ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಂದರ ಸಮಾಜವೆಂಬ ತೋಟದ ಮಾಲಿಕರೇ ಶಿಕ್ಷಕರು

By ಪೂರ್ಣಿಮ ಜಿಆರ್
|
Google Oneindia Kannada News

ಅವಿದ್ಯಾವಂತ ಕುಟುಂಬದಿಂದ ಬಂದು ಅನುಕೂಲವಿಲ್ಲದ ಮಗುವಾಗಿದ್ದರೂ ಸಹ ಉತ್ತಮ ಶಿಕ್ಷಕರ ಸಹವಾಸದಿಂದ ನಾನು ಪ್ರಯೋಜನ ಪಡೆದೆ ಎಂಬ ಎ.ಪಿ.ಜೆ. ಅಬ್ದುಲ್ ಕಲಾಂರ ಉಕ್ತಿಯು ಶಿಕ್ಷಕರ ಮಹತ್ವವನ್ನು ವಿವರಿಸುವ ಒಂದು ಉತ್ತಮ ಉದಾಹರಣೆ.

ಮೊದಲ ಉಪರಾಷ್ಟ್ರಪತಿ ಹಾಗೂ ಎರಡನೇ ರಾಷ್ಟ್ರಪತಿಗಳಾದ ದಿವಂಗತ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ರವರ ಜನ್ಮದಿನವನ್ನು ಶಿಕ್ಷಣ ಮತ್ತು ಬೋಧನೆಗಾಗಿ ಕಠಿಣ ಶ್ರಮವಹಿಸುತ್ತಿರುವ ಶಿಕ್ಷಕರಿಗೆ ಸಮರ್ಪಿಸುವ ಉದ್ದೇಶದಿಂದ ಶಿಕ್ಷಕರ ದಿನಾಚರಣೆಯನ್ನು ಆಚರಿಸುತ್ತಿರುವುದು ಶಿಕ್ಷಕರಿಗೆ ರಾಷ್ಟ್ರದ ಪ್ರಜೆಗಳು ನೀಡುತ್ತಿರುವ ಗೌರವ.

ನಿಮಗೆ ತಂದೆ-ತಾಯಿ ಎರಡೂ ಆಗಬಲ್ಲವನೇ ಗುರುನಿಮಗೆ ತಂದೆ-ತಾಯಿ ಎರಡೂ ಆಗಬಲ್ಲವನೇ ಗುರು

ಶಿಕ್ಷಕರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ವಿವಿಧ ದೇಶಗಳು ಬೇರೆ ಬೇರೆ ದಿನಗಳಲ್ಲಿ ಶಿಕ್ಷಕರ ದಿನವನ್ನು ವಿಶ್ವದಾದ್ಯಂತ ಆಚರಿಸುತ್ತಾ ಬಂದಿವೆ. ಯುನೆಸ್ಕೋ(ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ) ಶಿಕ್ಷಕರಿಗೆ ಬೆಂಬಲವನ್ನು ಸೂಚಿಸುವ ಮೂಲ ಉದ್ದೇಶದಿಂದ ಪ್ರತಿ ವರ್ಷ ಅಕ್ಟೋಬರ್ 5ರಂದು ವಿಶ್ವ ಶಿಕ್ಷಕರ ದಿನವನ್ನು ಆಚರಿಸುತ್ತಾ ಬಂದಿದೆ. ಎಲ್ಲರಿಗೂ ಸಮಾನ ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸುವುದು ಮತ್ತು ಅಜೀವ ಕಲಿಕಾ ಅವಕಾಶಗಳನ್ನು ಪ್ರೋತ್ಸಾಹಿಸುವ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಸೂಚ್ಯಾಂಕದ 4ನೇ ಮುಖ್ಯ ಉದ್ದೇಶ ಸಹ ಗುಣಮಟ್ಟದ ಶಿಕ್ಷಣವಾಗಿದೆ. ಈ ಗುರಿ ಉದ್ದೇಶಗಳನ್ನು ಸಕಾರಗೊಳಿಸುವ ಶಕ್ತಿಯೇ ಶಿಕ್ಷಕರು. ಈ ಗುರುಗಳಿಗೆ ನಮ್ಮೆಲ್ಲರ ಸಾವಿರ ಸಾವಿರ ನಮನಗಳು.

