Diwali 2023: ದೀಪಾವಳಿಗೆ ನಿಮ್ಮ ಮನೆಯನ್ನು ಈ ರೀತಿ ಸ್ವಚ್ಛಗೊಳಿಸಿದರೆ, ಸೂಪರ್ ಫಾಸ್ಟ್ ಆಗಿ ಮುಗಿಯುತ್ತೆ...!
ದೀಪಾವಳಿಯು ಬೆಳಕಿನ ಹಬ್ಬವಾಗಿದೆ. ಇದು ಅನ್ಯಾಯದ ವಿರುದ್ಧ ಒಳಿತಿನ ವಿಜಯದ ಸಂಕೇತವಾಗಿದೆ. ಈ ದೀಪಾವಳಿಯನ್ನು ಕುಟುಂಬಗಳು ಒಟ್ಟಾಗಿ ಸೇರಿ ಸಂತೋಷದಿಂದ ಆಚರಿಸುವುದು ವಾಡಿಕೆ.
ದೀಪಾವಳಿಯ ಮೊದಲು ಮನೆಯನ್ನು ಸ್ವಚ್ಛಗೊಳಿಸುವುದು ಮತ್ತು ಅತಿಥಿಗಳನ್ನು ಸ್ವಾಗತಿಸುವುದು ದೀಪಾವಳಿಯ ಮುಖ್ಯ ಕಾರ್ಯಗಳಲ್ಲಿ ಒಂದಾಗಿದೆ. ಈ ಅವಧಿಯಲ್ಲಿ ಮನೆಯ ಎಲ್ಲಾ ಪ್ರದೇಶಗಳನ್ನು ವಿಶೇಷವಾಗಿ ಅಡುಗೆಮನೆಯನ್ನು ಸ್ವಚ್ಛಗೊಳಿಸಬೇಕು. ಆದರೆ ಅದು ಅಷ್ಟು ಸುಲಭವಲ್ಲ. ಹಾಗಾದರೆ ದೀಪಾವಳಿಗೆ ಮನೆಯನ್ನು ಸುಲಭವಾಗಿ ಸ್ವಚ್ಛಗೊಳಿಸುವುದು ಹೇಗೆ ಎಂದು ತಿಳಿಯೋಣ.

ಅಡುಗೆ ಮನೆಯ ಸ್ವಚ್ಚತೆ
ನೀವು ಮನೆಯನ್ನು ಸ್ವಚ್ಛಗೊಳಿಸುವ ಮೊದಲು ಅಡಿಗೆಮನೆಯನ್ನು ಸ್ವಚ್ಚಗೊಳಿಸುವುದು ತುಂಬಾ ಮುಖ್ಯವಾಗಿದೆ. ಅಡುಗೆ ಮನೆಯಲ್ಲಿ ದಿನಾಂಕ ಅಥವಾ ಅವಧಿ ಮುಗಿತ ಪದಾರ್ಥಗಳನ್ನು ಹೊರಹಾಕಿ. ಇತರ ಪದಾರ್ಥಗಳನ್ನು ಒಂದು ಡಬ್ಬದಲ್ಲಿ ಹಾಕಿ ಅದನ್ನು ಸರಿಯಾಗಿ ಜೋಡಿಸಿ. ಉಳಿದಂತೆ ಎಲ್ಲವನ್ನು ಸ್ವಚ್ಚಗೊಳಿಸಿ.
ಅಡಿಗೆ ಮನೆಯ ಡ್ರಾಯರ್‌ಗಳನ್ನು ಸ್ವಚ್ಚಗೊಳಿಸಿ. 6 ತಿಂಗಳಿಗಿಂತ ಹೆಚ್ಚು ಕಾಲ ಬಳಸದ ಪಾತ್ರೆಗಳು ಮತ್ತು ಉಪಕರಣಗಳನ್ನು ಎಸೆಯಿರಿ. ಅಲ್ಲದೆ ಹಾನಿಗೊಳಗಾದ ಮತ್ತು ದುರಸ್ತಿ ಮಾಡದ ವಸ್ತುಗಳು ಅಥವಾ ಸಾಮಾನುಗಳಿದ್ದರೆ ಅವುಗಳನ್ನು ಎಸೆಯಿರಿ. ಉಳಿದ ವಸ್ತುಗಳನ್ನು ಸರಿಯಾಗಿ ಹೊಂದಿಸಿ.

