ಕಾಡು

* ಮೋಹನಚಂದ ಪಾಟೀಲ
ಬೆಳೆದಿತ್ತು ನನ್ನ ಮನೆಯ ಹಿಂದೆ
ಒಳಹೊಕ್ಕಂತೆ ದಾರಿ ಕಿರಿದಾಗುವ ಹಸಿರು ಕಾಡು
ಹೆಜ್ಜೆಯಿಡದಷ್ಟು ಹತ್ತಿ ಬೆಳೆದ ಗಿಡಮರಗಳು
ಬಿಸಿಲು ಬಿಡದಂತೆ ಹೆಣೆದ ಎಲೆಯ ಬಲೆಗಳು
ಜೀವ ತೊಳೆವ ತೊರೆಗಳು ಜಲಪಾತಗಳು
ಜೀವ ಕೊಳೆಸುವ ಮಲೆತ ಮಲಿನ ಕೊಳಗಳು
ಹುಳಹುಪ್ಪಡಿ ವಿಷಜಂತುಗಳ ತಾಣಗಳು
ಹೊಟ್ಟೆ ಹೊರೆಯಲೆಂದೇ ಬಲಿಷ್ಟವಾದ ಮೃಗಗಳು
ಇವೆಲ್ಲ ಬುದ್ಧಿಹೀನ ವಿಚಾರಹೀನ ಜೀವಿಗಳು
ಎಂದು ಹೆದರಿ ನಾನೋಡಿ ಹೊರ ಬಂದೆ
ಅವನ್ನು ಒಂದೊಂದಾಗಿ ಕೊಂದು ನಾಶಮಾಡಿದೆ
ಮನೆಯ ಹಿಂದಿನ ಕಾಡು ಬಯಲು ಮಾಡಿದೆ
ಆದರೆ ಇಂದು ಕಾಡಿನ ಬೀಜ ಮೊಳೆತಿದೆ
ನನ್ನ ಮನದಲಿ ಹುಲುಸಾಗಿ ಬೆಳೆಯುತಿದೆ
ಇವೆಲ್ಲ ಬುದ್ಧಿ ತುಳಿದು ಬೆಳೆದ ಸ್ವಾರ್ಥಗಳು
ಹೊಟ್ಟೆ ಹೊರೆಯಲೆಂದೇ ಬಲಿಷ್ಟವಾದ ಜನಗಳು
ಹುಳಹುಪ್ಪಡಿ ವಿಷಜಂತುಗಳ ಕಣಜಗಳು
ಜೀವ ಕೊಳೆಸುವ ಕೊಳಕು ಚರಂಡಿಗಳು
ಜೀವ ತೊಳೆವ ಔಷಧಗಳು ಆಸ್ಪತ್ರೆಗಳು
ಬಿಸಿಲು ಬಿಡದಂತೆ ಹರಡಿದ ಮಾಲಿನ್ಯ ಮೋಡಗಳು
ಹೆಜ್ಜೆಯಿಡದಷ್ಟು ಹತ್ತಿ ಬೆಳೆದ ಕಟ್ಟಡಗಳು
ಒಳಹೊಕ್ಕಂತೆ ದಾರಿ ಕಿರಿದಾಗುವ ಜನರ ಕಾಡು
ಬೆಳೆದಿದೆ ನನ್ನ ಮನೆಯ ಮುಂದೆ











Click it and Unblock the Notifications