A teacher is creator of beautiful society

ಶಿಕ್ಷಕನಿಲ್ಲದ ಶಿಕ್ಷಣವನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ಸುಂದರ ಸಮಾಜದ ನಿರ್ಮಾತೃಗಳನ್ನು ಸೃಷ್ಟಿಸುವ ತೋಟದ ಮಾಲೀಕರೆ ನಮ್ಮ ಶಿಕ್ಷಕರು. ಸಮಾಜದ ಪ್ರತಿಯೊಬ್ಬ ಸಾಧಕನ ಹಿಂದೆಯು ಶಿಕ್ಷಕನ ಶ್ರಮ ಇದ್ದೆ ಇರುತ್ತದೆ. ಮಕ್ಕಳ ಲಾಲನೆ ಪಾಲನೆಯಲ್ಲಿ ತಾಯಿಯ ಪಾತ್ರ ಎಷ್ಟು ಮುಖ್ಯವೊ, ಮಕ್ಕಳ ಭೌದ್ಧಿಕ ಜ್ಞಾನವನ್ನು ವೃದ್ಧಿಸುವಲ್ಲಿ ಶಿಕ್ಷಕನ ಪಾತ್ರವೂ ಸಹ ಅಷ್ಟೇ ಮುಖ್ಯ. ಜಾತಿ, ಲಿಂಗ, ಧರ್ಮ, ಪ್ರಾಂತ್ಯ ಮುಂತಾದವುಗಳನ್ನು ಲೆಕ್ಕಿಸದೆ ಎಲ್ಲಾ ಮಕ್ಕಳನ್ನು ಸಮಾನ ರೀತಿಯಲ್ಲಿ ನೋಡುವನೇ ಆದರ್ಶ ಶಿಕ್ಷಕ.

ಮಕ್ಕಳ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ಚಟುವಟಿಕೆ ಆಧಾರಿತ ಕಲಿಕಾ ಕ್ರಮವನ್ನು ರೂಢಿಸಿಕೊಂಡ ಶಿಕ್ಷಕ, ಮಕ್ಕಳಿಗೆ ಕಲಿಕೆಯ ಬಗ್ಗೆ ಆಸಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಅವರನ್ನು ಶಾಲೆಯತ್ತಾ ಆಕರ್ಷಿಸುತ್ತಾನೆ. ಶಿಕ್ಷಕನು ಕಲಿಸುವಿಕೆಗೆ ಬೇಲಿಹಾಕಿ ಕೊಂಡರೆ ಯಾವುದೇ ವ್ಯಕ್ತಿಯು ಪರಿಪೂರ್ಣ ಜ್ಞಾನವನ್ನು ಪಡೆಯಲು ಸಾಧ್ಯವಿಲ್ಲ. ನಮ್ಮ ಎಷ್ಟೊ ರಾಷ್ಟ್ರ ನಾಯಕರು ತಮ್ಮ ಕೆಲಸದಲ್ಲಿ ಬಿಡುವು ಮಾಡಿಕೊಂಡು ಮಕ್ಕಳಿಗೆ ಪಾಠ ಮಾಡುವುದರಲ್ಲಿ ಇರುವ ಸವಿಯನ್ನು ಅನುಭವಿಸಿದ್ದಾರೆ.

ಪಾಠ ಹೇಳಿದವರು ನಂತರ ರಾಜಕಾರಣಕ್ಕೆ ಬಂದರುಪಾಠ ಹೇಳಿದವರು ನಂತರ ರಾಜಕಾರಣಕ್ಕೆ ಬಂದರು

ಜನರ ರಾಷ್ಟ್ರಪತಿ ಎಂದೇ ಪ್ರಸಿದ್ಧರಾದ ದಿವಂಗತ ಎ.ಪಿ.ಜೆ ಅಬ್ದುಲ್ ಕಲಾಂ ರವರು ತಮ್ಮ ಜೀವನದ ಅಂತಿಮ ಕ್ಷಣವನ್ನು ಶಿಲ್ಲಾಂಗ್‌ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟನಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸುತ್ತಲೆ ಕೊನೆಯುಸಿರೆಳೆದರು. ಇವರನ್ನು ಒಬ್ಬ ಶಿಕ್ಷಕರೆಂದು ನೆನಪಿಸಿಕೊಳ್ಳಬೇಕೆಂಬುದು ಅವರ ಆಸೆಯಾಗಿತ್ತು. ಇದನ್ನು ಗಮನಿಸಿದರೆ ಇವರಿಗೆ ಶಿಕ್ಷಕನ ಸ್ಥಾನದ ಮೇಲೆ ಇರುವ ಅಗಾಧ ಗೌರವವನ್ನು ಸೂಚಿಸುತ್ತದೆ.

ಶಿಕ್ಷಣದಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗು ಉನ್ನತ ಎಂಬ ವಿವಿಧ ಹಂತಗಳಿದ್ದು, ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ. ಉತ್ತಮ ಶಾಲಾ ಶಿಕ್ಷಣ ಮಕ್ಕಳಿಗೆ ಸಿಗದಿದ್ದಲ್ಲಿ ಮುಂದಿನ ಶಿಕ್ಷಣದ ಕನಸನ್ನು ಕಾಣಲು ಸಹ ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಜಗತ್ತಿನ ಎಲ್ಲಾ ರಾಷ್ಟ್ರಗಳು ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿವೆಯಾದರೂ ಶೇ.100ರಷ್ಟು ಸಾಕ್ಷರತೆಯನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ. 2011ರ ಜನಗಣತಿಯ ಆಧಾರದ ಮೇಲೆ ಭಾರತದ ಸಾಕ್ಷರತೆಯ ಪ್ರಮಾಣವು ಶೇ.74.04 ರಷ್ಟಿದ್ದು, ಕೇರಳ ರಾಜ್ಯವು ಸಾಕ್ಷರತೆಯಲ್ಲಿ ಮುಂಚೂಣಿಯಲ್ಲಿದ್ದರೆ, ಕರ್ನಾಟಕವು 23ನೇ ಸ್ಥಾನದಲ್ಲಿದೆ.

