ಅಣ್ಣಾ ಹಜಾರೆ ಚಳವಳಿಗೆ ಧುಮುಕಿದ ಸಿದ್ಧಿ ವಿನಾಯಕ

ಆಗಸ್ಟ್ 31 ಬುಧವಾರ ಗೌರಿ ಹಬ್ಬ ಮತ್ತು ರಂಜಾನ್ | ಸೆಪ್ಟೆಂಬರ್ 1 ಗುರುವಾರ ಗಣೇಶನ ಪೂಜೆ | 31 ಮತ್ತು 1ರಂದು ಎರಡೂ ದಿನ ಕೇಂದ್ರ ಹಾಗೂ ರಾಜ್ಯ ಸರಕಾರಿ ಕಚೇರಿಗಳಿಗೆ ರಜೆ | ಬ್ಯಾಂಕ್ ರಜೆ ಕೂಡ | ಐಟಿ ಕಂಪನಿಗಳಲ್ಲಿ ಎರಡು ದಿನ ರಜೆ ಇರುವುದಿಲ್ಲ. ಸಾಮಾನ್ಯವಾಗಿ ಒಂದೇ ದಿನ ಅಂದರೆ, ಗುರುವಾರ ಸೆಪ್ಟೆಂಬರ್ 1ರಂದು ಗಣೇಶ ಹಬ್ಬ ನಿಮಿತ್ತ ರಜೆ ಇರುತ್ತದೆ, ಇರಬಹುದು!
ಗಣೇಶನ ಹಬ್ಬವನ್ನು ವಿಶ್ವದಾದ್ಯಂತ, ಭಾರತದಾದ್ಯಂತ ಆಚರಿಸಲಾಗುವುದು. ಹಿಂದೂಗಳಿಗೆ ಅತಿ ದೊಡ್ಡ ಹಬ್ಬ. ಭಾರತ ಸ್ವಾತಂತ್ರ್ಯ ಚಳವಳಿಯಲ್ಲಿ ಸಾಮಾಜಿಕವಾಗಿ ಹೆಚ್ಚು ಮಹತ್ವ ಗಳಿಸಿಕೊಂಡ ಹಬ್ಬ ಲೋಕಮಾನ್ಯ ಟಿಳಕರ ಉಮೇದಿನಿಂದ ಸಾರ್ವಜನಿಕ ಉತ್ಸವದ ರೂಪ ಪಡೆದುಕೊಂಡಿತು.
ಪ್ರತೀ ವರ್ಷ ಗಣೇಶನ ವಿಗ್ರಹಗಳಿಗೆ ಕಲಾವಿದರು ಹೊಸ ರೂಪ ಕೊಡುವುದು ಪದ್ಧತಿ. ಕಾರ್ಗಿಲ್ ಯುದ್ಧದ ವೇಳೆ ವೀರಯೋಧನ ರೂಪದಲ್ಲಿ ಕಂಡಿದ್ದ ವಿಘ್ನೇಶ್ವರ, ರಾಜ್ ಕುಮಾರ್ ಅಪಹರಣದ ಸಂದರ್ಭದಲ್ಲಿ ವೀರಪ್ಪನ್ ಅವತಾರ ತಾಳಿದ್ದ. ಈ ಬಾರಿ ಅಣ್ಣಾ ಹಜಾರೆ ಅಲ್ಲದೆ ಮತ್ತಾರು? ಗಣೇಶ ಕಲಾವಿದನ ಕುಂಚಕ್ಕೆ ಕುಣಿಯುವ ಕೈಗೊಂಬೆಯೊ.
ಬೆಂಗಳೂರಿನ ಗಣೇಶನ ಅಂಗಡಿಗಳಲ್ಲಿ ಈ ಬಾರಿ ತ್ರಿವರ್ಣ ಧ್ವಜ ಹಿಡಿದು, ಗಾಂಧೀ ಟೋಪಿ ಧರಿಸಿರುವ ಅಣ್ಣಾ ಹಜಾರೆ ಭಂಗಿಯಲ್ಲಿರುವ ಗಣೇಶನ ವಿಗ್ರಹಗಳು ಸಿಧ್ಧವಾಗುತ್ತಿವೆ. ಇವನ್ನು ಕೊಂಡು ತಂದರೆ ಗಣೇಶಣ್ಣ ಮನೆಗೆ ಬಂದಂತೆ. ನಮ್ಮ oneindia-Kannada website ಗೆ ಗಣೇಶಣ್ಣ ಸದ್ಯದಲ್ಲೇ ಬರುವನು.
