ತಮಸೋಮಾ ಜ್ಯೋತಿರ್ಗಮಯ .. ಮೃತ್ಯೋರ್ಮಾ ಅಮೃತಂಗಮಯ

ಅಜ್ಞಾನವೆಂಬ ಅಂಧಕಾರ ಅಳಿಸಿ, ಸುಜ್ಞಾನವೆಂಬ ಬೆಳಕು ಮೂಡಿಸಿ, ಹರುಷದ ಹೊನಲು ಹರಿಸುವ ದೀಪಾವಳಿ ಬಂದಿದೆ. ದೀಪಾವಳಿ ಹೇಳಿಕೇಳಿ ಬೆಳಕಿನ ಹಬ್ಬ. ಮಕ್ಕಳಿಗಂತೂ ದೀಪಾವಳಿ ಎಂದರೆ ಅಚ್ಚುಮೆಚ್ಚು, ಯಾವಾಗ ಹಬ್ಬ ಬರುವುದೋ, ಯಾವಾಗ ಪಟಾಕಿ ಹೊಡೆಯುತ್ತೇವೋ ಎಂದು ಕಾಯುತ್ತಿದ್ದಾರೆ. ಆದರೆ ನಮ್ಮ ಎಲ್ಲ ಸಂತೋಷಗಳನ್ನು ನುಂಗಿಹಾಕುವ ವ್ಯತಿರಿಕ್ತ ಪರಿಣಾಮಗಳನ್ನು ಗಮನಿಸಿ ಮುನ್ನಡೆಯಬೇಕು. ದಿನವೂ ನಾವು ಬೆಂಗಳೂರಿನಂತಹ ಮಹಾ ನಗರದ ಪ್ರಮುಖ ಬೀದಿಗಳಲ್ಲಿ ಓಡಾಡುವಾಗ ಸೇವಿಸುವ ಗಾಳಿಯಲ್ಲಿ ಕಾರ್ಬನ್‌ ಡೈಆಕ್ಸೈಡ್‌ ಸೇರಿದಂತೆ ಹಲವು ವಿಷಯುಕ್ತವಾದ ಆಮ್ಲಗಳು ನಮ್ಮ ಶರೀರ ಸೇರುತ್ತವೆ. ಈಗಾಗೇ ಇತ್ತೀಚಿನ ದಿನಗಳಲ್ಲಿ ಕೆಲವರಾದರೂ ತಮ್ಮ ಮೂಗಿಗೆ ರಕ್ಷಾಕವಚ ತೊಟ್ಟು ವಾಹನ ಓಡಿಸುವುದನ್ನು ನಾವು ಕಾಣಬಹುದು.

ಸಂಚಾರಿ ಪೊಲೀಸರೂ ವಿಷಯುಕ್ತ ವಾಯುವನ್ನು ಸ್ವಲ್ಪಮಟ್ಟಿಗೆ ಶೋಧಿಸುವ ಕವಚ ಇಲ್ಲವೆ ತಮ್ಮ ಕರವಸ್ತ್ರವನ್ನು ಮೂಗಿಗೆ ಹಿಡಿದು ನಿಲ್ಲುವುದನ್ನೂ ನಾವು ಕಾಣುತ್ತೇವೆ. ಇನ್ನು ದೀಪಾವಳಿ ಬಂದರಂತೂ ಮುಗಿದೇ ಹೋಯಿತು. ಪಟಾಕಿಗಳು ಸಿಡಯುತ್ತವೆ, ಧೂಮ ಹೊರ ಹೊಮ್ಮುತ್ತದೆ. ಹಬ್ಬದ ದಿನವಂತೂ ನೀಲಾಕಾಶದಲ್ಲಿ ನಕ್ಷತ್ರಗಳೂ ಕಾಣದ ರೀತಿಯಲ್ಲಿ ಹೊಗೆಯೇ ಆವರಿಸಿರುತ್ತದೆ.
ಪೈಪೋಟಿ : ಹಬ್ಬದ ಇನ್ನೆರಡು ದಿನವಷ್ಟೇ ಉಳಿದಿರುವಾಗ ತೆರೆದ ಬಯಲುಗಳಲ್ಲಿ ಇಲ್ಲವೇ ನಿರ್ದಿಷ್ಟ ಆಟದ ಮೈದಾನಗಳಲ್ಲಿ ತಾತ್ಕಾಲಿಕ ಪಟಾಕಿ ಮಾರಾಟ ಮಳಿಗೆಗಳು ತಲೆ ಎತ್ತಿವೆ. ಶೇ. 40 ರಿಂದ ಶೇ. 60ರವರೆಗೆ ರಿಯಾಯಿತಿಯನ್ನೂ ಕೆಲವರು ನೀಡುತ್ತಿದ್ದಾರೆ. ಇನ್ನು ಪಟಾಕಿ ಚೀಟಿ ಹಾಕುವ ಮಂದಿಯಂತೂ ಬೆಂಗಳೂರಿನಲ್ಲಿ ವರ್ಷೇವರ್ಷೇ ಹೆಚ್ಚುತ್ತಲೇ ಇದ್ದಾರೆ. ಬರಿ ಸ್ಕೂಟರ್‌ ಇಟ್ಟುಕೊಂಡಿರುವ ಪಕ್ಕದ ಮನೆಯವರು 1000 ರುಪಾಯಿ ಪಟಾಕಿ ತಂದಿದ್ದಾರೆ, ಕಾರು ಇರುವ ನಾವು 2000ದ್ದಾದರೂ ತರದಿದ್ದರೆ ಹೇಗೆ ಎಂಬ ಪೈಪೋಟಿಯಿಂದ ಪಟಾಕಿ ಸುಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಅಂತೆಯೇ ಬೆಂಗಳೂರಿನಂತಹ ನಗರಗಳ ವಾಯು ಮಾಲಿನ್ಯಕ್ಕೆ ಪಟಾಕಿಗಳೂ ಅಪಾರ ಕೊಡುಗೆ ನೀಡುತ್ತಿವೆ.