ಎಲ್ಲಾ ಹಾನಿಗೊಳಗಾದ ವಸ್ತುಗಳನ್ನು ಎಸೆದ ನಂತರ ನಿಮ್ಮ ಅಡಿಗೆ ಮನೆಯ ಮೂಲೆ ಮೂಲೆಯನ್ನು ಸರಿಯಾಗಿ ಬಿಡದೆ ಸ್ವಚ್ಛಗೊಳಿಸಲು ಪ್ರಾರಂಭಿಸಿ. ಪ್ರತಿಯೊಂದು ವಸ್ತುವನ್ನು ಒರೆಸಿ, ಎಲ್ಲಿಯೂ ಜೇಡಿ ಹಾಗೂ ಧೂಳು ಇರದಂತೆ ಚೆನ್ನಾಗಿ ಸ್ವಚ್ಚಗೊಳಿಸಿ. ಸಾಧ್ಯವಾದಲ್ಲಿ ಕೀಟನಾಶಗಳನ್ನು ಬಳಸಿ ಸ್ವಚ್ಚಗೊಳಿಸುವುದು ಇನ್ನೂ ಉತ್ತಮ. ಕೆಲವು ಹಟಮಾರಿ ಕಲೆಗಳಿದ್ದಲ್ಲಿ ಅದನ್ನು ನೆನೆಸಿ ಸ್ವಚ್ಚಗೊಳಿಸಿ. ಬೆಚ್ಚಗಿನ ನೀರು, ಅಡಿಗೆ ಸೋಡಾ ಮತ್ತು ಡಿಶ್ ಸೋಪ್ ಮಿಶ್ರಣವನ್ನು ಸ್ವಚ್ಚತೆಗೆ ಬಳಸಬಹುದು.
ಕಪಾಟುಗಳ ಸ್ವಚ್ಛತೆ
ದಿನನಿತ್ಯ ಅಡುಗೆ ಮಾಡುವಾಗ ಕೊಳಕಾಗುವ ಸ್ಥಳಗಳು ಅಂದರೆ ಕಪಾಟುಗಳು. ಹೆಚ್ಚಾಗಿ ನಾವು ಕಪಾಟುಗಳನ್ನು ಗಮನಿಸುವುದಿಲ್ಲ ಏಕೆಂದರೆ ಅವುಗಳು ಮೇಲಿರುತ್ತವೆ. ಅವುಗಳನ್ನು ಹೆಚ್ಚಾಗಿ ಸ್ವಚ್ಛಗೊಳಿಸದ ಕಾರಣ ಜಿಡ್ಡಿನ ಕೊಳಕು ಅಲ್ಲಿ ಸಂಗ್ರಹಗೊಳ್ಳುತ್ತದೆ.
ಆದ್ದರಿಂದ ಟೇಬಲ್ ಮತ್ತು ಕಪಾಟುಗಳನ್ನು ಸ್ವಚ್ಛಗೊಳಿಸಲು ವಿನೆಗರ್ ಮತ್ತು ಬೆಚ್ಚಗಿನ ನೀರಿನ ಮಿಶ್ರಣವನ್ನು ತಯಾರಿಸಿ. ಕಪಾಟಿನಲ್ಲಿರುವ ಎಲ್ಲಾ ವಸ್ತುಗಳನ್ನು ಹೊರತೆಗೆಯಿರಿ, ಮಿಶ್ರಣವನ್ನು ಸಿಂಪಡಿಸಿ ಮತ್ತು ದಪ್ಪವಾದ ಕಾಗದ ಅಥವಾ ಬಟ್ಟೆಯಿಂದ ಒರೆಸಿ. ಇದು ಮೂಲೆಗಳಲ್ಲಿ ಅಂಟಿಕೊಂಡಿರುವ ಜಿಡ್ಡನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಜಿರಳೆಗಳಿಂದ ಮುಕ್ತಿ
ಅಡುಗೆ ಮನೆಯಲ್ಲಿ ಜಿರಳೆಗಳು ಇರುವುದು ಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿದೆ. ಜಿರಳೆಗಳು ನಿಮ್ಮ ಅಡುಗೆಮನೆಯನ್ನು ತಮ್ಮ ಮನೆ ಎಂದು ಭಾವಿಸಿದರೆ ಅದು ತುಂಬಾ ಅಪಾಯಕಾರಿ ಸೂಚನೆ. ಅವು ನೀವು ತಯಾರಿಸುವ ಆಹಾರವನ್ನು ಮುತ್ತಿಕೊಳ್ಳುತ್ತವೆ. ಇದರಿಂದ ಕಾಯಿಲೆಗಳು ಬಹುಬೇಗ ಹರಡುತ್ತವೆ. ಆದ್ದರಿಂದ ಜಿರಳೆಗಳು ನಿಮ್ಮ ಆಹಾರದಿಂದ ದೂರವಿರಲು ಅವುಗಳು ನಿಮ್ಮ ಅಡುಗೆ ಮನೆಗೆ ಬಾರದಂತೆ ನೋಡಿಕೊಳ್ಳಿ.