ಈ ಹಬ್ಬ ಮತ್ತು ಅತಿ ದೀರ್ಘ ವಾರಾಂತ್ಯದ ವೇಳೆ ದಿನಬಳಕೆಯ ವಸ್ತುಗಳ ಬೆಲೆ ಏರುವುದಕ್ಕೆ ಯಥಾಪ್ರಕಾರ ಸಿದ್ಧವಾಗಿದೆ. ಮುಖ್ಯವಾಗಿ, ಹೂವು ಹಣ್ಣು ತರಕಾರಿ ಮತ್ತು ದವಸ ಧಾನ್ಯಗಳ ಬೆಲೆಗಳಲ್ಲಿ ಏರಿಕೆ ಕಂಡುಬರುವುದು ನಿಶ್ಚಿತ. ಚೋಟುದ್ದ ಮಣ್ಣಿನ ಗಣೇಶನ ವಿಗ್ರಹದ ಬೆಲೆ 200 ರೂ. ಆಳೆತ್ತರದ ಗಣೇಶನಿಗೆ 6000 ರೂಪಾಯಿವರಿಗೆ ಉಂಟು.
ಹಾಪ್ ಕಾಮ್ಸ್ ನಲ್ಲಿ ಇಂದು, ಮಂಗಳವಾರ ಕಂಡ ಬೆಲೆಗಳು ಹೀಗಿವೆ : ತುಂಬಾ ಚೀಪ್ ಎಂದರೆ ಟೊಮೆಟೋ 6 ರೂ, ಆಲೂಗೆಡ್ಡೆ 18 ರೂ, ಈರುಳ್ಳಿ 25 ರೂ. ಬೆಂಡೆ 22, ಬದನೆ 15, ಕೋಸು 16, ಇನ್ನು ಹಣ್ಣುಗಳ ಬೆಲೆಯಲ್ಲಿ ಸೇಬು 100 ರಿಂದ 140 ರವರೆಗೆ. ಏಲಕ್ಕಿ ಬಾಳೆ 50 ರೂ, ಮೋಸಂಬಿ 40. ಗೌರಿ ಹಬ್ಬಕ್ಕೆ ಅತಿಹೆಚ್ಚು ಬೇಡಿಕೆ ಇರುವ ಶಾವಂತಿಗೆ ಹೂವಿಗೆ ಓಪನ್ ಮಾರುಕಟ್ಟೆಯಲ್ಲಿ 140 ರು ಒಂದು ಕೆಜಿಗೆ. ಮುಂದಿನವಾರ 200 ರೂ ತಲಪುವುದು ಖಂಡಿತ. ಇನ್ನು ಚೋಟುದ್ದ ಮಲ್ಲಿಗೆ ಮೊಳಕ್ಕೆ 20 ರು. ಕೀಳುತ್ತಿದ್ದಾರೆ.
ಗೌರಿ ಮತ್ತು ಗಣೇಶನ ವ್ರತ ಮಾಡಿಸುವುದಕ್ಕೆ ಅತಿ ಮುಖ್ಯವಾಗಿ ಬೇಕಾಗಿರುವುದು ಪುರೋಹಿತರ ಸೇವೆ. ಅವರ ಸಂಖ್ಯೆ ಈಗೀಗ ದುರ್ಲಭ. ಒಂದು ಬಡಾವಣೆಯಲ್ಲಿ 10 ಪುರೋಹಿತರಿದ್ದರೆ ಹತ್ತು ಸಾವಿರ ಮನೆಗಳಿಂದ ಬೇಡಿಕೆ ಬರುತ್ತದೆ. ಹಾಗಾಗಿ, ಕೆಲವರು ಸಿದ್ಧಿವಿನಾಯಕನ ವ್ರತದ ಸಿಡಿಗಳಿಗೆ ಮೊರೆಹೋದರೆ ಇನ್ನು ಕೆಲವರು ವ್ರತರತ್ನ ಮಾಲಾ ಪುಸ್ತಕ ತಂದು ತಪ್ಪುತಪ್ಪಾಗಿ ತಾವೇ ಮಂತ್ರ ಹೇಳಿಕೊಂಡು ಪೂಜೆ ಮಾಡುತ್ತಾರೆ.
ತ್ರಿಕರ್ಣ ಶುದ್ಧಿಯಿಂದ ಪೂಜೆ ಮಾಡಿ, ಮಂತ್ರಹೀನಂ ಕ್ರಿಯಾ ಹೀನಂ ಎಂದು ಹೇಳಿಕೊಂಡು ಗಣೇಶನಿಗೆ ತಪ್ಪದೆ 21 ನಮಸ್ಕಾರಗಳನ್ನು ಹಾಕಿದರೆ ಗಣೇಶನಿಗೂ ಸಂತೋಷ, ನಿಮಗೂ ನಿಮ್ಮ ಪರಿವಾರಕ್ಕೂ ನೆಮ್ಮದಿ. ಇದೆಲ್ಲ ಸರೀನೇ. ಹಬ್ಬದ ಅಡುಗೆ ಮಾಡುವವರು ಯಾರು? ಮೋದಕ ಅಥವಾ ಕಡಬುಗಳನ್ನು ಕರಿಯುವವರು ಯಾರು? ಹೋಳಿಗೆ ಅಥವಾ ಒಬ್ಬಟ್ಟುಗಳನ್ನು ಒತ್ತುವವರು ಯಾರು? ಇದೊಂದು ಪ್ರಶ್ನೆ.











Click it and Unblock the Notifications