ಪರಿಸರ ಕಾಳಜಿ : ಪಟಾಕಿಗಳು ಉಂಟು ಮಾಡುವ ವಾಯು ಮಾಲಿನ್ಯ ಹಾಗೂ ಶಬ್ದಮಾಲಿನ್ಯದ ಅರಿವಿರುವ ಕೆಲವರು, ಪಟಾಕಿ ಸುಡುವುದರ ವಿರುದ್ಧ ಚಳವಳಿಯನ್ನೇ ನಡೆಸುತ್ತಿದ್ದಾರೆ. ಜನಜಾಗೃತಿಯ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದ್ದಾರೆ. ಪತ್ರಿಕೆಗಳಲ್ಲೂ ಪಟಾಕಿಗಳನ್ನು ಸುಡುವುದಿಲ್ಲ ಎಂದು ಹೇಳಿ ಎಂಬ ಶೀರ್ಷಿಕೆಯ ಪ್ರಚಾರದ ಜಾಹೀರಾತುಗಳು ಪ್ರಕಟಗೊಂಡಿವೆ. ಪಟಾಕಿ ತರಬಹುದಾದ ಅನಾಹುತಗಳ ಬಗ್ಗೆಯೂ ಎಚ್ಚರಿಕೆಯ ಮಾತುಗಳಿವೆ. ಸಂದೇಶಗಳಿವೆ.

ಕಾರ್ತಿಕ ಮಾಸದ ಈ ಬೆಳಕಿನ ಹಬ್ಬ ನಮ್ಮ ಮನದೊಳಗೆ ಹುದುಗಿರುವ ಅಂಧಕಾರವನ್ನು ಕಳೆವ ಹಬ್ಬ. ಇದಕ್ಕೆ ಬೆಳಕು ಸಂಕೇತವೇ ವಿನಾ ಬಾಣ ಬಿರುಸಲ್ಲ. ಅದಕ್ಕೆ ಬೃಹದಾರಣ್ಯಕೋಪನಿಷತ್‌ನಲ್ಲಿ ಅಸತೋಮ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ, ಮೃತ್ಯೋರ್ಮಾ ಅಮೃತಂಗಮಯ... ಎಂದಿರುವುದು. ಈ ಸಂದರ್ಭದಲ್ಲಿ ನಮ್ಮ ಕೈಲಾದ ಮಟ್ಟಿಗಾದರೂ ನಾವು ಪರಿಸರ ಮಾಲಿನ್ಯ ತಡೆದರೆ, ನಮ್ಮೊಳಗಿನ ಅಂಧಕಾರ ಕಳೆದಂತೆಯೇ ಅಲ್ಲವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+