ಅದೆಷ್ಟೋ ಜನ ಜಿರಳೆಗಳನ್ನು ಸಾಯಿಸಲು ನೋಡುತ್ತಾರೆ. ಆದರೆ ಆ ಜಿರಳೆಗಳು ಕೊಳಕು ಅಡುಗೆ ಮನೆಯಿಂದಾಗಿ ಪ್ರವೇಶ ಮಾಡುತ್ತವೆ ಅನ್ನೋದನ್ನು ಮರೆತುಬಿಡುತ್ತಾರೆ. ಜಿರಳೆಗಳು ಬರುವುದು ತಮ್ಮ ಆಹಾರವನ್ನು ಹುಡುಕಿಕೊಂಡು. ಅದರ ಆಹಾರ ಸಣ್ಣ ಕೀಟಗಳು. ನಿಮ್ಮ ಮನೆ ಸ್ವಚ್ಚವಾಗಿದ್ದಲ್ಲಿ ಈ ಕೀಟಗಳು ಹುಟ್ಟಿಕೊಳ್ಳುವುದಿಲ್ಲ. ಈ ಕೀಟಗಳು ಇಲ್ಲದೇ ಇದ್ದಲ್ಲಿ ಜಿರಳೆಗಳಿಗೆ ಆಹಾರವಿಲ್ಲದೆ ಅವುಗಳ ಆಗಮನವೂ ಕಡಿಮೆಯಾಗುತ್ತದೆ. ಹೀಗಾಗಿ ಜಿರಳೆಗಳನ್ನು ಸಾಯುವುದು ಎಷ್ಟು ಮುಖ್ಯವೋ ನಿಮ್ಮ ಅಡುಗೆ ಮನೆಯನ್ನು ಸ್ವಚ್ಚವಾಗಿಡುವುದು ಅಷ್ಟೇ ಮುಖ್ಯ.
ತುಂಬಾ ಜಿರಳೆಗಳು ಇದ್ದಲ್ಲಿ ಕೀಟ ಸ್ಪ್ರೇಗಳನ್ನು ಸಿಂಪಡಿಸಿ ಅಥವಾ ಜಿರಳೆ ನಿವಾರಕ ಜೆಲ್ಗಳನ್ನು ಬಳಸಿ. ಪುದೀನಾ ಎಣ್ಣೆಯನ್ನು ನೀರಿನೊಂದಿಗೆ ಬೆರೆಸಿ ಅಡುಗೆಮನೆಯ ಮೂಲೆಗಳಲ್ಲಿ ಸಿಂಪಡಿಸುವುದು ಮತ್ತೊಂದು ಸುಲಭವಾದ ಮಾರ್ಗವಾಗಿದೆ. ಇದು ಜಿರಳೆಗಳನ್ನು ಹಿಮ್ಮೆಟ್ಟಿಸುತ್ತದೆ.
