್ಣು ಇದ್ದಕ್ಕಿದ್ದಂತೆ ತ್ರಿವಿಕ್ರಮನಾಗಿ ಆಕಾಶದೆತ್ತರಕ್ಕೆ ಬೆಳೆಯುತ್ತಾನೆ. ಅಲ್ಲದೆ ಒಂದು ಪಾದದಿಂದ ಭೂಮಿಯನ್ನು ಇನ್ನೊಂದು ಪಾದದಿಂದ ಆಕಾಶವನ್ನು ಅಳೆದು ಇನ್ನೊಂದು ಪಾದವನ್ನು ಎಲ್ಲಿ ಇಡಲಿ ಎಂದು ಕೇಳುತ್ತಾನೆ. ಮಹಾದಾನಿಯಾಗಿದ್ದ ಬಲಿ ಚಕ್ರವರ್ತಿ ಮಾತಿಗೆ ತಪ್ಪದೆ ತನ್ನ ಶಿರವನ್ನು ತೋರಿಸುತ್ತಾನೆ. ಅದರಂತೆ ವಾಮನ ಅವತಾರದಲ್ಲಿದ್ದ ವಿಷ್ಣು ಆತನ ತಲೆ ಮೇಲೆ ಪಾದವನ್ನಿಡುತ್ತಿದ್ದಂತೆಯೇ ಬಲಿಚಕ್ರವರ್ತಿ ಪಾತಾಳ ಸೇರುತ್ತಾನೆ. ಆದರೆ ಪಾತಾಳ ಸೇರುವ ಮೊದಲು ವಿಷ್ಣುವಿನಲ್ಲಿ ವರ್ಷಕ್ಕೊಮ್ಮೆ ಪ್ರಜೆಗಳನ್ನು ನೋಡಲು ಅನುಮತಿ ಕೋರುತ್ತಾನೆ. ಅದಕ್ಕೆ ವಿಷ್ಣು ಸಮ್ಮತಿ ಸೂಚಿಸುತ್ತಾನೆ. ಅದರಂತೆ ಇಂದಿಗೂ ತಿರುವೋಣಂ ದಿನ ಬಲಿ ಚಕ್ರವರ್ತಿ ಪ್ರಜೆಗಳನ್ನು ನೋಡಲು ಬರುತ್ತಾನೆ ಎಂಬ ನಂಬಿಕೆ ಕೇರಳಿಗರಲ್ಲಿದೆ.

 ಹಬ್ಬದಲ್ಲಿ ಮೇಳೈಸುವ ಭಾವೈಕ್ಯತೆ

ಹಬ್ಬದಲ್ಲಿ ಮೇಳೈಸುವ ಭಾವೈಕ್ಯತೆ

ಪ್ರತಿ ಊರಿನಲ್ಲಿ ಬಡವ ಬಲ್ಲಿದ ಎನ್ನದೆ ಎಲ್ಲರೂ ಒಂದೆಡೆ ಕಲೆತು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುವುದು ಹಬ್ಬದ ಮತ್ತೊಂದು ವಿಶೇಷತೆ. ಕೇರಳದಿಂದ ಹೊರ ಹೋಗಿ ನೆಲೆಸಿರುವ ಕೇರಳಿಗರು ಓಣಂ ದಿನದಂದು ಒಂದೆಡೆ ಬೆರೆತು ಸಾಮೂಹಿಕವಾಗಿ ಹಬ್ಬವನ್ನು ಆಚರಿಸುವ ಪರಿಪಾಠ ಇತ್ತೀಚೆಗೆ ಬೆಳೆದು ಬಂದಿದೆ. ಕಷ್ಟ, ನೋವು, ಎಲ್ಲವನ್ನು ಮರೆತು ಈ ಹಬ್ಬ ಆಚರಿಸಲ್ಪಡುವುದರಿಂದ ಚಿನ್ನದ ಹಬ್ಬವಾಗಿಯೇ ಉಳಿದು ಬಂದಿರುವುದನ್ನು ನಾವು ಕಾಣಬಹುದಾಗಿದೆ.

ಪ್ರಜೆಗಳನ್ನು ನೋಡಲು ಬಲಿ ಚಕ್ರವರ್ತಿ ಬರ್ತಾನಂತೆ!

English summary
Believing that the Bali will come and hear the difficluties, people of kerala in other states celebrating Onam festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X