ಒಬ್ಬ ಆದರ್ಶ ಶಿಕ್ಷಕನಾಗಬೇಕಾದರೆ...

* ಚಟುವಟಿಕೆ ಆಧಾರಿತ ಕಲಿಕಾ ಕ್ರಮವನ್ನು ರೂಢಿಸಿಕೊಳ್ಳಬೇಕು ಹಾಗೂ ಬೋಧನೆಯ ಮೂಲಕ ಮಕ್ಕಳನ್ನು ಶಾಲೆಯತ್ತಾ ಸೆಳೆಯುವುದು.

* ಮಕ್ಕಳ ನಡುವೆ ತಾರತಮ್ಯ ಮಾಡದೆ, ಒತ್ತಡ ಹೇರದೆ, ಕಲಿಯುವ ಪ್ರಕ್ರಿಯೆಯಲ್ಲಿ ಮಕ್ಕಳ ಹಕ್ಕಿಗೆ ಪ್ರಾಧನ್ಯತೆ ನೀಡುವುದರ ಮೂಲಕ ಮಕ್ಕಳ ಸ್ನೇಹಿ ಶಾಲೆಯನ್ನಾಗಿ ಮಾಡುವುದು.

* ಪಠ್ಯ ಚಟುವಟಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳ ಬಗ್ಗೆ ಹೆಚ್ಚಿನ ಖಾಳಜಿಯನ್ನು ತೋರಿಸುವುದು.

* ಮಕ್ಕಳ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಬೋಧಿಸುವ ಕ್ರಮವನ್ನು ಅಳವಡಿಸಿಕೊಳ್ಳುವುದರ ಮೂಲಕ ಸಂತಸದಾಯಕ ಕಲಿಕೆ, ಉಲ್ಲಾಸದಾಯಕ ವಾತವರಣ ಕಲ್ಪಿಸುವುದು.

* ಶಿಕ್ಷಣ ಮತ್ತು ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಸಾಹಿತ್ಯವನ್ನು ಓದುವ ಆಸಕ್ತಿಯನ್ನು ಬೆಳೆಸುವುದು.

* ಕಲಿಸುವಿಕೆಯ ಹೊಣೆಗಾರಿಕೆಯನ್ನು ಶಿಕ್ಷಕರು ತೆಗೆದುಕೊಳ್ಳುವುದು ಮತ್ತು ಶಿಕ್ಷಣದ ಮಹತ್ವವನ್ನು ಪೋಷಕರಿಗೆ ಮನವರಿಕೆ ಮಾಡುವುದು.

* ಶಾಲೆಯಲ್ಲಿ ದೊರೆಯುವ ಸೌಕರ್ಯಗಳ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆಯುವಂತೆ ನೋಡಿಕೊಳ್ಳುವುದು.

* ಮಕ್ಕಳಲ್ಲಿ ಸಾಮಾನ್ಯ ಜ್ಞಾನ, ಪರಿಸರ ಜಾಗೃತಿ, ದೇಶಪ್ರೇಮ, ಸಾಮಾಜಿಕ ಕಳಕಳಿ, ಸಹಕಾರ, ಸಹಬಾಳ್ವೆ ಮತ್ತು ನಾಯಕತ್ವ ಗುಣಲಕ್ಷಣ ಮೊದಲಾದವುಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದು.

* ಮಕ್ಕಳಿಗೆ ದೈಹಿಕ ಶಿಕ್ಷಣ ಪ್ರಮುಖವಾಗಿರುವುದರಿಂದ ಪಾಠದ ಜೊತೆ ದೈಹಿಕ ಶಿಕ್ಷಣ, ಯೋಗ, ಧ್ಯಾನ, ಉತ್ತಮ ಮನೋಭಾವವನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸುವಂತೆ ಮಾಡುವುದು.

* ಶಿಕ್ಷಣ ಎಂಬುದು ಕೇವಲ ಪಠ್ಯಕ್ರಮವಾಗಿರದೆ, ಮಕ್ಕಳಲ್ಲಿ ಧನಾತ್ಮಕ ಚಿಂತನೆಯುಂಟುಮಾಡುವುದರ ಜೊತೆಗೆ ಅವರಲ್ಲಿ ಆತ್ಮವಿಶ್ವಾಸ, ದೈರ್ಯ ಮತ್ತು ಜೀವನ ಶೈಲಿಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ಮೂಡಿಸುವವನೇ ನಿಜವಾದ ಶಿಕ್ಷಕ.

(ಪೂರ್ಣಿಮ ಜಿ.ಆರ್. ಪ್ರೋಗಾಂ ಆಫೀಸರ್, ಪಬ್ಲಿಕ್ ಅಫೇರ್ಸ್ ಸೆಂಟರ್)

English summary
Dear Teacher, Thanks for making us what we are today. A good teacher can inspire hope, ignite the imagination, and instill a love of learning. Let's remember the beautiful quote of APJ Abdul Kalam - The best brains of the nation may be found on the last benches of the classroom. Happy Teacher's Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X