ಸಿಂಕ್‌ನ ಸ್ವಚ್ಚತೆ
ನಿಮ್ಮ ಕಿಚನ್ ಸಿಂಕ್ ವಾಸ್ತವವಾಗಿ ಪ್ರತಿದಿನ ಬಹಳಷ್ಟು ಪಾತ್ರಗಳನ್ನು ಸ್ವಚ್ಚಗೊಳಿಸಲು ಬಳಸಲಾಗುತ್ತದೆ. ಆದರೆ ಅದೂ ಕೊಳಕಾಗುತ್ತದೆ. ಅದನ್ನು ಕೂಡ ಸ್ವಚ್ಚಗೊಳಿಸಬೇಕು ಎನ್ನುವುದುನ್ನು ಬಹುತೇಕರು ಮರೆತುಬಿಡುತ್ತಾರೆ. ನಾವು ಅಡುಗೆ ಮನೆಯಲ್ಲಿ ಪಾತ್ರೆಗಳನ್ನು ನಿತ್ಯ ಸ್ವಚ್ಚಗೊಳಿಸುವಂತೆ ಸಿಂಕ್ ಅನ್ನು ಸ್ವಚ್ಚಗೊಳಿಸಬೇಕು. ನೀವು ಡಿಶ್ ಸೋಪ್ ಅಥವಾ ಅಂಗಡಿಯಲ್ಲಿ ಖರೀದಿಸಿದ ದ್ರವ ಸೋಪ್ ಅನ್ನು ಇದನ್ನು ಸ್ವಚ್ಚಗೊಳಿಸಲು ಬಳಸಬಹುದು. ಸಿಂಕ್ ಅನ್ನು ಸ್ವಚ್ಛಗೊಳಿಸಲು ಇನ್ನೊಂದು ವಿಧಾನವೆಂದರೆ ಸ್ವಲ್ಪ ಅಡಿಗೆ ಸೋಡಾ ಮತ್ತು ಬಿಸಿ ನೀರನ್ನು ಮಿಶ್ರಣ ಮಾಡಿ ಮತ್ತು ಸಿಂಕ್ ಕೆಳಗೆ ಸುರಿಯುವುದು. ಇದು ಪೈಪ್‌ಗಳಲ್ಲಿನ ಕೊಳೆಯನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ.
ಫ್ರಿಜ್ ಸ್ವಚ್ಛತೆ
ರೆಫ್ರಿಜರೇಟರ್ ಮನೆಯ ಅತ್ಯಗತ್ಯ ವಸ್ತುವಾಗಿದೆ. ಕೆಡದಂತೆ ತಡೆಯಲು ನಾವು ಹೆಚ್ಚುವರಿ ಮತ್ತು ಹೊಸದಾಗಿ ಬೇಯಿಸಿದ ಆಹಾರವನ್ನು ಫ್ರಿಜ್‌ನಲ್ಲಿ ಸಂಗ್ರಹಿಸುತ್ತೇವೆ. ಆದ್ದರಿಂದ ರೆಫ್ರಿಜರೇಟರ್ ಅನ್ನು ಸ್ವಚ್ಛಗೊಳಿಸುವುದು ಅತ್ಯಗತ್ಯ. ಫ್ರಿಡ್ಜ್‌ನಿಂದ ಎಲ್ಲವನ್ನೂ ತೆಗೆದುಹಾಕಿ, ಪ್ರತಿ ಭಾಗವನ್ನು ಸ್ವಚ್ಛಗೊಳಿಸಿ ಮತ್ತು ಅನಗತ್ಯ ವಸ್ತುಗಳಿದ್ದರೆ ಅದನ್ನು ಎಸೆಯಿರಿ. ಆದರೆ ರೆಫ್ರಿಜರೇಟರ್ ಅನ್ನು ಹಾನಿಕಾರಕ ರಾಸಾಯನಿಕಗಳಿಂದ ಸ್ವಚ್ಛಗೊಳಿಸಬೇಡಿ. ಅದನ್ನು ಸ್ವಚ್ಛಗೊಳಿಸಲು ಬೆಚ್ಚಗಿನ ನೀರು ಸಾಕು. ಬಾಹ್ಯ ಬಾಗಿಲುಗಳಿಗಾಗಿ, ನಿಮ್ಮ ಆಯ್ಕೆಯ ಯಾವುದೇ ರಾಸಾಯನಿಕ ದ್ರವವನ್ನು ನೀವು ಬಳಸಬಹುದು.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಅವಲಂಬಿಸಿದೆ. ಮಾಹಿತಿ ನೀಡುವುದು ನಮ್ಮ ಏಕೈಕ ಉದ್ದೇಶ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications